ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ರೇಂಜ್‌ನ ನೆಕ್ಸಾನ್ ಇವಿ ಮ್ಯಾಕ್ಸ್‌

Last Updated 22 ಜೂನ್ 2022, 13:42 IST
ಅಕ್ಷರ ಗಾತ್ರ

ಟಾಟಾ ಮೋಟಾರ್ಸ್‌ ಈಚೆಗೆ ತನ್ನ ನೆಕ್ಸಾನ್‌ ಇ.ವಿ.ಯ ಸುಧಾರಿತ ರೂಪ ‘ನೆಕ್ಸಾನ್ ಇ.ವಿ. ಮ್ಯಾಕ್ಸ್‌’ಅನ್ನು ಬಿಡುಗಡೆ ಮಾಡಿದೆ. ಹೊಸ ತಂತ್ರಜ್ಞಾನ ಅಳವಡಿಸಲಾಗಿರುವ ನೆಕ್ಸಾನ್‌ ಇವಿ ಮ್ಯಾಕ್ಸ್‌ ಅನ್ನು ಕಂಪನಿಯ ಆಹ್ವಾನದ ಮೇರೆಗೆ ‘ಪ್ರಜಾವಾಣಿ’ ಟೆಸ್ಟ್‌ಡ್ರೈವ್ ನಡೆಸಿತ್ತು. ಅದರ ವಿವರ ಇಲ್ಲಿದೆ.

ನೆಕ್ಸಾನ್‌ ಇವಿಗೂ, ಇವಿ ಮ್ಯಾಕ್ಸ್‌ಗೂ ಹೊರನೋಟದಲ್ಲಿ ಯಾವುದೇ ಗುರುತರ ವ್ಯತ್ಯಾಸವಿಲ್ಲ. ನೇಮ್‌ ಬ್ಯಾಡ್ಜ್‌ಗಳು ಇರುವೆಡೆ ಇವಿ ಮ್ಯಾಕ್ಸ್‌ ಎಂಬ ಹೊಸ ಬ್ಯಾಡ್ಜ್‌ ಇರುವುದು ಗಮನಕ್ಕೆ ಬರುತ್ತದೆ. ಅದರ ಹೊರತಾಗಿ ಹೆಚ್ಚಿನ ವ್ಯತ್ಯಾಸ ಕಂಡುಬರುವುದಿಲ್ಲ. ಉಳಿದಂತೆ, ಇವಿ ಮ್ಯಾಕ್ಸ್ ಸಹ ರಸ್ತೆಯಲ್ಲಿ ಗಮನ ಸೆಳೆಯುತ್ತದೆ. ನಿಯಾನ್‌ ನೀಲಿ ಬಣ್ಣದ ಗ್ರಿಲ್‌ ಇನ್ಸರ್ಟ್‌ಗಳು, ವಿಂಡೋ ಸಿಲ್‌ ಲೈನ್‌ ಮತ್ತು ಬ್ಯಾಡ್ಜ್‌ಗಳು ಆಕರ್ಷಕವಾಗಿವೆ. ಸಾಮಾನ್ಯ ನೆಕ್ಸಾನ್‌ಗಳ ಮಧ್ಯೆ ಇವಿ ಮ್ಯಾಕ್ಸ್‌ ಎದ್ದುಕಾಣುವಂತೆ ಮಾಡಲು ಇವು ಸಹಕಾರಿ.ನೆಕ್ಸಾನ್‌ ಇವಿ ಮತ್ತು ನೆಕ್ಸಾನ್‌ ಇವಿ ಮ್ಯಾಕ್ಸ್‌ಗೂ ಸ್ವಲ್ಪ ವ್ಯತ್ಯಾಸ ಕಂಡುಬರುವುದು ಒಳಾಂಗಣದಲ್ಲಿಯೇ. ನೂತನ ಗಿಯರ್ ಸೆಲೆಕ್ಟರ್ ರೋಟರಿ ನಾಬ್‌ ಆಕರ್ಷಕವಾಗಿದೆ. ಡ್ರೈವ್‌, ಪಾರ್ಕಿಂಗ್‌, ನ್ಯೂಟ್ರಲ್‌ ಮತ್ತು ರಿವರ್ಸ್‌ ಮೋಡ್‌ಗಳು ನಿಚ್ಚಳವಾಗಿ ಕಾಣುವಂತೆ ವಿನ್ಯಾಸ ಮಾಡಲಾಗಿದೆ.

ನೆಕ್ಸಾನ್‌ ಇವಿ ಮತ್ತು ನೆಕ್ಸಾನ್‌ ಇವಿ ಮ್ಯಾಕ್ಸ್‌ಗೂ ಇರುವ ವ್ಯತ್ಯಾಸ ಕಣ್ಣಿಗೆ ಕಾಣುವಂಥದ್ದಲ್ಲ. ಬದಲಿಗೆ ಅನುಭವಕ್ಕೆ ಬರುವಂಥದ್ದು. ನೆಕ್ಸಾನ್‌ ಇವಿಯಲ್ಲಿನ ಬಹುಮುಖ್ಯ ಬದಲಾವಣೆ ಎಂದರೆ, ಅದರ ಬ್ಯಾಟರಿ ಪ್ಯಾಕ್‌ನ ಗಾತ್ರ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿರುವುದು. ನೆಕ್ಸಾನ್‌ ಇವಿಯಲ್ಲಿ 30.2 ಕಿಲೊ ವ್ಯಾಟ್‌ನ ಬ್ಯಾಟರಿ ಪ್ಯಾಕ್‌ ಇತ್ತು. ನೆಕ್ಸಾನ್‌ ಇವಿ ಮ್ಯಾಕ್ಸ್‌ನಲ್ಲಿ 40.5 ಕಿಲೊ ವ್ಯಾಟ್‌ನ ಬ್ಯಾಟರಿ ಪ್ಯಾಕ್‌ ಅಳವಡಿಸಲಾಗಿದೆ. ಬ್ಯಾಟರಿ ಪ್ಯಾಕ್‌ನ ಸಾಮರ್ಥ್ಯ ಹೆಚ್ಚಿಸಿರುವ ಕಾರಣ, ನೆಕ್ಸಾನ್‌ ಇವಿ ಮ್ಯಾಕ್ಸ್‌ನ ಸಾಮರ್ಥ್ಯ ಎಲ್ಲಾ ರೀತಿಯಲ್ಲೂ ಹೆಚ್ಚಾಗಿದೆ.

ನೆಕ್ಸಾನ್‌ ಇವಿಯ ಬ್ಯಾಟರಿಯನ್ನು ಒಮ್ಮೆ ಚಾರ್ಜ್‌ ಮಾಡಿದರೆ ಗರಿಷ್ಠ 312 ಕಿ.ಮೀ. ಕ್ರಮಿಸಬಹುದು (ರೇಂಜ್‌) ಎಂದು ಕಂಪನಿ ಹೇಳುತ್ತದೆ. ಆದರೆ ನೈಜ ಬಳಕೆಯಲ್ಲಿ ನೆಕ್ಸಾನ್‌ ಇವಿ, ಆಯಾ ಬಳಕೆದಾರರ ಚಾಲನೆ ಸ್ವರೂಪದ ಆಧಾರದಲ್ಲಿ 200–280 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಇವಿ ಮ್ಯಾಕ್ಸ್‌ನಲ್ಲಿ ಬ್ಯಾಟರಿ ಪ್ಯಾಕ್‌ನ ಸಾಮರ್ಥ್ಯ ಹೆಚ್ಚಿಸಿರುವ ಕಾರಣ ಅದರ ಗರಿಷ್ಠ ರೇಂಜ್‌ ಹೆಚ್ಚಾಗಿದೆ. ಇವಿ ಮ್ಯಾಕ್ಸ್‌ ಅನ್ನು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಗರಿಷ್ಠ 427 ಕಿ.ಮೀ. ಕ್ರಮಿಸಬಹುದು ಎಂದು ಕಂಪನಿ ಹೇಳುತ್ತದೆ. ಇದು ಹಳೆಯ ನೆಕ್ಸಾನ್ ಇವಿ ರೇಂಜ್‌ಗೆ ಹೋಲಿಸಿದರೆ, ಶೇ 36ರಷ್ಟು ಹೆಚ್ಚು. ಹೀಗಾಗಿ ಒಮ್ಮೆ ಚಾರ್ಜ್‌ ಮಾಡಿದರೆ ನೆಕ್ಸಾನ್‌ ಇವಿಗಿಂತಲೂ ಹೆಚ್ಚು ದೂರ ಕ್ರಮಿಸಲು ನೆಕ್ಸಾನ್‌ ಇವಿ ಮ್ಯಾಕ್ಸ್‌ನಲ್ಲಿ ಸಾಧ್ಯವಾಗುತ್ತದೆ.

ರೇಂಜ್‌ನ ಜತೆಗೆ ನೆಕ್ಸಾನ್‌ ಇವಿ ಮ್ಯಾಕ್ಸ್‌ನ ಸಾಮರ್ಥ್ಯ ಮತ್ತು ಶಕ್ತಿಯನ್ನೂ ಹೆಚ್ಚಿಸಲಾಗಿದೆ. ನೆಕ್ಸಾನ್‌ ಇವಿಯ ಗರಿಷ್ಠ ಶಕ್ತಿ 129 ಬಿಎಚ್‌ಪಿಗಳಷ್ಟಿತ್ತು. ನೆಕ್ಸಾನ್‌ ಇವಿ ಮ್ಯಾಕ್ಸ್‌ನಲ್ಲಿ ಗರಿಷ್ಠ ಶಕ್ತಿಯನ್ನು 145 ಬಿಎಚ್‌ಪಿಗೆ ಏರಿಸಲಾಗಿದೆ. ಜತೆಗೆ ಟಾರ್ಕ್‌ ಅನ್ನು 245 ಎನ್‌ಎಂನಿಂದ 250ಎನ್‌ಎಂಗೆ ಏರಿಸಲಾಗಿದೆ. ಬಿಎಚ್‌ಪಿ ಮತ್ತು ಟಾರ್ಕ್‌ನಲ್ಲಿ ಆಗಿರುವ ಏರಿಕೆಯು ಚಾಲನೆ ವೇಳೆ ಅನುಭವಕ್ಕೆ ಬರುತ್ತದೆ. ನೆಕ್ಸಾನ್‌ ಇವಿ 0 ಕಿ.ಮೀ. ವೇಗದಿಂದ 100 ಕಿ.ಮೀ.ವೇಗವನ್ನು ಮುಟ್ಟಲು 9.9 ಸೆಕೆಂಡ್‌ ಸಮಯ ತೆಗೆದುಕೊಳ್ಳುತ್ತಿತ್ತು. ನೆಕ್ಸಾನ್‌ ಇವಿ ಮ್ಯಾಕ್ಸ್‌ ಈ ವೇಗವನ್ನು ಕೇವಲ 9.3 ಸೆಕೆಂಡ್‌ನಲ್ಲಿ ಮುಟ್ಟುತ್ತದೆ. ಇದು ಪ್ರವೇಶಮಟ್ಟದ ಪರ್ಫಾಮೆನ್ಸ್‌ ಕಾರುಗಳ ವೇಗವರ್ಧನೆಯ ಮಟ್ಟ. ಹೀಗಾಗಿ ನೆಕ್ಸಾನ್‌ ಇವಿ ಮ್ಯಾಕ್ಸ್‌ನ ಚಾಲನೆ ಪರ್ಫಾಮೆನ್ಸ್‌ ಕಾರಿನ ಚಾಲನೆಯ ಅನುಭವವನ್ನು ಕೊಡುತ್ತದೆ.

ನೆಕ್ಸಾನ್‌ ಇವಿಯ ಗರಿಷ್ಠ ವೇಗವನ್ನು ಪ್ರತಿ ಗಂಟೆಗೆ 120 ಕಿ.ಮೀ.ಗೆ ಮಿತಗೊಳಿಸಲಾಗಿತ್ತು. ಇದರಿಂದ ಹೆದ್ದಾರಿ ಚಾಲನೆ ವೇಳೆ ವೇಗದ ಬಸ್‌ಗಳು, ವೇಗದ ಕಾರುಗಳನ್ನು ಓವರ್‌ಟೇಕ್‌ ಮಾಡುವುದು ತ್ರಾಸದಾಯಕವಾಗುತ್ತಿತ್ತು. ನೆಕ್ಸಾನ್‌ ಇವಿ ಮ್ಯಾಕ್ಸ್‌ನಲ್ಲಿ ಗರಿಷ್ಠ ವೇಗವನ್ನು ಗಂಟೆಗೆ 140 ಕಿ.ಮೀ.ಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ನೆಕ್ಸಾನ್‌ ಇವಿ ಮ್ಯಾಕ್ಸ್‌ನ ವೇಗವರ್ಧನೆ ಉತ್ತಮವಾಗಿದೆ. ಹೀಗಾಗಿ ಹೆದ್ದಾರಿ ಚಾಲನೆ ಮತ್ತು ವೇಗದ ವಾಹನಗಳ ಓವರ್‌ಟೇಕಿಂಗ್‌ ಸುಲಭಸಾಧ್ಯ. ಕ್ರೂಸ್‌ ಕಂಟ್ರೋಲ್‌ ಇರುವುದರಿಂದ ಹೆದ್ದಾರಿಯಲ್ಲಿ ಆರಾಮದಾಯಕ ಚಾಲನೆ ಸಾಧ್ಯವಾಗುತ್ತದೆ.

ನೆಕ್ಸಾನ್‌ ಇವಿ ಮತ್ತು ನೆಕ್ಸಾನ್‌ ಇವಿ ಮ್ಯಾಕ್ಸ್‌ಗೂ ಇರುವ ಮತ್ತೊಂದು ಬಹುಮುಖ್ಯ ಬದಲಾವಣೆ ಅಂದರೆ ಅಡ್ಜಸ್ಟಬಲ್‌ ಬ್ರೇಕ್‌ ರಿಜನರೇಷನ್‌. ಬಹುತೇಕ ಎಲ್ಲಾ ಇವಿಗಳಲ್ಲೂ ಬ್ರೇಕ್‌ ರಿಜನರೇಷನ್‌ ವ್ಯವಸ್ಥೆ ಇರುತ್ತದೆ. ಆದರೆ. ನೆಕ್ಸಾನ್‌ ಇವಿ ಮ್ಯಾಕ್ಸ್‌ನಲ್ಲಿ ಬ್ರೇಕ್‌ ರಿಜನರೇಷನ್‌ ಮಟ್ಟವನ್ನು ಬದಲಿಸಿಕೊಳ್ಳಬಹುದು. ಇದು ಎಂಜಿನ್‌ ಬ್ರೇಕಿಂಗ್‌ನಂತೆಯೂ ಕೆಲಸ ಮಾಡುತ್ತದೆ ಮತ್ತು ಬ್ರೇಕಿಂಗ್‌ ವೇಳೆ ಬ್ಯಾಟರಿಯನ್ನು ಚಾರ್ಜ್ ಮಾಡುತ್ತದೆ. ರಿಜನರೇಷನ್‌ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಅವಕಾಶವಿರುವ ಕಾರಣ, ಬ್ಯಾಟರಿ ಹೆಚ್ಚು ಚಾರ್ಜ್ ಆಗುತ್ತದೆ ಮತ್ತು ಬ್ಯಾಟರಿಯ ರೇಂಜ್‌ ಹೆಚ್ಚುತ್ತದೆ. ಇದೊಂದು ಹೆಚ್ಚು ಅನುಕೂಲಕ್ಕೆ ಬರುವ ಸವಲತ್ತು. ರಿಜನರೇಷನ್‌ ಅನ್ನು ಗರಿಷ್ಠ ಮಟ್ಟಕ್ಕೆ ಇರಿಸಿದಲ್ಲಿ, ತಗ್ಗಿನತ್ತ ಚಲಿಸುವಾಗ ಇವಿ ಮ್ಯಾಕ್ಸ್‌ ಹೆಚ್ಚು ನಿಯಂತ್ರಣದಲ್ಲಿ ಇರುತ್ತದೆ. ಜತೆಗೆ, ಸಂಚಾರ ದಟ್ಟಣೆಯಲ್ಲಿ ಚಾಲನೆ ಸುಲಭವಾಗುತ್ತದೆ.

ನೆಕ್ಸಾನ್‌ ಇವಿ ಮ್ಯಾಕ್ಸ್‌ ಅನ್ನು 3.3 ಕಿ.ವ್ಯಾ. ಚಾರ್ಜರ್‌ನಲ್ಲಿ ಚಾರ್ಜ್‌ ಮಾಡುವುದಾದರೆ 15–16 ಗಂಟೆ ಚಾರ್ಜ್ ಮಾಡಬೇಕಾಗುತ್ತದೆ. ಆದರೆ, 7.2 ಕಿ.ವ್ಯಾ. ಚಾರ್ಜರ್‌ನಲ್ಲಿ ಕೇವಲ 6.5 ಗಂಟೆಯಲ್ಲಿ ಪೂರ್ಣ ಚಾರ್ಜ್ ಆಗುತ್ತದೆ. ಫಾಸ್ಟ್‌ಚಾರ್ಜಿಂಗ್‌ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. 7.2 ಕಿ.ವ್ಯಾ. ಚಾರ್ಜರ್‌ನ ಸವಲತ್ತು ನೀಡಿರುವುದು ಸ್ವಾಗತಾರ್ಹ.ನೆಕ್ಸಾನ್‌ ಇವಿ ಮ್ಯಾಕ್ಸ್‌ ಝಡ್‌ಎಕ್ಸ್+ ಮತ್ತು ಝಡ್‌ಎಕ್ಸ್+ಲ್ಯೂಕ್ಸ್‌ ಅವತರಣಿಕೆಗಳಲ್ಲಿ ಮಾತ್ರವೇ ಲಭ್ಯವಿದೆ. ಇದೇ ಅವತರಣಿಕೆಯ ನೆಕ್ಸಾನ್ ಇವಿಗಿಂತ ಇವುಗಳ ಎಕ್ಸ್‌ಷೋರೂಂ ಬೆಲೆ ₹ 1.5 ಲಕ್ಷದಿಂದ ₹ 2 ಲಕ್ಷದಷ್ಟು ಹೆಚ್ಚು.

ನೆಕ್ಸಾನ್‌ ಇವಿಯಲ್ಲಿ ಇರುವುದಕ್ಕಿಂತ, ನೆಕ್ಸಾನ್‌ ಇವಿ ಮ್ಯಾಕ್ಸ್‌ನಲ್ಲಿ ದೊಡ್ಡ ಬ್ಯಾಟರಿ ಪ್ಯಾಕ್‌ ನೀಡಿರುವುದರಿಂದ ಅದರ ಗ್ರೌಂಡ್‌ ಕ್ಲಿಯರೆನ್ಸ್‌ ಕಡಿಮೆಯಾಗಿದೆ. ನೆಕ್ಸಾನ್‌ ಇವಿಯ ಗ್ರೌಂಡ್‌ ಕ್ಲಿಯರೆನ್ಸ್‌ 205 ಎಂ.ಎಂ.ನಷ್ಟು ಇತ್ತು. ಇವಿ ಮ್ಯಾಕ್ಸ್‌ನ ಗ್ರೌಂಡ್‌ ಕ್ಲಿಯರೆನ್ಸ್‌ 190 ಎಂ.ಎಂ.ನಷ್ಟಿದೆ. ಇದು ಕೆಲವು ದೊಡ್ಡ ಎಸ್‌ಯುವಿಗಳ ಗ್ರೌಂಡ್‌ ಕ್ಲಿಯರೆನ್ಸ್‌ಗಿಂತ ಹೆಚ್ಚು. ಹೀಗಾಗಿ ಹಳ್ಳ–ಗುಂಡಿ ತುಂಬಿದ ರಸ್ತೆಗಳಲ್ಲಿ, ರಸ್ತೆ ಉಬ್ಬುಗಳಲ್ಲಿ ಚಾಲನೆಗೆ ಯಾವುದೇ ತೊಡಕು ಇಲ್ಲ. ಆದರೆ, ದೊಡ್ಡ ಬ್ಯಾಟರಿ ಪ್ಯಾಕ್‌ನ ಕಾರಣ ನೆಕ್ಸಾನ್‌ ಇವಿ ಮ್ಯಾಕ್ಸ್‌ನ ಒಳಗಿನ ಫ್ಲೋರ್‌ಹೈಟ್‌ ಹೆಚ್ಚಾಗಿದೆ. ಜತೆಗೆ ಹಿಂಬದಿಯ ಸೀಟಿಂಗ್ ರೂಂ ಕಡಿಮೆಯಾಗಿದೆ. ಇದರ ಹೊರತಾಗಿ ಹಲವು ಹೊಸ ಸವಲತ್ತುಗಳು ಮತ್ತು ಹೆಚ್ಚಿಸಿದ ರೇಂಜ್‌ನ ನೆಕ್ಸಾನ್‌ ಇವಿ ಮ್ಯಾಕ್ಸ್‌ ಒಂದು ಉತ್ತಮ ಉತ್ಪನ್ನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT