ಬೈಕಿಂಗ್ ಹೊರಡುವ ಮುನ್ನ ತಯಾರಿರಲಿ ‘ಕಿಟ್’

7

ಬೈಕಿಂಗ್ ಹೊರಡುವ ಮುನ್ನ ತಯಾರಿರಲಿ ‘ಕಿಟ್’

Published:
Updated:
ಆಟೊ ಮೊಬೈಲ್‌

ಭಾರತದಲ್ಲಿ ಈಗ ಬೈಕಿಂಗ್‌ನ ವ್ಯಾಖ್ಯಾನ ಬದಲಾಗಿದೆ. ಬೈಕಿಂಗ್, ಉಳ್ಳವರ ಹವ್ಯಾಸ ಎಂಬುದು ಈಗ ಸುಳ್ಳಾಗಿದೆ. ಲಕ್ಷ ರೂಗಳ ಆಸುಪಾಸಿನಲ್ಲೇ ಪ್ರವೇಶಮಟ್ಟದ ಸ್ಪೋರ್ಟ್ಸ್ ಬೈಕ್‌ಗಳು ಮಾರುಕಟ್ಟೆಯಲ್ಲಿರುವುದು ಮಧ್ಯಮವರ್ಗದ ಯುವಕರನ್ನೂ ಬೈಕಿಂಗ್‌ನತ್ತ ಆಕರ್ಷಿಸುತ್ತಿದೆ. ವಾರಾಂತ್ಯದಲ್ಲಿ ಹೆದ್ದಾರಿಯತ್ತ ಇಣುಕಿ ನೋಡಿದರೆ ಸಾಕು, ಬೈಕಿಂಗ್‌ನ ಇಂದಿನ ಟ್ರೆಂಡ್ ಗೊತ್ತಾಗುತ್ತದೆ. ದಿನಗಟ್ಟಲೆ ನೂರಾರು ಕಿ.ಮೀ. ಸವಾರಿ ಮಾಡುವ ಬೈಕಿಂಗ್ ಎಷ್ಟು ರೋಮಾಂಚನಕಾರಿಯೋ ಅಷ್ಟೇ ಅಪಾಯಕಾರಿಯೂ ಹೌದು. ಹೀಗಾಗಿ ಬೈಕರ್ ಆಗುವ ಮುನ್ನ ಕೆಲವಾರು ಮುನ್ನೆಚ್ಚರಿಕೆ ಕೈಗೊಳ್ಳುವುದು ಅತ್ಯಗತ್ಯ. ಅವು ಈ ಮುಂದಿನಂತಿವೆ...

ಹೆಲ್ಮೆಟ್‌

ಯಾವುದೆ ದ್ವಿಚಕ್ರ ವಾಹನ ಚಾಲನೆ ವೇಳೆ ಹೆಲ್ಮೆಟ್ ಧರಿಸಲೇಬೇಕಾದದ್ದು ನಮ್ಮಲ್ಲಿ ಕಡ್ಡಾಯವಾಗಿ ಬಹಳ ವರ್ಷ ಕಳೆದಿದೆ. ಆದರೆ ನಗರ ವ್ಯಾಪ್ತಿಯಿಂದ ಹೊರಹೋಗುತ್ತಿದ್ದಂತೆ ದ್ವಿಚಕ್ರವಾಹನ ಸವಾರರ ತಲೆ ಮೇಲೆ ಹೆಲ್ಮೆಟ್ ಇರುವುದೇ ಕಡಿಮೆ. ಬೈಕರ್‌ಗಳ ಹೆಲ್ಮೆಟ್‌ಗಳೂ ನಗರ ಬಿಡುತ್ತಿದ್ದಂತೆ ತಲೆಯಿಂದ ಕೆಳಗೆ ಇಳಿಯುವುದು ಈಚಿನವರೆಗೂ ಸಾಮಾನ್ಯವಾಗಿತ್ತು. ಆದರೆ ಇಡೀ ಬೈಕಿಂಗ್‌ ಅನ್ನು ಸೆರೆ ಹಿಡಿಯುವ ಕ್ಯಾಮೆರಾಗಳು ಹೆಲ್ಮೆಟ್‌ಗಳ ತಲೆ ಮೇಲೆ ಜಾಗ ಪಡೆಯುತ್ತಿದ್ದಂತೆ, ಹೆಲ್ಮೆಟ್‌ಗಳೂ ಬೈಕರ್‌ಗಳ ತಲೆ ಮೇಲೆಯೇ ಉಳಿಯುತ್ತಿರುವುದು ಹೊಸ ಬೆಳವಣಿಗೆ.

ಅಪಘಾತಗಳ ಸಂದರ್ಭದಲ್ಲಿ ತಲೆಗೆ ಪೆಟ್ಟಾಗದಂತೆ ತಡೆಯುವುದು ಹೆಲ್ಮೆಟ್‌ನ ಮೂಲ ಕರ್ತವ್ಯವಾದರೂ, ಹೆದ್ದಾರಿ ಪಯಣದಲ್ಲಿ ಅದು ಹಲವು ರೀತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಈ ಮೊದಲೇ ಹೇಳಿರುವಂತೆ ಕ್ಯಾಮೆರಾ ಮೌಂಟ್‌ ಆಗಿ ಕೆಲಸ ಮಾಡುವುದೂ ಅದರಲ್ಲಿ ಒಂದು. ಹೆಲ್ಮೆಟ್‌ ಇಲ್ಲದೆ ಭಾರಿ ವೇಗದಲ್ಲಿ ನೂರಾರು ಕಿ.ಮೀ. ಸವಾರಿ ನಡೆಸಿದರೆ ಗಾಳಿಯ ಹೊಡೆತಕ್ಕೆ ಮುಖ–ಕಣ್ಣು ಎಲ್ಲಡೆ ದೂಳು ಕುಳಿತು, ಕಿರಿಕಿರಿಯಾಗುತ್ತದೆ. ಅದು ಸರಿಯಾಗಲು ಹಲವು ದಿನಗಳೇ ಬೇಕಾಗುತ್ತದೆ. ಹೆದ್ದಾರಿಗಳಲ್ಲಿ ಟ್ರಕ್‌ಗಳಿಂದ ಸಿಡಿಯುವ ಮರಳು–ಕಲ್ಲಿನ ಕಣಗಳು ಕಣ್ಣಿಗೆ–ಮುಖಕ್ಕೆ ಅಪ್ಪಳಿಸಿದಂತೆ ತಡೆಯುವ ಮಹತ್ತರವಾದ ಕೆಲಸವನ್ನು ಹೆಲ್ಮೆಟ್‌ಗಳು ಮಾಡುತ್ತವೆ. ಅದರ ಜತೆಯಲ್ಲೇ ಕಿವಿಗೆ ಗಾಳಿ ಹೋಗದಂತೆಯೂ ತಡೆಯುತ್ತದೆ. ಕಿವಿಗೆ ಗಾಳಿ ಹೋದರೆ ಏನಾಗುತ್ತದೆ ಎಂಬ ಪ್ರಶ್ನೆಯೇ? ಕಿವಿಗೆ ಭಾರಿ ವೇಗದಲ್ಲಿ ಗಾಳಿ ನುಗ್ಗುತ್ತಲೇ ಇದ್ದರೆ ಮುಖ ಊದಿಕೊಳ್ಳುತ್ತದೆ. ಮೇಲೆ ಹೇಳಿದ ಎಲ್ಲ ಕಿರಿಕಿರಿಯಿಂದ ರಕ್ಷಣೆ ಸಿಗಬೇಕೆಂದರೆ ‘ಫುಲ್‌ಫೇಸ್ ಹೆಲ್ಮೆಟ್’ ಧರಿಸಬೇಕು. ಒಂದು ಉತ್ತಮ ಹೆಲ್ಮೆಟ್‌ನ ಬೆಲೆ ₹2,000 ದಿಂದ ಆರಂಭವಾಗಿ ನಾಲ್ಕೈದು ಸಾವಿರದವರೆಗೂ ಇದೆ. ಪ್ರವೇಶಮಟ್ಟದ ಬೈಕಿಂಗ್‌ಗೆ ಈ ವರ್ಗದ ಹೆಲ್ಮೆಟ್‌ಗಳು ಸಾಕು.

ಜಾಕೆಟ್‌

ಹೆಲ್ಮೆಟ್ ಮಾಡುವಂಥದ್ದೇ ಕೆಲಸವನ್ನು ಜಾಕೆಟ್ ಮಾಡುತ್ತದೆ. ಜಾಕೆಟ್‌ ದೇಹಕ್ಕೆ ರಕ್ಷಣೆ ನೀಡುತ್ತದೆ. ಇದರ ಜತೆಯಲ್ಲೇ ಬೈಕಿಂಗ್‌ ಜಾಕೆಟ್‌ಗಳು ಮತ್ತೊಂದು ಪ್ರಮುಖ ಕೆಲಸ ಮಾಡುತ್ತದೆ. ಬಹುತೇಕ ಬೈಕಿಂಗ್ ಜಾಕೆಟ್‌ಗಳು ಪ್ಯಾಡಿಂಗ್ ಸವಲತ್ತು ಹೊಂದಿರುತ್ತವೆ. ಅಂದರೆ ಭುಜ, ಎದೆ, ಹೊಟ್ಟೆ, ಪಕ್ಕೆ, ಬೆನ್ನಿನ ಭಾಗದಲ್ಲಿ ಪ್ಯಾಡ್‌ಗಳನ್ನು ಹೊಂದಿರುತ್ತದೆ. ಒಳಭಾಗದಲ್ಲಿ ಮೃದು ಫೋಮ್‌ನ ಪ್ಯಾಡ್ ಇದ್ದರೆ, ಹೊರ ಭಾಗದಲ್ಲಿ ಗಡಸು ಫೈಬರ್‌ನ ಪ್ಯಾಡ್ ಹೊಂದಿರುತ್ತದೆ. ಬೈಕಿಂಗ್ ವೇಳೆ ಜಾರಿ ಬಿದ್ದರೆ, ಮೇಲೆ ಹೇಳಿದ ದೇಹದ ಯಾವ ಭಾಗಕ್ಕೂ ಪೆಟ್ಟಾಗದಂತೆ ಈ ಪ್ಯಾಡ್‌ಗಳು ತಡೆಯುತ್ತವೆ. ಆರಂಭದಲ್ಲಿ ಇಂತಹ ಜಾಕೆಟ್‌ಗಳನ್ನು ಧರಿಸುವುದು ಕಿರಿಕಿರಿ ಎನಿಸುತ್ತದೆ. ಆದರೆ ಒಮ್ಮೆ ಅಭ್ಯಾಸವಾದರೆ, ಜಾಕೆಟ್ ಇಲ್ಲದೆ ಬೈಕ್ ಚಾಲನೆ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಗೆ ಬಂದು ನಿಂತಿರುತ್ತೇವೆ. ಈ ಜಾಕೆಟ್‌ಗಳ ಬೆಲೆಯೂ ತೀರಾ ದುಬಾರಿಯೇನಲ್ಲ. ಮೂರ್ನಾಲ್ಕು ಸಾವಿರದಿಂದ ಆರಂಭವಾಗಿ, ಏಳೆಂಟು ಸಾವಿರದವರೆಗೂ ಅವುಗಳ ಬೆಲೆ ಇದೆ. ಇವುಗಳ ಜತೆಯಲ್ಲೇ ಕೈಗವಸು ಮತ್ತು ಬೈಕಿಂಗ್ ಬೂಟುಗಳನ್ನು ಧರಿಸುವುದೂ ಅಷ್ಟೇ ಮುಖ್ಯ.

ಬೂಟು ಮತ್ತು ಹೆಲ್ಮೆಟ್‌ಗಳನ್ನು ಹೊರತುಪಡಿಸಿ, ಜಾಕೆಟ್-ಪ್ಯಾಡ್‌ ಎಲ್ಲವನ್ನೂ ಒಳಗೊಂಡಿರುವ ಬೈಕಿಂಗ್‌ ಸೂಟ್‌ಗಳೂ ಲಭ್ಯವಿರುತ್ತವೆ. ಅವುಗಳ ಬೆಲೆ 10,000 ರೂಗಳಿಂದ ಆರಂಭವಾಗುತ್ತವೆ.

ಇವೆಲ್ಲವೂ ಸಣ್ಣ-ಸಣ್ಣ ಸಿದ್ಧತೆಗಳಾದರೂ, ಬೈಕಿಂಗ್‌ನಲ್ಲಿ ಅವೆಲ್ಲಾ ಎಷ್ಟು ಉಪಯೋಗಕ್ಕೆ ಬರುತ್ತವೆ ಎಂಬುದು ಒಮ್ಮೆ ಬಳಸಿದರೆ ಮಾತ್ರ ಗೊತ್ತಾಗುವಂತಹದ್ದು. 

ಮೊಣಕಾಲು-ಮೊಣಕೈ ಪ್ಯಾಡ್‌ಗಳು

ಇವು ಮೊಣಕಾಲು ಮತ್ತು ಮಂಡಿ ಚಿಪ್ಪಿಗೆ ರಕ್ಷಣೆ ಕೊಡುವ ಪ್ಯಾಡ್‌ಗಳು. ಮೊಣಕೈ ಪ್ಯಾಡ್‌ಗಳು ಹೆಸರೇ ಹೇಳುವಂತೆ ಮೊಣಕೈ ಮತ್ತು ಮಣಿಕಟ್ಟಿಗೆ ರಕ್ಷಣೆ ನೀಡುತ್ತವೆ. ಅಪಘಾತಗಳ ಸಂದರ್ಭದಲ್ಲಿ ನಿಜಕ್ಕೂ ಇವು ಉಪಯೋಗಕ್ಕೆ ಬರುತ್ತದೆ. ಭಾರಿ ವೇಗದಲ್ಲಿದ್ದಾಗ ಬಿದ್ದಾಗಲೂ ಸಣ್ಣ ತರಚು ಗಾಯವೂ ಆಗದಂತೆ ಇಂತಹ ಪ್ಯಾಡ್‌ಗಳು ನನಗೊಮ್ಮೆ ರಕ್ಷಣೆ ನೀಡಿವೆ. ಹೀಗಾಗಿ ಬೈಕರ್‌ ಕಿಟ್‌ನಲ್ಲಿ ಈ ಪ್ಯಾಡ್‌ಗಳು ಇರಲೇಬೇಕು. ಇವುಗಳನ್ನು ಧರಿಸುವುದು ಸುಲಭ. ಗಾಳಿ ಆಡಲು ಕಿಂಡಿ ಇರುವ ಕಾರಣ ಚೆನ್ನಾಗಿ ಗಾಳಿ ಆಡುತ್ತದೆ. ಕಿಂಡಿ ಇಲ್ಲದಿದ್ದಲ್ಲಿ, ಕಾಲು-ಕೈ ವಿಪರೀತ ಬೆವರುವ ಸಮಸ್ಯೆ ಉಂಟಾಗುತ್ತದೆ. ಇವುಗಳ ಬೆಲೆ ₹500 ದಿಂದ ಆರಂಭವಾಗಿ ಏಳೆಂಟು 
ಸಾವಿರದವರೆಗೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !