ರಸ್ತೆಗಿಳಿಯಲಿದೆ ಪರಿಸರ ಸ್ನೇಹಿ ‘ವಿಷನ್‌ ಎಕ್ಸ್‌’

7

ರಸ್ತೆಗಿಳಿಯಲಿದೆ ಪರಿಸರ ಸ್ನೇಹಿ ‘ವಿಷನ್‌ ಎಕ್ಸ್‌’

Published:
Updated:
ಸ್ಕೋಡ ವಿಷನ್‌ ಎಕ್ಸ್‌ ಕಾರು

ಆಟೊಮೊಬೈಲ್‌ ಕ್ಷೇತ್ರದಲ್ಲಿ ಹೊಸ ಮನ್ವಂತರವೊಂದು ಶುರುವಾಗಿದೆ. ಕಾರು ಪ್ರಿಯರು ಸ್ಪೋರ್ಟ್‌ ಯುಟಿಲಿಟಿ ವೆಹಿಕಲ್‌ಗಳನ್ನು (ಎಸ್‌ಯುವಿ) ಹೆಚ್ಚು ಇಷ್ಟಪಡುತ್ತಿದ್ದಾರೆ. ಈ ಕಾರುಗಳು ಹೊಂದಿರುವ ಸಾಹಸಿ ಗುಣದಿಂದಲೇ ಅವುಗಳ ಬೇಡಿಕೆಯೂ ಏರುತ್ತಿದೆ. ಚಾಲಕರ ಉತ್ಸಾಹವನ್ನು ಇಮ್ಮಡಿಗೊಳಿಸುವ ಎಸ್‌ಯುವಿ ಕಾರುಗಳನ್ನು ಎಲ್ಲ ಕಾರು ಕಂಪನಿಗಳು ತಯಾರಿಸುತಿದ್ದು, ಅವುಗಳನ್ನು ರಸ್ತೆಗಳಿಸಿ ಅದರ ಕಾರ್ಯಕ್ಷಮತೆಯನ್ನು ದೃಢಪಡಿಸುತ್ತಿವೆ.

ಆದರೆ ಜರ್ಮನ್‌ ಕಾರು ತಯಾರಿಕಾ ಕಂಪನಿ ಸ್ಕೋಡವು ಎಸ್‌ಯುವಿ ಕಾರುಗಳ ಆಯಾಮವನ್ನೇ ಬದಲಾಯಿಸುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದೆ. ಜಿನೆವಾದಲ್ಲಿ ನಡೆದ ಆಟೊ ಎಕ್ಸ್‌ಪೋ–2018ರಲ್ಲಿ ತನ್ನ ಹೊಸ ‘ಸ್ಕೋಡ ವಿಷನ್‌ ಎಕ್ಸ್‌’ ಎಸ್‌ಯುವಿ ಕಾರನ್ನು ಪ್ರದರ್ಶಿಸಿದ್ದು, ಈ ಕಾರಿನಲ್ಲಿರುವ ಕೆಲ ವಿಶೇಷ ಗುಣವೈಶಿಷ್ಟ್ಯಗಳಿಂದ ಎಲ್ಲರ ಹುಬ್ಬೇರುವಂತಗಿದೆ.

ಪ್ರತಿಸ್ಪರ್ಧಿಗಳ ದರ ಸಮರದ ನಡುವೆಯೂ ಗುಣಮಟ್ಟದ ಕಾರುಗಳನ್ನು ಮಾರಾಟ ಮಾಡಿ ಗ್ರಾಹಕರ ವಿಶ್ವಾಸ ಸ್ಕೋಡ ಕಂಪನಿಗಿದೆ. ಈಗಾಗಲೇ ಕೊಡಿಯಾಕ್‌ ಮತ್ತು ಕರೊಕ್‌ ಎಂಬ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈಗ ತನ್ನ 3ನೇ ಎಸ್‌ಯುವಿ ಕಾರನ್ನು ಪ್ರದರ್ಶಿಸುವ ಮೂಲಕ ಆಸಕ್ತರಲ್ಲಿ ಕುತೂಹಲ ಹುಟ್ಟಿಸಿದೆ.

ಕಣ್ಸೆಳೆಯುವ ಬಾಹ್ಯ ವಿನ್ಯಾಸ: ವಿಷನ್‌ ಎಕ್ಸ್‌ ಕಾರು ತನ್ನ ಮೇಲೈನ ತಿಳಿ ಹಸಿರು ಬಣ್ಣದಿಂದಲೇ ಕಣ್ಸೆಳೆಯುವಂತಿದ್ದು, ಟಾಪ್‌ನಲ್ಲಿರುವ ಕ್ರೋಮಾ ಬ್ಯ್ಲಾಕ್‌ ಪಾರದರ್ಶಕ ಗಾಜು ಬಾಹ್ಯ ಸೌಂದರ್ಯವನ್ನು ಹೆಚ್ಚಿಸಿದೆ. ಮುಂಭಾಗದಲ್ಲಿರುವ ಉದ್ದದ ಬಂಪರ್‌ಗೆ ಲೋಹಲೇಪಿತ ಸ್ಪರ್ಶ ನೀಡಿ ಮತ್ತಷ್ಟು ಸೊಗಸಾಗಿ ಕಾಣುವಂತೆ ಮಾಡಲಾಗಿದೆ. ರೇಡಿಯೆಟರ್‌ ಗ್ರಿಲ್‌ನ ಹಳೆಯ ಶೈಲಿಗೆ ಹೊಸ ಝಲಕ್‌ ನೀಡಲಾಗಿದ್ದು, ಕ್ರೋಮ್‌ ಹೊದಿಕೆಯೊಂದಿಗೆ ಎಲ್‌ಇಡಿ ದೀಪಗಳನ್ನು ಅಳವಡಿಸಲಾಗಿದೆ. ಕಾರಿನ ನೋಟವೇ ಬದಲಾಗಿದೆ. ವಿನ್ಯಾಸಕ್ಕೆ ತಕ್ಕಂತೆ ಹೆಡ್‌ಲೈಟ್‌ ಮತ್ತು ಟೇಲ್‌ಲೈಟ್‌ಗಳು ಮತ್ತಷ್ಟು ಸ್ಮಾರ್ಟ್‌ ಆಗಿದ್ದು, ಇದರ ಎಲ್‌ಇಡಿ ಹುಬ್ಬಿನ ಲೈಟ್‌ಗಳು ಬೆಳಗಿನ ಸಮಯದಲ್ಲೂ ಪ್ರಕಾಶಿಸುತ್ತವೆ. ಇಂಡಿಕೇಟರ್‌ಗಳು ಒಆರ್‌ವಿಎಂ (ಔಟ್ ಸೈಡ್ ರೇರ್ ವ್ಯೂ ಮಿರರ್‌) ಎಲೆಕ್ಟ್ರಿಕಲ್‌ ತಂತ್ರಜ್ಞಾನ ಹೊಂದಿದ್ದು ಸೆನ್ಸಾರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ಕಾರಿನ ಚಕ್ರಕ್ಕೆ 20 ಇಂಚಿನ ‘ಆರ್‌–20 ಅಲೋಯ್‌ನ’ 3ಡಿ ವಿನ್ಯಾಸದ ವ್ಹೀಲ್ಸ್‌ಗಳನ್ನು ಅಳವಡಿಸಲಾಗಿದೆ. ಇವು ಕಾರಿನ ಅಂದ ಹೆಚ್ಚಿಸಿವೆ. 

ಚಾಲಕ ಸ್ನೇಹಿ ತಂತ್ರಜ್ಞಾನ: ಕಾರಿನ ಡ್ಯಾಷ್‌ ಬೋರ್ಡ್‌ನಲ್ಲಿ ಸುಧಾರಿತ ಫುಲ್‌ ಎಚ್‌ಡಿ ಟಚ್ ಸ್ಕ್ರೀನ್ ಡಿಸ್‌ಪ್ಲೇ ಇದೆ. ಇದು ಎಚ್‌ಎಂಐ (ಹ್ಯೂಮನ್ ಮಷೀನ್ ಇಂಟರ್ಫೇಸ್) ಕೃತಕ ಬುದ್ಧಿ ಮತ್ತೆಯಿಂದ ಕಾರಿನ ನಿರ್ವಹಣೆ ಮಾಡುತ್ತದೆ. ಜಿಪಿಎಸ್‌ ತಂತ್ರಜ್ಞಾನದೊಂದಿಗೆ ಜೋಡಣೆಯಾಗಿರುವ ಈ ತಂತ್ರಾಂಶ, ಸ್ಮಾರ್ಟ್‌ ಪಾರ್ಕಿಂಗ್‌, ಕೇರ್‌ ಡ್ರೈವರ್‌, ಹೊಪ್ಪಿಗೋ(Hoppygo), ಟೂಗೋ(twogo) ಎಂಬ ಸೇವೆಗಳನ್ನು ನೀಡುತ್ತದೆ. ನೀವು ಹೋಗಬೇಕಿರುವ ಸ್ಥಳಕ್ಕೆ ಯಾವ ಸಮಯಕ್ಕೆ ತಲುಪುತ್ತೀರಾ, ಯಾವ ಜಾಗದಲ್ಲಿ ಪಾರ್ಕಿಂಗ್‌ಗೆ ಸ್ಥಳಾವಾಕಾಶವಿದೆ, ಆ ರಸ್ತೆಯ ಟ್ರಾಫಿಕ್ ಅಪ್‌ಡೇಟ್ಸ್ ಏನು ಎಂಬ ಮಾಹಿತಿಗಳನ್ನು ಈ ತಂತ್ರಾಂಶ ನೀಡಲಿದೆ.

ಕಡಿಮೆ ಮಾಲಿನ್ಯ, ದೂರದ ಪಯಣ: ನಗರದ ಪ್ರದೇಶಗಳಿಗಾಗಿಯೇ ವಿಷನ್‌ ಎಕ್ಸ್‌ ಕಾರನ್ನು ವಿನ್ಯಾಸಗೊಳಿಸಲಾಗಿದೆ. ನಗರ ಜೀವನ ಶೈಲಿಗೆ ಸರಿಹೊಂದುವಂತೆ ಕೆಲ ಆಯ್ಕೆಗಳನ್ನು ಪರಿಚಯಿಸಲಾಗಿದೆ. ಪ್ರಮುಖವಾಗಿ ನೈಸರ್ಗಿಕ ಅನಿಲದ ಮೂಲಕ(ಸಿಎನ್‌ಜಿ) ಈ ಕಾರು ಚಲಿಸಲಿದ್ದು, ಒಂದು ಬಾರಿ ಟ್ಯಾಂಕ್‌ ಭರ್ತಿಯಾದರೆ 644 ಕಿ.ಮೀ ದೂರದವರೆಗೂ ಸಾಗಬಹುದಾಗಿದೆ. ಪರಿಸರ ಸ್ನೇಹಿಯಾಗಿರುವ ಈ ಕಾರು ಒಂದು ಕಿ.ಮೀ ದೂರಕ್ಕೆ ‘89 ಜಿ ’ನಷ್ಟು ಇಂಗಾಲ ಹೊರಹಾಕುತ್ತದೆ. ತುರ್ತು ಸಂದರ್ಭಕ್ಕಾಗಿಯೇ ಪೆಟ್ರೋಲ್‌ ಇಂಧನ ಟ್ಯಾಂಕ್‌ ಕಾಯ್ದಿರಿಸಿದ್ದು, ಅವಶ್ಯಕತೆಗೆ ಅನುಗುಣವಾಗಿ ಬಳಸಬಹುದು. ಹಿಂಬದಿಯಲ್ಲಿ ಎರಡು ಎಲೆಕ್ಟ್ರಿಕ್‌ ಎಂಜಿನ್‌ ಇರುವುದರಿಂದ ಸ್ವಲ್ಪ ದೂರದವರೆಗೂ ವಿದ್ಯುತ್ ಬಳಸಿಕೊಂಡು ಸಾಗುವಂತಹ ಆಯ್ಕೆಗಳೂ ಇವೆ. 

ಉತ್ತಮ ಬ್ರೇಕಿಂಗ್‍ ವ್ಯವಸ್ಥೆ: ಈ ಕಾರಿನಲ್ಲಿ ಮೂರು ಬ್ರೇಕಿಂಗ್ ವ್ಯವಸ್ಥೆಗಳು ಸಮ್ಮಿಲನಗೊಂಡಿವೆ. ಎಬಿಎಸ್‌( ಆ್ಯಂಟಿ ಬ್ರೇಕಿಂಗ್‌ ಸಿಸ್ಟಮ್‌),ಇಬಿಡಿ ( ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಶನ್)  ಮತ್ತು ಬಿಎಸ್ ( ಬ್ರೇಕಿಂಗ್‌ ಅಸಿಸ್ಟ್‌) ವ್ಯವಸ್ಥೆಯಿದ್ದು ಸುರಕ್ಷತಾ ಕ್ರಮಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಅಪಘಾತದ ಸಮಯದಲ್ಲಿ ಪ್ರಯಾಣಿಕರನ್ನು ಬಿಗಿಯಾಗಿ ಹಿಡಿದಿಡುವ ಸುಧಾರಿತ ಸೀಟ್‌ ಬೆಲ್ಟ್‌ ಇದೆ. ಏರ್‌ ಬ್ಯಾಗ್‌, ಆಡಿಯೊ, ವಿಡಿಯೊ ಡಿಸ್‌ಪ್ಲೇ ಸಹಿತ ಕ್ಯಾಮೆರಾವು ಕಾರಿನ ಹಿಂಭಾಗದಲಿದೆ. ಇದು ಪಾರ್ಕಿಂಗ್‌ ಸಮಯದಲ್ಲಿ ಸಹಕಾರಿಯಾಗಲಿದೆ.  

ಮನ ಸೆಳೆವ  ಒಳಾಂಗಣದ ಅಂದ
ಇದು ಎಸ್‌ಯುವಿ ಆವೃತ್ತಿಯ ಸಣ್ಣ ಕಾರು. ನಗರ ಪ್ರದೇಶಕ್ಕೆ ಸರಿಹೊಂದುತ್ತದೆ. ಐಷಾರಾಮಿ ಕಾರುಗಳಂತೆ ಫ್ರೇಮ್‌ ಲೆಸ್‌ ವಿಂಡೋ ಗ್ಲಾಸ್‌ಗಳನ್ನು ಹೊಂದಿರುವ ಈ ಕಾರು, ಚಾಲಕನಿಗೆ ಕ್ರೀಡಾ ಸ್ಫೂರ್ತಿ ನೀಡುವಂತಹ ಸ್ಪೋರ್ಟಿ ಲೆದರ್‌ ಸೀಟ್‌ಗಳನ್ನು ಹೊಂದಿದೆ. ಸೀಟ್‌ನ ಎತ್ತರ ಹೊಂದಾಣಿಕೆ ಮಾಡಿಕೊಳ್ಳಲು ಎಲೆಕ್ಟ್ರಿಕ್‌ ಅಡ್ಜೆಸ್ಟೆಬಲ್‌ ಆಯ್ಕೆಯೂ ಇದೆ. ಸ್ಪೀಡೊ ಮೀಟರ್‌ ಸಂಪೂರ್ಣ ಡಿಜಿಟಲ್‌ ರೂಪದಲ್ಲಿದೆ. ಹೊರಗಿನ ಉಷ್ಣಾಂಶಕ್ಕೆ ತಕ್ಕಂತೆ ಕಾರಿನ ಒಳಗಿನ ವಾತಾವರಣವು ಸ್ವಯಂ ನಿಯಂತ್ರಿತಗೊಳ್ಳುವಂತಹ ವ್ಯವಸ್ಥೆ ಇದೆ. ಹೈ ಬೇಸ್‌ ಸಂಗೀತ ಕೇಳುವ ಅನುಭವ ಪಡೆಯಲು ಗುಣಮಟ್ಟದ ಸ್ಪೀಕರ್‌ಗಳನ್ನು ಜೋಡಿಸಲಾಗಿದೆ. 7 ಸ್ಪೀಡ್‌ ಆಟೊಮ್ಯಾಟಿಕ್‌ ಗೇರ್‌ ವ್ಯವಸ್ಥೆಯೂ ಸುಲಲಿತ ಚಾಲನೆಗೆ ಸಾಥ್‌ ನೀಡುತ್ತದೆ. ಸ್ಟ್ರೀರಿಂಗ್ ನಲ್ಲೇ ವಾಹನ ನಿಯಂತ್ರಿಸುವ ಬಹುತೇಕ ಆಯ್ಕೆಗಳು ಇದ್ದು, ಇದು ಚಾಲಕನ ಆತ್ಮವಿಶ್ವಾಸ ಹೆಚ್ಚಿಸುತ್ತದೆ.

ವೈವಿಧ್ಯದ ಎಂಜಿನ್‍
ಡ್ರೈವ್‌ಟ್ರೈನ್‌ ಪರಿಕಲ್ಪನೆಯ ವಿಶ್ವದ ಮೊದಲ ಕಾರು ‘ವಿಷನ್‌ ಎಕ್ಸ್’. 1.5 ಲೀಟರ್‌ ಜಿ–ಟೆಕ್‌ ತಂತ್ರಜ್ಞಾನದ ನಾಲ್ಕು ಸಿಲಿಂಡರ್‌ ಮತ್ತು ಟರ್ಬೊ ಚಾರ್ಜಿಂಗ್‌ ವ್ಯವಸ್ಥೆಯುಳ್ಳ ಎಂಜಿನ್‌ ಇದರಲ್ಲಿದೆ. ಎತ್ತರ ಪ್ರದೇಶದಲ್ಲಿ ಚಾಲನೆ ಮಾಡುವಾಗ ಹಿಂಬದಿಯ ಚಕ್ರಗಳಿಗೆ ಶಕ್ತಿ ತುಂಬುವಂತಹ ಎರಡು ಎಲೆಕ್ಟ್ರಿಕ್‌ ಎಂಜಿನ್‌ಗಳನ್ನು ಹೊಂದಿರುವುದು ವಿಶೇಷ. ರಸ್ತೆಯ ಏರಿಳಿತಗಳಿಗೆ ಅನುಗುಣವಾಗಿ ಈ ಎಲೆಕ್ಟ್ರಿಕಲ್‌ ಎಂಜಿನ್‌ ಕೆಲಸ ಮಾಡುತ್ತದೆ.

ಕಾರಿನ ಮುಂಭಾಗದಲ್ಲಿರುವ ಜಿ–ಟೆಕ್‌ ಎಂಜಿನ್‌, ಗರಿಷ್ಠ 128 ಬಿಎಚ್‌ಪಿ ಶಕ್ತಿ ಮತ್ತು 200ಎನ್‌ಎಂ ಟಾರ್ಕ್‌ ಹೊರಹಾಕಲು ಶಕ್ತವಾಗಿದ್ದರೆ, ಹಿಂಬದಿಯ ಎಲೆಕ್ಟ್ರಿಕ್‌ ಎಂಜಿನಗಳು 20 ಎನ್‌ಎಂ ಟಾರ್ಕ್‌ ಉತ್ಪಾದಿಸು ಸಾಮರ್ಥ್ಯ ಹೊಂದಿದೆ. 9.3 ಸೆಕೆಂಡ್‌ನಲ್ಲಿಯೇ 100 ಕಿ.ಮೀ/ಪ್ರತಿ ಗಂಟೆಯಷ್ಟು ವೇಗವನ್ನು ತಲುಪುವಷ್ಟು ಬಲಾಢ್ಯವಾಗಿ ಎಂಜಿನ್‌ ರೂಪಗೊಂಡಿದೆ.

ಕಂಪನಿಯವರು ಮುಂದಿನ ವರ್ಷಕ್ಕೆ ಈ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದಾರೆ. ಭಾರತದಲ್ಲಿ ಈ ಕಾರು ₹ 14 ಲಕ್ಷಕ್ಕೆ ಮಾರಾಟವಾಗಬಹುದು ಎಂದು ಆಟೊ ಮೊಬೈಲ್‌ ಕ್ಷೇತ್ರದ ತಜ್ಞರು ಅಂದಾಜಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !