ಗುರುವಾರ , ಜೂನ್ 4, 2020
27 °C

ಐಶಾರಾಮಿ ಎಸ್‌ಯುವಿ ವೆಲಾರ್‌

ಯತೀಶ್‌ ಕುಮಾರ್‌ ಜಿ.ಡಿ. Updated:

ಅಕ್ಷರ ಗಾತ್ರ : | |

Deccan Herald

ಹೊರನೋಟದಲ್ಲಿ ದೈತ್ಯ. ಒಳನೋಟದಲ್ಲಿ ಪ್ರಶಾಂತ. ಅತ್ಯಾಧುನಿಕ ತಂತ್ರಜ್ಞಾನದ ಸಮ್ಮಿಲನ, ಈ ವಾಹನ.

ಜಾಗ್ವಾರ್‌ ಅಂಡ್‌ ಲ್ಯಾಂಡ್‌ರೋವರ್‌ ಇತ್ತೀಚೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ವೆಲಾರ್‌ ಎಸ್‌ಯುವಿ ಬಗ್ಗೆ ಒಂದೇ ಮಾತಿನಲ್ಲಿ ಹೇಳಬಹುದಾದ ಮಾತು. ಲ್ಯಾಂಡ್‌ರೋವರ್‌ನ ಇವಾಕ್‌ ಮತ್ತು ರೇಂಜ್‌ ರೋವರ್‌ ಸ್ಪೋರ್ಟ್ಸ್ ನಡುವಿನ ವರ್ಗದಲ್ಲಿ ಈ ವಾಹನವನ್ನು ಬಿಡುಗಡೆ ಮಾಡಲಾಗಿದೆ.

ಕಳೆದ ವರ್ಷ ’ಕಾಮನಬಿಲ್ಲು’ ಸಂಚಿಕೆಗಾಗಿ ಇವಾಕ್‌ ಓಡಿಸುವ ಅವಕಾಶ ದೊರಕಿತ್ತು. ಇವಾಕ್‌ಗೆ ಹೋಲಿಸಿದರೆ ವೆಲಾರ್‌ ಬಹುದೊಡ್ಡ ಎಸ್‌ಯುವಿ. ಸೆಕ್ಸಿ, ಸ್ಟೈಲಿಸ್ಟ್‌ ಆಗಿ ವಿನ್ಯಾಸ ಮಾಡಲಾಗಿದೆ. 4797 ಮಿ.ಮೀ ಉದ್ದ, 2145 ಮಿ.ಮೀ ಅಗಲವಿದೆ. ವೀಲ್‌ಬೇಸ್‌ ಸಹ ದೊಡ್ಡದೇ. ಅತ್ಯಾಧುನಿಕ ಎನ್ನಲು ಇರಬೇಕಾದ ಎಲ್ಲಾ ಸೌಕರ್ಯಗಳನ್ನು ಅಳವಡಿಸಲಾಗಿದೆ. ಎಲ್ಲದಕ್ಕಿಂತ ಮಿಗಿಲಾಗಿ ವೇಗವಾಗಿ ಚಲಿಸುವಾಗ ಘರ್ಷಿಸುವ ಗಾಳಿಯಲ್ಲಿ ತೂರಿಕೊಂಡು ಹೋಗುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.

ವಾಹನದಲ್ಲಿ ಅಳವಡಿಸಿರುವ ಹೊಸ ತಂತ್ರಜ್ಞಾನ ಎಂದರೆ ಡೋರ್‌ ಹ್ಯಾಂಡಲ್‌. ವಾಹನವನ್ನು ಅನ್‌ಲಾಕ್‌ ಮಾಡಿದರೆ ಡೋರ್‌ ಒಳಗಿನಿಂದ ನಿಧಾನವಾಗಿ ಹ್ಯಾಂಡಲ್‌ ಹೊರಬರುತ್ತದೆ. ಲಾಕ್‌ ಮಾಡಿದರೆ ಹ್ಯಾಂಡಲ್‌ ಡೋರ್‌ನ ಒಳಗೆ ಹೋಗುತ್ತದೆ.

ಎಸ್‌ಯುವಿ ಒಳಭಾಗ ಸಾಕಷ್ಟು ಅತ್ಯಾಧುನಿಕವಾಗಿದೆ. ಜೆಎಲ್‌ಆರ್‌ ವಾಹನಗಳ ಕ್ಯಾಬಿನ್‌ ಕೊಂಚ ಆಕರ್ಷಕವಲ್ಲ ಎನ್ನುವ ಮಾತಿದೆ. ಅದಕ್ಕೆ ಅಪವಾದ ಎನ್ನುವ ರೀತಿಯಲ್ಲಿದೆ ವೆಲಾರ್‌. ನ್ಯಾವಿಗೇಷನ್‌, ಫೋನ್‌, ಆಡಿಯೋ ನಿಯಂತ್ರಣ, ಚಾಲಕ ಮತ್ತು ಎಡಬದಿ ಪ್ರಯಾಣಿಕನ ಹವಾನಿಯಂತ್ರಣ ವ್ಯವಸ್ಥೆಯ ನಿಯಂತ್ರಣಗಳು ಹತ್ತು ಇಂಚಿನ ಟಚ್‌ಸ್ಕ್ರೀನ್‌ ಇನ್ಫೋಸಿಸ್ಟಂನಲ್ಲೇ ಅಡಕವಾಗಿದೆ.

ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಇನ್ಫೋಸಿಸ್ಟಂ ಮೇಲೆ ಕೈಯಾಡಿಸದೆ ಧ್ವನಿ ನಿಯಂತ್ರಿಸುವ ವ್ಯವಸ್ಥೆಯನ್ನು ಸ್ಟ್ರೀರಿಂಗ್‌ನಲ್ಲೇ ಅಳವಡಿಸಲಾಗಿದೆ. ಆದರೆ ಎಸಿ, ಫ್ಯಾನ್‌ ಸ್ಪೀಡ್‌ ನಿಯಂತ್ರಣಕ್ಕೆ ಇನ್ಫೋಸಿಸ್ಟಂನತ್ತ ಕಣ್ಣು ಆಡಿಸಲೇಬೇಕಾಗುತ್ತದೆ.

ಡ್ಯಾಷ್‌ಬೋರ್ಡ್‌ನಲ್ಲಿ ಮತ್ತೊಂದು ಕೊರತೆಯಿದೆ. ಇವಾಕ್‌ನಲ್ಲಿ ಸ್ಪೀಡೋಮೀಟರ್‌ ನೋಡುವ ಅಗತ್ಯವೇ ಇಲ್ಲ. ಮುಂಭಾಗದ ಗಾಜಿನ ಮೇಲೆ ವಾಹನದ ವೇಗ ಪ್ರತಿಫಲನವಾಗುತ್ತದೆ. ಈ ವ್ಯವಸ್ಥೆ ವೆಲಾರ್‌ನಲ್ಲೂ ಇರಬೇಕಿತ್ತು.

ಎರಡನೇ ಸಾಲಿನ ಸೀಟುಗಳು ಸಾಕಷ್ಟು ವಿಸ್ತಾರವಾಗಿದ್ದು, ಇಬ್ಬರು ಕುಳಿತುಕೊಳ್ಳುವಷ್ಟು ವಿಶಾಲವಾಗಿದೆ. ಮಧ್ಯದಲ್ಲಿ ಮತ್ತೊಬ್ಬ ಕುಳಿತರೆ ಇಕ್ಕಟ್ಟಾಗುತ್ತದೆ. ಮುಂಬದಿಯ ಸೀಟಿನ ನಡುವೆ ಹವಾನಿಯಂತ್ರಣ ವ್ಯವಸ್ಥೆ ಇರುವ ಕಾರಣದಿಂದ ಹಿಂಬದಿಯ ಸಾಲಿನಲ್ಲಿ ಮಧ್ಯ ಕೂರುವುದು ಕಷ್ಟ. ಆದರೆ ಕಾಲಿಟ್ಟುಕೊಳ್ಳಲು ಸಾಕಷ್ಟು ಜಾಗವಿದೆ.

ಟೆಸ್ಟ್‌ಡ್ರೈವ್‌ಗೆ ನೀಡಿದ್ದ ಪಿ 250 ಎಸ್‌ಇ ಪೆಟ್ರೋಲ್‌ ಚಾಲಿತ 2 ಲೀಟರ್‌ ಎಂಜಿನ್‌ ಚಾಲನೆ ಮಾಡಿದಾಗ ಬೆಣ್ಣೆಯಂತಿತ್ತು. ಆದರೆ ಎಂಜಿನ್‌ ಶಬ್ಧ ಕೊಂಚ ಕೊಂಚ ಕ್ಯಾಬಿನ್‌ನ ಕೆಳಭಾಗದಿಂದ ಬರುತ್ತಿತ್ತು. ಚಾಲಕನ ಸೀಟಿಗೆ ಮೂರು ಬಗೆಯ ಸ್ವಯಂಚಾಲಿನ ನಿಯಂತ್ರಣ ಮತ್ತು ಚಾಲಕ ಬೇಕಾದ ರೀತಿಯೂ ನಿಯಂತ್ರಣ ಮಾಡಿಕೊಳ್ಳಬಹುದು. ಸ್ಟ್ರೀರಿಂಗ್‌ ನಿಯಂತ್ರಣಕ್ಕೆ ಅಳವಡಿಸಿರುವ ‍ಪುಟ್ಟ ಬಟನ್‌ ಸೊಗಸಾಗಿದೆ. ಶ್ರಮ ಇಲ್ಲದಂತೆ ಚಾಲಕನ ಎತ್ತರಕ್ಕೆ ತಕ್ಕಂತೆ ಸ್ಟ್ರೀರಿಂಗ್‌ನ ಎತ್ತರವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು.

ವಾಹನದಲ್ಲಿ 4x4, ತಿರುವಿನಲ್ಲೂ ಸ್ಕಿಡ್‌ ಆಗದ ವ್ಯವಸ್ಥೆಯೂ ಸೇರಿದಂತೆ ಮೇಲ್ವರ್ಗದ ಕಾರಿನಲ್ಲಿ ಇರುವ ಎಲ್ಲಾ ರೀತಿಯ ಅನುಕೂಲಗಳಿವೆ. ದೊಡ್ಡ ಎಸ್‌ಯುವಿಗೆ 2 ಲೀಟರ್‌ ಎಂಜಿನ್‌ ಸಣ್ಣದೇ ಎನಿಸಿದರೂ ಕಾರ್ಯಕ್ಷಮತೆ ಜೋರಾಗಿಯೇ ಇದೆ. ಬೆಟ್ಟ ಹತ್ತುವ ಇಲ್ಲವೇ ಇಳಿಜಾರಿನ ದಾರಿಗೆ, ನೀರಿನಿಂದ ಕೊರೆದ ರಸ್ತೆಗೆ ಪ್ರತ್ಯೇಕ ಮೋಡ್‌ನಲ್ಲಿ ಚಾಲನೆ ಮಾಡಬಹುದು. ಈ ವ್ಯವಸ್ಥೆ ಇವಾಕ್‌ನಲ್ಲೂ ಇದೆ. ಆಟೋ ಗೇರ್‌ ವಾಹನದಲ್ಲಿ ಸ್ಟಿಯರಿಂಗ್‌ ಹಿಂಬದಿಯಲ್ಲಿ ಕ್ರೂಸ್‌ ಕಂಟ್ರೋಲ್‌ ಅಳವಡಿಸಲಾಗಿದೆ. ವಾಹನವನ್ನು ಭಾರತದಲ್ಲಿ ನಿರ್ಮಿಸದ ಕಾರಣದಿಂದ ಲೈಟ್‌ ನಿಯಂತ್ರಣ ಎಡದಲ್ಲಿದೆ.

ಕೊಡಗು ಪ್ರವಾಹದಲ್ಲಿ ಮುಳುಗುವ ಕೆಲ ದಿನಗಳ ಹಿಂದೆ ಮಳೆಯಲ್ಲೇ ಪೊನ್ನಂಪೇಟೆ ಕಡೆಯಿಂದ ಮಡಿಕೇರಿ ಕಡೆ ವೆಲಾರ್ ಕಾರಿನ ಚಾಲನೆ ಮಾಡಿದ್ದೆ. ವೇಗದ ಚಾಲನೆಯಲ್ಲೂ ರಸ್ತೆಯ ಹಿಡಿತ ಅತ್ಯುತ್ತಮ. ಯಾವುದೇ ವೇಗದಲ್ಲೂ ಎಂತಹ ರಸ್ತೆಯಲ್ಲೂ ಉಡದಂತಹ ಹಿಡಿತವನ್ನು ಪ್ರದರ್ಶಿಸುತ್ತದೆ. ಮಹೀಂದ್ರ ಥಾರ್‌ ಹೋಗುವ ರಸ್ತೆಯಲ್ಲೂ ವೆಲಾರ್‌ ಸುಲಲಿತವಾಗಿ ಹೋಗುತ್ತಿತ್ತು.

ಒಟ್ಟಾರೆ ಜಾಗ್ವಾರ್‌ ಮತ್ತು ಲ್ಯಾಂಡ್‌ರೋವರ್‌ ಸಂಸ್ಥೆಯಿಂದ ₹ 44 ಲಕ್ಷದ ಆಸುಪಾಸಿನ ಡಿಸ್ಕವರಿ ಸ್ಪೋರ್ಟ್ಸ್‌ನಿಂದ ರೇಂಜ್‌ರೋವರ್‌ವರೆಗೆ ₹ 3.88 ಕೋಟಿ ನಡುವಿನ ವಾಹನಗಳು ದೊರಕುತ್ತಿವೆ. ಶ್ರೀಮಂತ ಮೇಲ್ವರ್ಗಕ್ಕೆ ಬೇಕಾದ ಎಸ್‌ಯುವಿ ಭಾರತದಲ್ಲೇ ದೊರಕುವಂತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.