ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದೂಕು ಮತ್ತು ಬ್ಯಾಂಡೇಜ್‌ ನೀತಿ

Last Updated 16 ಜೂನ್ 2018, 18:53 IST
ಅಕ್ಷರ ಗಾತ್ರ

ಕಾಶ್ಮೀರದಲ್ಲಿ ಮಾನವ ಹಕ್ಕುಗಳ ವ್ಯಾಪಕ ಉಲ್ಲಂಘನೆ ನಡೆಯುತ್ತಿದೆ ಎನ್ನುವ ನಿಲುವಿಗೆ ಬಂದಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ವರದಿಯೇ ದೋಷಪೂರಿತವಾಗಿದೆ.

ವರದಿಯ ಖಚಿತತೆ, ನ್ಯಾಯಸಮ್ಮತ ನಿಲುವು, ಅಧ್ಯಯನದ ವಿಧಾನ ಮತ್ತು ಉದ್ದೇಶಗಳ ಬಗ್ಗೆ ಚರ್ಚೆ ನಡೆಸುವುದೇ ಸಮಯ ವ್ಯರ್ಥ ಮಾಡಲಿದೆ. ಸರ್ಕಾರೇತರ ಸಂಘಟನೆಗಳ ಕಾರ್ಯಕರ್ತರು ವಿಶ್ವದ ಪ್ರಮುಖ ಮಾನವ ಹಕ್ಕುಗಳ ಸಂಸ್ಥೆಯ ಮೇಲೆ ಸವಾರಿ ನಡೆಸಿ ಈ ವರದಿ ಸಿದ್ಧಪಡಿಸಿದ್ದಾರೆ. ‘ವಿಶ್ವಸಂಸ್ಥೆಯನ್ನು ಎಂತಹ ಅಸಮರ್ಥರು ಮುನ್ನಡೆಸುತ್ತಿದ್ದಾರೆ’ ಎನ್ನುವ ಭಾವನೆಯನ್ನೂ ಮೂಡಿಸಿದೆ.

ಈ ವರದಿಯು ಭಾರತ ಅಥವಾ ಪಾಕಿಸ್ತಾನವನ್ನು ಮುಜುಗರಕ್ಕೆ ಗುರಿ ಮಾಡಿದೆಯೇ ಎನ್ನುವ ಪ್ರಶ್ನೆಗೆ, ಯಾವ ದೃಷ್ಟಿಕೋನದಿಂದಲೂ ಅಂತಹ ಸಾಧ್ಯತೆ ಇಲ್ಲ ಎಂದೇ ಹೇಳಬೇಕಾಗುತ್ತದೆ. ಎರಡೂ ದೇಶಗಳು ಹಲವು ದಶಕಗಳಿಂದ ಕಾಶ್ಮೀರ ಸಮಸ್ಯೆಯನ್ನು ತಮ್ಮ ನಡುವಣ ದಾಯಾದಿ ಕಲಹ ಎಂದೇ ಪರಿಗಣಿಸುತ್ತ ಬಂದಿವೆ.

ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ವರದಿಗಳ ಬಗ್ಗೆ ಭಾರತ ನಾಚಿಕೆ ಪಡುವುದೇ ಇಲ್ಲ. ಗಡಿಯಾಚೆಗಿನ ಭಯೋತ್ಪಾದನಾ ಚಟುವಟಿಕೆಗಳನ್ನು ಬಗ್ಗುಬಡಿಯಲು ಭದ್ರತಾ ಪಡೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದೇ ಭಾರತ ಪ್ರತಿಪಾದಿಸುತ್ತದೆ.

ಪಾಕಿಸ್ತಾನವೂ ಇಂತಹ ವರದಿಗಳಿಂದ ಮುಜುಗರ ಪಡುವುದಿಲ್ಲ. ಉಗ್ರರ ಕಾರ್ಯಾಚರಣೆಗೆ ಪಾಕಿಸ್ತಾನವು ಹಣಕಾಸಿನ ನೆರವು ನೀಡುತ್ತಿದೆ, ಭಯೋತ್ಪಾದಕರನ್ನು ಪೋಷಿಸುತ್ತಿದೆ, ಅಕ್ರಮ ನುಸುಳುಕೋರರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎನ್ನುವ ವರದಿಗಳನ್ನು ಅದು ಮೊದಲಿನಿಂದಲೂ ನಿರ್ಲಕ್ಷಿಸುತ್ತಲೇ ಬಂದಿದೆ. ನ್ಯಾಯ ಪಡೆಯಲು ತಾನು ನೈತಿಕ ಕಾರ್ಯಾಚರಣೆಯಲ್ಲಿ ತೊಡಗಿರುವುದಾಗಿ ಆ ದೇಶ ಬಲವಾಗಿ ನಂಬಿದೆ.

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನಾ ಚಟುವಟಿಕೆಗಳು ಅಂತರರಾಷ್ಟ್ರೀಯ ಸಮುದಾಯದ ಪಾಲಿಗೆ ತಲೆನೋವಾಗಿ ಪರಿಣಮಿಸಿವೆ. ‘ಪಾಕಿಸ್ತಾನವು ಜಿಹಾದ್‌ನ ವಿಶ್ವವಿದ್ಯಾಲಯವಾಗಿದೆ’ ಎನ್ನುವ ಟೀಕೆಗಳನ್ನು ಅದು ತನಗೆ ಸಿಕ್ಕಿರುವ ಬಿರುದುಗಳೆಂದೇ ಹೆಮ್ಮೆಯಿಂದ ಪರಿಗಣಿಸುತ್ತಿದೆ.

ಭಾರತ ಮತ್ತು ಪಾಕಿಸ್ತಾನಗಳೆರಡೂ ಕಾಶ್ಮೀರ ಭೂಭಾಗವು ತನಗೇ ಸೇರಿದ್ದು ಎಂದು ಜಿದ್ದಾಜಿದ್ದಿಯ ಹೋರಾಟ ನಡೆಸುತ್ತಿವೆ. ವಸ್ತುಸ್ಥಿತಿ ಹೀಗಿರುವಾಗ, ವಿಶ್ವಸಂಸ್ಥೆಯ ಹೆಡ್ಡತನದ ಪ್ರತೀಕದಂತಿರುವ ಇಂತಹ ವರದಿಯ ಬಗ್ಗೆ ಅವೆರಡೂ ತಲೆಕೆಡಿಸಿಕೊಳ್ಳುವ ಸಾಧ್ಯತೆ ಇಲ್ಲವೇ ಇಲ್ಲ. ವಿಶ್ವಸಂಸ್ಥೆಯ ಸಂಶೋಧಕರು ಒಂದು ಬಾರಿಯೂ ಕಾಶ್ಮೀರದ ನೆಲದಲ್ಲಿ ಕಾಲೂರಿಲ್ಲ. ಗಡಿ ನಿಯಂತ್ರಣದ (ಎಲ್‌ಒಸಿ) ಯಾವುದೇ ಭಾಗಕ್ಕೂ ಭೇಟಿ ನೀಡಿಲ್ಲ. ಇದೊಂದೇ ಈ ವರದಿಯ ಮುಖ್ಯ ಸಮಸ್ಯೆಯೂ ಅಲ್ಲ.

ವರದಿಯ ಸಂಶೋಧನಾ ಗುಣಮಟ್ಟದ ಕಾರಣಕ್ಕೆ ನಾವು ಇದನ್ನು ಹೆಡ್ಡತನದ ವರದಿ ಎಂದು ಪರಿಗಣಿಸುತ್ತಿಲ್ಲ. ಕಾಶ್ಮೀರದ ಜನರಿಗೆ ಯಾವ ಬಗೆಯಲ್ಲಿ ನೆರವಾಗಲಿದೆ ಎನ್ನುವ ನಿರೀಕ್ಷೆಗಳನ್ನು ಈ ವರದಿಯು ಹೊಂದಿರುವ ಕಾರಣಕ್ಕೆ ಅದೊಂದು ಪ್ರಯೋಜನಕ್ಕೆ ಬಾರದ ವರದಿ ಎಂದು ಪರಿಗಣಿಸಲಾಗುತ್ತಿದೆ.

ಭಾರತದ ಧೋರಣೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿದೆ ಎನ್ನುವುದು ಈ ವರದಿಯ ಇನ್ನೊಂದು ವಿರೋಧಾಭಾಸವಾಗಿದೆ.

ಹೆಚ್ಚೆಚ್ಚು ಕಾಶ್ಮೀರಿಗಳು ಮತ್ತು ಬಾಡಿಗೆ ಬಂಟರನ್ನು ಜಿಹಾದ್‌ಗೆ (ಪವಿತ್ರ ಯುದ್ಧ) ಬಲವಂತದಿಂದ ನೂಕಲು ಪಾಕಿಸ್ತಾನಕ್ಕೆ ಇನ್ನಷ್ಟು ಉತ್ತೇಜನ ನೀಡಲು ಈ ವರದಿಯು ಸಫಲವಾಗಲಿದೆ. ಮೂರು ದಶಕಗಳ ಅವಧಿಯಲ್ಲಿ ವಿಶ್ವಸಂಸ್ಥೆಯು ತನ್ನದೇ ಆದ ಹಿಂದಿನ ನಿರ್ಧಾರಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದಿರುವುದೂ ಇದರಿಂದ ವೇದ್ಯವಾಗುತ್ತದೆ.

ಕಾಶ್ಮೀರದಲ್ಲಿನ ಸದ್ಯದ ಪರಿಸ್ಥಿತಿಯು ಹಲವಾರು ದುರದೃಷ್ಟಕರ ವಿಧಾನದಲ್ಲಿ 90ರ ದಶಕದ ಅಪಾಯಕಾರಿ ಹಂತಕ್ಕೆ ಬಂದು ನಿಂತಿದೆ. ವಿಶ್ವಸಂಸ್ಥೆ ಮತ್ತು ಪಾಶ್ಚಿಮಾತ್ಯ ಮಾನವ ಹಕ್ಕುಗಳ ಸಂಘಟನೆಗಳು ದುರ್ಬಲ ಭಾರತದ ಮೇಲೆ ಒತ್ತಡ ಹೇರುತ್ತಲೇ ಇವೆ.

ಇಂತಹ ಒತ್ತಡ ತಂತ್ರಗಳಿಗೆ ಭಾರತ ತಕ್ಕ ಪ್ರತ್ಯುತ್ತರ ನೀಡುತ್ತಲೇ ಬಂದಿದೆ. ಪಾಕಿಸ್ತಾನ ಆಕ್ರಮಿತ ಭೂಭಾಗವನ್ನು ಮರಳಿ ವಶಪಡಿಸಿಕೊಳ್ಳಬೇಕು ಎಂದು ಸಂಸತ್‌ನಲ್ಲಿ ಬಹಳ ಹಿಂದೆಯೇ ಸರ್ವಸಮ್ಮತದ ನಿರ್ಣಯ ಅಂಗೀಕರಿಸಲಾಗಿದೆ. ಜಿನಿವಾದಲ್ಲಿ ನಡೆದ ಸಮಾವೇಶದಲ್ಲಿ ಅಂದಿನ ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದ ಸಲ್ಮಾನ್‌ ಖುರ್ಷಿದ್‌ ಅವರ ನೇತೃತ್ವದಲ್ಲಿನ ನಿಯೋಗವು ಮಂಡಿಸಿದ್ದ ಗೊತ್ತುವಳಿಗೆ ಐತಿಹಾಸಿಕ ಗೆಲುವು ದೊರೆತಿತ್ತು.

ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಈ ವರದಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಧಿಕೃತ ಖಂಡನೆ ಬಿಡುಗಡೆ ಮಾಡುವ ಮೊದಲೇ, ಕಾಂಗ್ರೆಸ್‌ ಪಕ್ಷದ ವಕ್ತಾರರು ಟೆಲಿವಿಷನ್‌ನಲ್ಲಿ ಕಾಣಿಸಿಕೊಂಡು ಸರ್ಕಾರದ ನಿಲುವಿಗೆ ಬೆಂಬಲ ಸೂಚಿಸಿದ್ದರು.

ಇದೇ ಸಂದರ್ಭದಲ್ಲಿ ನಡೆದ ಪತ್ರಕರ್ತ ಶುಜಾತ್‌ ಬುಖಾರಿ ಅವರ ಹತ್ಯೆಯು ವಿಶ್ವಸಂಸ್ಥೆಯ ವರದಿಯಲ್ಲಿನ ಅತ್ಯಂತ ಅಪಾಯಕಾರಿ ವಿವರಗಳಿಂದ ನಮ್ಮ ಗಮನವನ್ನು ಬೇರೆಡೆ ವಿಮುಖಗೊಳಿಸಲಿದೆ.

ವಿಶ್ವಸಂಸ್ಥೆಯ ವರದಿಯಲ್ಲಿ, ಕಾಶ್ಮೀರಕ್ಕಾಗಿ ಯುದ್ಧ ಘೋಷಿಸದೆ, ಅಲ್ಲಿನ ಜನರಿಗೆ ಸ್ವಯಂ ನಿರ್ಧಾರದ ಹಕ್ಕು ನೀಡಬೇಕು ಎಂದು ಔಪಚಾರಿಕವಾಗಿ ಭಾರತಕ್ಕೆ ಕೇಳಿಕೊಳ್ಳಲಾಗಿದೆ. ಈ ಸಲಹೆಯು ಪಾಕಿಸ್ತಾನಕ್ಕೂ ಪಥ್ಯವಾಗಿರಲಿಕ್ಕಿಲ್ಲ. ಸ್ವಯಂ ನಿರ್ಧಾರ ಹಕ್ಕು ನೀಡುವುದರಿಂದ ಕಾಶ್ಮೀರದ ಜನರಿಗೆ ಸ್ವಾತಂತ್ರ್ಯದ ಆಯ್ಕೆಯನ್ನೂ ಒದಗಿಸುವ ಅವಕಾಶ ವಿಸ್ತರಣೆಯಾದಂತೆ ಆಗಲಿದೆ ಎನ್ನುವುದು ಅದರ ಚಿಂತೆಯಾಗಿದೆ.

ಹೀಗಾಗಿ ಪಾಕಿಸ್ತಾನವು ಈ ಸಲಹೆಯನ್ನು ಅಥವಾ 1948ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿದ್ದ ಗೊತ್ತುವಳಿಯನ್ನು ಯಾವತ್ತೂ ಸ್ವೀಕರಿಸುವುದಿಲ್ಲ.

ಕಾಶ್ಮೀರದಲ್ಲಿ ಯಾವುದೇ ಕಾರಣಕ್ಕೂ ಜನಮತಗಣನೆ ನಡೆಸುವುದು ಅಥವಾ ಕಾಶ್ಮೀರದ ಜನರಿಗೆ ಸ್ವಯಂ ನಿರ್ಧಾರಕ್ಕೆ ಬರಲು ಅವಕಾಶ ನೀಡುವ ಬಗ್ಗೆ ವಿಶ್ವಸಂಸ್ಥೆಯು ಮಾತನಾಡುವಂತಿಲ್ಲ. ಕಾಶ್ಮೀರ ವಿವಾದವು ಸಂಪೂರ್ಣವಾಗಿ ದ್ವಿಪಕ್ಷೀಯ ವಿಷಯ ಎಂದು 1972ರ ಶಿಮ್ಲಾ ಒಪ್ಪಂದದಲ್ಲಿ ಸ್ಪಷ್ಟಪಡಿಸಿರುವುದರಿಂದ ಮೂರನೇಯವರ ಮಧ್ಯಪ್ರವೇಶಕ್ಕೆ ಇಲ್ಲಿ ಅವಕಾಶವೇ ಇಲ್ಲ.

ಪಾಕಿಸ್ತಾನವು ಮೂರನೇಯವರ ಮಧ್ಯಸ್ಥಿಕೆಯಲ್ಲಿ ಈ ವಿವಾದ ಬಗೆಹರಿಸುವ ಬಗ್ಗೆ ಕೆಲವೊಮ್ಮೆ ಮಾತನಾಡುತ್ತಿದ್ದರೂ, ಯಾವತ್ತೂ ಆ ಬಗ್ಗೆ ಪಟ್ಟು ಹಿಡಿದಿಲ್ಲ. ದ್ವಿಪಕ್ಷೀಯ ಮಾತುಕತೆ ಅಥವಾ ಜಂಟಿ ಘೋಷಣೆಗಳ ಸಂದರ್ಭದಲ್ಲಿ ಈ ವಿಷಯ ಸೇರ್ಪಡೆಗೊಳಿಸಲೂ ಮುಂದಾಗಿಲ್ಲ. ಉಭಯ ದೇಶಗಳ ಮಾತುಕತೆ ಸಂದರ್ಭದಲ್ಲಿ ವಿವಾದವನ್ನು ದ್ವಿಪಕ್ಷೀಯ ನೆಲೆಯಲ್ಲಿ ಬಗೆಹರಿಸುವ ಬಗ್ಗೆ ಮಾತನಾಡುತ್ತಿದೆ.

ಕಾಶ್ಮೀರದಲ್ಲಿ ನಡೆಯುತ್ತಿರುವ ಪ್ರತ್ಯೇಕತೆಗೆ ಸಂಬಂಧಿಸಿದ ಸಂಘರ್ಷವು 1989–94ರ ಅವಧಿಯಲ್ಲಿ ಉತ್ತುಂಗ ಸ್ಥಿತಿಗೆ ತಲುಪಿತ್ತು ಎಂದೇ ಇದುವರೆಗೆ ಪರಿಗಣಿಸಲಾಗಿತ್ತು. ಕಣಿವೆ ರಾಜ್ಯದಲ್ಲಿನ ಪರಿಸ್ಥಿತಿ ಈಗ ಮತ್ತೆ ಅದೇ ಮಟ್ಟಕ್ಕೆ ಮರಳಿದೆಯೇ ಎನ್ನುವುದು ಚರ್ಚಾಸ್ಪದ ವಿಷಯವಾಗಿದೆ.

ಕಾಶ್ಮೀರದಲ್ಲಿ ಈಗ ರಾಜಕೀಯವು ತನ್ನ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಸ್ಥಳೀಯರಲ್ಲಿ ಪ್ರತ್ಯೇಕತಾ ಭಾವನೆ ಹೆಚ್ಚಿದೆ. ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿದೆ ಎನ್ನುವ ವಾದ ಬಲಗೊಳ್ಳುತ್ತಿದೆ. ವಾಸ್ತವ ನಿಯಂತ್ರಣ ರೇಖೆಗುಂಟ (ಎಲ್‌ಒಸಿ) ಪಾಕಿಸ್ತಾನಿಯರು ಹೆಚ್ಚು ಸಕ್ರಿಯವಾಗಿದ್ದಾರೆ. ಭಾರತದ ರಾಷ್ಟ್ರೀಯ ರಾಜಕಾರಣದಲ್ಲಿ ಸಾಮರಸ್ಯ ಕಾಣೆಯಾಗಿದೆ.

ಎರಡು ವಿದ್ಯಮಾನಗಳ ಬಗ್ಗೆ ಮಾತ್ರ ಭಾರತ ಒಂದೇ ದನಿಯಲ್ಲಿ ತನ್ನ ಆಕ್ರೋಶ ವ್ಯಕ್ತಪಡಿಸಿದೆ. ಪಾಶ್ಚಿಮಾತ್ಯ ಮಾನವ ಹಕ್ಕುಗಳ ಸಂಘಟನೆಗಳು ಹೇರುತ್ತಿರುವ ಒತ್ತಡ ಮತ್ತು ಕಾಶ್ಮೀರದ ಮೇಲೆ ಭಾರತ ಹೊಂದಿರುವ ನಿಯಂತ್ರಣದ ಕ್ರಮಬದ್ಧತೆಯನ್ನು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ರಾಬಿನ್‌ ರಾಫೆಲ್‌ ಅವರು ಪ್ರಶ್ನಿಸಿರುವುದಕ್ಕೆ ಭಾರತವು ವಿಶ್ವಸಂಸ್ಥೆಗೆ ತನ್ನ ತೀವ್ರ ಪ್ರತಿಭಟನೆ ದಾಖಲಿಸಿದೆ. ವಿಶ್ವಸಂಸ್ಥೆಯ ಈ ಬೇಜವಾಬ್ದಾರಿತನದ ವರದಿಯು ಭಾರತದ ಆಕ್ರೋಶವನ್ನು ಹೆಚ್ಚಿಸಿದೆ.

ತನ್ನ ಬುದ್ಧಿಗೇಡಿತವನ್ನು ಮತ್ತೊಮ್ಮೆ ಬಹಿರಂಗಪಡಿಸಿದ ವಿಶ್ವಸಂಸ್ಥೆ ಮತ್ತು ಪಾಶ್ಚಿಮಾತ್ಯ ದೇಶಗಳು ಮಾನವ ಹಕ್ಕುಗಳ ಉಲ್ಲಂಘನೆ ಹೆಸರಿನಲ್ಲಿ ಭಾರತದ ಮೇಲೆ ಒತ್ತಡ ಹೇರಲು ಹೊರಟಿರುವುದು ನೋಡಿದರೆ ಅವುಗಳು ಇತಿಹಾಸದಿಂದ ಪಾಠ ಕಲಿಯದಿರುವುದು ಸ್ಪಷ್ಟಗೊಳ್ಳುತ್ತದೆ.

ಭಾರತದಲ್ಲಿ ರಾಜಕೀಯವು ಗಮನಾರ್ಹ ಬದಲಾವಣೆ ಕಾಣುತ್ತಿದ್ದ ಹಂತದಲ್ಲಿ ಅಂದರೆ 1989ರಲ್ಲಿ ಕಾಶ್ಮೀರದ ಸಮಸ್ಯೆ ತೀವ್ರಗೊಳ್ಳಲು ಆರಂಭಿಸಿತ್ತು. ವಿ. ಪಿ. ಸಿಂಗ್‌ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿನ ಸೈದ್ಧಾಂತಿಕ ನಿಲುವು ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಸಂಪೂರ್ಣ ಬಹುಮತ ಇಲ್ಲದ ಮೈತ್ರಿ ಸರ್ಕಾರವೊಂದು ಆ ಸಂದರ್ಭದಲ್ಲಿ ಬಿಜೆಪಿ ಮತ್ತು ಎಡಪಕ್ಷಗಳ ಬಾಹ್ಯ ಬೆಂಬಲದ ನೆರವಿನಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿತ್ತು.

ಕಾಶ್ಮೀರ ಸಮಸ್ಯೆಗೆ ಬಲಪ್ರಯೋಗದ ವಿಧಾನ ಅನುಸರಿಸಬೇಕು ಎಂದು ಬಿಜೆಪಿ ಬಯಸಿತ್ತು. ಇದೇ ಕಾರಣಕ್ಕೆ ಕಾಶ್ಮೀರದಲ್ಲಿನ ಉಗ್ರರ ಉಪಟಳವನ್ನು ಸದೆಬಡಿಯಲು ಆ ಪಕ್ಷದ ಒತ್ತಾಯದ ಮೇರೆಗೆ ಜಗಮೋಹನ್‌ ಅವರನ್ನು ಕಾಶ್ಮೀರದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿತ್ತು. ಇನ್ನೊಂದೆಡೆ ಸರ್ಕಾರವು ಎಡಪಕ್ಷಗಳನ್ನು ಅವಲಂಬಿಸಿರುವುದರ ಜತೆಗೆ ಮುಸ್ಲಿಂ ಪರ ನಿಲುವಿಗೆ ಗಟ್ಟಿಯಾಗಿ ಅಂಟಿಕೊಂಡಿತ್ತು. ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ಗೃಹ ಸಚಿವರಾಗಿದ್ದರು.

ಉದಾರ ಧೋರಣೆಯ ಜಾರ್ಜ್‌ ಫರ್ನಾಂಡಿಸ್‌ ಅವರನ್ನು ಕಾಶ್ಮೀರದ ವ್ಯವಹಾರಗಳ ಸಚಿವರನ್ನಾಗಿ ನೇಮಿಸಲಾಗಿತ್ತು.

ಕೇಂದ್ರದಲ್ಲಿ ಅಧಿಕಾರ ಹಂಚಿಕೊಂಡಿದ್ದ ಒಂದು ಬಣವು ಕಾಶ್ಮೀರದ ಜನರಿಗೆ ಗಾಯ ಮಾಡುತ್ತಿದ್ದರೆ, ಇನ್ನೊಂದು ಬಣವು ಅದಕ್ಕೆ ಮುಲಾಮು ಹಚ್ಚುವ ಕೆಲಸದಲ್ಲಿ ಮಗ್ನವಾಗಿತ್ತು. ಗೃಹ ಸಚಿವರು ಯಾವ ಬಣದಲ್ಲಿ ಇದ್ದರು ಎಂದು ಊಹಿಸಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಇದರ ಒಟ್ಟಾರೆ ಪರಿಣಾಮ ಮಾತ್ರ ಅನರ್ಥಕಾರಿಯಾಗಿತ್ತು.

ಕಾಶ್ಮೀರಿ ಪಂಡಿತರು ಅತ್ಯಂತ ಕ್ರೂರ ಬಗೆಯಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದರು. ರಾಜ್ಯದಲ್ಲಿನ ಉಗ್ರವಾದವು ಪಾಕಿಸ್ತಾನ ಬೆಂಬಲಿತ ಪೂರ್ಣ ಪ್ರಮಾಣದ ಬಂಡಾಯದ ಸ್ವರೂಪ ಪಡೆದಿತ್ತು.

ಆನಂತರದ ದಿನಗಳಲ್ಲಿ ಕೇಂದ್ರದಲ್ಲಿ ಜಾಣ, ನಿಷ್ಕರುಣಿ ಮತ್ತು ಸ್ಪಷ್ಟ ಧೋರಣೆಯ ನರಸಿಂಹರಾವ್‌ ಅವರು ಪ್ರಧಾನಿ ಪಟ್ಟಕ್ಕೆ ಏರಿದರು. ಅವರ ಸರ್ಕಾರವು, ಉಗ್ರರನ್ನು ಸದೆಬಡಿಯಲು ಸೇನಾ ಪಡೆಗಳಿಗೆ ಅಪರಿಮಿತ ಸಂಪನ್ಮೂಲ, ಮುಕ್ತ ಸ್ವಾತಂತ್ರ್ಯ ಮತ್ತು ಸಂಪೂರ್ಣ ಅಧಿಕಾರವನ್ನು ನೀಡಿತು.

ಮಾನವ ಹಕ್ಕುಗಳ ಇತಿಹಾಸದಲ್ಲಿ ರಾಜ್ಯವು ಆ ಸಂದರ್ಭದಲ್ಲಿ ಅತ್ಯಂತ ಕೆಟ್ಟ ದಿನಗಳನ್ನು ಕಂಡಿತು. ವಿಚಾರಣಾ ಕೇಂದ್ರಗಳ ಸ್ಥಾಪನೆಯು ಕುಖ್ಯಾತಿ ಪಡೆದಿದ್ದವು. ನಾಗರಿಕರ ಮೇಲೆ ನಡೆದ ಗೋಲಿಬಾರ್‌ನಲ್ಲಿ ಅಸಂಖ್ಯ ಜನರು ಮೃತಪಟ್ಟಿದ್ದರು. ಬಿಜ್‌ಬೆಹರಾ ನರ ಹತ್ಯೆ ಮತ್ತು ಕುನನ್ ಪೋಸ್ಪೊರಾ ಸಾಮೂಹಿಕ ಅತ್ಯಾಚಾರ ಆರೋಪಗಳು ಇದೇ ಸಂದರ್ಭದಲ್ಲಿ ಕೇಳಿ ಬಂದಿದ್ದವು.

ನರಸಿಂಹರಾವ್‌ ಅವರ ಅಧಿಕಾರಾವಧಿಯ ಕೊನೆಯ ವೇಳೆಯ ಹೊತ್ತಿಗೆ ಜನರ ಭಾವನೆಗಳನ್ನು ಬಲಿಗೊಟ್ಟು ಉಗ್ರರನ್ನು ನಿಗ್ರಹಿಸುವಲ್ಲಿ ಯಶಸ್ಸು ಸಾಧಿಸಲಾಗಿತ್ತು. ವಿ. ಪಿ. ಸಿಂಗ್‌ ಸರ್ಕಾರದ ಅಸ್ಪಷ್ಟ, ಗೊಂದಲಕಾರಿ ಧೋರಣೆಗೆ ದೇಶ ದೊಡ್ಡ ಬೆಲೆಯನ್ನೇ ತೆತ್ತಿತ್ತು.

ನಂತರದ ದಿನಗಳಲ್ಲೂ ಕಾಶ್ಮೀರಕ್ಕೆ ಸಂಬಂಧಿಸಿದಂತೆ ನಾವು ಇದೇ ಬಗೆಯ ಗೊಂದಲಗಳನ್ನು ಕಾಣುತ್ತ ಬಂದಿದ್ದೇವೆ. ವಿ. ಪಿ. ಸಿಂಗ್‌ ಅವರ ಬಹುಮತ ಇಲ್ಲದ ಮೈತ್ರಿಕೂಟ ಸರ್ಕಾರಕ್ಕೆ ಹೋಲಿಸಿದರೆ, ಬಹುಮತ ಪಡೆದ ರಾಷ್ಟ್ರೀಯ ಸರ್ಕಾರವೊಂದು ಕೇಂದ್ರದಲ್ಲಿ ಅಧಿಕಾರ ನಡೆಸಿದರೂ ಇದೇ ಬಗೆಯ ಗೊಂದಲ ಈಗಲೂ ಬೇರೆ ರೀತಿಯಲ್ಲಿ ಮುಂದುವರೆದಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿಯು ಕಾಶ್ಮೀರದಲ್ಲಿ ಪಿಡಿಪಿ ಜತೆ ಸೇರಿ ಅಧಿಕಾರ ನಡೆಸುತ್ತಿದೆ. ವಿಭಿನ್ನ ಸಿದ್ಧಾಂತದ ಪಕ್ಷಗಳೆರಡು ಜತೆಯಾಗುವ ಮತ್ತು ಕಾಶ್ಮೀರ ಕಣಿವೆ ಮತ್ತು ಜಮ್ಮು ಭೂಭಾಗವನ್ನು ಹತ್ತಿರ ತರುವ ಉದ್ದೇಶದಿಂದ ಈ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಬಿಜೆಪಿಯು ಮೇಲ್ನೋಟಕ್ಕೆ ಕಾರಣ ನೀಡಿದೆ. ಈ ಧೋರಣೆಯು ಬಿಜೆಪಿಯ ಮೂಲ ಸಿದ್ಧಾಂತಕ್ಕೆ ಯಾವತ್ತೂ ಹೊಂದಾಣಿಕೆಯಾಗುವುದಿಲ್ಲ.

ಹೀಗಾಗಿ, ಏಕಕಾಲಕ್ಕೆ ಬಂದೂಕು ಮತ್ತು ಬ್ಯಾಂಡೇಜ್‌ ನೀತಿಯನ್ನು ಅನುಸರಿಸಿದಂತಾಗುತ್ತಿದೆ. ಸರ್ಕಾರದಲ್ಲಿ ಈಗಲೂ ಜಗಮೋಹನ್‌ ಮತ್ತು ಜಾರ್ಜ್‌ ಫರ್ನಾಂಡಿಸ್‌ ಅವರಂಥವರು ಇರುವ ಭಾವನೆ ಮೂಡಿಸುತ್ತದೆ.

ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಾನವ ಹಕ್ಕುಗಳ ಒತ್ತಡ ಮತ್ತು ಭಾರತವು ಕಾಶ್ಮೀರವನ್ನು ತನ್ನಲ್ಲಿ ವಿಲೀನ ಮಾಡಿಕೊಂಡಿರುವುದನ್ನು ಪ್ರಶ್ನಿಸುವ ರಾಬಿನ್‌ ರಾಫೆಲ್‌ ಅವರ ಧೋರಣೆಯು ವಿಶ್ವಸಂಸ್ಥೆಯ ಈ ದುಡುಕಿನ ವರದಿಯಲ್ಲಿ ಪ್ರತಿಫಲನಗೊಂಡಿದೆ. ಕಾಶ್ಮೀರದಲ್ಲಿನ ಗಡಿಯಾರವು 1993ಕ್ಕೆ ಮತ್ತೆ ಹಿಮ್ಮುಖವಾಗಿ ಚಲಿಸಿದೆ.

ಲೇಖಕ: ‘ದಿ ಪ್ರಿಂಟ್‌’ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT