ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಹಕರ ಹಿತಾಸಕ್ತಿ ಅತ್ಯಂತ ಪ್ರಮುಖ’

Last Updated 29 ಜನವರಿ 2018, 9:11 IST
ಅಕ್ಷರ ಗಾತ್ರ

ದೇವನಹಳ್ಳಿ: ರೈತರ ಮತ್ತು ಹಾಲು ಉತ್ಪಾದಕರ ಸಹಕಾರ ಕ್ಷೇತ್ರದಲ್ಲಿ ಗ್ರಾಹಕರ ಹಿತಾಸಕ್ತಿ ಅತಿಮುಖ್ಯವಾಗಬೇಕು ಎಂದು ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು. ಅಂಬೇಡ್ಕರ್ ಭವನದಲ್ಲಿ ಭಾನುವಾರ ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನೌಕರರ ಭವನದ ಶಂಕುಸ್ಥಾಪನೆ ಮತ್ತು ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ ದೇವನಹಳ್ಳಿ ತಾಲ್ಲೂಕು ಹಾಲು ಉತ್ಪಾದನೆಯಲ್ಲಿ ಮೊದಲು ಸ್ಥಾನ ಕಾಯ್ದುಕೊಂಡಿದೆ. ಅರ್ಥಿಕ ಪ್ರಗತಿಗೆ ಹಾಲು ಉತ್ಪಾದನೆ ಪೂರಕವಾಗಿದೆ. ಹಾಲು ಉತ್ಪಾದಕರ ಸಹಕಾರ ಸಂಘ, ವ್ಯವಸಾಯ ಸೇವಾ ಸಹಕಾರ ಸಂಘ, ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ, ಪ್ರಾಥಮಿಕ ಭೂ ಅಭಿವೃದ್ಧಿ ಸಹಕಾರ ಸಂಘ, ಹಾಪ್‌ಕಾಮ್ಸ್ ಸಹಕಾರ ಸಂಘ ಸಕ್ರಿಯವಾಗಿ ರೈತರ ಮತ್ತು ಹಾಲು ಉತ್ಪಾದಕರ ಪ್ರಗತಿಗೆ ಇನ್ನಷ್ಠು ಶ್ರಮಿಸಬೇಕಾಗಿದೆ ಎಂದರು.

ಹಾಲು ಉತ್ಪಾದಕರಿಗೆ ಸಹಕಾರ ಸಂಘಗಳ ಕಾರ್ಯದರ್ಶಿಗೆ ಪ್ರಸ್ತುತ ನೀಡುತ್ತಿರುವ ತಿಂಗಳ ವೇತನ ತೀರಾ ಕಡಿಮೆ ಇದೆ. ಕನಿಷ್ಠ ₹ 20 ಸಾವಿರಕ್ಕೆ ಏರಿಸಿದರೆ ಕುಟುಂಬದ ನಿರ್ವಹಣೆ ಸುಧಾರಣೆಯಾಗಲಿದೆ ಎಂದರು. ಶಾಸಕರ ಐದು ವರ್ಷದ ಅನುದಾನ ₹ 10 ಕೋಟಿಯಲ್ಲಿ ಅಂಗವಿಕಲರಿಗೆ ಮೀಸಲಾಗಿರುವ ₹ 33 ಲಕ್ಷ ಹೊರತು ಪಡಿಸಿ ಎಲ್ಲಾ ಅನುದಾನ ವೆಚ್ಚ ಮಾಡಲಾಗಿದೆ. ಸಂಘದ ಭವನಕ್ಕೆ ವೈಯಕ್ತಿಕವಾಗಿ ₹ 2 ಲಕ್ಷ ನೀಡಿ ಸಹಕರಿಸಲಾಗುವುದು ಎಂದು ತಿಳಿಸಿದರು.

ಶಿಬಿರ ಕಚೇರಿ ಉಪವ್ಯವಸ್ಥಾಪಕ ಡಾ.ಗಂಗಯ್ಯ ಮಾತನಾಡಿ, ತಾಲ್ಲೂಕಿನಲ್ಲಿ 182 ಹಾಲು ಉತ್ಪಾದಕರ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ 515 ನೌಕರರಿದ್ದಾರೆ. ಒಕ್ಕೂಟ ಮಾಡುತ್ತಿರುವ ಪ್ರತಿಯೊಂದು ಚಟುವಟಿಕೆಯಂತೆ ನೌಕರ ಸಂಘ ಸಕ್ರಿಯವಾಗಿದೆ. ಇಡಿ ರಾಜ್ಯದಲ್ಲಿ ದೇವನಹಳ್ಳಿ ತಾಲ್ಲೂಕು ಹಾಲು ಉತ್ಪಾದಕರ ನೌಕರರ ಕ್ಷೇಮಾಭಿವೃದ್ಧಿ ಸಂಘ, ಸ್ವಂತ ಭವನಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದರು.

‘ಬಮುಲ್’ ನಿರ್ದೇಶಕ ಬಿ.ಶ್ರೀನಿವಾಸ್ ಮಾತನಾಡಿ, ನೌಕರರು ಸಕ್ರಿಯವಾಗಿ ಆಸಕ್ತಿಯಿಂದ ಕೆಲಸ ಮಾಡಿದರೆ ಮಾತ್ರ ಒಕ್ಕೂಟ ಪ್ರಗತಿ ಸಾಧಿಸಲು ಸಾಧ್ಯ ಎಂದರು. ನೌಕರರ ಭವನ ನಿರ್ಮಾಣಕ್ಕೆ ಒಕ್ಕೂಟವತಿಯಿಂದ ₹ 10 ಲಕ್ಷ ಪ್ರೋತ್ಸಾಹ ನೀಡಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಸಿ ಮಂಜುನಾಥ್. ರಾಧಮ್ಮ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ, ಉಪಾಧ್ಯಕ್ಷೆ ನಂದಿನಿ, ಪುರಸಭೆ ಉಪಾಧ್ಯಕ್ಷೆ ಅಶಾರಾಣಿ , ಬಮುಲ್ ಉಪಾಧ್ಯಕ್ಷ ಬಿ.ಡಿ.ನಾಗಪ್ಪ, ಟಿಎಪಿಎಂಸಿಎಸ್ ಉಪಾಧ್ಯಕ್ಷೆ ಭಾರತಿ, ನಿರ್ದೇಶಕ ಮಂಡಿಬೆಲೆ ರಾಜಣ್ಣ, ಎಪಿಎಂಸಿ ನಿರ್ದೇಶಕ ಸುಧಾಕರ್, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕ ಸಂಪಂಗಿ ಗೌಡ, ಕೆಪಿಸಿಸಿ ಜಿಲ್ಲಾ ಘಟಕ ಪ್ರಧಾನಕಾರ್ಯದರ್ಶಿ ಪ್ರಸನ್ನ ಕುಮಾರ್, ಎಂಪಿಸಿಎಸ್ ಕ್ಷೇಮಾಭಿವೃದ್ಧಿ ನೌಕರರ ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಎನ್.ರಮೇಶ್, ಬಿ.ರಾಜಣ್ಣ, ಐ.ಸಿ. ವಿಜಯಕುಮಾರ್, ಎಂ.ಮುನಿಯಪ್ಪ, ಮುನಿಕೃಷ್ಣಪ್ಪ, ಜಯರಾಮಯ್ಯ, ಎನ್.ನಾರಾಯಣಸ್ವಾಮಿ, ಕೆ.ಸಿ ಉಮಾ, ತಾಲ್ಲೂಕು ಪಂಚಾಯಿತಿ ಸದಸ್ಯರು ಮತ್ತು ಪುರಸಭೆ ಸದಸ್ಯರು ಇದ್ದರು.

ನಿವೇಶನ ಖರೀದಿ

ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಚನ್ನಕೇಶವ ಮತ್ತು ಜಿಲ್ಲಾ ನೌಕರರ ಸಂಘ ಅಧ್ಯಕ್ಷ ಬಿ.ಎನ್.ಲೋಕೇಶ್ ಮಾತನಾಡಿ, ಸಂಘದ ಮತ್ತು ದಾನಿಗಳ ನೆರವಿನಿಂದ ₹ 15 ಲಕ್ಷ ವೆಚ್ಚದಲ್ಲಿ ನಿವೇಶನ ಖರೀದಿಸಲಾಗಿದೆ ಎಂದರು.

ಹಾಲು ಭವನ ನಿರ್ಮಾಣಕ್ಕೆ ₹ 50 ಲಕ್ಷ ವೆಚ್ಚದ ಅಂದಾಜು ನೀಲನಕ್ಷೆ ಸಿದ್ಧಪಡಿಸಿ ಕಾಮಗಾರಿಗೆ ಗುತ್ತಿಗೆ ನೀಡಲಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ, ನೌಕರರಿಗೆ ವೈದ್ಯಕೀಯ ವೆಚ್ಚ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT