ಕುಟುಂಬದ ಸವಾರಿಗೆ ಯಾರಿಸ್

7

ಕುಟುಂಬದ ಸವಾರಿಗೆ ಯಾರಿಸ್

Published:
Updated:

ಸೆಡಾನ್‌ಗಳಲ್ಲಿ ಆರಾಮದಾಯಕತೆ ಮತ್ತು ಸ್ವಲ್ಪ ಐಷಾರಾಮ ಬಯಸುವವರಿಗೆಂದೇ ಹುಟ್ಟಿಕೊಂಡದ್ದು ಸಿ–ಸೆಗ್ಮೆಂಟ್. ತೀರಾ ದುಬಾರಿಯಲ್ಲದ, ಕಡಿಮೆಯೂ ಅಲ್ಲದ ಬೆಲೆ, ಚಿಕ್ಕ ಸೆಡಾನ್‌ಗಳಿಗಿಂತ ಹೆಚ್ಚು ಶಕ್ತಿ ಮತ್ತು ಆ ಶಕ್ತಿಯ ಹೋಲಿಕೆಯಲ್ಲಿ ಉತ್ತಮ ಮೈಲೇಜ್ ಹಾಗೂ ಎಲ್ಲಾ ಸವಲತ್ತುಗಳು ಲಭ್ಯವಿರುವ ಸೆಡಾನ್ ವರ್ಗವಿದು. ಬಹಳ ವರ್ಷಗಳ ಕಾಲ ಈ ವರ್ಗದ ಅನಭಿಷಿಕ್ತ ದೊರೆಯಾಗಿ ಮೆರೆದದ್ದು ಹೋಂಡಾ ಸಿಟಿ. ಹುಂಡೈನವರ ವರ್ನಾ ಮಾರುಕಟ್ಟೆಗೆ ಬಂದ ನಂತರ ಈ ಸೆಗ್ಮೆಂಟ್‌ನ ಕೊಳ್ಳುಗರಲ್ಲಿ ಅರ್ಧದಷ್ಟು ಸಿಟಿಯತ್ತ, ಅರ್ಧದಷ್ಟು ವರ್ನಾದತ್ತ ಹೊರಳಿದ್ದು ಸುಳ್ಳಲ್ಲ. ಸದ್ಯ ಮಾರುತಿಯವರ ಸಿಯಾಸ್ ಸಹ ಇವೆರಡಕ್ಕೆ ಪೈಪೋಟಿ ನೀಡುತ್ತಿದೆ. ಈಗ ಈ ವರ್ಗದಲ್ಲಿ ಈ ಮೂರನ್ನು ಬಿಟ್ಟರೆ ಬೇರೆ ಯಾವ ಸೆಡಾನ್‌ಗಳೂ ಮಾರುಕಟ್ಟೆಯಲ್ಲಿ ಇಲ್ಲ. ಆದರೆ ಮುಂದಿನ ತಿಂಗಳ ಮೊದಲಾರ್ಧದಲ್ಲಿ ಟೊಯೊಟಾ ಯಾರಿಸ್ ಮಾರುಕಟ್ಟೆಗೆ ಬರಲಿದ್ದು, ಸ್ಪರ್ಧೆಯನ್ನು ಖಂಡಿತಾ ಹೆಚ್ಚಿಸಲಿದೆ.

ಸಿಟಿ ಮತ್ತು ವರ್ನಾಗಳು ಆರಂಭದಲ್ಲಿ ಪರ್ಫಾರ್ಮೆನ್ಸ್ ಸೆಡಾನ್‌ಗಳಾಗಿದ್ದವು. ಆ ವರ್ಗಕ್ಕೆ ಅತಿ ಎನಿಸುವಷ್ಟು ಶಕ್ತಿ ಉತ್ಪಾದಿಸುತ್ತಿದ್ದ ಈ ಸೆಡಾನ್‌ಗಳು ನಂತರದ ದಿನ ಗಳಲ್ಲಿ ಸುರಕ್ಷತೆ, ಆರಾಮದಾಯಕತೆಗೆ ಒತ್ತು ನೀಡಿದವು. ಸಿ–ಸೆಗ್ಮೆಂಟ್ ವರ್ಗ ಈಗ ನಿಧಾನವಾಗಿ ಆರಾಮ ದಾಯಕತೆಯೆಡೆಗೆ ವಾಲುತ್ತಿದೆ. ಹೀಗಾಗಿಯೇ ವರ್ನಾ, ಸಿಟಿ ಮತ್ತು ಸಿಯಾಸ್‌ಗಳು ಪ್ರತಿ ಫೇಸ್‌ಲಿಫ್ಟ್‌ನಲ್ಲೂ ಹೆಚ್ಚು ಮೆಚ್ಯೂರ್ಡ್‌ ಆದ ವಿನ್ಯಾಸ ಪಡೆಯುತ್ತಾ ಬಂದಿವೆ. ಈ ವರ್ಗದಲ್ಲೂ ಛಾಪು ಮೂಡಿಸಲು ಇರುವ ಅವಕಾಶವನ್ನು ಗ್ರಹಿಸಿರುವ ಟೊಯೊಟಾ, ಈ ವರ್ಗದ ಬೇಕು–ಬೇಡಗಳನ್ನು ಕೂಲಂಕಷವಾಗಿ ತೂಗಿ–ಅಳೆದು ಯಾರಿಸ್ ರೂಪಿಸಿದೆ.

ಈ ವರ್ಗದ ಸೆಡಾನ್‌ಗಳನ್ನು ಕೊಳ್ಳುವವರಲ್ಲಿ ಮಧ್ಯವಯಸ್ಕರ ಪ್ರಮಾಣ ದೊಡ್ಡದಿದೆ. ಇವರಲ್ಲಿ ಸ್ವತಃ ಅವರೇ ಕಾರನ್ನು ಚಲಾಯಿಸುವವರ ಪ್ರಮಾಣ ಕಡಿಮೆ. ಒಂದೋ ಚಾಲಕರು ಅವನ್ನು ಚಲಾಯಿಸಬೇಕು ಇಲ್ಲವೇ ಮಕ್ಕಳು ಚಲಾಯಿಸಬೇಕು. ಈ ಅಂಶವನ್ನು ಆಧಾರವಾಗಿಟ್ಟುಕೊಂಡೇ ಟೊಯೊಟಾ ಯಾರಿಸ್ ಅನ್ನು ವಿನ್ಯಾಸ ಮಾಡಿರುವಂತಿದೆ, ಒಳಗೂ, ಹೊರಗೂ ಮತ್ತು ಎಂಜಿನ್‌ನಲ್ಲೂ.

ಕಂಪನಿಯ ಆಹ್ವಾನದ ಮೇರೆಗೆ ಯಾರಿಸ್ ಅನ್ನು ಚಲಾಯಿಸಲಾಗಿತ್ತು. ಹೊರನೋಟದಲ್ಲಿ ಯಾರಿಸ್, ಟೊಯೊಟಾದವರ ಐಷಾರಾಮಿ ಸಲೂನ್ ಕ್ಯಾಮ್ರಿಯ ಮೀನಿಯೇಚರ್ ಅರ್ಥಾತ್ ತಮ್ಮನಂತಿದೆ. ದೇಹದ ವಿನ್ಯಾಸ, ಬಾನೆಟ್, ಬಂಪರ್, ಗ್ರಿಲ್, ಬೂಟ್, ಟೇಲ್‌ಲ್ಯಾಂಪ್‌ ಎಲ್ಲವೂ ಕ್ಯಾಮ್ರಿಯನ್ನು ನೆನಪಿಸುತ್ತದೆ. ತೀರಾ ಮೊನಚಾದ ವಿನ್ಯಾಸವಾದರೂ, ನೋಡುಗರಲ್ಲಿನ ಚಾಲಕನನ್ನು ಕೆರಳಿಸುವಂತಹ ವಿನ್ಯಾಸ ಅದಲ್ಲ. ಬದಲಿಗೆ ಹಿಂಬದಿಯಲ್ಲಿ ಕೂತು ಸಾವಧಾನವಾಗಿ ಪ್ರಯಾಣ ಮಾಡಿ ಎಂದು ಕರೆಯುವಂತಿದೆ ಯಾರಿಸ್‌ನ ದೇಹ ವಿನ್ಯಾಸ.

ಒಳಾಂಗಣದ ವಿನ್ಯಾಸವೂ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಮುಂಬದಿಯಲ್ಲಿ ಅಥವಾ ಹಿಂಬದಿಯಲ್ಲಿ ಪ್ರಯಾಣಿಕರಾಗಿ ಕೂತಾಗ, ಅಲ್ಲದೆ ಚಾಲಕನ ಸೀಟ್‌ನಲ್ಲಿ ಕೂತಾಗಲೂ ಒಳಾಂಗಣ ನೋಟ ಚಾಲಕನನ್ನು ಉದ್ದೀಪಿಸುವುದಿಲ್ಲ. ಎರಡು ಬಣ್ಣದ ಟ್ರಿಮ್‌ಗಳನ್ನು ಹೊಂದಿರುವ ಡ್ಯಾಶ್‌ಬೋರ್ಡ್ ಮತ್ತು ಡೋರ್‌ಪ್ಯಾಡ್‌ಗಳೂ ಕಣ್ಣುಕುಕ್ಕುವುದಿಲ್ಲ. ಅಷ್ಟು ಮೆಚ್ಯೂರ್ಡ್ ಆದ ವಿನ್ಯಾಸವದು.

ಇನ್ನು ಯಾರಿಸ್‌ 1.5 ಲೀಟರ್ (1,500 ಸಿ.ಸಿ.) ಸಾಮರ್ಥ್ಯದ ಪೆಟ್ರೋಲ್‌ ಎಂಜಿನ್ ಅವತರಣಿಕೆಯಲ್ಲಿ ಮಾತ್ರ ಲಭ್ಯವಿದೆ. ಈ ಎಂಜಿನ್ ಗರಿಷ್ಠ 108 ಬಿಎಚ್‌ಪಿ ಶಕ್ತಿ ಮತ್ತು ಗರಿಷ್ಠ 140 ನ್ಯೂಟಾನ್ ಮೀಟರ್‌ ಟಾರ್ಕ್ ಉತ್ಪಾದಿಸುತ್ತದೆ. ಯಾರಿಸ್ 6 ಫಾರ್ವರ್ಡ್‌ ಗಿಯರ್‌ಗಳ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ ಮತ್ತು 7 ಸ್ಪೀಡ್ ಕಾನ್‌ಸ್ಟಂಟ್ ವೇರಿಯೆಬಲ್ ಟ್ರಾನ್ಸ್‌ಮಿಷನ್–ಸಿವಿಟಿ ಅವತರಣಿಕೆಗಳಲ್ಲಿ ಲಭ್ಯವಿದೆ. ಎಲ್ಲಾ ಅವತರಣಿಕೆಗಳಲ್ಲೂ ಸಿವಿಟಿ ಲಭ್ಯವಿರುವುದು ಯಾರಿಸ್‌ ತನ್ನ ಪ್ರತಿಸ್ಪರ್ಧಿಗಳಿಗಿಂತ ಒಂದು ಹೆಜ್ಜೆ ಮುಂದೆ ಇರಿಸಿದಂತಾಗಿದೆ.

ನಾವು ಮೊದಲು ಚಲಾಯಿಸಿದ್ದು ಟಾಪ್‌ ಎಂಡ್ ಸಿವಿಟಿ ಅವತರಣಿಕೆಯ ಯಾರಿಸ್ ಅನ್ನು. ಮೊದಲೇ ಹೇಳಿದಂತೆ ಇದು ಆರಾಮದಾಯಕತೆಗೆಂದೇ ಮಾಡಿದ ಸೆಡಾನ್‌. ಹೀಗಾಗಿ ಅದನ್ನು ಸಾವಕಾಶವಾಗಿಯೇ ಚಲಾಯಿಸಬೇಕು. ಸಿವಿಟಿಯ ಕಾರ್ಯಕ್ಷಮತೆಯನ್ನು ಪರಿಶೀಲಿಸುವುದು ನಮ್ಮ ಉದ್ದೇಶವಾಗಿತ್ತು. ಅಂದರೆ, ಸಿವಿಟಿಯಲ್ಲಿ ಗಿಯರ್ ಬದಲಾವಣೆ ಹೇಗೆ ಸ್ಪಂದಿಸುತ್ತದೆ ಮತ್ತು ಎಂಜಿನ್‌ ಎಷ್ಟು ನಯವಾಗಿದೆ ಎಂಬುದನ್ನು ಪರೀಕ್ಷಿಸಬೇಕಿತ್ತು. ಇದು ಪೆಟ್ರೋಲ್ ಎಂಜಿನ್ ಆಗಿರುವುದರಿಂದ ಪ್ರತಿ ಗಿಯರ್‌ನಲ್ಲೂ ಎಂಜಿನ್ 6,000 ಆರ್‌ಪಿಎಂವರೆಗೂ ತಿರುಗುತ್ತದೆ. ಆನಂತರವೇ ಗಿಯರ್ ಅಪ್‌ಶಿಫ್ಟ್ ಆಗುತ್ತದೆ. ಮ್ಯಾನ್ಯುಯಲ್‌ನಲ್ಲಿ ಇನ್ನೂ ಬೇಗ ಗಿಯರ್‌ ಬದಲಿಸುವುದರಿಂದ ಎಂಜಿನ್ ನಯವಾಗಿರುತ್ತದೆ. ಸಿವಿಟಿಯಲ್ಲಿ 4ನೇ ಗಿಯರ್‌ಗೆ ಅಪ್‌ಶಿಫ್ಟ್ ಆಗುವವರೆಗೂ ಎಂಜಿನ್‌ನ ಶಬ್ದ ಗಡುಸಾಗಿ ಕೇಳುತ್ತಿತ್ತು. (ನಾವು ಚಲಾಯಿಸಿದ್ದ ಕಾರು ಕೇವಲ 300 ಕಿ.ಮೀ. ಕ್ರಮಿಸಿತ್ತು. ಹೊಸ ಎಂಜಿನ್ ಆಗಿರುವ ಕಾರಣಕ್ಕೂ ಶಬ್ದ ಗಡುಸಾಗೇ ಇರುತ್ತದೆ). ಆದರೆ ನಾಲ್ಕನೇ ಗಿಯರ್‌ ನಂತರ ಎಂಜಿನ್ ನಯವೆನಿಸುವಷ್ಟು ಸರಾಗವಾಗಿ ಕೆಲಸ ಮಾಡುತ್ತಿತ್ತು.

ಸಿವಿಟಿಯು ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್‌ನ ಒಂದು ವಿಧವಾದ ಕಾರಣ ನಿಗದಿತ ‌ವೇಗದಲ್ಲಿ ಮಾತ್ರ ಗಿಯರ್‌ ಬದಲಾಗುತ್ತದೆ. ಹೀಗಾಗಿ ವೇಗವರ್ಧನೆ ಮತ್ತು ಗಿಯರ್‌ಶಿಫ್ಟ್ ಸಾಧಾರಣವಾಗೇ ಇದೆ. ಹೀಗಾಗಿ ಹೆದ್ದಾರಿಯಲ್ಲಿ ವೇಗದ ಚಾಲನೆಯಲ್ಲಿ ಓವರ್‌ಟೇಕ್ ಮಾಡುವಾಗ ತುಸು ಪ್ಲಾನ್‌ ಮಾಡಬೇಕಾಗುತ್ತದೆ. ಏಕೆಂದರೆ ಅಕ್ಸಲರೇಟರ್ ಪೆಡಲ್ ಒತ್ತಿದಾಕ್ಷಣ ಯಾರಿಸ್‌ನ ವೇಗ ದಿಢೀರ್‌ ಎಂದು ಹೆಚ್ಚುವುದಿಲ್ಲ. ಬದಲಿಗೆ ಸಾವಧಾನವಾಗಿ ವೇಗ ಹೆಚ್ಚಿಸಿಕೊಳ್ಳುತ್ತದೆ. ಕೆಲವು ಸಮಯದಲ್ಲಿ ಇದು ಕಿರಿಕಿರಿ ಎನಿಸುತ್ತದೆ. ಆ ಕಿರಿಕಿರಿಯನ್ನು ತಪ್ಪಿಸಲೆಂದೇ ಪ್ಯಾಡೆಲ್ ಶಿಫ್ಟ್ ಸವಲತ್ತು ನೀಡಲಾಗಿದೆ. ಅಂದರೆ ಸಿವಿಟಿಯನ್ನು ಮ್ಯಾನ್ಯುಯಲ್ ಮೋಡ್‌ಗೆ ಪರಿವರ್ತಿಸಿಕೊಂಡು (ಬಹುತೇಕ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಲ್ಲಿ ಈ ಸವಲತ್ತು ಇರುತ್ತದೆ) ಗಿಯರ್‌ಗಳನ್ನು ಅಪ್‌ಶಿಫ್ಟ್–ಡೌನ್‌ಶಿಫ್ಟ್‌ ಮಾಡಿಕೊಳ್ಳಬಹುದು. ಇದು ಯಾರಿಸ್‌ನ ಚಾಲನೆಯನ್ನು ಸ್ವಲ್ಪ ಪ್ರಮಾಣದಲ್ಲಿ ರೋಮಾಂಚನಕಾರಿಯಾಗಿಸುತ್ತದೆ.

ಎಂಜಿನ್ ರೆಸ್ಪಾನ್ಸ್‌ ವಿಚಾರದಲ್ಲಿ ಮ್ಯಾನ್ಯುಯಲ್ ಅವತರಣಿಕೆಯ ಯಾರಿಸ್ ಉತ್ತಮವಾಗಿದೆ. ಸಿವಿಟಿ ಮತ್ತು ಮ್ಯಾನ್ಯುಯಲ್ ಎರಡೂ ಅವತರಣಿಕೆಗಳಲ್ಲೂ ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್, ಟ್ರ್ಯಾಕ್ಷನ್ ಕಂಟ್ರೋಲ್ ಇರುವುದರಿಂದ ವೇಗದ ಚಾಲನೆಯಲ್ಲಿ ಜಿಗ್‌ಜಾಗ್ ಮಾಡಿದರೂ ಕಾರು ಅತ್ತಿತ್ತ ಸರಿದಾಡದೆ ಚಾಲಕ ಹೇಳಿದಂತೆಯೇ ಕೇಳುತ್ತದೆ. ಇನ್ನು ಇಬಿಡಿ ಮತ್ತು ಬ್ರೇಕ್‌ ಅಸಿಸ್ಟ್‌ ಇರುವ ಎಬಿಎಸ್‌ ಇದ್ದು ಬ್ರೇಕಿಂಗ್‌ ಅನ್ನು ಸುಲಭವಾಗಿಸುತ್ತದೆ. ನಾಲ್ಕೂ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ ನೀಡಿರುವುದರಿಂದ ಯಾರಿಸ್‌ನ ಬ್ರೇಕಿಂಗ್ ಡಿಸ್ಟೆನ್ಸ್ ಉತ್ತಮವಾಗಿದೆ. ಯಾವುದೇ ವೇಗದಲ್ಲೂ ಗಕ್ಕನೆ ಬ್ರೇಕ್‌ ಒತ್ತಲು ಹೆದರುವ ಅವಶ್ಯಕತೆಯಿಲ್ಲ. ಇನ್ನು ಇದರಲ್ಲಿ 7 ಏರ್‌ಬ್ಯಾಗ್‌ಗಳಿದ್ದು, ಇದು ಈ ವರ್ಗದಲ್ಲೇ ಮೊದಲು.

ಯಾರಿಸ್‌ನ ಒಳಾಂಗಣವೂ ವಿಶಿಷ್ಟ ಸವಲತ್ತುಗಳನ್ನು ಹೊಂದಿದೆ. 8 ದಿಕ್ಕುಗಳಲ್ಲಿ ಚಲಾಯಿಸಬಹುದಾದ ಪವರ್‌ ಅಡ್ಜಸ್ಟಬೆಲ್ ಡ್ರೈವರ್ ಸೀಟ್‌ ಈ ಯಾರಿಸ್‌ನ ಹೆಗ್ಗಳಿಕೆಗಳಲ್ಲಿ ಒಂದು. ಇನ್ನು ಲೆದರ್‌ ಸೀಟ್‌ಗಳು ಕೂರುವ ಅನುಭವವನ್ನು ಹಿತವಾಗಿಸುತ್ತವೆ. ಯಾರಿಸ್‌ನ ಚಾವಣಿಯಲ್ಲಿ ಏರ್‌ ವೆಂಟ್‌ ನೀಡಲಾಗಿದೆ (ಎ.ಸಿ.ವೆಂಟ್ ಅಲ್ಲ). ಕ್ಯಾಬಿನ್‌ನ ಮುಂಭಾಗದಲ್ಲಿರುವ ತಣ್ಣನೆಯ ಗಾಳಿಯನ್ನು ಎಳೆದುಕೊಂಡು, ಹಿಂಬದಿಯ ಸೀಟ್‌ಗಳಿಗೆ ರವಾನಿಸುವ ಕೆಲಸವನ್ನು ಇದು ಮಾಡುತ್ತದೆ. ಕೂತವರು ಗಾಳಿಯ ಚಲನೆಯ ದಿಕ್ಕನ್ನು ಬದಲಿಸಲು ಅವಕಾಶವಿದೆ. ಇದೂ ಯಾರಿಸ್‌ನ ಮತ್ತೊಂದು ಹೆಗ್ಗಳಿಕೆ. ಇನ್ಫೊಟೇನ್‌ಮೆಂಟ್ ಸಿಸ್ಟಂ ತಕ್ಕಮಟ್ಟಿಗಿದ್ದು, ಅತ್ಯುತ್ತಮವೇನಲ್ಲ. ಆದರೆ ಅಂಗೈ ಆಡಿಸಿದರೆ, ಅದನ್ನು ಗ್ರಹಿಸಿ ವಾಲ್ಯೂಮ್ ಹೆಚ್ಚಿಸುವ–ಇಳಿಸುವ, ಹಾಡುಗಳನ್ನು ಬದಲಿಸುವ ಸವಲತ್ತು ಇದೆ.

ವೇಗ, ಪರ್ಫಾರ್ಮೆನ್ಸ್, ನಿಯಂತ್ರಣ, ಆರಾಮದಾಯಕತೆ ಮತ್ತು ಸುರಕ್ಷತೆ ಈ ಎಲ್ಲವನ್ನೂ ಪರಿಗಣಿಸಿದರೆ ಒಂದು ಕುಟುಂಬದ ಕಾರ್‌ ಎಂದರೆ ತಪ್ಪೇನಿಲ್ಲ.

ಯಾರಿಸ್‌ ಇನ್ನೂ ಮಾರುಕಟ್ಟೆಗೆ ಬಂದಿಲ್ಲವಾದ್ದರಿಂದ ಅದರ ಬೆಲೆ ಬಹಿರಂಗವಾಗಿಲ್ಲ. ಆದರೆ, ಆರಾಮದಾಯಕ ಸವಾರಿ ಬಯಸುವ ಮಧ್ಯಮವರ್ಗದ ಜನರು ತಮ್ಮ ಹಿಟ್‌ಲಿಸ್ಟ್‌ನಲ್ಲಿ ಯಾರಿಸ್ ಅನ್ನೂ ಸೇರಿಸಿಕೊಳ್ಳಲು ಅಡ್ಡಿಯಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 1

  Sad
 • 0

  Frustrated
 • 1

  Angry