ಫಲ ನೀಡೀತೆ ಫೇಮ್‌–2

ಸೋಮವಾರ, ಏಪ್ರಿಲ್ 22, 2019
29 °C
Wheels-Fame-2

ಫಲ ನೀಡೀತೆ ಫೇಮ್‌–2

Published:
Updated:

ಸಾರ್ವಜನಿಕ ಸಾರಿಗೆ ಉದ್ದೇಶಕ್ಕೆ ಬಳಸಲು ವಿದ್ಯುತ್‌ ಚಾಲಿತ ವಾಹನಗಳನ್ನು ತಯಾರಿಸುವ ನಿಟ್ಟಿನಲ್ಲಿ ದೇಶದಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಆದರೆ, ಇಂತಹ ವಾಹನಗಳು ಸುಗಮವಾಗಿ ರಸ್ತೆಗೆ ಇಳಿಯಬೇಕಾದರೆ, ಇನ್ನೂ ಹಲವು ಮಿತಿಗಳನ್ನು ದಾಟಬೇಕಾಗಿದೆ. ಈ ನಿಟ್ಟಿನಲ್ಲಿ ವಿದ್ಯುತ್‌ಚಾಲಿತ ಮತ್ತು ಹೈಬ್ರಿಡ್‌ ವಾಹನಗಳ ತಯಾರಿಕೆ ಉತ್ತೇಜಿಸುವ 2ನೇ ಹಂತದ ಕಾರ್ಯಕ್ರಮಕ್ಕೆ (ಎಫ್‌ಎಎಂಇ–2– ಫೇಮ್‌–2) ಕೇಂದ್ರ ಸಚಿವ ಸಂಪುಟವು ₹10 ಸಾವಿರ ಕೋಟಿ ಮೀಸಲಿಟ್ಟಿದೆ. ಇದೇ ಏಪ್ರಿಲ್‌ ತಿಂಗಳಿನಿಂದಲೇ ಈ ಯೋಜನೆ ಜಾರಿಗೆ ಬರಲಿದೆ.

ವಿದ್ಯುತ್‌ಚಾಲಿತ ವಾಹನಗಳ ತಯಾರಿಕೆ ಮತ್ತು ಬಳಕೆಯನ್ನು ತ್ವರಿತಗೊಳಿಸುವ ಯೋಜನೆಯ ವಿಸ್ತೃತ ಕಾರ್ಯಕ್ರಮ ಇದಾಗಿದೆ. ಮೊದಲ ಕಾರ್ಯಕ್ರಮವನ್ನು 2015ರ ಏಪ್ರಿಲ್‌ನಿಂದ ಜಾರಿಗೆ ತರಲಾಗಿತ್ತು. ಇದಕ್ಕಾಗಿ ₹ 895 ಕೋಟಿ ನೆರವು ನೀಡಲಾಗಿತ್ತು. ಸಾರ್ವಜನಿಕರು ವಿದ್ಯುತ್‌ ಚಾಲಿತ ವಾಹನಗಳನ್ನು ಬಳಸುವಂತೆ ಉತ್ತೇಜನ ನೀಡುವುದು, ಇಂತಹ ವಾಹನಗಳಿಗೆ ಬೇಕಿರುವ ಚಾರ್ಜಿಂಗ್‌ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಸಮೂಹ ಸಾರಿಗೆ ವ್ಯವಸ್ಥೆಯ ವಿದ್ಯುತ್ತೀಕರಣ, ರಾಜ್ಯ ಮತ್ತು ನಗರಗಳ ಸಾರಿಗೆ ನಿಗಮಗಳಿಗೆ ವಿದ್ಯುತ್‌ ಚಾಲಿತ ಬಸ್‌ಗಳ ವಿತರಣೆಗೆ ಕ್ರಮ ಸೇರಿದಂತೆ ಹಲವು ಸಂಗತಿಗಳನ್ನು ‘ಎಫ್‌ಎಎಂಇ–2’ ಒಳಗೊಂಡಿದೆ.

ಸಾರ್ವಜನಿಕ ಸಾರಿಗೆ ಉದ್ದೇಶಕ್ಕೆ ಬಳಸುವ ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳ ತಯಾರಿಕೆಗೆ ‘ಎಫ್‌ಎಎಂಇ–2’ ಯೋಜನೆಯಡಿ ಆದ್ಯತೆ ನೀಡಲಾಗಿದೆ. ದ್ವಿಚಕ್ರ ವಾಹನ ವಿಭಾಗದಲ್ಲಿ ಖಾಸಗಿ ವಾಹನ ತಯಾರಿಕಾ ಕಂಪನಿಗಳನ್ನೂ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ಈ ಯೋಜನೆಯಡಿ 10 ಲಕ್ಷ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನ, 5 ಲಕ್ಷ ತ್ರಿಚಕ್ರ ವಾಹನ ಮತ್ತು 55 ಸಾವಿರ 4 ಚಕ್ರಗಳ ವಾಹನ ಮತ್ತು 7 ಸಾವಿರ ಬಸ್‌ಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.

ಪರಿಸರ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಮತ್ತು ಇಂಧನ ಸುರಕ್ಷತೆಯ ದೃಷ್ಟಿಯಿಂದಲೂ ಇದು ಮಹತ್ವದ ಕಾರ್ಯಕ್ರಮ. ಅಂದರೆ 2030ರ ವೇಳೆಗೆ ದೇಶದ ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣವಾಗಿ ಅಂದರೆ ಶೇ 100ರಷ್ಟು ಮತ್ತು ಶೇ 40ರಷ್ಟು ವೈಯಕ್ತಿಕ ಬಳಕೆಯ ವಾಹನಗಳನ್ನು ವಿದ್ಯುತ್‌ಚಾಲಿತ ವ್ಯವಸ್ಥೆಗೆ ತರುವ ಯೋಜನೆ ಇದಾಗಿದೆ.

ಲೀಥಿಯಂ–ಐಯಾನ್‌ ಬ್ಯಾಟರಿ ಸೇರಿದಂತೆ ಹೊಸ ತಂತ್ರಜ್ಞಾನ ಬ್ಯಾಟರಿಗಳನ್ನು ಬಳಸುತ್ತಿರುವ ವಾಹನಗಳನ್ನು ಸಹ ವಿದ್ಯುತ್‌ ಚಾಲಿತ ವ್ಯವಸ್ಥೆಗೆ ಒಳಪಡಿಸಬಹುದು. ಈ ನಿಟ್ಟಿನಲ್ಲಿ ಸಹ ಪ್ರಯತ್ನಗಳು ನಡೆದಿವೆ. ವಿದ್ಯುತ್‌ ಚಾಲಿತ ವಾಹನಗಳ ಚಾರ್ಚಿಂಗ್‌ಗಾಗಿ ಮೆಟ್ರೊ ನಗರಗಳಲ್ಲಿ 2700 ಚಾರ್ಚಿಂಗ್‌ ಸ್ಟೇಷನ್‌ ಸ್ಥಾಪಿಸುವ ಗುರಿ ಹೊಂದಲಾಗಿದೆ. ಸ್ಮಾರ್ಟ್‌ಸಿಟಿ ಮತ್ತು ಮೆಟ್ರೊ ನಗರಗಳಲ್ಲಿ ಪ್ರತಿ 3 ಕಿ.ಮೀ ಸುತ್ತಳತೆಯಲ್ಲಿ ಒಂದು ಚಾರ್ಚಿಂಗ್ ಸ್ಟೇಷನ್, ರಾಷ್ಟ್ರೀಯ ಹೆದ್ದಾರಿಯಲ್ಲಿ 25 ಕಿ.ಮೀ ಅಂತರದಲ್ಲಿ ಒಂದು ಚಾರ್ಜಿಂಗ್‌ ಸ್ಟೇಷನ್‌ ಸ್ಥಾಪಿಸುವ ಯೋಜನೆ ಇದೆ.

ವಾಹನ ಉದ್ಯಮ ಸ್ವಾಗತ: ಎಫ್‌ಎಎಂಇ–2 ಯೋಜನೆಯನ್ನು ದೇಶದ ವಾಹನ ತಯಾರಿಕಾ ಕಂಪೆನಿಗಳು ಸ್ವಾಗತಿಸಿವೆ.

ಈ ಯೋಜನೆಯಿಂದ ವಿದ್ಯುತ್‌ ಚಾಲಿತ ವಾಹನ ತಯಾರಿಕೆಗೆ ಸಂಬಂಧಿಸಿದ ಸ್ವಷ್ಟವಾದ ನೀತಿ ಹೊರಬಿದ್ದಿದೆ. ಹೆಚ್ಚಿನ ಬಂಡವಾಳ ಹೂಡಿಕೆಗೂ ಇದರಿಂದ ಸಹಾಯಕವಾಗಲಿದೆ ಎಂದು ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ ‘ಎಸ್‌ಐಎಎಂ’ ಮತ್ತು ಎಸ್‌ಎಂಇವಿ ಹೇಳಿವೆ.

ವಿದ್ಯುತ್‌ ಚಾಲಿತ ವಾಹನ ತಯಾರಿಕಾ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸಲು ಆಸಕ್ತಿ ಹೊಂದಿರುವ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಟಾಟಾ ಮೋಟರ್ಸ್‌ ಈ ಯೋಜನೆಯನ್ನು ಸ್ವಾಗತಿಸಿವೆ. ಇದರಿಂದ ‘ಸ್ಥಳೀಯವಾಗಿಯೇ ವಿದ್ಯುತ್‌ ಚಾಲಿತ ವಾಹನಗಳ ತಯಾರಿಕಾ ವಲಯ ಬೆಳೆಯಲಿದೆ. ಇದು ಸುಸ್ಥಿರತೆಯೆಡೆಗಿನ ಪಯಣ’ ಎಂದು ಟಾಟಾ ಮೋಟಾರ್ಸ್‌ನ ವಿದ್ಯುತ್‌ಚಾಲಿತ ವಾಹನ ವಿಭಾಗದ ಮುಖ್ಯಸ್ಥ ಶೈಲೇಶ್‌ ಚಂದ್ರ ಹೇಳಿದ್ದಾರೆ.

‘ಎಫ್‌ಎಎಂಇ–2 ಯೋಜನೆಯಿಂದಾಗಿ, ಮಾರುಕಟ್ಟೆಯಲ್ಲಿನ ಎಲ್ಲ ಅಸ್ಥಿರತೆಗಳು ಮಾಯವಾಗಲಿದ್ದು, ವಿದ್ಯುತ್‌ ಚಾಲಿತ ವಾಹನವನ್ನು ಮುನ್ನೆಲೆಗೆ ತಂದು ನಿಲ್ಲಿಸಿದೆ. ಈ ವಾಹನಗಳು ಭಾರತೀಯ ರಸ್ತೆಗೆ ಇಳಿಯಬೇಕಾದರೆ, ಆಮೂಲಾಗ್ರವಾಗಿ ಮೂಲಸೌಕರ್ಯ ಅಭಿವೃದ್ಧಿ ಆಗಬೇಕಿದ್ದು, ಸ್ಥಳೀಯ ಆಡಳಿತ ಈ ಕುರಿತೂ ಗಮನ ಹರಿಸಬೇಕು’ಎನ್ನುತ್ತಾರೆ ತಜ್ಞರು.

‘ಪೆಟ್ರೋಲ್‌ ಮತ್ತು ಡೀಸೆಲ್‌ ದರಗಳು ಪ್ರತಿ ದಿನ ಪರಿಷ್ಕರಣೆಯಾಗುತ್ತಿರುವ ಈ ಕಾಲದಲ್ಲಿ ವಿದ್ಯುತ್‌ ಚಾಲಿತ ವಾಹನಗಳು ಇದಕ್ಕೆ ಪರ್ಯಾಯ ಆಯ್ಕೆಯಾಗಿ ಗ್ರಾಹಕರ ಮುಂದೆ ನಿಲ್ಲಲಿವೆ. ನಗರ ಸಾರಿಗೆ ವ್ಯವಸ್ಥೆಯಲ್ಲಿ ಇದು ಹೊಸ ಸಂಚಲನವನ್ನೇ ಸೃಷ್ಟಿಸಲಿದೆ’ ಎನ್ನುತ್ತಾರೆ ಲೋಹಿಯಾ ಆಟೊ ಕಂಪೆನಿಯ ಸಿಇಒ ಆಯುಷ್‌ ಲೋಹಿಯಾ.

ಮಹೀಂದ್ರಾ ಕಂಪೆನಿಯು ಈಗಾಗಲೇ ಇ2ಒ ಪ್ಲಸ್‌ ಮತ್ತು ಇ–ವೆರಿಟೊ ವಿದ್ಯುತ್ ಚಾಲಿತ ವಾಹನಗಳನ್ನು ಮಾರಾಟ ಮಾಡುತ್ತಿದೆ. ಲೀಥಿಯಂ ಐಯಾನ್‌ ಬ್ಯಾಟರಿ ಚಾಲಿತ ಟ್ರಿಯೊ ಎಂಬ ಆಟೊ ರಿಕ್ಷಾ ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದಲ್ಲದೆ 2018ರ ವಾಹನ ಪ್ರದರ್ಶನ ಮೇಳದಲ್ಲಿ ವಿದ್ಯುತ್‌ಚಾಲಿತ 6 ಹೊಸ ಮಾದರಿಗಳನ್ನು ಪರಿಚಯಿಸಿದೆ. ಇದರಲ್ಲಿ ಇ–ಕೊಸ್ಮೊ ಬಸ್‌ ಕೂಡ ಸೇರಿದೆ. ಸಣ್ಣ ಕಾರು ಇ2ಒ ನೆಕ್ಸ್ಟ್‌ ಕೂಡ ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ವಿದ್ಯುತ್‌ ಚಾಲಿತ ವಾಹನ ತಯಾರಿಕೆ, ಸಂಶೋಧನೆಗಾಗಿಯೇ ಬೆಂಗಳೂರಿನಲ್ಲಿ ₹100 ಕೋಟಿ ಬಂಡವಾಳದಲ್ಲಿ ತಯಾರಿಕಾ ಘಟಕವನ್ನೂ ತೆರೆದಿದೆ.

ಇಲ್ಲಿ ₹350 ಕೋಟಿ ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡಲು ಕಂಪನಿ ನಿರ್ಧರಿಸಿದೆ. ಇದರ ಜತೆಗೆ ಕಂಪನಿಯು ಪುಣೆಯಲ್ಲಿನ ಚಕನ್‌ ತಯಾರಿಕಾ ಘಟಕದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗಾಗಿಯೇ ₹450 ಕೋಟಿ ಬಂಡವಾಳ ತೊಡಗಿಸಿದೆ. ‘ಸರ್ಕಾರದ ಹೊಸ ನೀತಿಯು ಇಡೀ ಉದ್ಯಮಕ್ಕೆ ಇನ್ನಷ್ಟು ವೇಗ ನೀಡಿದೆ’ ಎನ್ನುತ್ತಾರೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪವನ್‌ ಗೋಯಂಕಾ. ವಿದ್ಯುತ್‌ ಚಾಲಿತ ವಾಹನಗಳ ಮೂಲಕ ‘ಭಾರತದಲ್ಲಿಯೇ ತಯಾರಿಸಿ’ ಅಭಿಯಾನ ಕೂಡ ಇನ್ನಷ್ಟು ಬಲಗೊಳಿಸಬಹುದು’ ಎನ್ನುವ ಅಭಿಪ್ರಾಯ ಅವರದು.

ಕಾರ್‌ ಖರೀದಿಗೆ ಸಬ್ಸಿಡಿ: ಹೊಸ ಯೋಜನೆಯಡಿ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನ ಖರೀದಿಗೆ ₹20 ಸಾವಿರದವರೆಗೆ ಸಬ್ಸಿಡಿ, ಕಾರು ಖರೀದಿಸಿದರೆ ₹1.5 ಲಕ್ಷದವರೆಗೆ ಸಬ್ಸಿಡಿ ಲಭಿಸಲಿದೆ. ಪ್ರತಿ ವಿದ್ಯುತ್‌ ಚಾಲಿತ ಬಸ್‌ ತಯಾರಿಕೆಗೆ ಅಂದಾಜು ₹2 ಕೋಟಿ ವೆಚ್ಚವಾಗಲಿದ್ದು, ಇದಕ್ಕೆ ₹50 ಲಕ್ಷ ಸಬ್ಸಿಡಿ ಲಭಿಸಿದೆ. ವಿದ್ಯುತ್‌ಚಾಲಿತ ಇ–ರಿಕ್ಷಾ ತಯಾರಿಕೆಗೆ ₹5 ಲಕ್ಷ ವೆಚ್ಛವಾಗಲಿದ್ದು, ಇದಕ್ಕೆ ₹50 ಸಾವಿರ ಸಬ್ಸಿಡಿ ನಿಗದಿಪಡಿಸಲಾಗಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !