ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಎಕ್ಸ್‌ಪೊ ಚೀನಿಯರ ‘ಕಾರು’ ಬಾರು

Last Updated 22 ಜನವರಿ 2020, 19:30 IST
ಅಕ್ಷರ ಗಾತ್ರ

ಒಂದು ವರ್ಷದಿಂದೀಚೆಗೆ ಚೀನಾ ಕಾರು ತಯಾರಿಕಾ ಕಂಪನಿಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಾರಂಭಿಸಿವೆ. ಈ ಬಾರಿ ಫೆಬ್ರುವರಿಯ 5ರಿಂದ 12ರವರೆಗೆ ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿರುವ 15ನೇ ಆವೃತ್ತಿಯ ಆಟೊ ಎಕ್ಸ್‌ಪೊದಲ್ಲಿ ಮತ್ತಷ್ಟು ಚೀನಿ ಕಂಪನಿಗಳು ಹೊಸ ಮಾದರಿಗಳೊಂದಿಗೆ ಪಾಲ್ಗೊಳ್ಳುತ್ತಿವೆ.

ಈ ವರ್ಷದ ಆರಂಭದಲ್ಲಿ ಚೀನಾದ ಎಸ್‌ಎಐಸಿ ಮಾಲೀಕತ್ವದ ಬ್ರಿಟಿಷ್ ಕಾರ್‌ ತಯಾರಿಕಾ ಕಂಪನಿ ಎಂಜಿ ಮೋಟರ್ಸ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟು, ಉತ್ತಮ ಪ್ರತಿಕ್ರಿಯೆ ಪಡೆದಿದೆ.ಈ ಬಾರಿಯ ಆಟೊ ಎಕ್ಸ್‌ಪೊದಲ್ಲಿ ಗ್ರೇಟ್‌ ವಾಲ್‌ ಮೋಟರ್ಸ್‌,ಬಿವೈಡಿ ಮೋಟರ್ಸ್‌,ಚಾಂಗ್ಯಾಂಗ್‌ ಮತ್ತು ಎಫ್‌ಎಡಬ್ಲೂ ಹೈಮಾ ಎಂಬ ಕಾರು ತಯಾರಿಕಾ ಕಂಪನಿಗಳು ಪಾಲ್ಗೊಳ್ಳುತ್ತಿವೆ.ಕನಿಷ್ಠ ಆರಕ್ಕೂ ಹೆಚ್ಚು ಚೀನಾದ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ಸಜ್ಜಾಗಿವೆ.

ಎಂಜಿ ಮೋಟರ್ಸ್‌ನ ಹೆಕ್ಟರ್ ಮಾದರಿಯ ಯಶಸ್ಸಿನಿಂದ ಉತ್ತೇಜನಗೊಂಡಿರುವ ಚೀನಾದ ಕಾರು ತಯಾರಿಕಾ ಕಂಪನಿಗಳು ಭಾರತದತ್ತ ಮುಖ ಮಾಡಿವೆ.

ಈ ಬಾರಿ ಎಕ್ಸ್‌ಪೊದಲ್ಲಿ ಎಂಜಿ ಮೋಟರ್ಸ್‌ ಕೂಡಾ ತನ್ನ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸುತ್ತಿದೆ.ಗ್ರೇಟ್‌ ವಾಲ್ ಮೋಟರ್ಸ್‌ ಕಂಪನಿಯು ಪಿಕ್‌ಅಪ್‌ ಎಸ್‌ಯುವಿ ವಾಹನವನ್ನು ಪ್ರದರ್ಶಿಸಲಿದೆ.ಹವಾಲ್ ಕಂಪನಿಯು ಎಸ್‌ಯುವಿ ಮಾದರಿಗಳಾದ ಎಚ್‌4,ಎಚ್‌6ಹಾಗೂ ಎಚ್‌9ಕಾರುಗಳನ್ನು ಪ್ರದರ್ಶಿಸುವ ನಿರೀಕ್ಷೆ ಇದೆ.ಡಬ್ಲ್ಯುಇವೈ ಕಂಪನಿಯು ಕೆಲವು ಎಲೆಕ್ಟ್ರಿಕ್ ಕಾರುಗಳನ್ನು ಪ್ರದರ್ಶಿಸಲಿದೆ ಎಂದು ಹೇಳಲಾಗುತ್ತಿದೆ.

ಚೀನಾದ ಅತ್ಯಂತ ಹಳೆಯ ಕಾರು ತಯಾರಿಕಾ ಕಂಪನಿ ಎಫ್‌ಎಡಬ್ಲ್ಯು ಹೈಮಾ ಕೂಡ ಪಾಲ್ಗೊಳ್ಳುತ್ತಿದೆ.ಕಂಪನಿಯು ಎಸ್‌ಯುವಿ,ಎಂಪಿವಿ ಮತ್ತು ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಈಗಾಗಲೇ ಮುಂಚೂಣಿಯಲ್ಲಿದೆ.

ಹಳಬರಲ್ಲಿ ಹಲವರ ಪಾಲ್ಗೊಳ್ಳುವಿಕೆ

ಒಂದು ವಾರ ಕಾಲ ನಡೆಯಲಿರುವ ಈ ವಾಹನಗಳ ಪ್ರದರ್ಶನದಲ್ಲಿ ಮಾರುತಿ ಸುಜುಕಿ, ಹುಂಡೈ ಮೋಟರ್ಸ್‌,ಮಹೀಂದ್ರಾ,ಟಾಟಾ ಮೋಟರ್ಸ್‌ ಮತ್ತು ಕಿಯಾ ಮೋಟರ್ಸ್‌ ಪಾಲ್ಗೊಳ್ಳುತ್ತಿವೆ.

2018ರಲ್ಲಿ ನಡೆದಿದ್ದ14ನೇ ಆವೃತ್ತಿಯಲ್ಲಿ ಗೈರಾಗಿದ್ದ ಫೋಕ್ಸ್‌ವ್ಯಾಗನ್‌ ಮತ್ತು ಸ್ಕೋಡಾ ಈ ಬಾರಿ ಪಾಲ್ಗೊಳ್ಳುತ್ತಿದ್ದು,ಸಾಕಷ್ಟು ನಿರೀಕ್ಷೆ ಮೂಡಿಸಿವೆ.

ಆದರೆ, ಜಪಾನಿನ ಕಾರು ತಯಾರಿಕಾ ಕಂಪನಿಗಳಾದ ಹೋಂಡಾ ಮತ್ತು ಟೊಯೋಟ ಈ ಬಾರಿಯ ಎಕ್ಸ್‌ಪೊದಿಂದ ದೂರ ಉಳಿದಿವೆ.ಬಿಎಂಡಬ್ಲ್ಯು,ಫೋರ್ಡ್‌, ಔಡಿ,ಲೆಕ್ಸಸ್‌,ವೋಲ್ವೊ,ಜಾಗ್ವಾರ್ ಲ್ಯಾಂಡ್‌ರೋವರ್‌ ಮತ್ತು ಟೆಸ್ಲಾ ಕಂಪನಿಗಳು ಈ ಬಾರಿ ಪಾಲ್ಗೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಅಚ್ಚರಿಯ ಗೈರು

ಈ ಬಾರಿಯ ಆಟೊ ಎಕ್ಸ್‌ಪೊದಲ್ಲಿ ಹಲವರ ಗೈರು ಅಚ್ಚರಿ ಮೂಡಿಸುವಂತಿದೆ.ಇದರಲ್ಲಿ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೀರೊ ಮೋಟೊಕಾರ್ಪ್‌,ಹೊಂಡಾ ಮೋಟರ್‌ಸೈಕಲ್ ಮತ್ತು ಸ್ಕೂಟರ್‌,ಟಿವಿಎಸ್‌ ಮೋಟರ್ಸ್‌,ರಾಯಲ್ ಎನ್‌ಫೀಲ್ಡ್‌ ಮತ್ತು ಬಜಾಜ್ ಆಟೊ ಕೂಡಾ ಈ ಬಾರಿ ಗೈರಾಗುತ್ತಿರುವ ಸುದ್ದಿ ವಾಹನ ಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.

ಅಂತರರಾಷ್ಟ್ರೀಯ ಕಂಪನಿಗಳಾದ ಟ್ರಿಂಪ್‌, ಕೆಟಿಎಂ, ಕವಸಾಕಿ, ಬಿಎಂಡಬ್ಲ್ಯು,ಡ್ಯುಕಾಟಿ ಕೂಡಾ 2020ರ ದೆಹಲಿ ಆಟೊ ಎಕ್ಸ್‌ಪೊದಲ್ಲಿ ಪಾಲ್ಗೊಳ್ಳುತ್ತಿಲ್ಲ.

ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಬೇಕಿರುವ ಸಿದ್ಧತೆಗೆ ತಗುಲುವ ಭಾರಿ ಖರ್ಚು ಮತ್ತು ಪರಿಕಲ್ಪನೆಗಿಂತ ಗ್ರಾಹಕರು ಬಳಸುವ ಉತ್ಪನ್ನಗಳಿಗೆ ಒತ್ತು ನೀಡಬೇಕಿರುವುದರಿಂದ ಹಲವಾರು ಕಂಪನಿಗಳು ದೂರ ಉಳಿಯಲಿವೆ ಎಂದು ಭಾವಿಸಲಾಗಿದೆ.

ಅಗ್ಗದ ಎಲೆಕ್ಟ್ರಿಕ್ ಕಾರು ಅನಾವರಣ!

ಚೀನಾದ ಹವಲ್ ಕಾರು ಕಂಪನಿಯು ‘ಒರಾ ಆರ್‌1’ಎಂಬ ಅಗ್ಗದ ಪುಟ್ಟ ಎಲೆಕ್ಟ್ರಿಕ್ ಕಾರನ್ನು ಪರಿಚಯಿಸಲಿದೆ. 33ಹಾಗೂ28.5 ಕಿಲೋ ವಾಟ್‌ ಸಾಮರ್ಥ್ಯದ ಈ ಕಾರು ಪರೀಕ್ಷಾರ್ಥ ಪ್ರಯೋಗದಲ್ಲಿ ಒಂದು ಬಾರಿಯ ಪೂರ್ಣ ಪ್ರಮಾಣದ ಚಾರ್ಜ್‌ನಲ್ಲಿ301ರಿಂದ351ಕಿ.ಮೀ. ದೂರ ಕ್ರಮಿಸಿದೆ.ಇದರ ಬೆಲೆ ₹ 7.13 ಲಕ್ಷದಿಂದ ₹8.27ಲಕ್ಷದವರೆಗೆ ಇರುವ ಸಾಧ್ಯತೆ ಇದೆ.ಇದಕ್ಕೆ ಪ್ರತಿಸ್ಪರ್ಧಿಯಾಗಿ ಟಾಟಾ ಟಿಗಾರ್‌ ಇವಿ,ಮಾರುತಿ ವ್ಯಾಗನ್‌ ಆರ್‌ಇವಿ ಮತ್ತು ರೆನೊ ಕೂಡಾ ವಿದ್ಯುತ್ ಚಾಲಿತ ಕಾರು ಪರಿಚಯಿಸುವ ಸಾಧ್ಯತೆ ಇದೆ.

ಹೊಸಬರ ಉತ್ಸಾಹ

ಭಾರತದಲ್ಲಿ ಸಾಕಷ್ಟು ವರ್ಷಗಳಿಂದ ಇರುವ ಕಂಪನಿಗಳಿಗೆ ಹೋಲಿಸಿದಲ್ಲಿ,ಹೊಸ ಕಾರ್‌ ತಯಾರಿಕಾ ಕಂಪನಿಗಳು ಹೆಚ್ಚು ಉತ್ಸಾಹದಲ್ಲಿವೆ.ಕೊರಿಯಾದ ಕಿಯಾ ಮೋಟರ್ಸ್ ಕಂಪನಿಯು ‘ಕಾರ್ನಿವಲ್’ ಹೆಸರಿನ ‘ಎಂಪಿವಿ’ಯನ್ನು ಈ ಬಾರಿ ಪರಿಚಯಿಸುತ್ತಿದೆ.ತನ್ನ ಸೆಲ್ಟೋಸ್‌ ಮಾರಾಟ ಪ್ರಗತಿಯಿಂದ ಉತ್ತೇಜನಗೊಂಡಿರುವ ಕಿಯಾ,ಕ್ಯುವೈಐ ಎಂಬ4ಮೀಟರ್‌ ಒಳಗಿನ ಕಾರ್‌ ಮತ್ತು ಸೆಡಾನ್‌ ಮಾದರಿಯನ್ನೂ ಪರಿಚಯಿಸಲಿದೆ.

ರೆನೊ ಕೂಡಾ ಟ್ರೈಬರ್‌ ಎಎಂಟಿ ಮತ್ತು ಟರ್ಬೊ ಕಾರನ್ನು ಪರಿಚಯಿಸುವ ಸಾಧ್ಯತೆ ಇದೆ. 1ಲೀಟರ್‌ ಸಾಮರ್ಥ್ಯದ ಪೆಟ್ರೋಲ್ ಎಂಜಿನ್‌ ಹೊಂದಿರುವ ಟರ್ಬೊ ಚಾರ್ಜರ್‌ ಇರುವ ಕಾರು ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT