ಭಾನುವಾರ, ಸೆಪ್ಟೆಂಬರ್ 26, 2021
21 °C
ಹಬ್ಬದ ಸೀಸನ್‌ಗೆ ಟಾಟಾ ಮೋಟರ್ಸ್‌ ಸಿದ್ಧತೆ

ಟಾಟಾ ಮೋಟರ್ಸ್‌: ಹ್ಯಾರಿಯರ್‌ 'ಡಾರ್ಕ್' ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಟಾಟಾ ಮೋಟರ್ಸ್‌ ತನ್ನ ಜನಪ್ರಿಯ ಮತ್ತು ಪ್ರೀಮಿಯಂ ಸ್ಫೋರ್ಟ್ಸ್‌ ಯುಟಿಲಿಟಿ ವೆಹಿಕಲ್‌–ಎಸ್‌ಯುವಿ ಹ್ಯಾರಿಯರ್‌ನ ಡಾರ್ಕ್ ಎಡಿಷನ್ ಅನ್ನು ಶುಕ್ರವಾರ ಬಿಡುಗಡೆ ಮಾಡಿದೆ.

#ಡಾರ್ಕ್ ಅವತರಣಿಕೆಯ ಹ್ಯಾರಿಯರ್‌ ಅನ್ನು ಕಪ್ಪು ಬಣ್ಣದ ಥೀಂನಲ್ಲಿ ಮರುವಿನ್ಯಾಸ ಮಾಡಲಾಗಿದೆ. ಹ್ಯಾರಿಯರ್‌ನ ಹೊರಾಂಗಣ, ಒಳಾಂಗಣ ಎಲ್ಲವೂ ಕಪ್ಪು ಬಣ್ಣದ್ದಾಗಿದೆ. ಒಟ್ಟಾರೆ 14 ವಿನ್ಯಾಸ ಬದಲಾವಣೆಗಳನ್ನು ಹ್ಯಾರಿಯರ್‌ಗೆ ಮಾಡಿ, ಡಾರ್ಕ್ ಅವತರಣಿಕೆಯನ್ನು ರೂಪಿಸಲಾಗಿದೆ.

ಹ್ಯಾರಿಯರ್‌ ಡಾರ್ಕ್‌ನ ಹೊರಮೈಬಣ್ಣ ಸಂಪೂರ್ಣ ಕಪ್ಪು. ಮ್ಯಾಟ್‌ ಫಿನಿಷ್ ಕಪ್ಪು ಬಣ್ಣವನ್ನು ಹ್ಯಾರಿಯರ್‌ಗೆ ಬಳಸಲಾಗಿದೆ. ಹ್ಯಾರಿಯರ್‌ನ ಅಲ್ಹಾಯ್‌ ವ್ಹೀಲ್‌ಗಳಿಗೂ ಮ್ಯಾಟ್ ಫಿನಿಷ್‌ ಕಪ್ಪು ಬಣ್ಣ ಬಳಸಲಾಗಿದೆ. ಎಂಬ್ಲೆಮ್, ವಿಂಡೊ ಸ್ಟ್ರಿಪ್‌ಗಳಲ್ಲಿ ಮಾತ್ರ ಕ್ರೋಮ್‌ ಬಳಸಲಾಗಿದೆ. ಉಳಿದೆಲ್ಲವೂ ಗಾಢ ಕಪ್ಪುಕಪ್ಪು. ಈ ಬಣ್ಣಕ್ಕೆ ಟಾಟಾ ಮೋಟರ್ಸ್ ಅಟ್ಲಾಸ್ ಬ್ಲ್ಯಾಕ್ ಎಂದು ಹೆಸರಿಸಿದೆ. ಇದು ಹ್ಯಾರಿಯರ್‌ಗೆ ಗಡಸು ಮತ್ತು ಒರಟು ನೋಟವನ್ನು ನೀಡಿದೆ. ಹ್ಯಾರಿಯರ್ ಮತ್ತಷ್ಟು ಆಕರ್ಷಕವಾಗಿ ಕಾಣುತ್ತಿದೆ.

ಇಂಟೀರಿಯರ್‌ನಲ್ಲೂ ಕಪ್ಪು ಥೀಂ ಬಳಸಲಾಗಿದೆ.

ಉತ್ಕೃಷ್ಟ ಗುಣಮಟ್ಟದ ಬೆನೆಕೆ ಕ್ಯಾಲಿಕೊ ಬ್ಲ್ಯಾಕ್‌ಸ್ಟೋನ್ ಲೆದರ್ ಸೀಟ್‌ಗಳನ್ನು ಅಳವಡಿಸಲಾಗಿದೆ. ಈ ಸೀಟ್‌ನಲ್ಲಿ ಬಳಿ ದಾರದ ಹೊಲಿಗೆ ಇದೆ. ಇದು ಸೀಟ್‌ನ ಅಂದವನ್ನು ಹೆಚ್ಚಿಸಿದೆ. ಬ್ಲ್ಯಾಕ್‌ಸ್ಟೋನ್ ಮ್ಯಾಟ್ರಿಕ್ಸ್‌ ಡ್ಯಾಶ್‌ಬೋರ್ಡ್‌ನ ವಿನ್ಯಾಸ ಅತ್ಯಂತ ಆಕರ್ಷಕವಾಗಿದೆ. ಗನ್‌ಮೆಟಲ್‌ ಕ್ರೋಮ್‌ ಬಣ್ಣದ ಇನ್‌ಸರ್ಟ್‌ಗಳನ್ನು ಡ್ಯಾಶ್‌ಬೋರ್ಡ್‌ನಲ್ಲಿ ಬಳಸಲಾಗಿದೆ. ಇವೆಲ್ಲವೂ ಹ್ಯಾರಿಯರ್‌ನ ಒಳಾಂಗಣದ ಅಂದವನ್ನು ಹೆಚ್ಚಿಸಿದೆ.

ಹ್ಯಾರಿಯರ್‌ನ ಎಕ್ಸ್‌ಝಡ್‌ ಅವತರಣಿಕೆಯಲ್ಲಿ #ಡಾರ್ಕ್ ಅವತರಣಿಕೆ ಲಭ್ಯವಿದೆ. ದೆಹಲಿಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 16.76 ಲಕ್ಷದಷ್ಟಿದೆ.

₹ 12.99 ಲಕ್ಷ ಆರಂಭಿಕ ಎಕ್ಸ್‌ ಷೋರೂಂ ಬೆಲೆಯ ಹ್ಯಾರಿಯರ್ ಅನ್ನು ಟಾಟಾ ಮೋಟರ್ಸ್‌ ಕಳೆದ ವರ್ಷ ಬಿಡುಗಡೆ ಮಾಡಿತ್ತು.

ಫಿಯಟ್‌ ಕಂಪನಿಯ 2.0 ಲೀಟರ್ ಎಂಜಿನ್ ಇದರಲ್ಲಿದೆ. ಇದಕ್ಕೆ ಟಾಟಾ ಮೋಟರ್ಸ್ ‘ಕ್ರಯೋಟೆಕ್’ ಎಂದು ಮರುನಾಮಕರಣ ಮಾಡಿದೆ. 1,999 ಸಿ.ಸಿ. ಸಾಮರ್ಥ್ಯದ ಈ ಎಂಜಿನ್ 140 ಬಿಎಚ್‌ಪಿ ಶಕ್ತಿ ಮತ್ತು 350 ನ್ಯೂಟನ್ ಮೀಟರ್ ಟಾರ್ಕ್ ಉತ್ಪಾದಿಸುತ್ತದೆ. ಆರು ಗಿಯರ್‌ಗಳ ಮ್ಯಾನುಯಲ್ ಟ್ರಾನ್ಸ್‌ಮಿಷನ್ ಇದರಲ್ಲಿದೆ.

ಟಾಟಾ ಮೋಟರ್ಸ್‌ ಒಡೆತನದ ಲ್ಯಾಂಡ್‌ ರೋವರ್‌ ಕಂಪನಿಯ ಡಿಸ್ಕವರಿ ಸ್ಫೋರ್ಟ್ಸ್‌ನ ಪ್ಲಾಟ್‌ಫಾರಂ ಅನ್ನು ಹ್ಯಾರಿಯರ್‌ನಲ್ಲಿ ಬಳಸಲಾಗಿದೆ. ಲ್ಯಾಂಡ್‌ ರೋವರ್ ಎಸ್‌ಯುವಿಗಳಲ್ಲಿ ಇರುವಂತೆಯೇ ಹ್ಯಾರಿಯರ್‌ನಲ್ಲೂ ಟೆರೇನ್‌ ರೆಸ್ಪಾನ್ಸ್‌ ಸಿಸ್ಟಂ ಇದೆ.

ಹ್ಯಾರಿಯರ್ ಸದ್ಯ ಫ್ರಂಟ್‌ ವ್ಹೀಲ್ ಡ್ರೈವ್ ಅವತರಣಿಕೆಯಲ್ಲಿ ಮಾತ್ರ ಲಭ್ಯವಿದೆ. 4x4 ಅಥವಾ ಆಲ್‌ ವ್ಹೀಲ್‌ ಡ್ರೈವ್ ಸವಲತ್ತು ಇರುವ ಮತ್ತು ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರುವ ಹೊಸ ಅವತರಣಿಕೆ ಇನ್ನಷ್ಟೇ ಮಾರುಕಟ್ಟೆಗೆ ಬರಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು