ಸಂಪೂರ್ಣ ವಿದ್ಯುತ್ ಚಾಲಿತ ಜಾಗ್ವಾರ್ ಐಪೇಸ್: ಆರಂಭಿಕ ಬೆಲೆ ₹ 105.9 ಲಕ್ಷ

ಬೆಂಗಳೂರು: ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ ಕಂಪನಿಯು ಸಂಪೂರ್ಣ ವಿದ್ಯುತ್ ಚಾಲಿತ ‘ಜಾಗ್ವಾರ್ ಐ–ಪೇಸ್’ ವಾಹನವನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿರುವುದಾಗಿ ಮಂಗಳವಾರ ಘೋಷಿಸಿದೆ.
ಐ–ಪೇಸ್ನ ಆರಂಭಿಕ ಬೆಲೆ ₹ 105.9 ಲಕ್ಷ (ಎಕ್ಸ್ಷೋರೂಂ) ಇದ್ದು, ಐದು ವರ್ಷಗಳ ಸೇವಾ ಪ್ಯಾಕೇಜ್, ಐದು ವರ್ಷಗಳ ರಸ್ತೆ ಬದಿ ನೆರವಿನ ಪ್ಯಾಕೇಜ್, 7.4 ಕಿಲೊವಾಟ್ ಎಸಿ ವಾಲ್ ಮೌಂಟೆಡ್ ಚಾರ್ಜರ್ ಮತ್ತು 8 ವರ್ಷಗಳ ಅಥವಾ 1.60 ಲಕ್ಷ ಕಿಲೊಮೀಟರ್ ಬ್ಯಾಟರಿ ವಾರಂಟಿಯನ್ನೂ ಒಳಗೊಂಡಿದೆ.
ಈ ಎಸ್ಯುವಿ 90 ಕಿಲೊವಾಟ್ ಲೀಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿದ್ದು, 294 ಕಿಲೊವಾಟ್ ಪವರ್ ಮತ್ತು 696 ಎನ್ಎಂ ಟಾರ್ಕ್ ಶಕ್ತಿ ನೀಡಬಲ್ಲದು. ನಿಂತಿದ್ದ ಸ್ಥಿತಿಯಿಂದ ಕೇವಲ 4.8 ಸೆಕೆಂಡ್ಗಳಲ್ಲಿ ಗಂಟೆಗೆ 100 ಕಿ.ಮೀ ವೇಗವನ್ನು ತಲುಪಲ್ಲದು ಎಂದು ಕಂಪನಿ ತಿಳಿಸಿದೆ.
‘ಭಾರತದಲ್ಲಿ ಬಿಡುಗಡೆ ಮಾಡಿರುವ ಸಂಪೂರ್ಣ ವಿದ್ಯುತ್ ಚಾಲಿತ ಮೊದಲ ಎಸ್ಯುವಿ ಇದಾಗಿದೆ. ಆಧುನಿಕ ತಂತ್ರಜ್ಞಾನ ಮತ್ತು ವಿನ್ಯಾಸ ಇರುವ ವಾಹನ ಖರೀದಿಸಲು ಇಚ್ಛಿಸುವ ಜನರಿಗೆ ಐ–ಪೇಸ್ ಸೂಕ್ತವಾಗಿದೆ’ ಎಂದು ಕಂಪನಿಯ ಅಧ್ಯಕ್ಷ ರೋಹಿತ್ ಸೂರಿ ಅವರು ವರ್ಚುವಲ್ ಕಾರ್ಯಕ್ರಮದಲ್ಲಿ ತಿಳಿಸಿದರು.
ಹೋಮ್ ಚಾರ್ಜಿಂಗ್ ಕೇಬಲ್ ಅಥವಾ 7.4 ಕಿಲೊವಾಟ್ ಎಸಿ ವಾಲ್ ಮೌಂಟೆಡ್ ಚಾರ್ಜರ್ ಆಯ್ಕೆಗಳನ್ನು ನೀಡಲಾಗಿದೆ. ಗ್ರಾಹಕರ ಮನೆಯಲ್ಲಿ ಚಾರ್ಜರ್ ಅಳವಡಿಕೆಯನ್ನು ಜಾಗ್ವರ್ ರಿಟೇಲರ್ ಸಹಯೋಗದೊಂದಿಗೆ ಟಾಟಾ ಪವರ್ ಲಿಮಿಟೆಡ್ ನಿರ್ವಹಿಸಲಿದೆ. 19 ನಗರಗಳಲ್ಲಿ 22 ರಿಟೇಲ್ ಮಳಿಗೆಗಳಲ್ಲಿ ಚಾರ್ಜಿಂಗ್ ಸೌಲಭ್ಯ ಲಭ್ಯವಿದೆ ಎಂದು ಅವರು ವಿವರಿಸಿದರು.
ಪಿವಿ ಪ್ರೊ ಇನ್ಫೊಟೇನ್ಮೆಂಟ್ ಸಿಸ್ಟಂ ಹೊಂದಿರುವ ಮೊದಲ ಜಾಗ್ವಾರ್ ಇದಾಗಿದೆ. 31.24 ಸೆಂಟಿಮೀಟರ್ನ ಎಚ್ಡಿ ಪರದೆಯು ಬ್ಯಾಟರಿ ಚಾರ್ಜಿಂಗ್ ಮಾಹಿತಿಯೂ ಸೇರಿದಂತೆ ಹಲವು ಮಾಹಿತಿ ನೀಡುವ ವೈಶಿಷ್ಟ್ಯಗಳನ್ನು ಹೊಂದಿದೆ.
ವಯರ್ಲೆಸ್ ಡಿವೈಸ್ ಚಾರ್ಜಿಂಗ್ ಪಾಡ್, ಆ್ಯಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೊದೊಂದಿಗೆ ಸ್ಮಾರ್ಟ್ಫೋನ್ ಪ್ಯಾಕ್ ಲಭ್ಯವಿದ್ದು, ಏಕಕಾಲಕ್ಕೆ ಎರಡು ಫೋನ್ಗಳನ್ನು ಬ್ಲೂಟೂತ್ಗೆ ಸಂಪರ್ಕಿಸಬಹುದು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.