ಸೋಮವಾರ, ನವೆಂಬರ್ 18, 2019
23 °C

ಐಷಾರಾಮದ ಹೊಸ ಕಲ್ಪನೆ ವೋಲ್ವೊ ಎಸ್‌ಯುವಿ

Published:
Updated:

ಸ್ವೀಡನ್ನಿನ ವಿಲಾಸಿ ಕಾರ್ ತಯಾರಿಕಾ ಕಂಪನಿ ವೋಲ್ವೊ ಕಾರ್ ಇಂಡಿಯಾ, ಹೊಸ ಎಕ್ಸ್‌ಸಿ90 ಎಕ್ಸಲೆನ್ಸ್ ಲಾಂಜ್ ಕಾರನ್ನು ಭಾರತದ ಮಾರುಕಟೆಗೆ ಪರಿಚಯಿಸಿದೆ.

ಐಷಾರಾಮಿ ಮತ್ತು ಆರಾಮಕ್ಕೆ ಹೊಸ ಆಯಾಮ ನೀಡಿದ ವಿಶಿಷ್ಟ ಕಾರ್ ಇದಾಗಿದೆ. ಮೂರು ಸೀಟ್‍ಗಳನ್ನು ಹೊಂದಿರುವ ಕಾರ್, ದೇಶದಲ್ಲಿ ಇಂತಹ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‍ನಲ್ಲಿ (ಎಸ್‍ಯುವಿ) ಮೊದಲನೆಯದಾಗಿದೆ.

ಕಾರ್‌ನ ಒಟ್ಟಾರೆ ಕಾರ್ಯನಿರ್ವಹಣೆಯಲ್ಲಿ ವಿಶಿಷ್ಟ ಬಗೆಯ ವಿಲಾಸಿ ಅನುಭವ ನೀಡುವ ಸ್ಕ್ಯಾಂಡಿನೇವಿಯಾ ವಿನ್ಯಾಸ ಬಯಸುವ ಮತ್ತು ನಿಜವಾದ ಐಷಾರಾಮದ ಅರ್ಥ ವ್ಯತ್ಯಾಸ ಗ್ರಹಿಸುವ ಗುಣಗ್ರಾಹಿ ಗ್ರಾಹಕರಿಗಾಗಿಯೇ ಈ ಕಾರ್ ಅನ್ನು ವಿಶಿಷ್ಟ ಬಗೆಯಲ್ಲಿ ರೂಪಿಸಲಾಗಿದೆ. ಆಯ್ದ ಕೆಲವರಿಗಾಗಿ ಮಾತ್ರ ಭಾರತದಲ್ಲಿ ಅತ್ಯಂತ ವಿರಳ ಸಂಖ್ಯೆಯಲ್ಲಿ ಈ ಕಾರ್ ತಯಾರಿಸಲಾಗಿದೆ.

‘ನಮ್ಮ ಗ್ರಾಹಕರಿಗೆ ವಿಲಾಸಿಮಯ ಮತ್ತು ಪ್ರಶಾಂತ ಚಾಲನಾ ಅನುಭವ ನೀಡುವ ಕಾರ್ ಒದಗಿಸುವ ವಿಶೇಷ ಕಾಳಜಿಯೇ ನಮ್ಮ ಮುಖ್ಯ ಧ್ಯೇಯವಾಗಿದೆ. ವೋಲ್ವೊ ಎಕ್ಸ್‌ಲೆನ್ಸ್ ಲಾಂಜ್’ ನಾವು ಇದುವರೆಗೆ ತಯಾರಿಸಿದ ಕಾರ್‍ಗಳಲ್ಲಿಯೇ ಅತ್ಯಂತ ಸೊಗಸಾದ ಕಾರ್ ಆಗಿದೆ. ಕಂಪನಿಯು ಇದಕ್ಕೂ ಮೊದಲು ಪರಿಚಯಿಸಿದ್ದ ಅತ್ಯುತ್ತಮ ಮಾರಾಟ ಕಂಡಿರುವ 100 ಎಕ್ಸ್‌ಸಿ90 ಟಿ8 ಎಕ್ಸಲೆನ್ಸ್ (ನಾಲ್ಕು ಸೀಟಿನ) ಕಾರ್‍ನ ಯಶಸ್ಸಿನಿಂದ ಸ್ಪೂರ್ತಿ ಪಡೆದು ಈ ಕಾರನ್ನು ಪರಿಚಯಿಸಲಾಗಿದೆ' ಎಂದು ವೋಲ್ವೊ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಚಾಲ್ರ್ಸ್ ಫ್ರಂಪ್ ಹೇಳಿದ್ದಾರೆ.

ವಿಶಾಲ ಸ್ಥಳಾವಕಾಶ
ಮಾಲೀಕರ ಪಾಲಿಗೆ ಅತಿ ವಿಶಿಷ್ಟ ಬಗೆಯ ಮತ್ತು ಸರಿಸಾಟಿ ಇಲ್ಲದ ಆರಾಮದಾಯಕ ಅನುಭವ ನೀಡುವ ಕಾರ್ ಇದಾಗಿದೆ. ಒಳಾಂಗಣ ವಿನ್ಯಾಸದಲ್ಲಿ ವಿನೂತನ ಬಗೆಯಲ್ಲಿ ಅಳವಡಿಸಿರುವ ವಿಶಾಲವಾದ ಸ್ಥಳಾವಕಾಶವು ಆರಾಮದಾಯಕ ಮತ್ತು ಐಷಾರಾಮದ ವಿಶೇಷ ಅನುಭವ ನೀಡಲಿದೆ. ಗರಿಷ್ಠ ಶಬ್ದ ನಿರೋಧಕವು ಸಂಪೂರ್ಣ ಶಾಂತತೆ ಒದಗಿಸಲಿದೆ. ಕಾರ್ ಚಾಲನೆ ವೇಳೆಯಲ್ಲಿ ಪ್ರಶಾಂತ ವಾತಾವರಣದ ಅನುಭವ ನೀಡಲಿದೆ. ಇದರಿಂದ ಮನಸ್ಸನ ಒತ್ತಡದ ಮಟ್ಟವು ಗಮನಾರ್ಹವಾಗಿ ತಗ್ಗಲಿದೆ. ಚರ್ಮದ ಸೀಟು, ಚರ್ಮದ ಹೊದಿಕೆಯ ಟ್ರೇ ಟೇಬಲ್ಸ್, ರೆಫ್ರಿಜರೇಟರ್, ಹಿಡಿಕೆ ಹೊಂದಿರುವ ಸ್ಫಟಿಕದಂತಹ ಗಾಜು, ಮಡಿಸಬಹುದಾದ 13 ಇಂಚ್‍ನ ಐಪ್ಯಾಡ್, ಬೋವರ್ಸ್ ಆ್ಯಂಡ್ ವಿಲ್ಕಿನ್ಸ್ ಹೆಡ್‍ಸೆಟ್ ಮುಂತಾದವು ಭವ್ಯ ವಿಲಾಸಿ ಅನುಭವ ನೀಡಲಿವೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಸುಸ್ಥಿರ ಸಂಚಾರ ಸೌಲಭ್ಯ
ಈ ಕಾರ್, ವೋಲ್ವೊ ಕಾರ್ಸ್‍ನ ಬದ್ಧತೆಯಾಗಿರುವ ಸುಸ್ಥಿರ ಪರಿಹಾರಕ್ಕೆ ಪೂರಕವಾಗಿದೆ. ಎಕ್ಸ್‍ಸಿ90 ಟಿ8 ಎಕ್ಸಲೆನ್ಸ್ ಲಾಂಜ್. ಪ್ರತಿ ಕಿ. ಮೀಟರ್‍ಗೆ ಕೇವಲ 49 ಗ್ರಾಂ ಹೊಗೆ ಹೊರಸೂಸುವ (ಸಿಒ2) ಮಾಲಿನ್ಯ ನಿಯಂತ್ರಣದ ಗುಣಮಟ್ಟ ಹೊಂದಿದೆ. ವೋಲ್ವೊ ಕಾರ್ಸ್ 2019ರಿಂದ ಹೊರ ತರಲಿರುವ ಪ್ರತಿಯೊಂದು ಹೊಸ ಕಾರ್ ವಿದ್ಯುತ್‍ಚಾಲಿತ, ಭಾಗಶಃ ಹೈಬ್ರಿಡ್, ಪೂರ್ಣ ಪ್ರಮಾಣದ ಹೈಬ್ರಿಡ್ ಅಥವಾ ಪೂರ್ಣ ಪ್ರಮಾಣದ ವಿದ್ಯುತ್‍ಚಾಲಿತವಾಗಿರುವ ಬದ್ಧತೆ ತೋರಲಿದೆ.

ಪ್ರತಿಕ್ರಿಯಿಸಿ (+)