ಆನ್‌ಲೈನ್‌ನಲ್ಲಿ ನಯಾ ಗಾಡಿ ಮೋಡಿ...

7

ಆನ್‌ಲೈನ್‌ನಲ್ಲಿ ನಯಾ ಗಾಡಿ ಮೋಡಿ...

Published:
Updated:
Deccan Herald

ಆ ಯುವಕ ವಿದೇಶಗಳಲ್ಲಿ 20 ವರ್ಷ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿ ಸ್ವದೇಶಕ್ಕೆ ಬಂದರು. ಹೊಸ ವಾಹನ ಖರೀದಿಸಲು ಮುಂದಾದಾಗ ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳ ಸರಮಾಲೆಯ ಅರಿವಾಯಿತು. ಹಳ್ಳಿಯ ರೈತರೂ ನಿಂತ ಹೆಜ್ಜೆಯಲ್ಲೇ ತಮ್ಮಿಷ್ಟದ ವಾಹನವನ್ನು ಖರೀದಿಸಲು ಒಂದು ವೇದಿಕೆ ಬೇಕಾಗಿದೆ ಎಂಬುದೂ ಅರ್ಥವಾಯಿತು. ಆಗಲೇ ಹುಟ್ಟಿದ್ದು NayaGaadi.com ಎಂಬ ಆನ್‌ಲೈನ್‌ ಮಾರುಕಟ್ಟೆ ತಾಣ.

ಇದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಗರಿ ಮಂಡಲ ವ್ಯಾಪ್ತಿಯ ತಡುಕುಪೇಟ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಬಾಲಾಜಿ ಕೈಸೆಟ್ಟಿ ಎಂಬ ಮಹತ್ವಾಕಾಂಕ್ಷಿಯ ಕ್ರಾಂತಿಕಾರಿ ಚಿಂತನೆ. ಅದು ಈಗ ದೇಶವ್ಯಾಪಿ ಹೆಸರು ಮಾಡುತ್ತಿದೆ.

ಪ್ರತಿಯೊಬ್ಬರಿಗೂ ಸ್ವಂತ ವಾಹನ ಹೊಂದುವ ಕನಸು ಇರುತ್ತದೆ. ಇದಕ್ಕಾಗಿ ಹಲವು ಬಾರಿ ನಾಲ್ಕೈದು ಶೋ ರೂಂ ಸುತ್ತಿ ಬೆಲೆ, ಬ್ರ್ಯಾಂಡ್‌, ಮಾಡೆಲ್‌, ಬಣ್ಣ, ಸಾಲ ನಾಲ್ಕೈದು ಶೋ ರೂಂಗಳ ಸಂಪರ್ಕ ಸಂಖ್ಯೆಯನ್ನೂ ಕಲೆಹಾಕಿಕೊಳ್ಳುವುದು ಕನಸಿನ ಸಾಕಾರದತ್ತ ಎರಡನೇ ಹೆಜ್ಜೆ. ಒಂದೊಂದು ಬ್ರ್ಯಾಂಡ್‌ನ ಶೋ ರೂಂಗೆ ಹೋಗಿಬರುವುದಕ್ಕೂ ಒಂದಷ್ಟು ಸಮಯ ಮೀಸಲಿಡಬೇಕು. ಈ ವಾರ ತುಂಬಾ ಕೆಲಸವಿದೆ. ಮುಂದಿನ ವಾರ ಹೋಗಿಬಂದರಾಯಿತು ಎಂಬ ವಿಳಂಬನೀತಿ.ವಾಹನ ಖರೀದಿಗೆ ನಿರ್ಧರಿಸಿದ ನಂತರ ಎದುರಾಗುವ ಸಾಮಾನ್ಯವಾದ ಸಮಸ್ಯೆಗಳಿವು. ಅಂತೂ ಇಂತೂ ತಮ್ಮಿಷ್ಟದ ವಾಹನ ಖರೀದಿಸಿ ಮನೆ ಮುಂದೆ ತಂದು ನಿಲ್ಲಿಸುವವರೆಗೆ ನೆಮ್ಮದಿ ಇರುವುದಿಲ್ಲ. ಹೊಸ ವಾಹನ ಖರೀದಿ ನಗರ ಪ್ರದೇಶದ ಗ್ರಾಹಕರಿಗೇ ಇಷ್ಟು ಸಮಸ್ಯೆ ಎನಿಸಿದರೆ ಗ್ರಾಮೀಣ ಭಾಗದ ಗ್ರಾಹಕರ ಪಾಡು ಹೇಗಿದ್ದೀತು!

ಕೃಷಿ ಚಟುವಟಿಕೆಗಳಿಗೆ ಅವಶ್ಯವಾದ ವಾಹನಗಳಿಗೆ ಅಲ್ಲಿ ಸದಾ ಬೇಡಿಕೆ ಇದ್ದರೂ ಮಾಹಿತಿಯ ಕೊರತೆ ಮತ್ತು ಪೂರೈಕೆ ಸೌಕರ್ಯವಿಲ್ಲದ ಕಾರಣಕ್ಕೆ ಅಲ್ಲಿನ ಗ್ರಾಹಕರು ಅವಕಾಶವಂಚಿತರಾಗಬಾರದು ಎಂಬುದು ಬಾಲಾಜಿ ಚಿಂತನೆಯಾಗಿತ್ತು. ಗ್ರಾಮೀಣ ಭಾರತದಲ್ಲಿಯೂ ಆಟೊಮೊಬೈಲ್‌ ಕ್ಷೇತ್ರಕ್ಕೆ ಬಹುದೊಡ್ಡ ಮಾರುಕಟ್ಟೆ ಇದ್ದರೂ ಮೂಲಸೌಲಭ್ಯಗಳ ಕೊರತೆಯೇ ಕಂಟಕವಾಗಿರುವುದು. ಈ ಎರಡೂ ವರ್ಗದ ಗ್ರಾಹಕರ ಹೊರೆ ಇಳಿಸಿ ಗುಣಮಟ್ಟದೊಂದಿಗೆ ಪ್ರಾಮಾಣಿಕ ಸೇವೆ ನೀಡಬೇಕು ಎಂಬ ಉದ್ದೇಶದೊಂದಿಗೆ NayaGaadi.com (ನಯಾ ಗಾಡಿ ಡಾಟ್‌ ಕಾಮ್‌) ಆನ್‌ಲೈನ್‌ ಮಾರುಕಟ್ಟೆ ಆರಂಭಿಸಿದೆ' ಎಂದು ವಿವರಿಸುತ್ತಾರೆ, ಬಾಲಾಜಿ ಕೈಸೆಟ್ಟಿ.

‘ಯಾವುದೇ ಬ್ರ್ಯಾಂಡ್‌, ಯಾವುದೇ ಬಗೆಯ ಹೊಸ ವಾಹನಗಳಿಗೆ ಹೆಸರಾಗಿರುವ ದೇಶದ ಮೊದಲ ಆನ್‌ಲೈನ್‌ ಮಾರ್ಕೆಟ್‌ಪ್ಲೇಸ್‌ ಎಂಬುದು ನಮ್ಮ ಹೆಗ್ಗಳಿಕೆ’ ಎಂದು ಅವರು ಹೇಳಿಕೊಳ್ಳುತ್ತಾರೆ.

‘ಪ್ರಯಾಣಿಕ ಮತ್ತು ಗೂಡ್ಸ್‌ ಆಟೊ, ಬೈಕ್‌, ಸ್ಕೂಟರ್, ಕಾರು, ಸೈಕಲ್‌, ಲಾರಿ, ಟ್ರ್ಯಾಕ್ಟರ್‌, ಎಲ್ಲಾ ಬಗೆಯ ಪ್ರಯಾಣಿಕ ಮತ್ತು ಕಮರ್ಷಿಯಲ್‌ ವಾಹನಗಳು, ಎಸ್‌ಯುವಿ, ಎಂಯುವಿ, ಯುಟಿಲಿಟಿ ವಾಹನಗಳಿಗೆ ನಮ್ಮಲ್ಲಿ ದಿನೇ ದಿನೇ ಬೇಡಿಕೆ ಹೆಚ್ಚುತ್ತಲೇ ಇದೆ. ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ಗ್ರಾಮೀಣ ಪ್ರದೇಶಗಳಿಂದ ಕೃಷಿ ಚಟುವಟಿಕೆಗೆ ಸಂಬಂಧಿಸಿದ ವಾಹನಗಳಿಗೆ ಮತ್ತು ಮೊಪೆಡ್‌ಗಳಿಗೆ ಅತ್ಯಧಿಕ ಬೇಡಿಕೆ ಬರುತ್ತದೆ. ಛತ್ತೀಸ್‌ಗಡ, ಒಡಿಶಾ ಮತ್ತು ಬಿಹಾರದಿಂದಲೂ ಈ ವಾಹನಗಳಿಗೆ ರೈತರು ಸಂಪರ್ಕಿಸುತ್ತಾರೆ. ‘ನಯಾ ಗಾಡಿ’ ನೀಡುವ ಗುಣಮಟ್ಟದ ಸೇವೆಗೆ ಸಿಕ್ಕಿರುವ ಗೌರವವಿದು ಎಂದು ಬಣ್ಣಿಸುತ್ತಾರೆ, ಬಾಲಾಜಿ.

ಮೊಬೈಲ್‌ ಫೋನ್‌ಗಳಿಗೆ ಅಂತರ್ಜಾಲ ಸಂಪರ್ಕವೊಂದು ಇದ್ದರೆ ನಯಾ ಗಾಡಿ ಮಾರುಕಟ್ಟೆ ತಾಣಕ್ಕೆ ಭೇಟಿ ನೀಡಿ ವಾಹನದ ಸಮಗ್ರ ಮಾಹಿತಿ ಪಡೆದು ಬುಕಿಂಗ್‌ ಮಾಡಬಹುದು. 

‘ನಯಾ ಗಾಡಿ’ ಯಾಕೆ?

ಮಳಿಗೆಗಳು ಅಥವಾ ಡೀಲರುಗಳು ಆರಂಭದಲ್ಲಿ ಹೇಳಿದ ಬೆಲೆಗಿಂತ ಹೆಚ್ಚುವರಿ ಶುಲ್ಕಗಳನ್ನು ವಿಧಿಸಿ ಗ್ರಾಹಕರ ಅಸಮಾಧಾನಕ್ಕೆ ಗುರಿಯಾಗುತ್ತಾರೆ. ‘ನಯಾ ಗಾಡಿ’ಗೆ ಆನ್‌ಲೈನ್‌ನಲ್ಲಿ ಭೇಟಿ ನೀಡಿದ ಗ್ರಾಹಕರು ತಾವು ಆಯ್ಕೆ ಮಾಡಿದ ಬ್ರ್ಯಾಂಡ್‌ನ ವಾಹನಕ್ಕೆ ಬುಕಿಂಗ್‌ ವೇಳೆ ನಿಗದಿಪಡಿಸಿದ ದರದಲ್ಲೇ ವಾಹನವನ್ನು ಖರೀದಿಸುತ್ತಾರೆ. ವಿಮೆ, ನೋಂದಣಿ ಸೌಲಭ್ಯವೂ ಇದೆ. ಯಾವುದೇ ಪ್ರಕ್ರಿಯೆಗಳಿಗೆ ಗ್ರಾಹಕ ರಿಗಾಗಲಿ, ಡೀಲರ್‌ಗಾಗಲಿ ಗುಪ್ತ ದರ ಗಳನ್ನು ವಿಧಿಸುವುದಿಲ್ಲ ಅಂದರೆ ಜೀರೊ ಟ್ರಾನ್ಸಾಕ್ಷನ್‌ ಚಾರ್ಜ್‌. ಡೀಲರ್‌ಗಳಿಗೆ ಫ್ಯಾಕ್ಟರಿಗಳು ನೀಡುವ ಬಹುಮಾನದ ಮೊತ್ತದೊಂದಿಗೆ ನಯಾಗಾಡಿ ನೀಡುವ ಮೊತ್ತವನ್ನೂ ಪಡೆಯುವ ಅವಕಾಶವಿರುತ್ತದೆ. ಜಗತ್ತಿನ ಬಹುತೇಕ ಎಲ್ಲಾ ಬ್ರ್ಯಾಂಡ್‌ಗಳ ವಾಹನಗಳನ್ನು ಒಂದೇ ಕ್ಲಿಕ್‌ನಲ್ಲಿ ಒಂದೇ ಸೂರಿನಡಿ ಮಾಹಿತಿ ಪಡೆಯುವ ಮತ್ತು ಖರೀದಿಸುವ ಅವಕಾಶ ಇಲ್ಲಿದೆ. ‘ನಯಾ ಗಾಡಿ’ಯನ್ನು ಗ್ರಾಹಕರು ಯಾಕೆ ನೆಚ್ಚಿಕೊಳ್ಳಬಹುದು ಎಂಬ ಪ್ರಶ್ನೆಗೆ ಬಾಲಾಜಿ ನೀಡುವ ವಿವರಣೆಗಳಿವು.

ಪ್ರತಿ ಗ್ರಾಹಕರಿಗೂ ವ್ಯಕ್ತಿಗತ (ಪರ್ಸನಲೈಸ್ಡ್‌) ಸೇವೆ ನೀಡುವುದು ‘ನಯಾಗಾಡಿ’ಯ ವಿಶೇಷ ಎಂದು ಹೇಳುವ ಅವರು,  ಸಂಸ್ಥೆಯ ಧ್ಯೇಯವೂ, ಗೆಲುವಿನ ಗುಟ್ಟೂ ಅದುವೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.  

ಪರೀಕ್ಷಾರ್ಥ ಚಾಲನೆಗೆ ಬನ್ನಿ ಸಾಕು!

ವಾಹನ ಖರೀದಿಸುವ ಮೊದಲು ಟೆಸ್ಟ್‌ ಡ್ರೈವ್‌ ಅನುಭವ ಪಡೆಯುವುದು ಸಹಜ. ‘ನಯಾ ಗಾಡಿ’ಯಲ್ಲಿ ವಾಹನ ಖರೀದಿಸುವ ಗ್ರಾಹಕರು ತಮ್ಮ ಆಯ್ಕೆಯ ಸಮಯದಲ್ಲಿ ಟೆಸ್ಟ್‌ ಡ್ರೈವ್‌ ಮಾಡಿ ಆಯ್ಕೆ ಅಂತಿಮಗೊಳಿಸಿದರೆ ಜವಾಬ್ದಾರಿ ಮುಗಿದಂತೆ. ತಮಾಷೆಯ ಸಂಗತಿ ಎಂದರೆ, ಬೆಂಗಳೂರಿನ ಗ್ರಾಹಕರು ಮಧ್ಯರಾತ್ರಿಯಲ್ಲೂ ಟೆಸ್ಟ್‌ ಡ್ರೈವ್‌ ಬಯಸುತ್ತಾರಂತೆ! ‘ಪರೀಕ್ಷಾರ್ಥ ಚಾಲನೆಗಾಗಿ ಕೆಲಸಕ್ಕೆ ರಜೆ ಹಾಕುವುದು ಸೂಕ್ತವಲ್ಲ ಎಂಬ ಗ್ರಾಹಕರ ಅಭಿಪ್ರಾಯವನ್ನು ನಾವು ಗೌರವಿಸುತ್ತೇವೆ. ರಾತ್ರಿಯೇ ಟೆಸ್ಟ್‌ ಡ್ರೈವ್‌ ಕೇಳುವುದಕ್ಕೆ ಇನ್ನೂ ಒಂದು ಕಾರಣವಿದೆ. ಅದೆಂದರೆ ಬೆಂಗಳೂರಿನ ಟ್ರಾಫಿಕ್‌ ಒತ್ತಡ. ಬೆಳಗ್ಗಿನಿಂದ ಸಂಜೆವರೆಗೂ ಕೆಲಸದಲ್ಲಿ ಕಳೆಯುವ ಉದ್ಯೋಗಸ್ಥರು ಅತಿಯಾದ ಸಂಚಾರ ಒತ್ತಡದಲ್ಲಿ ಟೆಸ್ಟ್‌ ಡ್ರೈವ್‌ ಮಾಡುವುದು ಇನ್ನಷ್ಟು ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ. ಹಾಗಾಗಿ ಕಾರ್ಪೊರೇಟ್‌ ವಲಯದ ಎಷ್ಟೋ ಉದ್ಯೋಗಸ್ಥರು ಮಧ್ಯರಾತ್ರಿಯಲ್ಲಿ ಟೆಸ್ಟ್‌ ಡ್ರೈವ್‌ ಕೇಳಿದ್ದೂ ಇದೆ’ ಎಂದು ನಗುತ್ತಾರೆ. 

ಬಾಲಾಜಿ ಈಗ ಬೆಂಗಳೂರು ನಿವಾಸಿ. ನಯಾ ಗಾಡಿಯ ಕಚೇರಿಯೂ ನಗರದಲ್ಲಿದೆ. ಸಂಪರ್ಕಕ್ಕೆ: NayaGaadi.com 99001 51719

ಏಕಗವಾಕ್ಷಿ ವ್ಯವಸ್ಥೆ

ಭಾರತದ ಆಟೊಮೊಬೈಲ್‌ ಕ್ಷೇತ್ರದ ವಹಿವಾಟಿನಲ್ಲಿ ಗ್ರಾಮೀಣ ಭಾಗದ ಪಾಲು ಶೇ 50. ಇವರೆಲ್ಲ ಪಟ್ಟಣಕ್ಕೋ, ನಗರಕ್ಕೋ ಹೋಗಿ ವಾಹನ ಖರೀದಿಸಬೇಕಾದ ಅನಿವಾರ್ಯತೆ ಇದೆ.

ವಾಹನ ಖರೀದಿಗಾಗಿ ಒಮ್ಮೊಮ್ಮೆ 10 ದಿನ, ಕೆಲವೊಮ್ಮೆ ತಿಂಗಳುಗಟ್ಟಲೆ ಕಾಯಬೇಕಾಗುತ್ತದೆ. ಬುಕಿಂಗ್‌ನಿಂದ ಹಿಡಿದು ಟೆಸ್ಟ್‌ ಡ್ರೈವ್‌ವರೆಗೆ, ಹೊಸ ವಾಹನವನ್ನು ತಮ್ಮೂರಿಗೆ ಕೊಂಡೊಯ್ಯಲು ಎಲ್ಲದಕ್ಕೂ ಒಂದೊಂದು ದಿನ ಮೀಸಲಿಡಬೇಕು.  ಈ ಅಡೆತಡೆಗಳನ್ನು ‘ನಯಾಗಾಡಿ’ಯ ‘ರೂರಲ್‌ ಏಜೆಂಟ್‌ ನೆಟ್‌ವರ್ಕ್‌’ (ಆರ್‌ಎಎನ್‌) ಎಂಬ ಏಕಗವಾಕ್ಷಿ ವ್ಯವಸ್ಥೆ ಸರಳೀಕರಿಸಿದೆ ಎನ್ನುತ್ತಾರೆ ಬಾಲಾಜಿ ಕೈಸೆಟ್ಟಿ.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !