ಭಾನುವಾರ, ಮೇ 29, 2022
22 °C

2030 ರ ಹೊತ್ತಿಗೆ ಆಗಲಿದೆ ವಾಹನೋದ್ಯಮದ 2ನೇ ಕ್ರಾಂತಿ

ಉದಯ ಶಂಕರ ಪುರಾಣಿಕ Updated:

ಅಕ್ಷರ ಗಾತ್ರ : | |

Prajavani

ವರ್ಷ 2030ರ ಹೊತ್ತಿಗೆ ವಾಹನೋದ್ಯಮದಲ್ಲಿ ಎರಡನೆಯ ಕ್ರಾಂತಿ ನಡೆಯಲಿದೆಯಂತೆ. ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳು, ಸ್ವಯಂಚಾಲಿತ ವಾಹನಗಳು, ಅಧುನಿಕ ತಂತ್ರಜ್ಞಾನ–ಸಂವಹನ ವ್ಯವಸ್ಥೆ ಹೊಂದಿರುವ ರಸ್ತೆಗಳು – ಹೀಗೆ ಅನೇಕ ಹೊಸ ಆಯಾಮಗಳನ್ನು ಇದು ತೆರೆದಿಡಲಿದೆಯಂತೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಮೆಶೀನ್ ಲರ್ನಿಂಗ್, ಡೀಪ್ ಲರ್ನಿಂಗ್ ಮೊದಲಾದ ತಂತ್ರಜ್ಞಾನಗಳನ್ನು ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲಿರುವ ಬ್ಯಾಂಕುಗಳು, ವಿಮಾ ಸಂಸ್ಥೆಗಳು, ಉದ್ಯಮಗಳು, ಆಸ್ಪತ್ರೆಗಳು, ರಕ್ಷಣಾ ಪಡೆಗಳು, ಸಾರ್ವಜನಿಕ ಸಾರಿಗೆ, ಬಂದರು ನಿರ್ವಹಣೆ - ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬಳಸಲಾಗುತ್ತಿದೆ. 2025ರ ಹೊತ್ತಿಗೆ, ಪ್ರತಿವರ್ಷ ವಿಶ್ವದಾದ್ಯಂತ ವಾಹನೋದ್ಯಮದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಬಳಸಲು ಸುಮಾರು 62,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವ ನಿರೀಕ್ಷೆ ಇದೆ.

ಮೋಟಾರು ವಾಹನಗಳು ಬಳಕೆಗೆ ಬರುವ ಮೊದಲು ನೂರಾರು ವರ್ಷಗಳ ಕಾಲ ಕುದುರೆಗಾಡಿಗಳು, ಎತ್ತಿನ ಬಂಡಿ ಮೊದಲಾದವುಗಳನ್ನು ಜನರು ಬಳಸುತ್ತಿದ್ದರು. ಲಂಡನ್ ನಗರದಲ್ಲಿ ಹೆಚ್ಚಾಗುತ್ತಿರುವ ಕುದುರೆಗಾಡಿಗಳಿಂದ ಮಾಲಿನ್ಯವಾಗುತ್ತದೆ ಎನ್ನುವ ಆತಂಕದ ಲೇಖನವನ್ನು ವರ್ಷ 1894ರಲ್ಲಿ ಲಂಡನ್ ಟೈಮ್ಸ್ ಪತ್ರಿಕೆ ಪ್ರಕಟಿಸಿತ್ತು. ಲಂಡನ್‍ನಲ್ಲಿ ಕುದುರೆಗಾಡಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅನಿಯಿಂತ್ರಿತವಾಗಿ ಹೆಚ್ಚಾಗುತ್ತಿದ್ದರೆ, 1940ರ ದಶಕದ ಮಧ್ಯಭಾಗದಲ್ಲಿ, ಲಂಡನ್‍ನ ರಸ್ತೆಗಳಲ್ಲಿ ಜನರು ಓಡಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಪ್ರತಿಯೊಂದು ರಸ್ತೆಯಲ್ಲಿ ಒಂಬತ್ತು ಅಡಿಗಳಷ್ಟು ಕುದುರೆ ಲದ್ದಿ ಬಿದ್ದಿರುತ್ತದೆ ಎನ್ನುವ ಆತಂಕವನ್ನು ಆ ಲೇಖನದಲ್ಲಿ ವ್ಯಕ್ತಪಡಿಸಲಾಗಿತ್ತು. ಆದರೆ 1900ರಿಂದ 1920 ಅವಧಿಯಲ್ಲಿ ಉಗಿಯಿಂದ ಚಲಿಸುವ ಯಂತ್ರಗಳ ಬದಲಾಗಿ ಇಂಟರ್‍ನಲ್ ಕಂಬಷ್ಟನ್ ಇಂಜೀನ್ (ಐಸಿ ಇಂಜೀನ್), ಕುದುರೆಗಾಡಿಗಳ ಬದಲಾಗಿ ಮೋಟಾರು ಕಾರುಗಳು – ಹೀಗೆ ವಾಹನೋದ್ಯಮದಲ್ಲಿ ಮೊದಲ ಕ್ರಾಂತಿ ನೆಡೆಯಿತು. ಪೆಟ್ರೋಲ್, ಡಿಸೇಲ್ ಪಂಪ್‍ಗಳು, ಮೋಟಾರು ವಾಹನಗಳ ತಯಾರಿಕೆ ಉದ್ಯಮಗಳು, ವಾಹನಗಳ ದುರಸ್ತಿ ಕೇಂದ್ರಗಳು, ವಾಹನಗಳ ಬಿಡಿಭಾಗಗಳ ತಯಾರಕರು, ವಾಹನಗಳ ಮಾರಾಟ ಸಂಸ್ಥೆಗಳು, ಸಮೂಹ ಸಾರಿಗೆಗಾಗಿ ಬಸ್ ಬಳಕೆ, ಸರಕು ಸಾಗಾಣಿಕೆಗಾಗಿ ಟ್ರಕ್ ಮೊದಲಾದ ಸರಕು ಸಾಗಾಣಿಕೆ ವಾಹನಗಳ ಬಳಕೆ – ಹೀಗೆ ಈ ಪ್ರಥಮ ಕ್ರಾಂತಿ ಹಲವು ಹೊಸ ಆಯಾಮಗಳನ್ನು ತೆರೆಯಿತು. ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ದೊರೆಯಿತು. ಆದೇ ರೀತಿ ವಾಹನಗಳ ಬಳಕೆ ಹೆಚ್ಚಾದಂತೆ, ಪರಿಸರ ಮಾಲಿನ್ಯದಂತಹ ಸಮಸ್ಯೆಗಳು ಹೆಚ್ಚಾದವು.

ವರ್ಷ 2030ರ ಹೊತ್ತಿಗೆ ವಾಹನೋದ್ಯಮದಲ್ಲಿ ಎರಡನೆಯ ಕ್ರಾಂತಿ ನಡೆಯಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಹೆಚ್ಚು ಪರಿಸರ ಸ್ನೇಹಿಯಾದ ವಿದ್ಯುತ್ ಚಾಲಿತ ವಾಹನಗಳು, ಸ್ವಯಂಚಾಲಿತ ವಾಹನಗಳು, ಅಧುನಿಕ ತಂತ್ರಜ್ಞಾನ ಮತ್ತು ಸಂವಹನ ವ್ಯವಸ್ಥೆಯನ್ನು ಹೊಂದಿರುವ ರಸ್ತೆಗಳು, ಪ್ರಯಾಣಿಕರಿಗೆ ಮೌಲ್ಯಾಧಾರಿತ ಸೇವೆಗಳು – ಹೀಗೆ ಅನೇಕ ಹೊಸ ಆಯಾಮಗಳನ್ನು ಈ ಎರಡನೆಯ ಕ್ರಾಂತಿ ತೆರೆದಿಡಲಿದೆಯಂತೆ. ವಾಹನೋದ್ಯಮಗಳ ಜೊತೆಯಲ್ಲಿ ತಂತ್ರಜ್ಞಾನ ಸಂಸ್ಥೆಗಳು ಮತ್ತು ನವೋದ್ಯಮಗಳು ಜೊತೆಗೂಡಿ ಕೆಲಸ ಮಾಡಲಿದ್ದು, ಪರಿಸರಸ್ನೇಹಿ, ಹೆಚ್ಚು ಸುರಕ್ಷತೆ ಮತ್ತು ಸೇವೆಗಳನ್ನು ನೀಡುವ ವಾಹನಗಳನ್ನು ಸುಲಭ ದರದಲ್ಲಿ ಜನಸಾಮಾನ್ಯರಿಗೆ ನೀಡಲು ಮುಂದಾಗುತ್ತಾರೆ. ಇದರಿಂದ ವಾಹನೋದ್ಯಮದಲ್ಲಿ ಹೊಸ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳ ಅಭಿವೃದ್ಧಿ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

2030ರಲ್ಲಿ ವಿಶ್ವವಾಹನೋದ್ಯಮದಲ್ಲಿ ಎರಡನೆಯ ಕ್ರಾಂತಿ ನಡೆಯಲಿದೆ ಎನ್ನುವಾಗ, ವಿಶ್ವದ ಪ್ರಮುಖ ವಾಹನ ಉದ್ಯಮಗಳು ಅಧುನಿಕ ತಂತ್ರಜ್ಞಾನಗಳ ಬಳಕೆಯಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತಿವೆ ಮತ್ತು ಸಾವಿರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿವೆ. ಉದಾಹರಣೆಗೆ, ವಿಶ್ವವಿಖ್ಯಾತ ಫೋರ್ಡ್‌ ಸಂಸ್ಥೆ, ಈಗಾಗಲೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೊದಲಾದ ತಂತ್ರಜ್ಞಾನಗಳನ್ನು ಬಳಸಲು ಪ್ರಾರಂಭಿಸಿದೆ. ಕಳೆದ 20 ವರ್ಷಗಳಿಂದ ಫೋರ್ಡ್‌ ಸಂಶೋಧನ ಕೇಂದ್ರವು, ಫೋರ್ಡ್‌ ಸಂಸ್ಥೆಗೆ ಸೂಕ್ತವಾದ ಅಧುನಿಕ ತಂತ್ರಜ್ಞಾನಗಳನ್ನು ಅಭಿವೃದ್ಧಿ ಮಾಡುತ್ತಿದೆ. ಹೀಗಾಗಿ, ಸುಮಾರು 15 ವರ್ಷಗಳ ಹಿಂದೆ, ನ್ಯೂರಲ್ ನೆಟವರ್ಕ್‌ ತಂತ್ರಜ್ಞಾನ ಆಧಾರಿತ ಅತ್ಯಾಧುನಿಕ ಮಿಸ್‍ಫೈರ್ ಪತ್ತೆ ಮಾಡುವ ವ್ಯವಸ್ಥೆಯನ್ನು ಫೋರ್ಡ್‌ ಸಂಸ್ಥೆ ಬಳಸಲು ಪ್ರಾರಂಭಿಸಿತು. ವಾಹನದ ಇಂಜೀನ್ ಚಾಲನೆಯಲ್ಲಿರುವಾಗ, ಮಿಸ್‍ಫೈರ್ ಸಮಸ್ಯೆಯಿದ್ದರೆ ಅದನ್ನು ತಕ್ಷಣ ಗುರುತಿಸಲು ಮತ್ತು ಈ ಸಮಸ್ಯೆ ಉಂಟಾಗಲು ಏನು ಕಾರಣಗಳು ಎಂದು ತಿಳಿಯಲು ಈ ವ್ಯವಸ್ಥೆ ಸಹಾಯಕವಾಗಿದೆ. ಅದೇ ರೀತಿ, ವಾಹನದ ಗುಣಮಟ್ಟ ಪರೀಕ್ಷೆಯಲ್ಲೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಫೋರ್ಡ್‌ ಸಂಸ್ಥೆ ಬಳಸುತ್ತಿದೆ. ಉದಾಹರಣೆಗೆ, ಮನುಷ್ಯನ ಕಣ್ಣಿಗೆ ಕಾಣಿಸದಷ್ಟು ಸೂಕ್ಷ್ಮವಾಗಿರುವ ಸುಕ್ಕುಗಳು ವಾಹನದ ಸೀಟಿನ ಹೊದಿಕೆಯಲ್ಲಿ ಕಂಡು ಬಂದರೂ, ತಕ್ಷಣ ಅದನ್ನು ಗುರುತಿಸಲಾಗುತ್ತಿದೆ. ವಾಹನ ತಯಾರಿಕೆಗೆ ಬೇಕಾದ ಬಿಡಿಭಾಗಗಳ ನಿರ್ವಹಣೆ, ಹೊಸ ಬಿಡಿಭಾಗಗಳಿಗೆ ಆರ್ಡರ್ ಮಾಡುವುದು, ಪೂರೈಸಲಾದ ಹೊಸ ಬಿಡಿಭಾಗಗಳ ಗುಣಮಟ್ಟ ಪರೀಕ್ಷೆ – ಹೀಗೆ ವಿವಿಧ ಕೆಲಸಗಳನ್ನು ನ್ಯೂರಲ್ ನೆಟವರ್ಕ್‌ ತಂತ್ರಜ್ಞಾನ ಬಳಸಿ ಯಶಸ್ವಿಯಾಗಿ ಮಾಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು