ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್‌ಸ್ಕ್ರೈಬ್‌ ಆದ್ರೆ ಮನೆಗೆ ಮಹೀಂದ್ರಾ

Last Updated 20 ನವೆಂಬರ್ 2019, 19:30 IST
ಅಕ್ಷರ ಗಾತ್ರ

ದೇಶದ ಮುಂಚೂಣಿ ಕಾರು ತಯಾರಿಕ ಕಂಪನಿಗಳಲ್ಲಿ ಒಂದಾದ ಮಹೀಂದ್ರಾ ಅಂಡ್‌ ಮಹೀಂದ್ರಾದ ಕಾರು ಕೊಳ್ಳುವವರಿಗೆ ಹೊಸ ಸೌಲಭ್ಯ ಪರಿಚಯಿಸಿದೆ. ಗ್ರಾಹಕರಿಗೆ ಸಬ್‌ಸ್ಕ್ರಿಪ್ಶನ್‌ ಆಧಾರದಲ್ಲಿ ಕಾರು ನೀಡಲು ಮುಂದಾಗಿದೆ. ಈ ಮೂಲಕ ಗ್ರಾಹಕರು ಕಾರಿನ ಮಾಲೀಕರಾಗದೇ ಕಾರನ್ನು ಹೊಂದಬಹುದು. ಈ ಸೇವೆಯನ್ನು ರೀವ್‌ (ಆರ್‌ಇವಿವಿ) ಕಂಪನಿ ಜೊತೆಗೂಡಿ ಮಹೀಂದ್ರಾ ನೀಡುತ್ತಿದೆ.

ಇಎಂಐ ಮಾದರಿಯಲ್ಲಿ ತಿಂಗಳಿಗೆ ಹಣ ಪಾವತಿಸುವ ಎಸ್‌ಎಂಐ ವ್ಯವಸ್ಥೆ ಇದ್ದು, ತಿಂಗಳಿಗೆ ಇಂತಿಷ್ಟು ಹಣ ನೀಡಬೇಕಿದೆ. ರಸ್ತೆ ತೆರಿಗೆ ಸೇರಿದಂತೆ ಯಾವುದೇ ತೆರಿಗೆಗಳನ್ನು ಗ್ರಾಹಕರು ಭರಿಸುವಂತಿಲ್ಲ. ಸರಳೀಕೃತ ವ್ಯವಸ್ಥೆ, ಅತ್ಯುತ್ತಮ ರಿಯಾಯಿತಿ ಮತ್ತು ಗ್ರಾಹಕರಿಗೆ ತೃಪ್ತಿ ನೀಡುವ ಅಂಶಗಳು ಈ ಸಬ್‌ಸ್ಕ್ರಿಪ್ಶನ್‌ ಸೇವೆಯಲ್ಲಿ ಇವೆ. ಮರು ಮಾರಾಟ, ತೆರಿಗೆ ವೆಚ್ಚ, ನಿರ್ವಹಣಾ ವೆಚ್ಚದ ಪುನರಾವರ್ತನೆಗಳು ಇರುವುದಿಲ್ಲ.ಶೂನ್ಯ ಪಾವತಿ (ಝೀರೊ ಡೌನ್‌ಪೇಮೆಂಟ್)‌ ಸೇವೆಯೂ ಲಭ್ಯವಿದ್ದು, ಇಂತಿಷ್ಟು ಮುಂಗಡ ಹಣ ನೀಡಬೇಕೆಂಬ ಚಿಂತೆಯೂ ಗ್ರಾಹಕರಿಗೆ ಇಲ್ಲ. ಎಸ್‌ಎಂಐ (ಇಎಂಐ ಮಾದರಿ) ತಿಂಗಳಿಗೆ ₹ 19,750 ರಿಂದ ಆರಂಭವಾಗುತ್ತದೆ. ಕಾರಿನ ಮಾದರಿಗಳ ಆಧಾರದ ಮೇಲೆ ಎಸ್‌ಎಂಐ ಹಣದಲ್ಲಿ ವ್ಯತ್ಯಾಸ ಇರುತ್ತದೆ.

ಬಾಡಿಗೆ ಆಟೊ, ಕಾರಿನ ಮೂಲಕ ಉದ್ಯೋಗ ಕಂಡುಕೊಂಡಿರುವ ಮಂದಿಗೆ ಈ ಹೊಸ ಯೋಜನೆ ಲಾಭಕರವಾಗಲಿದೆ. ಅಲ್ಲದೆ, ಸ್ವಂತ ಕಾರನ್ನು ಹೊಂದುವ ಆಸೆಯನ್ನು ಇಟ್ಟುಕೊಂಡಿರುವವರಿಗೆ ಇದು ಉತ್ತಮ ಆಯ್ಕೆಯೂ ಆಗಿದೆ.ಯಾವುದೇ ಸಾಫ್ಟ್‌ವೇರ್‌ ಕೊಂಡುಕೊಳ್ಳಲು, ಸಿನಿಮಾ ನೋಡಲು ಯೂಟ್ಯೂಬ್‌, ಅಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌ ನಂತಹ ಜಾಲತಾಣಗಳಿಗೆ ಸಬ್‌ಸ್ಕ್ರೈಬ್‌ ಆಗುವಂತೆ ಕಾರ್‌ ಸಬ್‌ಸ್ಕ್ರಿಪ್ಶನ್‌ ಪಡೆಯಬಹುದು. ಗ್ರಾಹಕರಿಗೆ ಕಾರಿನ ಅರೆ ಮಾಲೀಕತ್ವದ ಅನುಭವವೂ ಸಿಗುತ್ತದೆ. ಕೆಲ ವರ್ಷಗಳ ಕಾಲ ಕಾರನ್ನು ಬಳಸಿ ನಂತರ ಕಾರನ್ನು ಬದಲಾಯಿಸಲು ಗ್ರಾಹಕರು ಮನಸ್ಸು ಮಾಡಿದರೆ, ಅದಕ್ಕೂ ಅವಕಾಶವಿದೆ.

ಇದೊಂದು ಬಾಡಿಗೆ ಕಾರೊಂದನ್ನು ಪಡೆಯುವ ಮಾದರಿಯಂತಿದೆ. ಆದರೆ, ಇದು ಷೋರೂಂನಲ್ಲಿ ಕೊಂಡ ಹೊಸ ಕಾರು ಎಂಬುದಷ್ಟೇ ವ್ಯತ್ಯಾಸ. ಕೆಲ ವರ್ಷಗಳ ನಂತರ ಕಾರನ್ನು ಮಾರುವ ಪ್ರಮೇಯವೂ ಗ್ರಾಹಕರಿಗೆ ಇಲ್ಲ. ಬೇಕೆಂದಾಗ ಕಾರನ್ನು ವಾಪಸು ಮಾಡಿ ಬೇರೆ ಹೊಸ ಕಾರಿಗೆ ಸಬ್‌ಸ್ಕ್ರೈಬ್‌ ಆಗಬಹುದು. ಇದಕ್ಕೆ ಹಣವನ್ನು ತೆರಬೇಕಾಗಿಲ್ಲ. ಆ ಕಾರಿಗೆ ವಿಧಿಸಿರುವ ಎಸ್‌ಎಂಐ ಕಟ್ಟಿದರಷ್ಟೇ ಸಾಕು. ಹೀಗೆ ಗ್ರಾಹಕರು ಕೆಲ ವರ್ಷಗಳಲ್ಲೇ ವಿವಿಧ ಕಾರಿನ ಅನುಭವ ಪಡೆಯುವ ಅವಕಾಶ ಈ ನೂತನ ಪ್ರಯೋಗದಲ್ಲಿದೆ.

‌‘ಮೊದಲ ಹಂತದಲ್ಲಿ ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್‌, ಚಂಡೀಗಡ, ಅಹಮದಾಬಾದ್‌ಗಳಲ್ಲಿ ಈ ಸೇವೆ ಆರಂಭವಾಗಲಿದೆ. ಮುಂದಿನ ಹಂತದಲ್ಲಿ ಭಾರತದ ಹಲವು ನಗರಗಳಿಗೆ ವಿಸ್ತರಣೆ ಆಗಲಿದೆ. ಕಾರಿನ ಮಾಲೀಕತ್ವದ ಅನುಭವ ಎಲ್ಲರಿಗೂ ಸಿಗುವಂತೆ ಮಾಡಲು ಈ ಸೇವೆಯನ್ನು ಆರಂಭಿಸಲಾಗಿದೆ’ ಎನ್ನುತ್ತಾರೆ ಮಹೀಂದ್ರಾ ಲಿಮಿಟೆಡ್‌ನ ಮಾರಾಟ ವಿಭಾಗದ ಮುಖ್ಯಸ್ಥ ವಿಜಯ್‌ ರಾಮ್‌ ಎನ್‌.

‘ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಈ ಸೇವಾ ಮಾದರಿ ಕ್ರಾಂತಿಯನ್ನೇ ಉಂಟುಮಾಡಲಿದೆ. ಕಂಪನಿ ಈ ಮೂಲಕ ಹೊಸ ಗ್ರಾಹಕರನ್ನು ಸೆಳೆಯುವ ಗುರಿ ಹೊಂದಿದ್ದು, ದೇಶದಾದ್ಯಂತ ಕಾರು ಸಂಸ್ಕೃತಿ ಬೆಳೆಸುವ ಉದ್ದೇಶವನ್ನು ಹೊಂದಿದೆ’ ಎಂದು ಅವರು ಹೇಳುತ್ತಾರೆ.

ಕಿ.ಮೀ ಮಿತಿ: ತಿಂಗಳಲ್ಲಿ ಕಾರು ಮಾಲೀಕರು 2,083 ಕಿ.ಮೀ ವರೆಗೂ ಸಂಚರಿಸಬಹುದು. ಈ ಮಿತಿ ಮೀರಿ ಪ್ರಯಾಣಿಸಿದರೆ ಪ್ರತಿ ಕಿ.ಮೀಗೆ ₹ 11 ಭರಿಸಬೇಕಾಗುತ್ತದೆ.

ಥರಾವರಿ ಕಾರುಗಳು: ಆರು ಕಾರುಗಳು ಈ ಸೇವಾ ಯೋಜನೆಗೆ ಒಳಪಟ್ಟಿವೆ. ಕೆಯುವಿ 100, ಎಕ್ಸ್‌ಯುವಿ 500, ಎಕ್ಸ್‌ಯುವಿ 300, ಸ್ಕಾರ್ಪಿಯೊ, ಟಿಯುವಿ 300, ಮರಾಝೊ ಮತ್ತು ಆಲ್ಟರಸ್‌ ಜಿ4 ಕಾರುಗಳನ್ನು ಗ್ರಾಹಕರು ಕಂಪನಿಯ ಜಾಲತಾಣಕ್ಕೆ ಭೇಟಿ ನೀಡಿ ಆಯ್ಕೆ ಮಾಡಬಹುದು. ಈ ಮೂಲಕ ಗ್ರಾಹಕರು ಕಾರುಗಳ ಅರೆ ಮಾಲೀಕರಾಗಬಹುದು.

ಕಾರು ಕೊಳ್ಳಲು ಜಾಲತಾಣದಲ್ಲಿ ವೈಯಕ್ತಿಕ ವಿವರ ಸಲ್ಲಿಸಬೇಕಾಗುತ್ತದೆ. ಕಾರಿನ ಮಾದರಿಗೆ ಅನುಗುಣವಾಗಿ ಇಂತಿಷ್ಟು ಠೇವಣಿಯನ್ನು ಇಡಬೇಕಾಗುತ್ತದೆ. ಅದನ್ನು ಮರಳಿ ಪಡೆಯುವ ಅವಕಾಶವೂ ಇದೆ. ಒಂದು ತಿಂಗಳ ಎಸ್‌ಎಂಐ ಅನ್ನು ಮುಂಚಿತವಾಗಿ ನೀಡಿದರೆ ಗ್ರಾಹಕರ ಇಷ್ಟದ ಕಾರು ಅವರ ಮನೆ ಮುಂದೆ ನಿಂತಿರುತ್ತದೆ. ಅದೂ ಒಂದು ತಿಂಗಳ ಒಳಗೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT