ಬುಧವಾರ, ಮೇ 25, 2022
27 °C

ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಮಾರುತಿ ಸುಜುಕಿ ಲಾಭ ಶೇ 48ರಷ್ಟು ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ, ಡಿಸೆಂಬರ್ ತ್ರೈಮಾಸಿಕದಲ್ಲಿ ನಿವ್ವಳ ಲಾಭದ ಪ್ರಮಾಣದಲ್ಲಿ ಶೇಕಡ 47.82ರಷ್ಟು ಇಳಿಕೆ ದಾಖಲಿಸಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹ 1,041 ಕೋಟಿ ನಿವ್ವಳ ಲಾಭ ಗಳಿಸಿದೆ. ಸೆಮಿಕಂಡಕ್ಟರ್ ಕೊರತೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಾರು ಮಾರಾಟ ಕಡಿಮೆ ಆಗಿರುವುದು ಲಾಭದ ಪ್ರಮಾಣ ತಗ್ಗಲು ಒಂದು ಕಾರಣ.

ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹ 1,996 ಕೋಟಿ ನಿವ್ವಳ ಲಾಭ ಗಳಿಸಿತ್ತು. 2021ರ ಡಿಸೆಂಬರ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ವಾಹನ ಮಾರಾಟ ಪ್ರಮಾಣವು ಶೇಕಡ 13.1ರಷ್ಟು ಇಳಿಕೆ ಆಗಿದೆ. ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಒಟ್ಟು 4.95 ಲಕ್ಷ ವಾಹನಗಳನ್ನು ಮಾರಾಟ ಮಾಡಿದ್ದ ಕಂಪನಿಯು, ಈ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ 4.30 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ.

ಜಾಗತಿಕ ಮಟ್ಟದಲ್ಲಿ ಎದುರಾದ ಎಲೆಕ್ಟ್ರಾನಿಕ್ ವಸ್ತುಗಳ ಪೂರೈಕೆ ಕೊರತೆಯ ಕಾರಣದಿಂದಾಗಿ ಡಿಸೆಂಬರ್ ತ್ರೈಮಾಸಿಕದಲ್ಲಿ ವಾಹನ ಉತ್ಪಾದನೆಗೆ ಅಡ್ಡಿ ಉಂಟಾಯಿತು. ಇದರಿಂದಾಗಿ ಅಂದಾಜು 90 ಸಾವಿರ ವಾಹನಗಳ ಉತ್ಪಾದನೆ ಸಾಧ್ಯವಾಗಲಿಲ್ಲ ಎಂದು ಕಂಪನಿಯು ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ವಿವರಿಸಿದೆ.

‘ಬೇಡಿಕೆ ಕಡಿಮೆ ಆಗಿರಲಿಲ್ಲ. ಡಿಸೆಂಬರ್ ತ್ರೈಮಾಸಿಕದ ಕೊನೆಯ ವೇಳೆಯಲ್ಲಿ ಕಂಪನಿಯ ಬಳಿ 2.40 ಲಕ್ಷ ವಾಹನಗಳಿಗೆ ಬೇಡಿಕೆಗಳು ಬಾಕಿ ಇದ್ದವು. ಎಲೆಕ್ಟ್ರಾನಿಕ್ ವಸ್ತುಗಳ ಪೂರೈಕೆಯು ನಿಧಾನವಾಗಿ ಸುಧಾರಣೆ ಕಾಣುತ್ತಿದೆ. 2022ರ ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿರುವ ತ್ರೈಮಾಸಿಕದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ವಿಶ್ವಾಸ ಇದೆ’ ಎಂದು ಕಂಪನಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು