ಪರ್ಯಾಯ ಇಂಧನದ ಪಯಣ ‘ಸನ್ ಟ್ರಿಪ್’

7

ಪರ್ಯಾಯ ಇಂಧನದ ಪಯಣ ‘ಸನ್ ಟ್ರಿಪ್’

Published:
Updated:
ಪರ್ಯಾಯ ಇಂಧನದ ಪಯಣ ‘ಸನ್ ಟ್ರಿಪ್’

ಜಗತ್ತಿನ ಮೊಟ್ಟಮೊದಲ ಸಂಪೂರ್ಣ ಸೌರಶಕ್ತಿ ಚಾಲಿತ ‘ಸೋಲಾರ್‌ ಇಂಪಲ್ಸ್‌–2’ ವಿಮಾನ ವಿಶ್ವ ಪರ್ಯಟನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಗೊತ್ತಿರುವ ಸಂಗತಿ. 16 ತಿಂಗಳ ಅವಧಿಯಲ್ಲಿ ಇದು ಒಟ್ಟು 42 ಸಾವಿರ ಕಿ.ಮೀ ಸಂಚರಿಸಿತ್ತು. ಈ ವೇಳೆ ನಾಲ್ಕು ಖಂಡಗಳು (ಏಷ್ಯಾ, ಉತ್ತರ ಅಮೆರಿಕ, ಯೂರೋಪ್‌ ಮತ್ತು ಆಫ್ರಿಕಾ) ಎರಡು ಮಹಾಸಾಗರಗಳು ಮತ್ತು ಮೂರು ಸಮುದ್ರಗಳ ಮೇಲೆ ಹಾರಾಟ ನಡೆಸಿತ್ತು.

ಶಕ್ತಿಯ ಮೂಲವಾದ ಸೂರ್ಯನ ಶಕ್ತಿಯ ಬಗ್ಗೆ ವಿಶ್ವದ ಗಮನ ಸೆಳೆಯಲು ‘ಸೋಲಾರ್‌ ಇಂಪಲ್ಸ್‌’ ನಡೆಸಿದ ಹಾರಾಟ ಯಶಸ್ವಿ ಪರ್ಯಟನೆ ಮಾಡಿ ಹೊಸ ಮೈಲುಗಲ್ಲು ಸಾಧಿಸಿದೆ. ಬರಿದಾಗುವ ಸಂಪನ್ಮೂಲಗಳ ಬಗ್ಗೆ ಅರಿವು ಮೂಡಿಸುವ ಚಟುವಟಿಕೆಗಳು ವಿಶ್ವದಾದ್ಯಂತ ನಡೆಯುತ್ತಲೇ ಇರುತ್ತವೆ.

ಹೀಗೆ ಸೌರಶಕ್ತಿ ಪ್ರಾಮುಖ್ಯವನ್ನು ಜಗತ್ತಿಗೆ ಸಾರುವ ಪ್ರಯಾಣವೊಂದು 2010 ರಿಂದ ನಡೆಯುತ್ತಿದೆ. ಇದು ‘ಸನ್ ಟ್ರಿಪ್‌’ ಹೆಸರಿನ ಸೌರಶಕ್ತಿ ಫಲಕಗಳನ್ನು ಹೊಂದಿರುವ ವಾಹನಗಳ ಪ್ರಯಾಣ. ಈ ಪಯಣದಲ್ಲಿ ಸ್ಪರ್ಧಿಗಳು ಸೋಲಾರ್ ಚಾಲಿತ ಪರಿಸರ ಸ್ನೇಹಿ ವಾಹನಗಳ ರಾಯಭಾರಿಗಳಂತೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗುತ್ತಾರೆ.

ತಮ್ಮ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಗುರಿ ಮುಟ್ಟುತ್ತಾರೆ. ಇವರ ವಾಹನದ ಎಂಜಿನ್‌ಗಳು ಬ್ಯಾಟರಿಚಾಲಿತವಾಗಿದ್ದರೂ ಅವುಗಳಿಗೆ ಶಕ್ತಿ ಬರುವುದು ಮಾತ್ರ ಸೂರ್ಯನಿಂದ. ಬೆಟ್ಟ, ಗುಡ್ಡ, ಇಳಿಜಾರು, ಬಿಸಿಲು, ಮಳೆ, ಚಳಿ ಎನ್ನದೆ ಸಾಗುತ್ತಾರೆ. 2018ರ ಸನ್‌ಟ್ರಿಪ್‌ ಜೂನ್ 17 ರಂದು ಆರಂಭವಾಗಿದ್ದು, ರೇಷ್ಮೆ ಮಾರ್ಗದ (Silk Route) ಮೂಲಕ ಸಾಗುತ್ತಿದೆ.

ಎಲ್ಲರೂ ಇರುತ್ತಾರೆ: ಈ ಸನ್‌ಟ್ರಿಪ್‌ ಸ್ಪರ್ಧೆಯಲ್ಲಿ ಎಲ್ಲ ರೀತಿಯ ಜನರೂ ಭಾಗವಹಿಸುತ್ತಾರೆ. ಹೊಸಬರು, ಹಳಬರು, ಅನುಭವ ಇದ್ದವರು, ಇಲ್ಲದವರು, ಕ್ರೀಡಾಪಟುಗಳು, ಅಂಗವೈಕಲ್ಯವನ್ನು ಮೆಟ್ಟಿನಿಂತವರು.. ಹೀಗೆ ಈ ಪಯಣದಲ್ಲಿ ವೈವಿದ್ಯ ತುಂಬಿರುತ್ತದೆ. ಈ ವೈವಿಧ್ಯವೇ ಈ ಸಾಹಸಯಾತ್ರೆಯ ಯಶಸ್ಸಿನ ಗುಟ್ಟು ಎಂದು ಸ್ಪರ್ಧಿಯೊಬ್ಬರು ಅಭಿಪ್ರಾಯಪಡುತ್ತಾರೆ.

2018ರ ಸನ್‌ಟ್ರಿಪ್‌ನ ನಿಯಮಗಳು: ಈ ವರ್ಷದ ಸನ್‌ಟ್ರಿಪ್‌ನಲ್ಲಿ ಈ ಹಿಂದಿಗಿಂತ ಒಂದಷ್ಟು ಹೆಚ್ಚಿನ ನಿಯಮಗಳನ್ನು ವಿಧಿಸಲಾಗಿದೆ. ಇವು ಈ ಪಯಣವನ್ನು ಇನ್ನಷ್ಟು ಸುಲಭಗೊಳಿಸಲು, ಸ್ಪರ್ಧಿಗಳಿಗೆ ಸುರಕ್ಷತೆ ಒದಗಿಸಲು ವಿಧಿಸಲಾದ ನಿಬಂಧನೆಗಳು. ಟ್ರಿಪ್‌ನಲ್ಲಿ ಭಾಗವಹಿಸುವವರು ಸೋಲಾರ್ ಎಲೆಕ್ಟ್ರಿಕ್‌ ಬೈಸಿಕಲ್‌ ಮೇಲೆಯೇ ಸಾಗಬೇಕು.

ಅವರ ವಾಹನದ ಬ್ಯಾಟರಿಯನ್ನು ಸೂರ್ಯನ ಶಕ್ತಿಯಿಂದಲೇ ಚಾರ್ಜ್‌ ಮಾಡಿಕೊಳ್ಳಬೇಕು. ಒಂದು ವೇಳೆ ಸ್ಪರ್ಧಿಗಳು ಬೇರೆ ಯಾವುದಾದರೂ ಶಕ್ತಿಮೂಲದಿಂದ ಬ್ಯಾಟರಿಗಳನ್ನು ಚಾರ್ಜ್ ಮಾಡಿದರೆ ಅವರನ್ನು ಟ್ರಿಪ್‌ನಿಂದಲೇ ಹೊರ ಹಾಕಲಾಗುತ್ತದೆ. ತುರ್ತು ಸಂದರ್ಭದಲ್ಲಿ ಬಳಸಲು ಮಾತ್ರವೇ ವಾಲ್‌ ಚಾರ್ಜರ್‌ ಅನ್ನು ಬಳಸಲು ಅವಕಾಶವಿದೆ. ಇದನ್ನು ಟ್ರಿಪ್ ಸಂಯೋಜಕರು ಸೀಲ್ ಮಾಡಿರುತ್ತಾರೆ. ಕದ್ದುಮುಚ್ಚಿ ಬಳಸುವಂತೆ ಇಲ್ಲ.

ನಿಗದಿತ ಸ್ಥಳದಿಂದ ಪ್ರಯಾಣ ಆರಂಭವಾದರೆ ಇಂಥದ್ದೇ ಮಾರ್ಗದಲ್ಲಿ ಸಾಗಬೇಕು ಎಂಬ ನಿಯಮವೇನೂ ಇಲ್ಲ. ಪ್ರತಿ ಸ್ಪರ್ಧಿ ತಾನು ಯಾವ ದೇಶದ ಮೂಲಕ ಸಾಗಬೇಕು ಎಂಬುದನ್ನು ಅವರೇ ತೀರ್ಮಾನಿಸಿಕೊಳ್ಳಬಹುದು. ಸ್ಪರ್ಧಿಗಳು ಯಾವ ದೇಶಗಳನ್ನು ಹಾದು ಹೋಗುತ್ತಾರೊ ಅಲ್ಲಿಯ ವೀಸಾಗಳನ್ನು ಹೊಂದಿರಬೇಕು.

ಮ್ಯಾಪ್‌ನಲ್ಲಿ ಮೊದಲೇ ತೋರಿಸಿದಂತೆ ಯಾವುದೇ ಭಾಗದಲ್ಲಿನ ನಿಷೇಧಿತ ಸ್ಥಳಗಳ ಮೂಲಕ ಸಾಗಬಾರದು. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಅವರನ್ನೂ ಸ್ಪರ್ಧೆಯಿಂದ ಹೊರಹಾಕಲಾಗುವುದು.

ಯಾವುದೇ ಸಹಾಯ ಸಿಗುವುದಿಲ್ಲ: ಸನ್‌ಟ್ರಿಪ್‌ ಎಂತಹುದೇ ದುರ್ಗಮ ಮಾರ್ಗದಲ್ಲಿ ಸಾಗಿದರೂ ಯಾವ ಸಹಾಯಕರು ನೆರವಿಗೆ ಬರುವುದಿಲ್ಲ ಮತ್ತು ವಾಹನಗಳೂ ಹಿಂದೆ ಬರುವುದಿಲ್ಲ. ಅವರು ಸಾಗುವ ದಾರಿಯಲ್ಲಿ ಎದುರಾಗುವ ಊರಿನ ಜನರಿಂದ ನೆರವು ಯಾಚಿಸಬಹುದು ಮತ್ತು ವಾಹನಗಳ ಬಿಡಿಭಾಗಗಳನ್ನು ಪಡೆದುಕೊಳ್ಳಬಹುದು.

ಸಣ್ಣ ಬ್ಲೂಟೂತ್‌ ರೇಡಿಯೊ ಟ್ರಾನ್ಸ್‌ಮೀಟರ್ ಒಯ್ಯಲು ಅವಕಾಶವಿದೆ. ಇದು ಪದೇ ಪದೇ ಸಿಗ್ನಲ್‌ಗಳನ್ನು ನೀಡುತ್ತಿರುತ್ತದೆ. ತುರ್ತು ಸಂದರ್ಭದಲ್ಲಿ ಇದು ನೆರವಾಗುತ್ತದೆ. ಸನ್‌ಟ್ರಿಪ್‌ನಲ್ಲಿ ಭಾಗವಹಿಸುವವರು ಪರಸ್ಪರ ಮತ್ತೊಬ್ಬರಿಗೆ ನೆರವಾಗಬೇಕು.

ಈ ಬಾರಿಯೂ (2018) ಸನ್‌ಟ್ರಿಪ್‌ನಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 7 ರವರೆಗೆ (ಸ್ಥಳೀಯ ಕಾಲಮಾನ) ಪ್ರಯಾಣ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇತರೆ ವಾಹನಗಳಿಗೆ ತೊಂದರೆಯಾಗದಿರಲಿ ಎಂಬ ಕಾರಣದಿಂದ ಈ ನಿಯಮ ಮೊದಲ ಟ್ರಿಪ್‌ನಿಂದಲೂ ಜಾರಿಯಲ್ಲಿದೆ.

ಅಲ್ಲದೆ ಸಾಹಸಿಗರು ಸರಿಯಾದ ಪ್ರಮಾಣದಲ್ಲಿ ನಿದ್ದೆ, ವಿಶ್ರಾಂತಿ ಪಡೆಯಬೇಕಿರುವುದರಿಂದ ರಾತ್ರಿ ಪ್ರಯಾಣಕ್ಕೆ ಅನುಮತಿ ಇಲ್ಲ. ಸಾಗುವ ದಾರಿಯಲ್ಲಿ ಸಿಗುವ ಸ್ಥಳೀಯರೊಂದಿಗೆ ಸಂವಹನ ನಡೆಸಬೇಕು. ಅವರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಆಯೋಜಕರು ಬಯಸುತ್ತಾರೆ.

ವಿಜೇತರ ಘೋಷಣೆ: ಸೌರಶಕ್ತಿಯಿಂದ ತಮ್ಮ ವಾಹನದ ಬ್ಯಾಟರಿಯನ್ನು ಚಾರ್ಜ್‌ ಮಾಡಿಕೊಂಡು ನಿಗದಿತ ಗುರಿಯನ್ನು ಮುಟ್ಟಿದವರನ್ನು ಸ್ಪರ್ಧೆಯ ವಿಜೇತರು ಎಂದು ಘೋಷಿಸಲಾಗುತ್ತದೆ. ನವೀಕರಿಸಬಹುದಾದ ಇಂಧನದ ಬಗ್ಗೆ ಅವರಿಗಿರುವ ಜ್ಞಾನ, ಸಾಮರ್ಥ್ಯ ಇತ್ಯಾದಿಗಳನ್ನೂ ಗೆಲುವಿಗೆ ಪರಿಗಣಿಸಲಾಗುತ್ತದೆ.

2018ರ ಚೀನಾದ ಲಿಯೋನ್‌ನಿಂದ ಕಾಂಟನ್‌ವರೆಗೆ ನಡೆಯುತ್ತಿರುವ100 ದಿನಗಳ ಸನ್ ಟ್ರಿಪ್‌ನಲ್ಲಿ ಕೊನೆ ಗುರಿ ಗುವಾಂಜೌಗೆ ಮೊದಲು ಬಂದು ತಲುಪುವರರನ್ನು ವಿಜೇತರು ಎಂದು ಪರಿಗಣಿಸಲಾಗುತ್ತದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !