ಕಾರು ಮುಳುಗಿದಾಗ ಎಚ್ಚರವಿರಲಿ

7

ಕಾರು ಮುಳುಗಿದಾಗ ಎಚ್ಚರವಿರಲಿ

Published:
Updated:
ನೀರಿನಲ್ಲಿ ಮುಳುಗಿರುವ ಕಾರುಗಳು

ಈಗ ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಇತ್ತೀಚೆಗೆ ಕರವಾಳಿ ಭಾಗದ ನಗರಗಳಲ್ಲಿ ಭಾರಿ ಮಳೆಯಾಗಿ ತಗ್ಗು ಪ್ರದೇಶದ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿ, ಕಾರುಗಳು ಮುಳುಗಡೆಯಾದ ಸುದ್ದಿಯಾಗಿತ್ತು. ಕಾರು ಮಳೆನೀರಿನಲ್ಲಿ ಮುಳುಗಡೆಯಾಗುವುದು ದೊಡ್ಡ ಅವಘಡವೇ ಸರಿ.

ಮಳೆನೀರಿನಲ್ಲಿ ಮುಳುಗಿದ ಕಾರುಗಳನ್ನು ರಿಪೇರಿ ಮಾಡಿಸುವುದು ದೊಡ್ಡ ಖರ್ಚಿನ ಬಾಬತ್ತು. ಕಾರು ನೀರಲ್ಲಿ ಮುಳುಗಿದಾಗ ಕೈಗೊಳ್ಳಬೇಕಾದ ಕ್ರಮಗಳನ್ನು ಕಡೆಗಣಿಸಿದರೆ, ರಿಪೇರಿ ಖರ್ಚು ಹೆಚ್ಚುತ್ತದೆ. ಹಲವು ಸಂದರ್ಭಗಳಲ್ಲಿ ವಿಮೆ ಹಣ ಪಡೆದುಕೊಂಡು, ಇಡೀ ಕಾರನ್ನು ಗುಜರಿಗೆ ಹಾಕಬೇಕಾಗುತ್ತದೆ.

ಕಾರು ಮುಳುಗಿದಾಗ ಏನೇನು ಮಾಡಬೇಕು ಎಂಬುದನ್ನು ತಯಾರಕರು ಕಾರಿನ ಬಳಕೆದಾರರ ಕೈಪಿಡಿಯಲ್ಲಿ ವಿವರಿಸಿರುತ್ತಾರೆ. ಮುಳುಗಿದಾಗ ಏನೇನು ಮಾಡಬಾರದು ಎಂಬುದನ್ನು ಕಾರಿನ ವಿಮಾ ಪಾಲಿಸಿಯಲ್ಲಿ ವಿವರಿಸಲಾಗಿರುತ್ತದೆ. 

ಬ್ಯಾಟರಿ ಡಿಸ್ಕನೆಕ್ಟ್ ಮಾಡಿ

ಕಾರು ನೀರಿನಲ್ಲಿ ಮುಳುಗಡೆಯಾಗುತ್ತದೆ, ಅದು ನಿಂತಿರುವ ಜಾಗದಿಂದ ಹೊರ ತೆಗೆಯಲು ಸಾಧ್ಯವಿಲ್ಲ ಎಂದು ಗೊತ್ತಾದ ಕೂಡಲೇ ಕಾರಿನ ಬ್ಯಾಟರಿಯನ್ನು ಡಿಸ್ಕನೆಕ್ಟ್ ಮಾಡಬೇಕು. ಕಾರಿನ ಎಂಜಿನ್ ಬೇಯಲ್ಲಿರುವ ಬ್ಯಾಟರಿಗೆ – (ಕಪ್ಪು) ಮತ್ತು + (ಕೆಂಪು) ವೈರ್‌ಗಳನ್ನು ಜೋಡಿಸಲಾಗಿರುತ್ತದೆ. ಅವುಗಳ ನಟ್‌ಗಳನ್ನು ಸಡಿಲ ಮಾಡಿ, ಆ ವೈರ್‌ಗಳನ್ನು ತೆಗೆಯಬೇಕು.

ಡಿಸ್ಕನೆಕ್ಟ್ ಮಾಡದಿದ್ದರೆ ಕಾರಿನಲ್ಲಿರುವ ವಿದ್ಯುನ್ಮಾನ ಉಪಕರಣಗಳಿಗೆ ಹಾನಿಯಾಗುತ್ತವೆ. ಈಗಿನ ಕಾರುಗಳಲ್ಲಿ ಶೇ 90ಕ್ಕೂ ಹೆಚ್ಚು ಪ್ರಕ್ರಿಯೆಗಳು ಎಲೆಕ್ಟ್ರಾನಿಕ್ಸ್ ಉಪಕರಣಗಳು ಮತ್ತು ಸಂವೇದಕಗಳಿಂದಲೇ ನಡೆಯುತ್ತವೆ. ಕಾರು ನೀರಿನಲ್ಲಿ ಮುಳುಗಿದ್ದಾಗ, ಬ್ಯಾಟರಿ ಕನೆಕ್ಟ್ ಆಗಿದ್ದರೆ ಆ ಉಪಕರಣಗಳೆಲ್ಲವೂ ಚಾಲನೆಗೊಂಡು ಹಾಳಾಗುತ್ತವೆ.

ಒಂದೊಂದು ಸಂವೇದಕಗಳ ಬೆಲೆಯೇ ಸಾವಿರಾರು ರೂಪಾಯಿ. ಅವುಗಳನ್ನೆಲ್ಲಾ ಬದಲಿಸಲು ಕಾರಿನ ಬೆಲೆಯ ಅರ್ಧದಷ್ಟು ಖರ್ಚಾಗುತ್ತದೆ. ಹೀಗಾಗಿ ಬ್ಯಾಟರಿ ಡಿಸ್ಕನೆಕ್ಟ್ ಮಾಡುವುದರಿಂದ ರಿಪೇರಿ ಖರ್ಚನ್ನು ಉಳಿಸಬಹುದು.

ಕಾರಿನ ಸೈಲೆನ್ಸರ್ ಮತ್ತು ಏರ್‌ಫಿಲ್ಟರ್‌ ಬ್ಲಾಕ್ ಮಾಡಿ: ಕಾರು ನೀರಿನಲ್ಲಿ ಮುಳಗಿದಾಗ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಹೊರತುಪಡಿಸಿ ಹೆಚ್ಚು ಹಾನಿಯಾಗುವುದು ಎಂಜಿನ್‌ ಮತ್ತು ಗಿಯರ್‌ ಬಾಕ್ಸ್‌ಗೆ. ಎಂಜಿನ್‌ ನೀರು ಹೋಗಲು ಎರಡು ಜಾಗಗಳಿರುತ್ತವೆ. ಒಂದು ಸೈಲೆನ್ಸರ್, ಮತ್ತೊಂದು ಏರ್‌ಫಿಲ್ಟರ್‌. ಏರ್‌ಫಿಲ್ಟರ್‌ನ ಬಾಯಿ ಕಾರಿನ ಎಂಜಿನ್ ಬೇನಲ್ಲಿ ಇರುತ್ತದೆ.

ಅದರ ಬಾಯಿಯನ್ನು ಉಂಡೆಮಾಡಿದ ರಬ್ಬರ್ ಅಥವಾ ಪ್ಲಾಸ್ಟಿಕ್ ಹಾಳೆಗಳನ್ನು ಬಳಸಿ ಮುಚ್ಚಿದರೆ, ಎಂಜಿನ್‌ಗೆ ಹೋಗುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಸೈಲನ್ಸರ್ ಅನ್ನೂ ಅದೇ ರೀತಿ ಬ್ಲಾಕ್ ಮಾಡಿದರೆ ನೀರು ಎಂಜಿನ್‌ಗೆ ಹೋಗುವುದನ್ನು ತಡೆಯಬಹುದು. ಹೀಗೆ ಮಾಡುವುದರಿಂದ ಎಂಜಿನ್‌ನ ರಿಪೇರಿ ಖರ್ಚು ಉಳಿಸಬಹುದು.

ಸ್ಟಾರ್ಟ್ ಮಾಡಬೇಡಿ

ನೀರೆಲ್ಲಾ ಇಳಿದುಹೋದ ಮೇಲೆ ಕಾರನ್ನು ಸ್ಟಾರ್ಟ್ ಮಾಡುವ ಪ್ರಯತ್ನ ಮಾಡಲೇಬೇಡಿ. ಸರ್ವಿಸ್ ಸೆಂಟರ್‌ಗೆ ಕರೆ ಮಾಡಿ, ತಜ್ಞರನ್ನು ಕರೆಸಿ. ಅವರು ಲಿಖಿತ ಅನುಮತಿ ನೀಡಿದ ನಂತರವಷ್ಟೇ ಕಾರನ್ನು ಸ್ಟಾರ್ಟ್ ಮಾಡಲು ಪ್ರಯತ್ನಿಸಿ. ಹೆಚ್ಚು ಹಾನಿಯಾಗಿದೆ ಎಂದು ನಿಮಗೆ ಅನ್ನಿಸಿದರೆ, ಕಾರನ್ನು ಸರ್ವಿಸ್ ಸೆಂಟರ್‌ಗೆ ಟೋ ಮಾಡಿಕೊಂಡು ಹೋಗಿ.

ಅಲ್ಲಿ ಎಂಜಿನ್ ಆಯಲ್, ಗಿಯರ್ ಬಾಕ್ಸ್ ಆಯಿಲ್, ಕ್ಲಚ್‌ ಆಯಿಲ್ ಮತ್ತು ಬ್ರೇಕ್ ಫ್ಲೂಡ್‌ ಅನ್ನು ತೆಗೆಸಿ, ಅವಕ್ಕೆಲ್ಲಾ ಹೊಸ ಆಯಿಲ್‌ಗಳನ್ನು ಬಳಸಿ. ಎಂಜಿನ್‌ನಲ್ಲಿ, ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಶೇಖರವಾಗಿದ್ದ ನೀರೆಲ್ಲಾ ಒಣಗಿ ಮೇಲೆ, ಅವನ್ನೆಲ್ಲಾ ಮತ್ತಷ್ಟು ಒಣಗಿಸಿ ಸ್ಟಾರ್ಟ್‌ ಮಾಡಲು ಪ್ರಯತ್ನಿಸಿ. ಇವನ್ನೆಲ್ಲಾ ಸರ್ವಿಸ್ ಅಡ್ವೈಸರ್‌ ಮತ್ತು ಮೆಕ್ಯಾನಿಕ್‌ಗಳೇ ಮಾಡುತ್ತಾರೆ.

ಆದರೆ ಅವೆಲ್ಲಾ ನಿಮ್ಮ ಸಮ್ಮುಖದಲ್ಲಿ ಆಗಬೇಕಷ್ಟೆ. ನೀರಿನಿಂದ ತೆಗೆದ ಕಾರನ್ನು ನೀವು ಸ್ಟಾರ್ಟ್ ಮಾಡಲು ಪ್ರಯತ್ನಿಸಿರದಿದ್ದರೆ, ಈ ಮೇಲಿನ ಎಲ್ಲಾ ಕೆಲಸಗಳಿಗೆ ವಿಮಾ ಕಂಪನಿಯೇ ಹಣ ಪಾವತಿ ಮಾಡುತ್ತದೆ. ಇಲ್ಲದಿದ್ದಲ್ಲಿ ಆ ಖರ್ಚನ್ನು ನೀವೇ ಭರಿಸಬೇಕಾಗುತ್ತದೆ. ಹೀಗಾಗಿ ಸರ್ವಿಸ್ ಸೆಂಟರ್‌ಗೆ ಕರೆ ಮಾಡುವುದರ ಜತೆಗೆ, ವಿಮಾ ಏಜೆಂಟರಿಗೂ ಕರೆ ಮಾಡಿ ವಿಷಯ ತಿಳಿಸಿ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !