ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಾ ಕವಚಗಳಾಗಲಿವೆ ಹೊಸ ಕಾರುಗಳು

Last Updated 21 ಫೆಬ್ರುವರಿ 2019, 7:48 IST
ಅಕ್ಷರ ಗಾತ್ರ

‘ನಮ್ಮ ಕಾರುಗಳು ಸುರಕ್ಷಿತವಾಗಿರಬೇಕು‘ ಎಂಬುದು ಎಲ್ಲರ ಬಯಕೆ. ಭಾರತದಲ್ಲಿ ರಸ್ತೆ ಅಪಘಾತಗಳಿಗೆ ಪ್ರತೀ ವರ್ಷ 1.5 ಲಕ್ಷಕ್ಕೂ ಹೆಚ್ಚು ಮಂದಿ ಬಲಿಯಾಗುತ್ತಿದ್ದಾರೆ. ಹೀಗಾಗಿ ಯುರೋಪ್, ಅಮೆರಿಕ ಮತ್ತು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ವಾಹನ ಸುರಕ್ಷತಾ ನಿಯಮಗಳನ್ನು ಭಾರತದಲ್ಲೂ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಭಾರತ್ ನ್ಯೂ ಕಾರ್‌ ಅಸೆಸ್‌ಮೆಂಟ್ ಪ್ರೋಗ್ರಾಂ (ಬಿಎನ್‌ಸಿಎಪಿ) ಅನ್ನು ಸರ್ಕಾರ ರೂಪಿಸಿದೆ. ಇದು ಇನ್ನಷ್ಟೇ ಜಾರಿಯಾಗಬೇಕಾಗಿದೆ.

ಹೊಸ ನಿಯಮದಂತೆ ಎಲ್ಲಾ ಕಾರ್‌ಗಳಲ್ಲಿ ಚಾಲಕ ಮತ್ತು ಮುಂಬದಿ ಪ್ರಯಾಣಿಕನಿಗಾಗಿ ಏರ್‌ಬ್ಯಾಗ್‌ ಇರಲೇಬೇಕು. ಇದರ ಜತೆಯಲ್ಲೇ ಎಬಿಎಸ್‌ ವ್ಯವಸ್ಥೆ ಇರಬೇಕು. ಜತೆಗೆ ಸೀಟ್‌ಬೆಲ್ಟ್‌ ಹಾಕಿಲ್ಲದಿದ್ದರೆ ಅದನ್ನು ನೆನಪಿಸುವ ವ್ಯವಸ್ಥೆ, ವೇಗ ಹೆಚ್ಚಾದರೆ ಎಚ್ಚರಿಕೆ ನೀಡುವ ವ್ಯವಸ್ಥೆ, ರಿವರ್ಸ್‌ ಪಾರ್ಕಿಂಗ್‌ ಸೆನ್ಸರ್‌ಗಳು ಕಡ್ಡಾಯವಾಗಿ ಇರಲೇಬೇಕಾದ ಸವಲತ್ತುಗಳು ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಈ ನಿಯಮಗಳು ಜಾರಿಯಾಗುವುದಕ್ಕೂ ಮೊದಲು ಮಾರುಕಟ್ಟೆಯಲ್ಲಿದ್ದ ವಾಹನಗಳಿಗೆ ಇವು 2019ರ ಅಕ್ಟೋಬರ್‌ನಿಂದ ಅನ್ವಯವಾಗಲಿದೆ.

ನಮ್ಮಲ್ಲೂ ಬರಲಿದೆ ರೇಟಿಂಗ್ ಪದ್ಧತಿ: ಕಾರ್‌ಗಳ ಕ್ರ್ಯಾಶ್‌ ಟೆಸ್ಟ್‌ ಫಲಿತಾಂಶ ಮತ್ತು ಕಾರ್‌ಗಳಲ್ಲಿನ ಸುರಕ್ಷತಾ ಸವಲತ್ತುಗಳನ್ನು ಆಧರಿಸಿ ಅವುಗಳಿಗೆ ರೇಟಿಂಗ್ ನೀಡುವ ಪದ್ಧತಿ ಭಾರತದಲ್ಲೂ ಜಾರಿಗೆ ಬರಲಿದೆ.

ದೇಶದಲ್ಲಿ ಮಾರಾಟವಾಗುವ ಹಲವು ಕಾರ್ ಮತ್ತು ಎಸ್‌ಯುವಿಗಳು ಗ್ಲೋಬಲ್‌ ಎನ್‌ಸಿಎಪಿ ಕ್ರ್ಯಾಶ್‌ ಟೆಸ್ಟ್‌ನಲ್ಲಿ ಶೂನ್ಯ ರೇಟಿಂಗ್‌ ಪಡೆದಿದ್ದವು. ಆದರೆ ಭಾರತದ ಎಲ್ಲಾ ಕಾರ್‌ಗಳನ್ನು ಈ ಪರೀಕ್ಷೆಗೆ ಒಳಪಡಿಸುವುದು ಕಷ್ಟ ಸಾಧ್ಯ. ಹೀಗಾಗಿ ದೇಶದಲ್ಲಿಯೇ ಕ್ರ್ಯಾಶ್‌ ಟೆಸ್ಟ್‌ ಸವಲತ್ತನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ.

‘ಭಾರತ್ ಎನ್‌ಸಿಎಪಿ’ ಅನ್ವಯ, ದೇಶದಲ್ಲಿ ತಯಾರಾಗುವ ಮತ್ತು ಮಾರಾಟವಾಗುವ ಎಲ್ಲಾ ಕಾರ್‌ಗಳು ಕ್ರ್ಯಾಶ್‌ ಟೆಸ್ಟ್‌ಗೆ ಒಳಪಡಬೇಕಾಗುತ್ತದೆ. ಇಲ್ಲಿ ಎರಡು ಹಂತದ ರೇಟಿಂಗ್ ವ್ಯವಸ್ಥೆ ಇರಲಿದೆ. 56 ಕಿ.ಮೀ/ಗಂಟೆ ವೇಗದಲ್ಲಿ ನಡೆಯುವ ಕ್ರ್ಯಾಶ್‌ ಟೆಸ್ಟ್‌ ಪೂರೈಸುವ ಕಾರ್‌ಗಳಿಗೆ 0.5ರಿಂದ 4.5 ಸ್ಟಾರ್‌ ರೇಟಿಂಗ್ ನೀಡಲಾಗುತ್ತದೆ. ಇನ್ನು 64 ಕಿ.ಮೀ/ಗಂಟೆ ವೇಗದಲ್ಲಿ ನಡೆಯುವ ಕ್ರ್ಯಾಶ್‌ ಟೆಸ್ಟ್‌ಗಳನ್ನು ಪೂರೈಸುವ ಕಾರ್‌ಗಳಿಗೆ 1ರಿಂದ 5 ಸ್ಟಾರ್‌ ರೇಟಿಂಗ್ ನೀಡಲಾಗುತ್ತದೆ. ಇದರ ಜತೆಯಲ್ಲೇ ಕಾರ್‌ಗಳು ಸೈಡ್‌ ಇಂಪ್ಯಾಕ್ಟ್‌ ಟೆಸ್ಟ್‌ (ಕಾರ್‌ ಇಕ್ಕೆಲಗಳ ಸದೃಢತೆ ಪರೀಕ್ಷೆ) ಸಹ ನಡೆಯಲಿದೆ. ಈ ಪರೀಕ್ಷೆಯನ್ನೂ ಕಾರ್‌ಗಳು ಯಶಸ್ವಿಯಾಗಿ ಪೂರೈಸಬೇಕಾಗುತ್ತದೆ. ಇದಕ್ಕೂ ಪ್ರತ್ಯೇಕ ರೇಟಿಂಗ್‌ ಇರಲಿದೆ.

ರಿವರ್ಸ್ ಪಾರ್ಕಿಂಗ್‌ ಸೆನ್ಸರ್‌

ವಾಹನಗಳನ್ನು ಹಿಮ್ಮುಖವಾಗಿ ಚಲಾಯಿಸುವಾಗ ಅದಕ್ಕೆ ಅಡ್ಡವಾಗಿ ಯಾವುದೇ ವಸ್ತು, ವ್ಯಕ್ತಿ, ವಾಹನಗಳಿದ್ದಲ್ಲಿ ರಿವರ್ಸ್‌ ಪಾರ್ಕಿಂಗ್ ಸಂವೇದಕಗಳು ಚಾಲಕನಿಗೆ ಆ ಬಗ್ಗೆ ಎಚ್ಚರಿಕೆ ನೀಡುತ್ತವೆ. ಮನೆಯ ಬಳಿ ಹಿಮ್ಮುಖ ಚಾಲನೆ ಮಾಡುವಾಗ ಸಣ್ಣ ಮಕ್ಕಳು ಕಾರ್‌ಗಳಿಗೆ ಸಿಲುಕಿ ಮೃತಪಟ್ಟಿರುವ ಹಲವು ಅಪಘಾತಗಳು ದಾಖಲಾಗಿವೆ. ರಿವರ್ಸ್‌ ಪಾರ್ಕಿಂಗ್‌ ಸಂವೇದಕಗಳು ಇದ್ದಲ್ಲಿ, ಇಂತಹ ಅಪಘಾತಗಳನ್ನು ಗಣನೀಯ ಪ್ರಮಾಣದಲ್ಲಿ ತಪ್ಪಿಸಬಹುದು.

ಎಬಿಎಸ್‌

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಎಂಬುದರ ಸಂಕ್ಷಿಪ್ತ ರೂಪವೇ ಎಬಿಎಸ್‌. ಈ ವ್ಯವಸ್ಥೆ ಇಲ್ಲದ ಕಾರ್/ವಾಹನಗಳಲ್ಲಿ ಬ್ರೇಕ್‌ ಒತ್ತಿದಾಗ ಸ್ಟೀರಿಂಗ್‌ ತಿರುಗಿಸಲಾಗದಂತೆ ಚಕ್ರಗಳು ಲಾಕ್‌ ಆಗುತ್ತವೆ. ಆಗ ಬ್ರೇಕ್‌ ಒತ್ತಿದ ಕ್ಷಣದಿಂದ ನಿಲ್ಲುವವರೆಗೂ ವಾಹನ ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುತ್ತದೆ. ಎಬಿಎಸ್‌ ಇದ್ದಲ್ಲಿ ಚಕ್ರಗಳು ಮತ್ತು ಸ್ಟೀರಿಂಗ್‌ ಲಾಕ್ ಆಗದಂತೆ ತಡೆಯುತ್ತದೆ. ಆಗ ಬ್ರೇಕ್‌ ಒತ್ತಿಕೊಂಡಿದ್ದಾಗಲೂ (ಸ್ಕಿಡ್‌ ಆಗುತ್ತಿದ್ದಾಗಲೂ) ಕಾರ್‌ನ ದಿಕ್ಕನ್ನು ಬದಲಿಸಬಹುದು. ತುರ್ತು ಬ್ರೇಕಿಂಗ್‌ನಲ್ಲಿ ಇದು ಹೆಚ್ಚಿನ ನೆರವಿಗೆ ಬರುತ್ತದೆ. ಜತೆಗೆ ಬ್ರೇಕಿಂಗ್‌ ಡಿಸ್ಟನ್ಸ್ (ಬ್ರೇಕ್‌ ಒತ್ತಿದ ಜಾಗದಿಂದ ಕಾರ್‌ ನಿಂತ ಜಾಗದ ನಡುವಿನ ಅಂತರ) ಕಡಿಮೆ ಆಗುತ್ತದೆ. ಈ ಕಾರಣದಿಂದ ಸಂಭವನೀಯ ಅಪಘಾತಗಳನ್ನು ತಪ್ಪಿಸಲು ಹೆಚ್ಚಿನ ಅವಕಾಶ ದೊರೆಯುತ್ತದೆ. ಭಾರತದಲ್ಲಿ ಮಾರಾಟವಾಗುವ ಬಹುತೇಕ ಎಲ್ಲಾ ಕಾರ್‌ಗಳ ಕಡಿಮೆ ಬೆಲೆಯ (ಬೇಸ್‌ ವೇರಿಯೆಂಟ್) ಮತ್ತು ಮಧ್ಯಮ ಬೆಲೆಯ ಅವತರಣಿಕೆಗಳಲ್ಲಿ ಎಬಿಎಸ್‌ ಇರುವುದಿಲ್ಲ. ಹೀಗಾಗಿ ಇದನ್ನು ಕಡ್ಡಾಯ ಮಾಡಲಾಗಿದೆ.

ಏರ್‌ಬ್ಯಾಗ್

ಭಾರತದಲ್ಲಿ ಸಂಭವಿಸುವ ಹೆಚ್ಚಿನ ಅಪಘಾತಗಳಲ್ಲಿ ಚಾಲಕನ ಎದೆ ಸ್ಟೀರಿಂಗ್‌ಗೆ ಮತ್ತು ಮುಂಬದಿ ಪ್ರಯಾಣಿಕನ ತಲೆ ಕಾರ್‌ನ ಡ್ಯಾಷ್‌ಬೋರ್ಡ್‌ಗೆ ಅಪ್ಪಳಿಸಿ ಅವರು ಮೃತಪಡುತ್ತಾರೆ. ಏರ್‌ಬ್ಯಾಗ್‌ಗಳು ಇದ್ದಲ್ಲಿ ಸ್ಟೀರಿಂಗ್ ಮತ್ತು ಡ್ಯಾಷ್‌ಬೋರ್ಡ್‌ಗೆ ಅಪ್ಪಳಿಸುವುದನ್ನು ತಡೆಯುತ್ತವೆ. ಹೀಗಾಗಿ ಸ್ಟೀರಿಂಗ್ ಮತ್ತು ಡ್ಯಾಷ್‌ಬೋರ್ಡ್‌ನಲ್ಲಿ ಕನಿಷ್ಠ ಒಂದೊಂದು ಏರ್‌ಬ್ಯಾಗ್‌ಗಳು ಇರಲೇಬೇಕು.

ವೇಗ ಹೆಚ್ಚಿದರೆ ಎಚ್ಚರಿಕೆ

ಕಾರ್‌ಗಳು 80 ಕಿ.ಮೀ/ಗಂಟೆ ವೇಗ ಮುಟ್ಟಿದರೆ ಕಾರ್‌ ಒಳಗೆ ಬೀಪ್‌ ಸದ್ದು ಬರಬೇಕು. ಇದು ಸೀಟ್‌ ಬೆಲ್ಟ್‌ ರಿಮೈಂಡರ್‌ ಸದ್ದಿಗಿಂತ ಭಿನ್ನವಾಗಿರಬೇಕು. ಅಲ್ಲದೆ 100 ಕಿ.ಮೀ/ವೇಗ ದಾಟಿದರೆ ಬೀಪ್‌ನ ಸದ್ದು ಹೆಚ್ಚಾಗಬೇಕು ಮತ್ತು ಎರಡು ಬೀಪ್‌ಗಳ ನಡುವಣ ಅಂತರ ಕಡಿಮೆಯಾಗಬೇಕು ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. 2013ರಿಂದ 2015ರಲ್ಲಿ ಹೆದ್ದಾರಿಗಳಲ್ಲಿ ಸಂಭವಿಸದ ಅಪಘಾತಕ್ಕೆ ಕಾರಣವಾದ ಕಾರ್‌ಗಳು 80 ಕಿ.ಮೀ/ಗಂಟೆಗಿಂತಲೂ ಹೆಚ್ಚಿನ ವೇಗದಲ್ಲಿದ್ದವು ಎಂಬುದು ದತ್ತಾಂಶ ವಿಶ್ಲೇಷಣೆಯಿಂದ ತಿಳಿದು ಬಂದಿದೆ. ಹೀಗಾಗಿ ವೇಗ ಹೆಚ್ಚಾದರೆ ಚಾಲಕನಿಗೆ ಮತ್ತು ಪ್ರಯಾಣಿಕರ ಗಮನಕ್ಕೆ ಅದು ಬರಬೇಕು. ಒಂದೊಮ್ಮೆ ಚಾಲಕ ಅದನ್ನು ನಿರ್ಲಕ್ಷಿಸಿದರೂ, ಪ್ರಯಾಣಿಕರು ಚಾಲಕನನ್ನು ಆ ಬಗ್ಗೆ ಎಚ್ಚರಿಸಲು ಅವಕಾಶ ಇರುತ್ತದೆ

ಸೀಟ್‌ಬೆಲ್ಟ್‌ ರಿಮೈಂಡರ್‌

ಇನ್ನು ಭಾರತದಲ್ಲಿ ಬಹುತೇಕ ಜನ ಕಾರ್‌ನಲ್ಲಿ ಪ್ರಯಾಣಿಸುವಾಗ ಸೀಟ್‌ಬೆಲ್ಟ್‌ ಧರಿಸುವುದಿಲ್ಲ. ಇದು ಕಾರ್‌ ಒಂದರ ಪ್ರಾಥಮಿಕ ಸುರಕ್ಷತಾ ಸವಲತ್ತು. ದಿಢೀರ್‌ ಬ್ರೇಕಿಂಗ್, ಡಿಕ್ಕಿ, ತಲೆಕೆಳಗಾದಾಗ ಸೀಟ್‌ ಬೆಲ್ಟ್‌ ಧರಿಸಿದ್ದರೆ ಸಾವು ಮತ್ತು ಗಾಯಗಳು ಆಗದಂತೆ ಪಾರಾಗಬಹುದು. ಹೀಗಾಗಿ ಸೀಟ್‌ಬೆಲ್ಟ್‌ ಧರಿಸಿರದಿದ್ದರೆ, ಬೀಪ್‌ ಸದ್ದಿನ ಮೂಲಕ ಚಾಲಕ ಮತ್ತು ಪ್ರಯಾಣಿಕರಿಗೆ ಎಚ್ಚರಿಕೆ ನೀಡುವ ವ್ಯವಸ್ಥೆ ಇರಬೇಕು. ಅಂತಹ ವ್ಯವಸ್ಥೆ ಇದ್ದಲ್ಲಿ, ಕೆಲವರಾದರೂ ಸೀಟ್‌ಬೆಲ್ಟ್‌ ಧರಿಸುತ್ತಾರೆ ಎಂಬುದು ಸರ್ಕಾರದ ಆಶಯವಾಗಿದೆ.

ಪಾದಚಾರಿಗಳ ಸುರಕ್ಷತೆ

ನಮ್ಮ ದೇಶದಲ್ಲಿ ರಸ್ತೆಗಳಲ್ಲಿ ವಾಹನಗಳಿಗೆ ಸಿಲುಕಿ ಮೃತಪಡುವ ಪಾದಚಾರಿಗಳ ಸಂಖ್ಯೆ ಬಹಳ ದೊಡ್ಡದಿದೆ. ಹೀಗಾಗಿ ವಾಹನ ಸುರಕ್ಷತಾ ನಿಯಮಗಳಲ್ಲಿ ಪಾದಚಾರಿಗಳ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ.ಇದರ ಅನ್ವಯ ಕಾರ್‌ಗಳ ಮುಂಬದಿಯ ಬಂಪರ್‌ನ ವಿನ್ಯಾಸ ಈಗಿನದಕ್ಕಿಂತ ಬದಲಾಗಬೇಕಾಗುತ್ತದೆ. ಬಂಪರ್‌ಗಳು ತೆಳುವಾಗಿರಬೇಕು ಮತ್ತು ಡಿಕ್ಕಿ ಸಂಭವಿಸಿದಾಗ ಪಾದಚಾರಿ, ಪ್ರಾಣಿಗಳು ಮೇಲಕ್ಕೆ ಚಿಮ್ಮಿ ಕಾರ್‌ನ ಬಾನೆಟ್‌ ಮತ್ತು ಮುಂಬದಿಯ ಗಾಜಿನ ಮೇಲೆ ಬೀಳುವಂತಿರಬೇಕು. ಅಪಘಾತದ ಸಂದರ್ಭದಲ್ಲಿ ಹೀಗಾದಲ್ಲಿ ಪಾದಚಾರಿಗಳಿಗೆ/ಪ್ರಾಣಿಗಳಿಗೆ ಮಾರಣಾಂತಿಕ ಗಾಯಗಳಾಗುವುದಿಲ್ಲ. ಬದಲಿಗೆ ಪಾದಚಾರಿ ಮತ್ತು ಪ್ರಾಣಿಗಳು ಡಿಕ್ಕಿ ವೇಳೆ ಕಾರ್‌ನ ಕೆಳಕ್ಕೆ ಹೋದರೆ, ಪಾದಚಾರಿಗಳು/ಪ್ರಾಣಿಗಳಿಗೆ ಹೆಚ್ಚು ಗಾಯವಾಗುವ ಮತ್ತು ಸಾವು ಸಂಭವಿಸುವ ಅಪಾಯವಿರುತ್ತದೆ.

ಆಧಾರ: ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT