ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಹಳೆಯ ಕಾರು ಮಾರಿ, ಹೊಸ ಬೈಕ್ ಕೊಳ್ಳಿ

ಭವಿಷ್ಯಕ್ಕೆ ಸಜ್ಜುಗೊಳ್ಳುತ್ತಿದೆ ಲಿಥುವೇನಿಯಾ
Last Updated 4 ನವೆಂಬರ್ 2020, 7:17 IST
ಅಕ್ಷರ ಗಾತ್ರ

ಲಿಥುವೇನಿಯಾದ ಜನರು ಈಗೀಗ ತಮ್ಮ ಹಳೆಯ ಕಾರುಗಳನ್ನು ಮಾರಲು ಪಾಳಿ ಹಚ್ಚಿದ್ದಾರೆ. ಹಳೆಯ ಕಾರು ಮಾರಾಟ ಮಾಡಿ ಮೊಪೆಡ್, ಬೈಸಿಕಲ್ ಅಥವಾ ಬೈಕ್ ಖರೀದಿಸುತ್ತಿದ್ದಾರೆ. ಅರೆ, ಅವರಿಗೇನಾಯಿತು ಅಂತೀರಾ! ಕಾರಣವಿದೆ. ಲಿಥುವೇನಿಯಾದಲ್ಲಿ ಹೊಸ ಯೋಜನೆಯೊಂದನ್ನು ಅಲ್ಲಿನ ಸರ್ಕಾರ ಪ್ರಕಟಿಸಿದೆ. ‘ಹಳೆಯ ಕಾರು ಮಾರಿ, ಹೊಸ ಬೈಕ್ ಕೊಳ್ಳಿ’ ಎಂದು ಪ್ರಚಾರ ಆರಂಭಿಸಿದೆ.

ವಾಯುಮಾಲಿನ್ಯ ತಗ್ಗಿಸುವ ಏಕೈಕ ಉದ್ದೇಶದಿಂದ ಅಲ್ಲಿನ ಸರ್ಕಾರ ಈ ದಿಟ್ಟ ಕ್ರಮ ತೆಗೆದುಕೊಂಡಿದೆ. ಮಾಲಿನ್ಯಕಾರಕ ಕಣಗಳನ್ನು ಹೊರಸೂಸುವ ಕಾರುಗಳನ್ನು ಬೈಬಿಟ್ಟು, ಪರಿಸರಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿ ಎಂದು ಸರ್ಕಾರ ಜನರಿಗೆ ಕರೆ ಕೊಟ್ಟಿದೆ. ಎಲೆಕ್ಟ್ರಿಕ್ ಬೈಕ್, ಸ್ಕೂಟರ್ ಕೊಳ್ಳುವವರಿಗೆ ಭರ್ಜರಿ ಡಿಸ್ಕೌಂಟ್ ಕೊಡ ಲಭ್ಯವಿದೆ.

ಯುರೋಪಿನ ಬಾಲ್ಟಿಕ್‌ ವಲಯದ ರಾಷ್ಟ್ರ ಲಿಥುವೇನಿಯಾದಲ್ಲಿ ಈ ಅಭಿಮಾನ ಶುರುವಾಗಿದ್ದು ಮೇ ತಿಂಗಳಲ್ಲಿ. ಇದರ ಪ್ರಕಾರ, ಕೆಲವು ಆಯ್ಕೆಗಳನ್ನು ಜನರಿಗೆ ನೀಡಲಾಗಿತ್ತು. ತಮ್ಮ ಹಳೆಯ ಕಾರನ್ನು ಮಾರುವ ವ್ಯಕ್ತಿ ಅದಕ್ಕೆ ಬದಲಿಯಾಗಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬಹುದು ಅಥವಾ ಸಾರ್ವಜನಿಕ ಸಾರಿಗೆಯ ವರ್ಷದ ಟಿಕೆಟ್ ಖರೀದಿಸಬಹುದು ಅಥವಾ ಎಲೆಕ್ಟ್ರಿಕ್ ಬೈಸಿಕಲ್ ಖರೀದಿ ಮಾಡಬಹುದು. ಹಳೆಯ ಕಾರು ಎಂದರೆ ಏನಿಲ್ಲವೆಂದರೂ ₹90 ಸಾವಿರಕ್ಕೆ ಮಾರಾಟವಾದರೆ ಹೆಚ್ಚು. ಹಳೆಯ ಕಾರುಗಳನ್ನು ಇಟ್ಟುಕೊಳ್ಳುವ ಬದಲು ಹೊಸ ಬೈಕ್‌ಗೆ ಪರಿವರ್ತನೆಯಾಗಿ ಎಂದು ಸರ್ಕಾರ ಪ್ರೋತ್ಸಾಹಿಸುತ್ತಿದೆ.

ಈ ಯೋಜನೆಗಾಗಿ ಸರ್ಕಾರವು 80 ಲಕ್ಷ ಯುರೊ (ಸುಮಾರು ₹70 ಕೋಟಿ) ಮೀಸಲಿಟ್ಟಿದೆ.ಬ್ಯಾಟರಿಚಾಲಿತ ಮಾಲಿನ್ಯರಹಿತ ವಾಹನ ಖರೀದಿಸುವ ಜನರಿಗೆ ಧನಸಹಾಯ ಮಾಡಲು ಈ ನಿಧಿಯನ್ನು ವಿನಿಯೋಗಿಸಲಾಗುತ್ತಿದೆ. ಈ ಯೋಜನೆಯನ್ನು ಲಿಥುವೇನಿಯಾದ ಜನರು ಸರಿಯಾಗಿಯೇ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ. ಶೇ 95ರಷ್ಟು ಸಬ್ಸಿಡಿ ಹಣ ಈಗಾಗಲೇ ಖರ್ಚಾಗಿದ್ದು, ಇನ್ನಷ್ಟು ಹಣಕಾಸು ನೆರವು ಒದಗಿಸುವಂತೆ ಕೇಳಿಕೊಳ್ಳಲಾಗಿದೆ.ಸಾರ್ವಜನಿಕ ಸಾರಿಗೆ ಟಿಕೆಟ್ ಬೇಕು ಎಂದವರಿಗೆ 300 ಯುರೊ, ಎಲೆಕ್ಟ್ರಿಕ್ ಬೈಕ್ ಬೇಕು ಎಂದವರಿಗೆ 1,000 ಯುರೊ, ಬ್ಯಾಟರಿ ಚಾಲಿತ ಬೈಸಿಕಲ್‌ಗೆ 700 ಯುರೊ, ಸಾಮಾನ್ಯ ಬೈಸಿಕಲ್‌ಗೆ 400 ಯುರೊ ಸಬ್ಸಿಡಿ ನಿಗದಿಪಡಿಸಲಾಗಿದೆ.

ಸರ್ಕಾರದ ಈ ನಿರ್ಧಾರದಿಂದ ಇ–ವಾಹನಗಳ ಕಂಪನಿಗಳಿಗೆ ಅದೃಷ್ಟ ಖುಲಾಯಿಸಿದೆ. ವೈವಿಧ್ಯಮಯ ಶ್ರೇಣಿಯ ಇ–ವಾಹನಗಳನ್ನು ಪೈಪೋಟಿಗೆ ಬಿದ್ದು ರಸ್ತೆಗಿಳಿಸಲಾಗುತ್ತಿದೆ.

ಮಾಲಿನ್ಯ ಹೊರಸೂಸುವ ಕಾರುಗಳಿಗೆ ತೆರಿಗೆ ವಿಧಿಸುವ ಕಾನೂನನ್ನು ಅಲ್ಲಿನ ಸಂಸತ್ತು ಜಾರಿಗೆ ತಂದಿದೆ. ನಗರವನ್ನು ಸ್ವಚ್ಛ ಹಾಗೂ ಸುಸ್ಥಿರವಾಗಿ ಇರಿಸುವ ಧ್ಯೇಯದೊಂದಿಗೆ ಕೆಲವು ಕಠಿಣ ಯೋಜನೆ ಹಾಗೂ ಆಕರ್ಷಕ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಮಾಲಿನ್ಯಕಾರಕ ಹೊಗೆ ಹೊರಸೂಸುವ ವಾಹನಗಳನ್ನು ರಸ್ತೆಗೆ ಇಳಿಸದಂತೆ ತಡೆಯುವುದು, ಸಣ್ಣ ವಾಹನಗಳನ್ನು ರಸ್ತೆಗೆ ಇಳಿಸುವುದು, ವೈಯಕ್ತಿಕ ವಾಹನಗಳ ಬದಲಿಗೆ ಸಾರ್ವಜನಿಕ ಸಾರಿಗೆಗೆ ಪ್ರೋತ್ಸಾಹ ನೀಡುವುದು, ಕಾರು ಪಾರ್ಕಿಂಗ್‌ ತಾಣಗಳಲ್ಲಿ ಹೆಚ್ಚು ಶುಲ್ಕ ನಿಗದಿಪಡಿಸುವ ಮೂಲಕ ವಾಹನಗಳ ಸಂಖ್ಯೆಯನ್ನು ಮಿತಿಗೊಳಿಸುವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ಭವಿಷ್ಯದ ನಗರವನ್ನು ಸಜ್ಜುಗೊಳಿಸುವ ರೀತಿ ಇದೇ ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT