ಶನಿವಾರ, ಡಿಸೆಂಬರ್ 7, 2019
25 °C
ಭಾರತದ ಮಾರುಕಟ್ಟೆಗೆ

ಮರಾಜೊ: ಮಹೀಂದ್ರಾ ಗ್ಲೋಬಲ್ ಪ್ರಾಡಕ್ಟ್

Published:
Updated:
Deccan Herald

ಭಾರತದಲ್ಲಿ ಮಲ್ಟಿ ಯುಟಿಲಿಟಿ ವೆಹಿಕಲ್‌ಗಳಿಗೆ ಬೇಡಿಕೆ ಇದ್ದೇ ಇದೆ. ಅದಕ್ಕೆಂದೇ ಪ್ರತಿ ಕಂಪನಿಯೂ ತನ್ನ ಪೋರ್ಟ್‌ಫೋಲಿಯೊದಲ್ಲಿ ಒಂದೊಂದು ಎಂಯುವಿ ಮತ್ತು ಎಂಪಿವಿಗಳನ್ನು ಹೊಂದಿವೆ. ಈ ವರ್ಗದಲ್ಲಿ ಪೈಪೋಟಿ ಹೆಚ್ಚು. ಮಹೀಂದ್ರಾ ಕಂಪನಿಯೂ ಈಚೆಗೆ ಹೊಸ ಎಂಯುವಿ 'ಮರಾಜೊ'ವನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ವರ್ಗದಲ್ಲಿದ್ದ ಪೈಪೋಟಿಯನ್ನು ಮರಾಜೊ ಮತ್ತಷ್ಟು ಹೆಚ್ಚಿಸಿದೆ.

ಎಂಟ್ರಿ ಲೆವೆಲ್ ಎಂಯುವಿ/ಎಂಪಿವಿ ವರ್ಗದಲ್ಲಿ ಮಾರುತಿ ಎರ್ಟಿಗಾ ಮತ್ತು ಪ್ರೀಮಿಯಂ ಎಂಯುವಿ ವರ್ಗದಲ್ಲಿ ಟೊಯೊಟ ಇನ್ನೋವಾ ಕ್ರಿಸ್ಟಾ ಇದೆ. ಈ ಎರಡೂ ವಾಹನಗಳು ಆಯಾ ವರ್ಗದಲ್ಲಿ ಏಕಸ್ವಾಮ್ಯ ಸಾಧಿಸಿವೆ. ಅದು ಬೆಲೆ ಇರಬಹುದ, ಸೌಲಭ್ಯ ಮತ್ತು ಗಾತ್ರದಲ್ಲೂ ಇರಬಹುದು. ಈ ಎರಡೂ ವರ್ಗದ ಮಧ್ಯೆ ಭಾರಿ ಅಂತರವಿದೆ. ಈ ಅಂತರದಲ್ಲಿ ಮಿಡ್ ಸೈಜ್ ಎಂಪಿವಿ ಎಂಬ ಮತ್ತೊಂದು ವರ್ಗವಿದೆ (ಇಲ್ಲಿ ರೆನೊ ಲಾಡ್ಜಿ ಮಾತ್ರ ಇದೆ). ಆದರೆ ಇದಕ್ಕೆ ಅಂಥ ಬೇಡಿಕೆ ಇಲ್ಲ. ಈ ಎರಡು ವರ್ಗಗಳ ನಡುವಿರುವ ಕಂದಕ (ವ್ಯಾಕ್ಯೂಮ್) ಅನ್ನು ಗಮನಿಸಿದ ಮಹೀಂದ್ರಾ ಕಂಪನಿ ಮರಾಜೊವನ್ನು ಅಭಿವೃದ್ಧಿಪಡಿಸಿದೆ. ಎಂಜಿನ್ ಸಾಮರ್ಥ್ಯ, ಗಾತ್ರ ಮತ್ತು ಸೌಲಭ್ಯಗಳಲ್ಲಿ ಮರಾಜೊ ತಕ್ಕಮಟ್ಟಿನ ಪೈಪೋಟಿ ನೀಡಲಿದೆ.

6 ಮತ್ತು 7 ಸೀಟುಗಳ ಆಯ್ಕೆಯಲ್ಲಿ ಲಭ್ಯವಿರುವ ಮರಾಜೊ ಒಂದು ಉತ್ತಮ ಕೌಟುಂಬಿಕ ವಾಹನ. ಏಳೂ ಜನ ಆರಾಮವಾಗಿ ಕುಳಿತು ಪ್ರಯಾಣಿಸುವಷ್ಟು ಈ ವಾಹನದ ಒಳಾಂಗಣ ವಿಶಾಲವಾಗಿದೆ. ಚಂದದ ಲೆದರ್‌ ಸೀಟ್‌ಗಳು, ಆಕರ್ಷಕ ಡ್ಯಾಶ್‌ಬೋರ್ಡ್, ದೊಡ್ಡ ಟಚ್‌ಸ್ಕ್ರೀನ್ ಇನ್ಫೊಟೈನ್‌ಮೆಂಟ್ ಸಿಸ್ಟಂ, ಇದರ ಹೆಗ್ಗಳಿಕೆಗಳು. ವಿಮಾನದಿಂದ ಪ್ರೇರಣೆ ಪಡೆದು ಕೆಲವು ಉಪಕರಣಗಳನ್ನು ವಾಹನದಲ್ಲಿ ವಿನ್ಯಾಸ ಮಾಡಲಾಗಿದೆ. ಅದರಲ್ಲಿ ವಿಮಾನದ ಕಂಟ್ರೋಲ್ ಲಿವರ್ ತರಹದ ಪಾರ್ಕಿಂಗ್ ಲಿವರ್ ಕೂಡ ಒಂದು. ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಭಿನ್ನವಾದ ಅನುಭವ ಕೊಡುವ ಶಕ್ತಿ ಮರಾಜೊಗೆ ಇದೆ. ಹೀಗಾಗಿಯೇ ಅದು ಎಂಪಿವಿ/ಎಂಯುವಿ ವರ್ಗದ ಒಂದು ವಿಶಿಷ್ಟ ವಾಹನ ಎಂದರೆ ಅತಿಶಯೋಕ್ತಿ ಆಗಲಾರದು.

'ಇದೊಂದು ಗ್ಲೋಬಲ್ ಪ್ರಾಡೆಕ್ಟ್' ಎನ್ನುತ್ತದೆ ಮಹೀಂದ್ರಾ. ವಾಹನದ ಅಡಿಯಚ್ಚು ಮತ್ತು ದೇಹದ ವಿನ್ಯಾಸ ಅಮೆರಿಕದ ಡೆಟ್ರಾಯ್ಟ್‌ನಲ್ಲಿ ತಯಾರಾಗಿದೆ. ಆಸ್ಟ್ರೇಲಿಯಾ ಮೂಲಕದ ಎವಿಎಲ್ ಕಂಪನಿ ಎಂಜಿನ್‌ ಅಭಿವೃದ್ಧಿಪಡಿಸಿದೆ. ಎಲ್ಲ ಬಿಡಿ ಭಾಗಗಳನ್ನು ಸೇರಿಸಿ, ಮರಾಜೊ ವಾಹನ ಭಾರತದಲ್ಲಿ ತಯಾರಾಗುತ್ತದೆ. 'ಹೀಗಾಗಿಯೇ ಇದು ಗ್ಲೋಬಲ್ ಪ್ರಾಡೆಕ್ಟ್. ಅದಕ್ಕೂ ಮಿಗಿಲಾಗಿ ಭಾರತೀಯರಿಗೆಂದೇ ಜಾಗತಿಕವಾಗಿ ಅಭಿವೃದ್ಧಿಪಡಿಸಿದ ಮೊದಲ ವಾಹನ' ಎಂದು ಮಹೀಂದ್ರಾ ಬೆನ್ನುತಟ್ಟಿಕೊಳ್ಳುತ್ತದೆ.

ಹಲವು ಹೊಸತುಗಳು, 11 ಪೇಟೆಂಟ್‌ಗಳು..

ಮರಾಜೊ ವಿನ್ಯಾಸದಲ್ಲಿ ಹಲವು ನವೀನ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಅವುಗಳಲ್ಲಿ ಕೆಲವನ್ನು ಈ ವಾಹನಕ್ಕೇ ಎಕ್ಸ್‌ಕ್ಲೂಸಿವ್‌ ಆಗಿ ಅಭಿವೃದ್ಧಿಪಡಿಸಲಾಗಿದೆ. ಹೀಗಾಗಿ ಅವುಗಳಲ್ಲಿ 11 ತಂತ್ರಜ್ಞಾನಗಳಿಗೆ ಪೇಟೆಂಟ್ ಪಡೆಯಲು ಕಂಪನಿ ಅರ್ಜಿ ಸಲ್ಲಿಸಿದೆ.

ಮರಾಜೊ ಲ್ಯಾಡರ್ ಆನ್‌ ಫ್ರೇಂ ವಾಹನ. ಅಂದರೆ ದೊಡ್ಡ ಎಸ್‌ಯುವಿ, ಬಸ್‌-ಟ್ರಕ್‌ಗಳಂತೆ ವಾಹನದ ಅಡಿಯಚ್ಚು ಮತ್ತು ದೇಹ ಪ್ರತ್ಯೇಕವಾಗಿರುತ್ತವೆ. ಈ ರೀತಿಯ ವಿನ್ಯಾಸವು ವಾಹನಕ್ಕೆ ಗಟ್ಟಿತನವನ್ನು ಕೊಡುತ್ತದೆ. ಈ ರೀತಿಯ ಅಡಿಯಚ್ಚು ಇದ್ದಾಗ ಫ್ರಂಟ್‌ ವ್ಹೀಲ್ ಡ್ರೈವ್ ಅಳವಡಿಕೆ ಕಷ್ಟಸಾಧ್ಯ. ಆದರೆ ಈ ವಾಹನದಲ್ಲಿ ಫ್ರಂಟ್‌ ವ್ಹೀಲ್ ಡ್ರೈವ್ ವ್ಯವಸ್ಥೆ ಇದೆ. ಸಾಮಾನ್ಯವಾಗಿ ಮಾನೊಕಾಕ್ (ಅಡಿಯಚ್ಚು ಮತ್ತು ದೇಹ ಒಂದೇ ಆಗಿರುವ ವಿನ್ಯಾಸ. ಸಾಮಾನ್ಯ ಕಾರುಗಳಲ್ಲಿ, ಮಿನಿ ಎಸ್‌ಯುವಿಗಳಲ್ಲಿ ಈ ವ್ಯವಸ್ಥೆ ಇರುತ್ತದೆ) ಅಡಿಯಚ್ಚಿನಲ್ಲಿ ಮಾತ್ರ ಫ್ರಂಟ್‌ ವೀಲ್ ಡ್ರೈವ್ ವ್ಯವಸ್ಥೆ ಇರುತ್ತದೆ. ಇದರಲ್ಲಿ ಫ್ರಿಕ್ಷನ್ ಲಾಸ್ ಕಡಿಮೆ. ಹೀಗಾಗಿ ಎಂಜಿನ್‌ನ ಶಕ್ತಿ ವ್ಯರ್ಥವಾಗುವುದಿಲ್ಲ, ಮೈಲೇಜ್ ಸಹ ಹೆಚ್ಚುತ್ತದೆ. ಇದು ಫ್ರಂಟ್‌ ವೀಲ್ ಡ್ರೈವ್ ತಂತ್ರಜ್ಞಾನದ ಹೆಗ್ಗಳಿಕೆ.

ಲ್ಯಾಡರ್ ಆನ್ ಫ್ರೇಂನ ಗಡಸುತನ ಮತ್ತು ಫ್ರಂಟ್‌ ವೀಲ್ ಡ್ರೈವ್‌ನ ದಕ್ಷತೆಯನ್ನು ಗಮನದಲ್ಲಿರಿಸಿಕೊಂಡು ಎರಡನ್ನೂ ಮಿಳಿತ ಮಾಡಿ ಲ್ಯಾಡರ್ ಆನ್ ಫ್ರೇಂ ಫ್ರಂಟ್‌ ವೀಲ್ ಡ್ರೈವ್ ಎಂಬ ಹೊಸ ವ್ಯವಸ್ಥೆಯನ್ನೇ ಮರಾಜೊಗೆಂದು ಅಭಿವೃದ್ಧಿಪಡಿಸಲಾಗಿದೆ.

ಪ್ಯಾಸೆಂಜರ್ ಕಾರಿನ ಜಗತ್ತಿನಲ್ಲಿ ಈ ವ್ಯವಸ್ಥೆ ಜಾರಿಗೆ ತರಲು 1956ರಲ್ಲೇ ಪ್ರಯತ್ನ ನಡೆದಿತ್ತಾದರೂ ಈ ತಂತ್ರಜ್ಞಾನ ಇರುವ ಕಾರು ಮಾರುಕಟ್ಟೆಗೆ ಬಂದಿದ್ದು ಇದೇ ಮೊದಲು.

ಗಟ್ಟಿತನ, ಹೆಚ್ಚಿನ ಮೈಲೇಜ್:

ಮೊದಲೇ ಹೇಳಿದಂತೆ ಗಟ್ಟಿತನ ಮತ್ತು ಹೆಚ್ಚಿನ ಮೈಲೇಜ್ ಇದರ ಹೆಗ್ಗಳಿಕೆ. ಇದರ ಜತೆಯಲ್ಲೇ ಪ್ರೊಫೆಲರ್ ಶಾಫ್ಟ್ (ರೇರ್ ವೀಲ್ ಡ್ರೈವ್ ವಾಹನಗಳಲ್ಲಿ ಎಂಜಿನ್‌ ಶಕ್ತಿಯನ್ನು ಡಿಫರೆನ್ಷಿಯಲ್ ಗೆ ರವಾನಿಸುವ ಸಾಧನ) ಇಲ್ಲದಿರುವ ಕಾರಣ ವಾಹನದೊಳಗೆ ಪ್ಲಾಟ್‌ಫಾರಂ ಸಪಾಟಾಗಿದೆ. ಇದರಿಂದ ಒಳಾಂಗಣದಲ್ಲಿ ಹೆಚ್ಚು ಸ್ಥಳ ದೊರೆಯುತ್ತದೆ. ಮಾತ್ರವಲ್ಲ, ರನ್ನಿಂಗ್ ಬೋರ್ಡ್‌ ಎತ್ತರವೂ ಕಡಿಮೆ ಆಗುತ್ತದೆ. ಇದರಿಂದ ಮರಾಜೊ ಹತ್ತಿ-ಇಳಿಯುವುದು ಸುಲಭವಾಗಲಿದೆ.
ಜತೆಗೆ ಗಿಯರ್ ಬಾಕ್ಸ್‌ನ ನಡುಕ ಗಿಯರ್ ಲಿವರ್‌ಗೆ ರವಾನೆಯಾಗುವುದಿಲ್ಲ. ಇದರಿಂದ ವಾಹನದೊಳಗೆ ವೈಬ್ರೇಟಿಂಗ್‌, ಶಬ್ದ ಕಡಿಮೆ ಇರುತ್ತದೆ. ಒಟ್ಟಾರೆ ಚಾಲನೆ ಮತ್ತು ಪ್ರಯಾಣ ನಯವಾಗಿರಲಿದೆ.

ಮರಾಜೊದ ಎರಡನೇ ಮತ್ತು ಮೂರನೇ ಸಾಲಿನ ಸೀಟುಗಳಿಗೂ ರೂಫ್ ಮೌಂಟೆಡ್ ಎಸಿ ವೆಂಟ್‌ಗಳನ್ನು ನೀಡಲಾಗಿದೆ. ಈ ಎಸಿ ವೆಂಟ್ ಅನ್ನು ವಿಮಾನದ ಎಸಿ ವೆಂಟ್‌ನಂತೆ ವಿನ್ಯಾಸ ಮಾಡಲಾಗಿದೆ. ಇದರಿಂದ ಕ್ಯಾಬಿನ್ ಒಳಗೆ ಗಾಳಿಯ ಚಲನೆ ಸರಾಗವಾಗುತ್ತದೆ. ಕಡಿಮೆ ಅವಧಿಯಲ್ಲಿ ಕ್ಯಾಬಿನ್ ತಂಪಾಗುತ್ತದೆ. ಈ ಸೌಲಭ್ಯಕ್ಕೆ ಮಹೀಂದ್ರಾವು ಸರೌಂಡ್ ಎಸಿ ವೆಂಟ್ ಎಂದು ಹೆಸರಿಟ್ಟಿದೆ.

ಮರಾಜೊದಲ್ಲಿ ಸುರಕ್ಷತೆಗೂ ಆದ್ಯತೆ ನೀಡಲಾಗಿದೆ. ಮುಂಬದಿಯಲ್ಲಿ ಎರಡು ಏರ್‌ ಬ್ಯಾಗ್‌ಗಳನ್ನು ನೀಡಿದೆ. ಸೈಡ್‌ ಕ್ರಾಶ್ ಬಾರ್‌ಗಳನ್ನು ಡೋರ್‌ ಒಳಗೆ ಅಡಗಿಸಿ ಇಡಲಾಗಿದೆ. ಎಲ್ಲಾ ನಾಲ್ಕೂ ಚಕ್ರಗಳಿಗೂ ಡಿಸ್ಕ್ ಬ್ರೇಕ್ ನೀಡಲಾಗಿದೆ.

ನಾಲ್ಕು ಅವತರಣಿಕೆಗಳಲ್ಲಿ ಲಭ್ಯವಿರುವ ಮರಾಜೊದ ಟಾಪ್‌ಎಂಡ್ ಅವತರಣಿಕೆ ಒಂದು ಪರಿಪೂರ್ಣ ಪ್ಯಾಕೇಜ್ ಎನಿಸಿಕೊಳ್ಳುತ್ತದೆ. ಅದೂ ಕೇವಲ ₹13.5 ಲಕ್ಷ ಎಕ್ಸ್‌ ಷೋರೂಂ ಬೆಲೆಯಲ್ಲಿ. ಹೀಗಾಗಿಯೇ ಎಂಯುವಿ ಮಾರುಕಟ್ಟೆಯಲ್ಲಿ ಈ ವಾಹನ ಸಂಚಲನ ಮೂಡಿಸಿದೆ.

'ಅನ್‌ಚಾಲೆಂಜೆಡ್ ಮರಾಜೊ'

‘ಶಾರ್ಕ್‌ನಿಂದ ಪ್ರೇರಣೆ ಪಡೆದು ಮರಾಜೊ ವಿನ್ಯಾಸ-ಅಭಿವೃದ್ಧಿ ಮಾಡಲಾಗಿದೆ’ ಎಂದು ಮಹಿಂದ್ರಾ ಕಂಪನಿಯ ಆನಂದ್ ಮಹೀಂದ್ರಾ ಘೋಷಿಸಿದ್ದಾರೆ.

ಶಾರ್ಕ್‌ನ ದೇಹದ ಕೆಲವು ಭಾಗಗಳನ್ನು ಹೋಲುವಂತೆ ಈ ವಾಹನದ ಕೆಲ ಭಾಗಗಳನ್ನು ವಿನ್ಯಾಸ ಮಾಡಲಾಗಿದೆ. ವಾಹನದ ದೇಹವನ್ನು ಶಾರ್ಕ್‌ನ ದೇಹದಂತೆಯೇ ಗಟ್ಟಿಮುಟ್ಟಾಗಿಸಲಾಗಿದೆ ಎಂಬುದು ಕಂಪನಿಯ ಅಭಿಪ್ರಾಯ. ಇದರ ಗ್ರಿಲ್, ಶಾರ್ಕ್‌ನ ಹಲ್ಲಿನಂತೆ ಕಾಣುತ್ತದೆ. ಇನ್ನು ಟೇಲ್ ಲ್ಯಾಂಪ್ ಶಾರ್ಕ್‌ನ ಬಾಲದಂತೆಯೇ ಇದೆ. ಶಾರ್ಕ್‌ ಫಿನ್ ಆಂಟೆನಾ ಹೆಸರೇ ಹೇಳುವಂತೆ ಶಾರ್ಕ್‌ನ ಬಾಲದ ತುದಿಯಂತೆಯೇ ಇದೆ.

***

123 ಬಿಎಚ್‌ಪಿಯಷ್ಟು ಶಕ್ತಿಯನ್ನು ಈ ಎಂಜಿನ್ ಉತ್ಪಾದಿಸುತ್ತದೆ

300 ನ್ಯೂಟನ್ ಮೀಟರ್ ಟಾರ್ಕ್ಅ ನ್ನು ಈ ಎಂಜಿನ್ ಉತ್ಪಾದಿಸುತ್ತದೆ

₹9.9 ಲಕ್ಷ ಆರಂಭಿಕ ಬೆಲೆ (ಎಕ್ಸ್ ಷೋರೂಂ)

₹13.5 ಲಕ್ಷ ಟಾಪ್‌ಎಂಡ್ ಅವತರಣಿಕೆಯ ಬೆಲೆ (ಎಕ್ಸ್ ಷೋರೂಂ)

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು