ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಬ್ರ್ಯಾಂಡ್‌ ಸರ್ವಿಸ್‌ಗೆ ಮಹೀಂದ್ರಾ ಫಸ್ಟ್‌ ಚಾಯ್ಸ್

Last Updated 22 ಆಗಸ್ಟ್ 2019, 4:49 IST
ಅಕ್ಷರ ಗಾತ್ರ

ವಾಹನ ಉದ್ದಿಮೆಯ ಬೆಳವಣಿಗೆಯ ಜತೆ, ಜತೆಯಲ್ಲಿಯೇ ವಾಹನಗಳ ಸರ್ವೀಸ್‌ (ದುರಸ್ತಿ) ಉದ್ದಿಮೆಯೂ ಗಮನಾರ್ಹವಾಗಿ ಪ್ರಗತಿ ದಾಖಲಿಸುತ್ತಿದೆ. ವರ್ಷಗಳಿಂದಲೂ ವಾಹನ ತಯಾರಿಕಾ ಸಂಸ್ಥೆಗಳು ಮತ್ತು ಅಸಂಘಟಿತ ವಲಯಗಳಿಗೆ ಮಾತ್ರ ಸೀಮಿತವಾಗಿದ್ದ ಈ ಉದ್ದಿಮೆಗೆ ಈಗ ಬಹು ಬ್ರ್ಯಾಂಡ್‌ನ ಸರ್ವಿಸ್‌ ಕೇಂದ್ರಗಳೂ ಸೇರ್ಪಡೆಯಾಗುತ್ತಿವೆ. ಅವುಗಳ ಪೈಕಿ ಮಹೀಂದ್ರಾ ಆ್ಯಂಡ್‌ ಮಹೀಂದ್ರಾದ ಅಂಗ ಸಂಸ್ಥೆಯಾಗಿರುವ ಮಹೀಂದ್ರಾ ಫಸ್ಟ್‌ ಚಾಯ್ಸ್‌ ಸರ್ವಿಸಸ್‌ (MPCS) ಕೂಡ ಒಂದಾಗಿದೆ. ಬಹು ಬ್ರ್ಯಾಂಡ್‌ ಕಾರ್‌ ಮತ್ತು ಬೈಕ್‌ ಸರ್ವಿಸ್‌ ಸೇವೆ ಒದಗಿಸುವುದರಲ್ಲಿ ಇದು ಮುಂಚೂಣಿಯಲ್ಲಿ ಇದೆ.

ಸದ್ಯಕ್ಕೆ ದೇಶದಾದ್ಯಂತ 350 ಸೇವಾ ಕೇಂದ್ರಗಳನ್ನು ಹೊಂದಿರುವ ‘ಎಂಎಫ್‌ಸಿಎಸ್‌’, ದೇಶದ ಅತಿದೊಡ್ಡ ಬಹುಬ್ರ್ಯಾಂಡ್‌ ಕಾರ್‌ ಸರ್ವಿಸ್‌ ಸರಣಿಯಾಗಿದೆ. ಕಾರ್‌ಗಳ ಸರ್ವೀಸ್‌ ಕ್ಷೇತ್ರದಲ್ಲಿನ ಯಶಸ್ಸಿನಿಂದ ಉತ್ತೇಜನಗೊಂಡಿರುವ ಸಂಸ್ಥೆಯು ಈಗ ಬಹುಬಗೆಯ ಬೈಕ್‌ ಸರ್ವಿಸ್‌ ಕ್ಷೇತ್ರವನ್ನೂ ಪ್ರವೇಶಿಸಿದೆ. ಬೈಕ್ ತಯಾರಿಸುವ ಎಲ್ಲ ಸಂಸ್ಥೆಗಳ ಬೈಕ್‌ಗಳನ್ನೂ ಇಲ್ಲಿ ಸರ್ವಿಸ್‌ ಮಾಡಿಸಬಹುದು.

ಬಹು ಬ್ರ್ಯಾಂಡ್‌ ಸರ್ವೀಸ್‌ ಕೇಂದ್ರಗಳ ಪರಿಕಲ್ಪನೆಗೆ ದೇಶದಲ್ಲಿ 2008ರಲ್ಲಿಯೇ ಚಾಲನೆ ಸಿಕ್ಕಿತ್ತು. ಕಂಪನಿಯು ಇಂತಹ ವಿಶಿಷ್ಟ ಬಹು ಬ್ರ್ಯಾಂಡ್‌ನ ವರ್ಕಶಾಪ್‌ ಪರಿಕಲ್ಪನೆಯನ್ನು ಸಾಕಾರಗೊಳಿಸಿತ್ತು. 2018ರಲ್ಲಿ ದ್ವಿಚಕ್ರ ವಾಹನಗಳಿಗೂ ಈ ಸೌಲಭ್ಯ ವಿಸ್ತರಿಸಿತು. ಬೈಕ್‌ ತಯಾರಿಕಾ ಸಂಸ್ಥೆಗಳ ಮಾರುಕಟ್ಟೆ ಪಾಲು ಶೇ 20 ರಿಂದ ಶೇ 25ರಷ್ಟಿದೆ. ಉಳಿದ ಮಾರುಕಟ್ಟೆಯ ಬಹುತೇಕ ಪಾಲು ಅಸಂಘಟಿತ ವಲಯದ ಪಾಲಾಗಿದೆ.

‘ಎಲ್ಲ ಬಗೆಯ ಕಾರ್‌ಗಳಿಗೆ ಅಗತ್ಯವಾದ ಸರ್ವಿಸ್‌ಗಳು ಇಲ್ಲಿ ಲಭ್ಯ ಇರಲಿವೆ. ಜಾಗತಿಕ ಗುಣಮಟ್ಟದ ಕಾರ್‌ ನಿರ್ವಹಣೆಯ ಸೇವೆ ಒದಗಿಸುವುದರ ಮೂಲಕ ಚಾಲನಾ ಅನುಭವ ಉನ್ನತ ಮಟ್ಟಕ್ಕೆ ಏರಿಸಲಾಗುವುದು. ಆರಾಮದಾಯಕ ಪ್ರಯಾಣಕ್ಕೆ ಕಾರ್‌ ಅನ್ನು ಸುಸ‌ಜ್ಜಿತಗೊಳಿಸಿ ಗ್ರಾಹಕರನ್ನು ಸಂತೃಪ್ತರನ್ನಾಗಿಸುವುದೇ ನಮ್ಮ ಧ್ಯೇಯವಾಗಿದೆ ’ ಎಂದು ‘ಎಂಎಫ್‌ಸಿಎಸ್‌’ನ ಫ್ರಾಂಚೈಸಿ ವಹಿವಾಟಿನ ಮುಖ್ಯಸ್ಥ ಅಲೋಕ್‌ ಕಪೂರ್ ಅವರು ಹೇಳುತ್ತಾರೆ.

‘ಸಕಲ ಸೌಲಭ್ಯ ಸಜ್ಜಿತ, ಸಂಪೂರ್ಣ ತರಬೇತಿ ಪಡೆದ ಸಿಬ್ಬಂದಿಯಿಂದ ಗುಣಮಟ್ಟದ ಮತ್ತು ಗ್ರಾಹಕರ ಹಣ ಉಳಿಸುವ ಸೇವೆ ಒದಗಿಸಲಾಗುವುದು. ದೇಶದ ಪ್ರಮುಖ ನಗರಗಳಲ್ಲಿ ಅನುಕೂಲಕರ ಸ್ಥಳದಲ್ಲಿ ಲಭ್ಯ ಇರುವ ಈ ಸರ್ವಿಸ್‌ ಕೇಂದ್ರಗಳಲ್ಲಿ ಆನ್‌ಲೈನ್‌ ಮೂಲಕವೂ ಸರ್ವಿಸ್‌ ಕಾದಿರಿಸಬಹುದು.

‘ಮುಂಬರುವ ವರ್ಷಗಳಲ್ಲಿ ಹೊಸದಾಗಿ 200 ‘ಎಂಎಫ್‌ಸಿಎಸ್‌’ಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಕೆಲ ನಗರಗಳಲ್ಲಿ ಕಾರ್‌ ಮತ್ತು ಬೈಕ್‌ಗೆ ಪ್ರತ್ಯೇಕ ಸರ್ವಿಸ್ ಕೇಂದ್ರಗಳಿವೆ. ಕೆಲವು ಕಡೆಗಳಲ್ಲಿ ಮಾತ್ರ ಕಾರ್‌ ಮತ್ತು ಬೈಕ್‌ಗಳನ್ನು ಒಂದೆಡೆಯೇ ಸರ್ವೀಸ್‌ ಮಾಡಲಾಗುತ್ತಿದೆ. ಕಾರ್‌, ಬೈಕ್‌ಗಳ ಸರ್ವಿಸ್‌ ಮಾರುಕಟ್ಟೆ ಅನೇಕ ವಿಧದಲ್ಲಿ ಪರಸ್ಪರ ಭಿನ್ನವಾಗಿರುತ್ತದೆ. ದೇಶದಲ್ಲಿ ಸದ್ಯಕ್ಕೆ ಬಹುಬ್ರ್ಯಾಂಡ್‌ ಸರ್ವಿಸ್‌ ಕೇಂದ್ರಗಳ ಸಂಖ್ಯೆಯು ಸೀಮಿತ ಪ್ರಮಾಣದಲ್ಲಿ ಇದೆ. ಇವುಗಳ ಸಂಖ್ಯೆಯು ನಾಲ್ಕೈದು ವರ್ಷಗಳಲ್ಲಿ ಮಾರುಕಟ್ಟೆಯ ಶೇ 10ರಷ್ಟು ಪಾಲು ಪಡೆದುಕೊಳ್ಳಲಿದೆ.

‘ಕಾರ್‌ ಸರ್ವಿಸ್‌ ಕೇಂದ್ರಗಳಿಗೆ ಮಹಾ ನಗರಗಳಲ್ಲಿ ಸರಾಸರಿ 10ರಿಂದ 15 ಕಿ.ಮೀ ದೂರ ಕ್ರಮಿಸಬೇಕಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ದೂರ ಗರಿಷ್ಠ 100 ಕಿ.ಮೀವರೆಗೂ ಇದೆ. ಈ ಅಂತರ ತಗ್ಗಿಸಿ ವಾಹನ ಮಾಲೀಕರಿಗೆ ಹೆಚ್ಚಿನ ಅನುಕೂಲತೆ ಒದಗಿಸುವುದು ‘ಎಂಎಫ್‌ಸಿಎಸ್‌’ನ ಮುಖ್ಯ ಉದ್ದೇಶವಾಗಿದೆ. ಅಸಂಘಟಿತ ವಲಯದ ಸರ್ವಿಸ್ ಕೇಂದ್ರಗಳು ಬದಲಾಗುತ್ತಿರುವ ತಂತ್ರಜ್ಞಾನದ ವೇಗಕ್ಕೆ ಹೊಂದಿಕೊಳ್ಳಲು, ಬದಲಾಗಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿವೆ. ಹೀಗಾಗಿ ವಾಹನ ಮಾಲೀಕರು ಮನೆ ಹತ್ತಿರ ಇರುವ ಸಂಘಟಿತ ವಲಯದ ಸರ್ವಿಸ್‌ ಕೇಂದ್ರಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಸಂಘಟಿತ ವಲಯದ ಸರ್ವಿಸ್‌ ಕ್ಷೇತ್ರದಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹಣ ಹೂಡಿಕೆಯೂ ಆಗುತ್ತಿದೆ’ ಎಂದು ಹೇಳುತ್ತಾರೆ ಅವರು.

‘ಮಲ್ಟಿ ಬ್ರ್ಯಾಂಡ್‌ ಸರ್ವಿಸ್‌ ಕೇಂದ್ರಗಳ ನಿರ್ವಹಣೆಯು ಸವಾಲಿನಿಂದ ಕೂಡಿದೆ. ದೇಶದಲ್ಲಿ ಇರುವ 16 ಕಾರ್ ತಯಾರಿಕಾ ಸಂಸ್ಥೆಗಳ ಪೆಟ್ರೋಲ್‌, ಡೀಸೆಲ್‌, ಸಿಎನ್‌ಜಿ ಚಾಲಿತ ವಾಹನಗಳನ್ನು ನಿರ್ವಹಿಸುವುದು ತುಂಬ ನಾಜೂಕಿನ ಕೆಲಸವಾಗಿದೆ. ಈ ಸವಾಲನ್ನು ‘ಎಂಎಫ್‌ಸಿಎಸ್‌’ ಯಶಸ್ವಿಯಾಗಿ ಎದುರಿಸಿ ವಾಹನ ಮಾಲೀಕರ ಮನ ಗೆದ್ದಿದೆ. ಈ ವಹಿವಾಟಿಗೆ ₹ 400 ಕೋಟಿ ಬಂಡವಾಳ ತೊಡಗಿಸಿದೆ.

‘ಅಸಲಿ ಬಿಡಿಭಾಗಗಳನ್ನು ಬಳಸುವುದನ್ನು ವಾಹನ ಮಾಲೀಕರಿಗೆ ಖಾತರಿಪಡಿಸಿ ಅವರ ವಿಶ್ವಾಸ ಗಳಿಸಿ, ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿರುತ್ತದೆ. ವಾಹನ ತಯಾರಿಕಾ ಸಂಸ್ಥೆಗಳು ಮತ್ತು ಮೂಲ ಬಿಡಿಭಾಗ ಪೂರೈಸುವ ಅಧಿಕೃತ ಸಂಸ್ಥೆಗಳಿಂದಲೇ ಬಿಡಿಭಾಗ ಖರೀದಿಸಿ ಬಳಸಲಾಗುತ್ತಿದೆ. ಬಿಡಿಭಾಗಗಳಿಗೆ ವಾರಂಟಿ ನೀಡುವುದರಿಂದ ವಾಹನ ಮಾಲೀಕರಲ್ಲಿ ಗುಣಮಟ್ಟದ ಬಗ್ಗೆ ಭರವಸೆ ಕಂಡು ಬರುತ್ತದೆ. ದೇಶದಾದ್ಯಂತ ಪ್ರತಿ ತಿಂಗಳೂ ಇಲ್ಲಿ 50 ರಿಂದ 55 ಸಾವಿರ ಕಾರ್‌ಗಳ ಸರ್ವೀಸ್ ಮಾಡಲಾಗುವುದು.

ವಿಮೆ ಪರಿಹಾರ ಸುಲಭ: ಅಪಘಾತಗಳಿಂದಾದ ದುರಸ್ತಿ ಸಂದರ್ಭದಲ್ಲಿ ವಿಮೆ ಪರಿಹಾರ ಪಡೆಯುವುದೂ ಇಲ್ಲಿ ಹೆಚ್ಚು ಸುಲಭವಾಗಿದೆ. 15 ಸಾಮಾನ್ಯ ವಿಮೆ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗಾಗಿ ಸುಲಭವಾಗಿ ನಗದುರಹಿತ ವಹಿವಾಟು ನಡೆಸಬಹುದು.

‘ಫ್ರಾಂಚೈಸಿಗಳ ಮೂಲಕ ಈ ಸರ್ವಿಸ್‌ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ. ಕಾರ್‌ ಸರ್ವಿಸ್‌ ಕೇಂದ್ರ ಆರಂಭಿಸಲು ಆಸಕ್ತರು ಭೂಮಿ ಮತ್ತು ₹ 1 ಕೋಟಿ ಬಂಡವಾಳ ಮತ್ತು ದ್ವಿಚಕ್ರ ವಾಹನ ಕೇಂದ್ರಕ್ಕೆ ಸ್ಥಳಾವಕಾಶದ ಜತೆಗೆ ₹ 16 ಲಕ್ಷ ತೊಡಗಿಸಬೇಕಾಗುತ್ತದೆ. ಸಂದರ್ಶನ ಮೂಲಕ ಫ್ರಾಂಚೈಸಿ ಮಾಲೀಕರನ್ನು ಆಯ್ಕೆ ಮಾಡಲಾಗುವುದು. ಆಟೊಮೋಟಿವ್ ಸರ್ವಿಸ್‌ ಬಿಸಿನೆಸ್‌ಗೆ ಸಂಬಂಧಿಸಿದಂತೆ ಸಂಸ್ಥೆಯು ನಾಸಿಕ್‌ನಲ್ಲಿ ನಡೆಸುವ 6 ದಿನಗಳ ಕೋರ್ಸ್‌ನಲ್ಲಿ ಸರ್ವಿಸ್‌ ಕೇಂದ್ರದ ಮಾಲೀಕರು ಕಡ್ಡಾಯವಾಗಿ ಭಾಗವಹಿಸಬೇಕು. ಇದು ಆಟೊಮೋಟಿವ್‌ ಬಿಸಿನೆಸ್‌ ಅರ್ಥೈಸಿಕೊಳ್ಳಲು ನೆರವಾಗುತ್ತದೆ. ಸಮಗ್ರ ತರಬೇತಿ ನಂತರವೇ ಸರ್ವೀಸ್‌ ಕೇಂದ್ರ ಸ್ಥಾಪಿಸಲಾಗುವುದು. ಇಂತಹ ಕೇಂದ್ರಗಳ ಮೇಲೆ ಕಂಪನಿಯು ಪ್ರತಿ ತಿಂಗಳೂ ನಿಗಾ ಇರಿಸಿರುತ್ತದೆ. ಸಿಬ್ಬಂದಿಗೆ ತಂತ್ರಜ್ಞಾನ ಮೇಲ್ದರ್ಜೆ ಕುರಿತು ಕಾಲ ಕಾಲಕ್ಕೆ ತರಬೇತಿ ನೀಡಲಾಗುವುದು.

‘ರಾಜ್ಯದಲ್ಲಿ 36 ಲಕ್ಷ ಕಾರ್‌ಗಳು ಮತ್ತು 2 ಕೋಟಿಗಿಂತ ಹೆಚ್ಚು ದ್ವಿಚಕ್ರ ವಾಹನಗಳು ಇರುವ ಅಂದಾಜಿದೆ. ರಾಜ್ಯದ ವಿವಿಧ ಭಾಗಗಳಲ್ಲಿ 18 ಕಾರ್‌ ಸರ್ವಿಸ್‌ ಕೇಂದ್ರಗಳಿವೆ. ಬೆಂಗಳೂರಿನ ಬಾಣಸವಾಡಿಯಲ್ಲಿ ಬೈಕ್‌ಗಳ ಒಂದು ಕೇಂದ್ರ ಇದೆ. ಕಾರ್‌ ವರ್ಕ್‌ಶಾಪ್‌ಗಳ ಸಂಖ್ಯೆಯನ್ನು 50ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. 10 ಕಿ. ಮೀ ಹತ್ತಿರದಲ್ಲಿ ಸರ್ವಿಸ್‌ ಕೇಂದ್ರ ಇರಬೇಕು ಎನ್ನುವುದು ಸಂಸ್ಥೆಯ ಧ್ಯೇಯವಾಗಿದೆ’ ಎಂದೂ ಅಲೋಕ್‌ ಕಪೂರ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT