ವಾಣಿಜ್ಯ ನಗರಿಯಲ್ಲಿ ವಿದೇಶಿ ಬೈಸಿಕಲ್‌ಗಳ ಕಾರುಬಾರು

7

ವಾಣಿಜ್ಯ ನಗರಿಯಲ್ಲಿ ವಿದೇಶಿ ಬೈಸಿಕಲ್‌ಗಳ ಕಾರುಬಾರು

Published:
Updated:
Deccan Herald

ಬೈಸಿಕಲ್ ಎಂದರೆ ಬಾಲ್ಯದ ದಿನಗಳು ಗರಿ ಬಿಚ್ಚಿಕೊಳ್ಳುತ್ತವೆ. ಕ್ಯಾರಿಯರ್‌ನಲ್ಲಿ ಹುಲ್ಲಿನ ಹೊರೆ ಕಟ್ಟಿಕೊಂಡು ಬರುತ್ತಿದ್ದ ಅಜ್ಜ, ನಾಲ್ಕೈದು ಧಾನ್ಯದ ಚೀಲಗಳನ್ನು ಜೋಡಿಸಿಕೊಂಡು ಬರುತ್ತಿದ್ದ ಅಪ್ಪ, ಎಳನೀರು ಗೊಂಚಲನ್ನು ಕಟ್ಟಿಕೊಂಡು ಬರುತ್ತಿದ್ದ ಚಿಕ್ಕಪ್ಪ, ನೀರಿನ ಬಿಂದಿಗೆಗಳನ್ನು ತೂಗು ಹಾಕಿಕೊಂಡು ಬರುತ್ತಿದ್ದ ಅಕ್ಕ, ಟ್ರಿಣ್ ಟ್ರಿಣ್... ಎಂದು ಬೆಲ್ ಮಾಡುತ್ತಾ ಪತ್ರಗಳನ್ನು ತಂದುಕೊಡುತ್ತಿದ್ದ ಅಂಚೆಯಣ್ಣ, ಸೈಕಲ್ ಕಲಿಸುತ್ತೇನೆ ಬಾ ಎಂದು ಕರೆದೊಯ್ದು, ಮಂಡಿ, ಮೊಣಕೈ ಗಾಯ ಮಾಡಿದ್ದ ಗೆಳೆಯ.... ಹೀಗೆ ಸಾಲು ಸಾಲು ನೆನಪುಗಳು ಮೆರವಣಿಗೆ ಮನಸ್ಸಿಗೆ ಮುದ ನೀಡುತ್ತವೆ.

ಹಿಂದೆ, ಗ್ರಾಮೀಣ ಸಾರಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಸೈಕಲ್‌ಗಳು; ಬೈಕ್, ಸ್ಕೂಟರ್‌ಗಳ ಭರಾಟೆಯಲ್ಲಿ ನಿಧಾನವಾಗಿ ಮೂಲೆ ಸೇರತೊಡಗಿದವು. ಸೈಕಲ್ ಜಮಾನ ಮುಗಿದೇ ಹೋಯಿತಾ ಅಂದುಕೊಳ್ಳುವ ಹೊತ್ತಿಗೆ, ಹೊಸ ರೂಪ, ಹೊಸ ವಿನ್ಯಾಸದಲ್ಲಿ ಮತ್ತೆ ಮಾರುಕಟ್ಟೆಗೆ ದಾಂಗುಡಿ ಇಡುತ್ತಿವೆ. ನಗರ ಮತ್ತು ಪಟ್ಟಣಗಳಲ್ಲಿ ಬೈಸಿಕಲ್ ಕ್ಲಬ್‌ಗಳು ಹುಟ್ಟಿಕೊಂಡಿವೆ. ಟ್ರಕ್ಕಿಂಗ್, ರೇಸ್, ಟ್ರಯಥ್ಲಾನ್, ಡುಯಥ್ಲಾನ್, ಪೆಡಲ್ ಫಾರ್ ಅವೇರ್‌ನೆಸ್ ಮುಂತಾದ ಹೆಸರಿನಡಿ ಕಾರ್ಯಕ್ರಮಗಳನ್ನು ಆಯೋಜಿಸಿ ‘ಸೈಕಲ್ ಕ್ರೇಜ್’ ಅನ್ನು ಯುವಜನರಲ್ಲಿ ಹೆಚ್ಚಿಸುತ್ತಿವೆ.

‘ಹುಬ್ಬಳ್ಳಿ ಬೈಸಿಕಲ್ ಕ್ಲಬ್’ ಕೂಡ ಉತ್ತರ ಕರ್ನಾಟಕ ಭಾಗದಲ್ಲಿ ಸೈಕಲ್ ಸಂಸ್ಕೃತಿ ಪಸರಿಸುವಲ್ಲಿ ತನ್ನದೇ ಆದ ಪಾತ್ರ ವಹಿಸುತ್ತಿದೆ. ಈ ಕ್ಲಬ್ ಸದಸ್ಯರಾದ ಹುಬ್ಬಳ್ಳಿಯ ಅನೀಸ್ ಖೋಜೆ ಮತ್ತು ಜಯಶ್ರೀ ಪಾಟೀಲ ಅವರು ಸಕ್ರಿಯವಾಗಿ ಸೈಕ್ಲಿಂಗ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿತ್ಯ 15–20 ಕಿ.ಮೀ. ಸೈಕಲ್ ತುಳಿಯುತ್ತಾರೆ. ಸೈಕ್ಲಿಂಗ್ ಚಟುವಟಿಕೆಗಳನ್ನು STARVA ಆ್ಯಪ್‌ನಲ್ಲಿ ದಾಖಲಿಸುತ್ತಾರೆ. ಈ ಆ್ಯಪ್‌ನಲ್ಲಿ ದೇಶದಾದ್ಯಂತ ಇರುವ ಸೈಕ್ಲಿಸ್ಟ್‌ಗಳೂ ತಮ್ಮ ಚಟುವಟಿಕೆಗಳನ್ನು ದಾಖಲು ಮಾಡುತ್ತಾರೆ. ಬೆಳಗಾವಿ ಮತ್ತು ಪುಣೆಯಲ್ಲಿ ನಡೆದ ಟ್ರಯಥ್ಲಾನ್, ಡುಯಥ್ಲಾನ್‌ಗಳಲ್ಲೂ ಭಾಗವಹಿಸಿದ್ದಾರೆ. ಜಯಶ್ರೀ ಅವರು ಚಿತ್ರಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ವರ್ಲಿ ಮತ್ತು ಮಧುಬನಿ ಪ್ರಕಾರದ ಪೇಂಟಿಂಗ್ ಬಗ್ಗೆ ಹವ್ಯಾಸಿ ತರಗತಿಗಳನ್ನು ನಡೆಸಿದ್ದಾರೆ.

‘ಹುಬ್ಬಳ್ಳಿಯಲ್ಲಿ ಸೈಕ್ಲಿಂಗ್‌ ಕ್ರೇಜ್‌ ದಿನೇ ದಿನೇ ಹೆಚ್ಚುತ್ತಿದ್ದರೂ, ಅಂತರರಾಷ್ಟ್ರೀಯ ಗುಣಮಟ್ಟದ ವಿವಿಧ ಕಂಪನಿಗಳ ಸೈಕಲ್‌ಗಳು ಇಲ್ಲಿ ಸಿಗುತ್ತಿರಲಿಲ್ಲ. ಹಾಗಾಗಿ ಇಲ್ಲಿನ ಮಕ್ಕಳು ಮತ್ತು ಯುವಜನರಿಗೆ ಒಂದೇ ಸೂರಿನಡಿ ವಿವಿಧ ದೇಶಗಳ ಸೈಕಲ್‌ಗಳು ಸ್ಪರ್ಧಾತ್ಮಕ ದರದಲ್ಲಿ ದೊರಕಬೇಕು ಎಂಬ ಉದ್ದೇಶದಿಂದ ಹಾಗೂ ಹುಬ್ಬಳ್ಳಿ ‘ಗ್ರೀನ್‌ ಸಿಟಿ’ಯಾಗಿ ಗುರುತಿಸಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಸಮಾನ ಮನಸ್ಕರಾದ ಜಯಶ್ರೀ ಮತ್ತು ನಾನು ‘ಅಮೇಜಿಂಗ್‌ ಬೈಕ್ಸ್‌’ ಮಲ್ಟಿ ಬ್ರ್ಯಾಂಡ್‌ ಬೈಸಿಕಲ್‌ ಷೋರೂಂ ಅನ್ನು ಬಸವೇಶ್ವರ ನಗರ ಸಮೀಪದ ಗೋಕುಲ ರಸ್ತೆಯಲ್ಲಿ ತೆರೆದಿದ್ದೇವೆ’ ಎಂದು ಮಾಲೀಕ ಅನೀಸ್‌ ಖೋಜೆ ತಿಳಿಸಿದರು.

ಈ ಷೋರೂಂನಲ್ಲಿ ಫ್ಯುಜಿ (ಯು.ಎಸ್‌.ಎ), ಫೋಕಸ್‌ (ಜರ್ಮನಿ), ಹ್ಯೂಜ್‌ (ಕಾಂಬೋಡಿಯಾ), ಟ್ರಿಂಕ್ಸ್‌ (ಇಟಲಿ), ಫಾಗಿ (ಶ್ರೀಲಂಕಾ), ಫೋಲ್ಡಬಲ್‌ ಫ್ಯಾನ್ಸಿ (ಥೈವಾನ್‌) ಸೇರಿದಂತೆ 7 ಬ್ರ್ಯಾಂಡ್‌ಗಳ 32 ಸೈಕಲ್‌ ಮಾಡೆಲ್‌ಗಳು ದೊರಕುತ್ತವೆ.

₹ 12,500ರಿಂದ ₹ 4.5 ಲಕ್ಷದವರೆಗೆ ತರಹೇವಾರಿ ವಿನ್ಯಾಸಗಳಲ್ಲಿ ಮಕ್ಕಳು, ಯುವತಿಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಸಿಗುತ್ತವೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಬಳಸುವ ವಿದೇಶಿ ಸೈಕಲ್‌ಗಳು ಇಲ್ಲಿ ಲಭ್ಯ. ಸ್ಪೆಷಲ್‌ ಗೇರ್‌ಗಳು, ಅಲೈ ಫ್ರೇಮ್‌, ಕಾರ್ಬನ್‌ ಫ್ರೇಮ್‌, ಅಲ್ಯುಮಿನಿಯಂ ರಿಮ್‌ಗಳಿಂದ ಕೂಡಿರುವ ವಿದೇಶಿ ಸೈಕಲ್‌ಗಳು ತುಂಬಾ ಹಗುರವಾಗಿದ್ದು, ಎಲ್ಲ ರೀತಿಯ ರಸ್ತೆಗಳಲ್ಲೂ ನಿರಾಯಾಸವಾಗಿ ಸಂಚರಿಸಬಹುದು. ವಿವಿಧ ಬಣ್ಣ, ವಿನ್ಯಾಸಗಳಿಂದ ಸೈಕ್ಲಿಸ್ಟ್‌ಗಳ ಗಮನ ಸೆಳೆಯುತ್ತಿವೆ.

ಸೈಕಲ್‌ಗಳ ಜತೆಗೆ ಹೆಲ್ಮೆಟ್‌, ಜಾಕೆಟ್‌, ಗ್ಲೌಸ್‌, ಎಲ್‌ಇಡಿ ಟಾರ್ಚ್‌ ಲೈಟ್‌, ಲಾಕ್‌ ಹಾಗೂ ಸೈಕಲ್‌ ಬಿಡಿಭಾಗಗಳು ದೊರಕುತ್ತವೆ. ಮಳಿಗೆ ಆರಂಭವಾದ ಎರಡೇ ದಿನಗಳಲ್ಲಿ ನಾಲ್ಕು ₹12 ರಿಂದ 45 ಸಾವಿರ ಮೌಲ್ಯದ ಸೈಕಲ್‌ಗಳು ಮಾರಾಟವಾಗಿವೆ.

‘ಲೈಫ್‌ ಇಸ್‌ ಎ ಬ್ಯೂಟಿಫುಲ್‌ ರೈಡ್‌’ ಎಂಬುದು ಈ ಸಂಸ್ಥೆಯ ಘೋಷವಾಕ್ಯ.

‘ಲಾಂಗ್‌ ಡ್ರೈವ್‌ ಸೈಕ್ಲಿಂಗ್‌ನಲ್ಲಿ ಸಾಧನೆ ಮಾಡುವವರನ್ನು ಮಳಿಗೆಯ ನೋಟಿಸ್‌ ಬೋರ್ಡ್‌ನಲ್ಲಿ ಪ್ರಕಟಿಸಿ, ಪ್ರತಿ ತಿಂಗಳು ಬಹುಮಾನ ನೀಡುತ್ತೇವೆ. ದೂರದ ಊರುಗಳಿಂದ ಬರುವ ಸೈಕ್ಲಿಸ್ಟ್‌ಗಳಿಗೆ ವಿಶ್ರಾಂತಿ ಪಡೆಯಲು ಉಚಿತ ಕೊಠಡಿ ಸೌಲಭ್ಯ ಕಲ್ಪಿಸಿದ್ದೇವೆ. ದುಬಾರಿ ಸೈಕಲ್‌ಗಳನ್ನು ಕೊಳ್ಳಲು ಗ್ರಾಹಕರಿಗೆ ‘ಇಎಂಐ’ ಸೌಲಭ್ಯ ಕಲ್ಪಿಸಲು ಬಜಾಜ್‌ ಕಂಪನಿಯವರ ಜತೆ ಮಾತುಕತೆ ನಡೆದಿದೆ. 6 ತಿಂಗಳ ನಂತರ ಬಾಡಿಗೆಗೆ ಬೈಸಿಕಲ್‌ಗಳನ್ನು ಕೊಡುವ ಯೋಜನೆಯೂ ಇದೆ’ ಎಂದು ಭವಿಷ್ಯದ ಕನಸುಗಳನ್ನು ಅನೀಸ್‌ ಬಿಚ್ಚಿಟ್ಟರು. (ಅನೀಸ್‌ ಖೋಜೆ ಅವರ ಸಂಪರ್ಕಕ್ಕೆ ಮೊ: 8722405777)

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !