ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಥ ರಸ್ತೆಗೂ ಸೈ ಡಿಸ್ಕವರಿ ಸ್ಫೋರ್ಟ್ಸ್

Last Updated 14 ನವೆಂಬರ್ 2018, 19:45 IST
ಅಕ್ಷರ ಗಾತ್ರ

ಆಫ್‌ರೋಡಿಂಗ್ ಸಾಹಸಗಳಿಗೆ ಲ್ಯಾಂಡ್‌ ರೋವರ್ ಎಸ್‌ಯುವಿಗಳು ಖ್ಯಾತಿ. ಆಳುದ್ದದ ನೀರಿರಲಿ, ಕಡಿದಾದ ಬೆಟ್ಟವಿರಲಿ ಅವುಗಳನ್ನು ನಿರಯಾಸವಾಗಿ ಏರಿಳಿಯುವ ತಾಕತ್ತು ಈ ಎಸ್‌ಯುವಿಗಳಿವೆ. ಅಂಥ ಎಸ್‌ಯುವಿಯಲ್ಲಿ ಲ್ಯಾಂಡ್‌ ರೋವರ್ ಡಿಸ್ಕವರಿ ಸ್ಪೋರ್ಟ್ಸ್ ಸಹ ಒಂದು.

ಬಹಳ ವರ್ಷಗಳಿಂದ ಈ ಎಸ್‌ಯುವಿ ಮಾರುಕಟ್ಟೆಯಲ್ಲಿ ಇದೆಯಾದರೂ ಈಚೆಗಷ್ಟೇ ಅದರ ಫೇಸ್‌ಲಿಫ್ಟ್ ಅವತರಣಿಕೆಯನ್ನು ಲ್ಯಾಂಡ್‌ರೋವರ್ ಭಾರತದಲ್ಲಿ ಬಿಡುಗಡೆ ಮಾಡಿತ್ತು. ಕಂಪನಿಯ ಆಹ್ವಾನದ ಮೇರೆಗೆ ‘ಪ್ರಜಾವಾಣಿ’ ಡಿಸ್ಕವರಿ ಸ್ಪೋರ್ಟ್ಸ್ ಅನ್ನು ಚಲಾಯಿಸಿತು. ಆಫ್‌ರೋಡಿಂಗ್ ಅಷ್ಟೇ ಅಲ್ಲದೆ, ನಗರ-ಹೆದ್ದಾರಿ ಚಾಲನೆಯನ್ನೂ ಪರೀಕ್ಷಿಸಲಾಯಿತು

ಡಿಸ್ಕವರಿ ಸ್ಪೋರ್ಟ್ಸ್ ನೋಡಲು ಮುದ್ದಾಗಿರುವ ಮತ್ತು ಆಕರ್ಷಕವಾಗಿರುವ ಎಸ್‌ಯುವಿ. ಆದರೆ ಅದರ ನೋಟ ಮತ್ತು ಶಕ್ತಿಸಾಮರ್ಥ್ಯಗಳಿಗೆ ಹೋಲಿಕೆಯೇ ಇಲ್ಲ. ಲ್ಯಾಂಡ್‌ ರೋವರ್‌ನ ಎಲ್ಲಾ ಎಸ್‌ಯುವಿಗಳಿಗೂ ಇದು ಅನ್ವಯವಾಗುತ್ತದೆ. ಆ ಶಕ್ತಿಯನ್ನು ಚಲಾಯಿಸಿಯೇ ಅನುಭವಿಸಬೇಕು.

2ಸಾವಿರ ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಇರುವ ಎಸ್‌ಯುವಿಯನ್ನು ನಮಗೆ ನೀಡಲಾಗಿತ್ತು. ಈ ಎಂಜಿನ್ ಬರೋಬ್ಬರಿ 240 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಅತ್ಯುತ್ತಮ ಎನ್ನಿಸಿಬಹುದಾದಷ್ಟು 340 ನ್ಯೂಟನ್ ಮೀಟರ್‌ನಷ್ಟು ಟಾರ್ಕ್ ಉತ್ಪಾದಿಸುತ್ತದೆ. ಹೀಗಾಗಿ ಇದು ಪೆಟ್ರೋಲ್ ಎಸ್‌ಯುವಿಯಾದರೂ ಶಕ್ತಶಾಲಿಯಾಗಯೇ ಇದೆ.

ಇದರಲ್ಲಿ 9 ಗಿಯರ್‌ಗಳ ಝಡ್‌ಎಫ್ ಆಟೊಮ್ಯಾಟಿಕ್ ಗಿಯರ್‌ಬಾಕ್ಸ್ ಇದೆ. ಇದು ನಯವಾದ ಮತ್ತು ಚುರುಕಾದ ಸವಾರಿಗೆ ಹೇಳಿಮಾಡಿಸಿದ ಗಿಯರ್ ಸಿಸ್ಟಂ. ಹೀಗಾಗಿ ನಗರದೊಳಗಿನ ಚಾಲನೆಯಲ್ಲಿ ಗಿಯರ್ ಬದಲಾಗುವುದು ಅನುಭವಕ್ಕೆ ಬರುವುದೇ ಇಲ್ಲ. ಹೆದ್ದಾರಿಯ ವೇಗದ ಚಾಲನೆಯಲ್ಲೂ ಗಿಯರ್ ನಯವಾಗೇ ಬದಲಾಗುತ್ತದೆ. ಇದು ಈ ಗಿಯರ್ ಬಾಕ್ಸ್‌ನ ಹೆಗ್ಗಳಿಕೆ.

ಡಿಸ್ಕವರಿ ಸ್ಪೋರ್ಟ್ಸ್‌ನಲ್ಲಿ ಎಕೊ, ನಾರ್ಮಲ್ ಮತ್ತು ಸ್ಪೋರ್ಟ್ಸ್ ಎಂಬ ವಿವಿಧ ಡ್ರೈವ್ ಮೋಡ್‌ಗಳು ಇವೆ. ಇವು ಎಂಜಿನ್‌ಗೆ ಇಂಧನ ಪೂರೈಕೆ ಮತ್ತು ಗಿಯರ್ ಬದಲಾವಣೆಯನ್ನು ನಿಯಂತ್ರಿಸುತ್ತವೆ. ಎಕೊ ಮೋಡ್‌ನಲ್ಲಿ ಗಿಯರ್ ಬೇಗನೆ ಬದಲಾಗುತ್ತವೆ ಮತ್ತು ಎಂಜಿನ್‌ಗೆ ಕಡಿಮೆ ಇಂಧನ ಇಂಜೆಕ್ಟ್ ಆಗುತ್ತದೆ. ಹೀಗಾಗಿ ಈ ಮೋಡ್‌ನಲ್ಲಿ ಇಂಧನ ಕಾರ್ಯಕ್ಷಮತೆ ಹೆಚ್ಚು. 100 ಕಿ.ಮೀ. ವೇಗದ ಆಸುಪಾಸಿನಲ್ಲೂ ಗರಿಷ್ಠ ಪರಮಾಣದ ಮೈಲೇಜ್
ಸಿಗುತ್ತದೆ.

ಇನ್ನು ನಾರ್ಮಲ್ ಮೋಡ್ ಕಂಪನಿಯಿಂದಲೇ ಡಿಫಾಲ್ಟ್ ಆಗಿಬರುವ ಮೋಡ್. ಎಂಜಿನ್ ಚಾಲೂ ಮಾಡಿದಾಗ ಅದು ಇದೇ ಮೋಡ್‌ನಲ್ಲಿ ಇರುತ್ತದೆ. ಇದು ಕ್ಷಮತೆ ಮತ್ತು ಶಕ್ತಿ ಎರಡರ ಹದವರಿತ ಸಂಯೋಜನೆ. ಒಳ್ಳೆಯ ಮೈಲೇಜ್ ಸಹ ಬರುತ್ತದೆ ಮತ್ತು ಬೇಕೆಂದಾಗ ಬೇಕಾದಷ್ಟು ಶಕ್ತಿಯೂ ಲಭ್ಯವಿರುತ್ತದೆ. ಹೀಗಾಗಿ ಚಾಲನೆಗೆ ಇದು ಹೇಳಿಮಾಡಿಸಿದ ಮೋಡ್.

ಇನ್ನು ಸ್ಪೋರ್ಟ್ಸ್ ಮೋಡ್ ಹೆಚ್ಚು ರೋಮಾಂಚನ ಕಾರಿಯಾದ ಅನುಭವ ನೀಡುತ್ತದೆ. ಎಂಜಿನ್ ಪೂರ್ಣ ಶಕ್ತಿ ಉತ್ಪಾದಿಸುವವರೆಗೂ ಗಿಯರ್ ಬದಲಾಗುವುದೇ ಇಲ್ಲ.ಹೀಗಾಗಿ ಪ್ರತಿ ಬಾರಿ ಗಿಯರ್ ಬದಲಾಗುವಾಗಲೂ ಡಿಸ್ಕವರಿ ಸ್ಪೋರ್ಟ್ಸ್ ಮೂತಿ ಎತ್ತಿಕೊಂಡು ಮುನ್ನುಗ್ಗುತ್ತಿರುತ್ತದೆ. ಆ ಜರ್ಕ್‌ನ ಅನುಭವ ಚಾಲಕನಿಗೆ-ಪ್ರಯಾಣಿಕನಿಗೆ ಆಗುತ್ತಲೇ ಇರುತ್ತದೆ. ಕೆಲವೇ ಕ್ಷಣಗಳಲ್ಲಿ ಎಸ್‌ಯುವಿ 100 ಕಿ.ಮೀ. ವೇಗದ ಗಡಿ ದಾಟುತ್ತಿರುತ್ತದೆ ಮತ್ತು ಅಷ್ಟೇ ತ್ವರಿತವಾಗಿ ಮತ್ತಷ್ಟು ವೇಗವನ್ನು ಪಡೆದುಕೊಳ್ಳುತ್ತದೆ. ಆದರೆ ನಮ್ಮ ಹೆದ್ದಾರಿಗಳಲ್ಲಿ ಇಷ್ಟು ಪ್ರಚಂಡ ಶಕ್ತಿಯ ಅವಶ್ಯಕತೆ ಇಲ್ಲ. ಹೀಗಾಗಿ ರೇಸಿಂಗ್ ಟ್ರ್ಯಾಕ್ ಅಥವಾ ಎಕ್ಸ್‌ಪ್ರೆಸ್‌ವೇಗಳಲ್ಲಿ ಮಾತ್ರ ಈ ಮೋಡ್‌ ಅನ್ನು ಬಳಸಿದರೆ ಸೂಕ್ತ.

ಇನ್ನು ಮ್ಯಾನುಯಲ್ ಮೋಡ್‌ನಲ್ಲಿ ಗಿಯರ್ ಅನ್ನು ಚಾಲಕನೇ ಬದಲಾಯಿಸಿಕೊಳ್ಳಲು ಅವಕಶಾವಿದೆ. ಇದಕ್ಕಾಗಿ ಸ್ಟೇರಿಂಗ್ ಬಳಿ ಪ್ಯಾಡಲ್ ಶಿಫ್ಟರ್ ನೀಡಲಾಗಿದೆ. ನಮಗೆ ಅಗತ್ಯವಿದ್ದಾಗ ಗಿಯರ್ ಬದಲಿಸಿದರೆ ಸಾಕು, ಎಸ್‌ಯುವಿ ನಮ್ಮ ಮಾತು ಕೇಳುತ್ತಿರುತ್ತದೆ. ಈ ಮೋಡ್‌ನಲ್ಲೂ ಚಾಲನೆಯ ಅನುಭವ ಚೆನ್ನಾಗಿದೆಯಾದರೂ, ನಾರ್ಮಲ್ ಮೋಡ್‌ನ ಅನುಭವ ಅಮೋಘ.

ಹೆದ್ದಾರಿಯ ವೇಗದ ಚಾಲನೆಯಲ್ಲೂ ಓಲಾಡದಂತೆ ಡಿಸ್ಕವರಿ ಸ್ಪೋರ್ಟ್ಸ್ ಚಲಿಸುತ್ತದೆ. ಭಾರಿ ವೇಗದಲ್ಲಿ ಲೇನ್ ಬದಲಾವಣೆ ಮಾಡಿದರೂ ಎಸ್‌ಯುವಿಯು ಚಾಲಕನ ನಿಯಂತ್ರಣದಲ್ಲೇ ಇರುತ್ತದೆ. ಲೋ ಪ್ರೊಫೈಲ್ ಟೈರ್ ಇರುವುದರಿಂದ ವೇಗದ ಚಾಲನೆಯಲ್ಲೂ ರಸ್ತೆಗೆ ಕಚ್ಚಿಕೊಂಡಂತೆಯೇ ಹೋಗುತ್ತದೆ. ಹೀಗಾಗಿ ಚಾಲಕ ನಿಯಂತ್ರಣ ಕಳೆದುಕೊಳ್ಳುವಂತಹ ಅನುಭವ ಆಗುವುದಿಲ್ಲ. ಬ್ರೇಕಿಂಗ್ ಸಹ ಉತ್ತಮವಾಗಿದೆ. ಬ್ರೇಕ್ ಪೆಡಲ್‌ನ ಫೀಡ್‌ಬ್ಯಾಕ್ ಕಡಿಮೆ ಇದ್ದು, ಲಾಂಗ್ ಥ್ರೋ ಇದೆ. ಹೀಗಾಗಿ ಅಭ್ಯಾಸ ಆಗುವವರೆಗೂ ಈ ಎಸ್‌ಯುವಿಯ ಬ್ರೇಕಿಂಗ್ ಡಿಸ್ಟೆನ್ಸ್‌ ಅನ್ನು ಅಂದಾಜಿಸುವುದು ಸ್ವಲ್ಪ ಕಷ್ಟ. ಅಭ್ಯಾಸವಾದ ನಂತರ ಈ ಕಿರಿಕಿರಿ ಇರುವುದಿಲ್ಲ. ಹೀಗಾಗಿ ಡಿಸ್ಕವರಿ ಸ್ಪೋರ್ಟ್ಸ್ ವೇಗದ ಚಾಲನೆಗೂ ಸೈ, ಅತ್ಯುತ್ತಮ ನಿಯಂತ್ರಣಕ್ಕೂ ಸೈ.

ಈ ಎಸ್‌ಯುವಿಯಲ್ಲಿರುವ ಟೆರೇನ್ ರೆಸ್ಪಾನ್ಸ್ ಸಿಸ್ಟಂ ಮತ್ತು ಡೈನಮಿಕ್ ಸ್ಟೆಬಿಲಿಟಿ ಕಂಟ್ರೋಲ್‌ಗಳ ಕೊಡುಗೆ ನಿಯಂತ್ರಣದ ವಿಚಾರದಲ್ಲಿ ಮಹತ್ವದ್ದು.

ಒಟ್ಟಿನಲ್ಲಿ ಆರಾಮ, ವೇಗ, ಐಷಾರಾಮ ಮತ್ತು ಸಾಹಸಮಯ ಚಾಲನಗೆ ಹೇಳಿ ಮಾಡಿಸಿದ ಎಸ್‌ಯುವಿ ಡಿಸ್ಕವರಿ ಸ್ಪೋರ್ಟ್ಸ್.

ಬಾಕ್ಸ್

ಲ್ಯಾಂಡ್ ರೋವರ್ ಎಂದರೆ ಟೆರೇನ್ ರೆಸ್ಪಾನ್ಸ್ ಸಿಸ್ಟಂ !

ಎಂಥಹದ್ದೇ ಕಚ್ಚಾ ರಸ್ತೆ, ರಸ್ತೆ ಇಲ್ಲದೆಡೆಯೂ ಕೂಡ ಸಲೀಸಾಗಿ ಸಾಗುವುದಕ್ಕೆಲ್ಯಾಂಡ್‌ರೋವರ್ ವಾಹನಗಳು ಹೆಸರುವಾಸಿ.

ಬೇರೆಲ್ಲಾ ಆಫ್‌ರೋಡ್‌ ವಾಹನಗಳು ಬಳಸುವಂತೆ ಲೋ ಗಿಯರ್ ಟ್ರಾನ್ಸವರ್‌ ಕೇಸ್ ಮತ್ತು ಡಿಫರೆನ್ಷಿಯಲ್ ಲಾಕ್‌ಗಳನ್ನುಲ್ಯಾಂಡ್‌ರೋವರ್ ಬಳಸುವುದಿಲ್ಲ. ಬದಲಿಗೆ ಮರಳು, ಹಿಮ, ಸಡಿಲ ಮಣ್ಣು, ಬಂಡೆಗಲ್ಲುಗಳು ಇರುವ ಕಡೆ ಚಲಾಯಿಸಲು ಪ್ರತ್ಯೇಕ ಆಯ್ಕೆಗಳಿರುವ ಟೆರೇನ್ ರೆಸ್ಪಾನ್ಸ್ ಸಿಸ್ಟಂ ಅನ್ನು ಈ ಎಸ್‌ಯುವಿಗಳು ಬಳಸುತ್ತವೆ.

ಟೆರೇನ್ ರೆಸ್ಪಾನ್ಸ್ ಸಿಸ್ಟಂ (ಟಿಆರ್‌ಎಸ್) ಎನ್ನುವುದು ಒಂದು ಕಂಪ್ಯೂಟರ್ ನಿಯಂತ್ರಿತ ವ್ಯವಸ್ಥೆ. ಎಸ್‌ಯುವಿಯ ಪ್ರತಿ ಚಕ್ರಕ್ಕೆ ಎಷ್ಟು ಶಕ್ತಿ ರವಾನೆ ಮಾಡಬೇಕು. ಯಾವ ಚಕ್ರಕ್ಕೆ ಶಕ್ತಿ ರವಾನೆ ಮಾಡಬಾರದು ಎಂಬುದನ್ನು ಟಿಆರ್‌ಎಸ್ ನಿರ್ಧರಿಸುತ್ತದೆ. ಇತರ ಮ್ಯಾನ್ಯುಯಲ್ ಆಫರೋಡ್ ವಾಹನಗಳಲ್ಲಿ ಇದನ್ನು ಡಿಫರೆನ್ಷಿಯಲ್ ಲಾಕ್‌ಗಳನ್ನು ಬಳಸಿ, ಚಾಲಕನೇ ನಿಯಂತ್ರಣ ಸಾಧಿಸಬೇಕಾಗುತ್ತದೆ. ಈ ತಂತ್ರಜ್ಞಾನವನ್ನು ಮೊದಲು ಅಭಿವೃದ್ಧಿಪಡಿಸಿದ್ದುಲ್ಯಾಂಡ್‌ರೋವರ್ಎಂಜಿನಿಯರ್‌ಗಳೇ. ಇತರ ಎಸ್‌ಯುವಿ ತಯಾರಕ ಕಂಪೆನಿಗಳೂ ಡ್ರೈವಿಂಗ್ ಮೋಡ್‌ಗಳನ್ನು ಅಭಿವೃದ್ಧಿಪಡಿಸಿವೆಯಾದರೂ, ಟಿಆರ್‌ಎಸ್‌ನಷ್ಟು ಚಾಕಚಕ್ಯತೆ ಅವುಗಳಿಗಿಲ್ಲ. ಇತರ ಕಂಪೆನಿಗಳ ಡ್ರೈವ್‌ ಮೋಡ್‌ಗಳು ಎಂಜಿನ್ ಶಕ್ತಿ, ಗಿಯರ್ ಬದಲಾವಣೆ ಮತ್ತು ಟ್ರಾಕ್ಷನ್ ಕಂಟ್ರೋಲ್‌ ಅನ್ನು ಮಾತ್ರ ಬದಲಿಸುತ್ತವೆ. ಆದರೆ ಟಿಆರ್‌ಎಸ್ ಈ ಮೂರರ ಜತೆಗೆ ಎಸ್‌ಯುವಿಯ ಸಸ್ಪೆನ್ಷನ್ ಮತ್ತು ಸ್ಟೀರಿಂಗ್ ನಿಯಂತ್ರಣವನ್ನೂ ಅಗತ್ಯಕ್ಕೆ ತಕ್ಕಂತೆ ಬದಲಿಸುತ್ತದೆ. ಹೀಗಾಗಿಯೇ ಟಿಆರ್‌ಎಸ್ ಹೆಚ್ಚು ಚಾಕಚಕ್ಯತೆಯ ತಂತ್ರಜ್ಞಾನ ಎನಿಸಿದೆ.

ಟಿಆರ್‌ಎಸ್‌ನಲ್ಲಿ ಗ್ರಾಸ್-ಗ್ರಾವೆಲ್-ಸ್ನೋ, ರಾಕ್ ಕ್ರಾವ್ಲ್‌, ಮಡ್ ಅಂಡ್ ರಟ್ಸ್, ಆಟೊ ಮತ್ತು ಜನರಲ್ ಎಂಬ ಆಯ್ಕೆಗಳಿವೆ. ಜನರಲ್ ಆಯ್ಕೆ, ಸಾಮಾನ್ಯ ರಸ್ತೆಗಳಲ್ಲಿನ ಚಾಲನೆಗೆ ಬಳಕೆಯಾಗುತ್ತದೆ. ಆಟೊ ಆಯ್ಕೆ ಮಾಡಿದ್ದಲ್ಲಿ, ರಸ್ತೆಯ ಪರಿಸ್ಥಿತಿಯನ್ನು ತಾನೇ ಲೆಕ್ಕಹಾಕಿ-ವಿಶ್ಲೇಷಿಸಿ ಎಂಜಿನ್ ಶಕ್ತಿ, ಸಸ್ಪೆನ್ಷನ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಸ್ಟೀರಿಂಗ್ ನಿಯಂತ್ರಣವನ್ನು ವಾಹನವೇ ಬದಲಿಸಿಕೊಳ್ಳುತ್ತಿರುತ್ತದೆ.

ಗ್ರಾಸ್ ಮೋಡ್‌ನಲ್ಲಿ ಚಕ್ರಗಳು ಹೆಚ್ಚು ತಿರುಗದಂತೆ ಟಿಆರ್‌ಎಸ್ ನಿಯಂತ್ರಿಸುತ್ತದೆ. ಹುಲ್ಲುಗಾವಲು, ಸಡಿಲ ಮಣ್ಣು ಮತ್ತು ಹಿಮಚ್ಛಾದಿತ ರಸ್ತೆಗಳಲ್ಲಿ ಚಾಲನೆಗೆ ಇದು ಹೇಳಿಮಾಡಿಸಿದ ಮೋಡ್. ಇಲ್ಲಿ ಚಕ್ರಗಳು ನಿಂತಲ್ಲೇ ರಸ್ತೆ ಹಿಡಿತ ಇಲ್ಲದಂತೆ ತಿರುಗುವುದನ್ನು ಟಿಆರ್ ಎಸ್ ತಡೆಯುತ್ತದೆ. ಹೀಗಾಗಿ ಡಿಸ್ಕವರಿ ಸ್ಫೋರ್ಟ್ಸ್ ಅತ್ತಿತ್ತ ಎಳೆದಾಡದೆ ಚಲಿಸುತ್ತದೆ.

ಮಡ್ ಅಂಡ್ ರಟ್ಸ್‌ನಲ್ಲಿ ಚಕ್ರಕ್ಕೆ ಹೆಚ್ಚು ಶಕ್ತಿ ರವಾನೆಯಾಗುತ್ತದೆ. ಹಳ್ಳ-ಕೊಳ್ಳ ಬಿದ್ದ, ರಸ್ತೆಯೇ ಇಲ್ಲದ ಜಾಗಗಳಲ್ಲಿ ಚಾಲನೆಗೆ ಹೇಳಿ ಮಾಡಿಸಿದ ಮೋಡ್ ಇದು. ಈ ಮೋಡ್‌ನಲ್ಲಿದ್ದಾಗ ಎಸ್‌ಯುವಿಯ ಎರಡು ಚಕ್ರಗಳು ಗಾಳಿಯಲ್ಲಿ ತೇಲುತ್ತಿದ್ದರೂ, ಉಳಿದ ಎರಡೇ ಚಕ್ರಗಳಲ್ಲಿ ಎಂಥಹದ್ದೇ ಕಡಿದಾದ ತಗ್ಗು-ಏರನ್ನೂ ಹತ್ತಿಳಿಯುತ್ತದೆ. ಇದೇ ಪರಿಸ್ಥಿತಿಯನ್ನು ಬೇರೆ ಎಸ್‌ಯವಿಗಳಲ್ಲಿ ದಾಟಿಬರಬೇಕೆಂದರೆ ಚಾಲಕ ಹರಸಾಹಸ ಪಡಲೇಬೇಕು.

ಇನ್ನು ಹೆಚ್ಚು ಶಕ್ತಿಶಾಲಿಯಾದ ಆಯ್ಕೆ ಎಂದರೆ ರಾಕ್ ಕ್ರಾವ್ಲ್ ಮೋಡ್. ಇದು ಬಂಡೆಗಲ್ಲುಗಳನ್ನು, ಕಡಿದಾದ ಬಂಡೆಗಳನ್ನು ಹತ್ತಲು ಬಳಸಲಾಗುತ್ತದೆ. ಗರಿಷ್ಠ 45 ಡಿಗ್ರಿಯಷ್ಟು ಕಡಿದಾದ ಬಂಡೆಯನ್ನು ಹತ್ತಿ-ಇಳಿಯುವ ಸಾಮರ್ಥ್ಯವನ್ನು ಈ ಎಸ್‌ಯುವಿಗಳಿಗೆ ರಾಕ್ ಕ್ರಾವ್ಲ್ ಮೋಡ್ ನೀಡುತ್ತದೆ. ಇಲ್ಲಿ ಎಲ್ಲಾ ಚಕ್ರಗಳಿಗೂ ಹೆಚ್ಚು ಶಕ್ತಿ (ಟಾರ್ಕ್) ರವಾನೆಯಾಗುತ್ತದೆ. ಆದರೆ, ಚಕ್ರಗಳು ವೇಗವಾಗಿ ತಿರುಗುವುದಿಲ್ಲ. ಬದಲಿಗೆ ಬಸವನ ಹುಳುವಿನಂತೆ ತೆವಳುತ್ತವೆ. ಆದರೆ ಉಡದಂತೆ ಬಂಡೆಗೆ ಕಚ್ಚಿಕೊಂಡಿರುತ್ತದೆ. ಹೀಗಾಗಿ ಕಡಿದಾದ ಬೆಟ್ಟಗಳನ್ನೂ (ಹೌದು ಬೆಟ್ಟ) ಹತ್ತಲು ಡಿಸ್ಕವರಿ ಸ್ಫೋರ್ಟ್ಸ್ ಶಕ್ತವಾಗಿರುತ್ತದೆ. ಆದರೆ ಪರಿಣತರು ಮತ್ತು ಸುರಕ್ಷಾ ಪರಿಕರಗಳು ಇಲ್ಲದ ಕಾರಣ ಈ ಮೋಡ್‌ ಅನ್ನು ಪರೀಕ್ಷಿಸಲು ಸಾಧ್ಯವಾಗಲಿಲ್ಲ.

ಹೀಗಾಗಿ ಈ ಎಸ್‌ಯವಿಯನ್ನು ಷೋರೂಂನಿಂದ ಹೊರಗೆ ತಂದ ತಕ್ಷಣವೇ ಯಾವುದೇ ಮಾರ್ಪಾಡು ಮಾಡದೆಯೇ ಭಾರತ ಪರ್ಯಟನೆಗೆ ಹೊರಡಬಹುದು. ಭಾರತದ ಎಲ್ಲಾ ಭೂಗೋಳಿಕ ಪ್ರದೇಶಗಳಲ್ಲೂ-ಅಲ್ಲಿನ ಕಚ್ಚಾ ರಸ್ತೆಗಳಲ್ಲೂ ಸುಲಭದ ಚಾಲನೆಗೆ ತಕ್ಕನಾದ ಎಸ್‌ಯುವಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT