ಇ–ಕಾರ್‌: ಮುಂಚೂಣಿಗೆ ಬರಲು ನಿಸಾನ್‌ ಹವಣಿಕೆ

ಶನಿವಾರ, ಏಪ್ರಿಲ್ 20, 2019
29 °C

ಇ–ಕಾರ್‌: ಮುಂಚೂಣಿಗೆ ಬರಲು ನಿಸಾನ್‌ ಹವಣಿಕೆ

Published:
Updated:
Prajavani

ಭಾರತದಲ್ಲಿ ವಿದ್ಯುತ್‌ಚಾಲಿತ ವಾಹನಗಳ (electric vehicles–EV) ಮಾರುಕಟ್ಟೆ ವಿಸ್ತರಣೆಯಲ್ಲಿ ಮುಂಚೂಣಿಯಲ್ಲಿ ಇರಲು ಜಪಾನಿನ ವಾಹನ ತಯಾರಿಕಾ ದೈತ್ಯ ಸಂಸ್ಥೆ ನಿಸಾನ್‌ ಮೋಟರ್ ಕಂಪನಿಯು ಬಯಸಿದೆ. ಈ ಕಾರಣಕ್ಕೆ ಈ ವರ್ಷ ತನ್ನ ಎಲೆಕ್ಟ್ರಿಕ್‌ ಕಾರ್‌ ‘ಲೀಫ್‌’ (Leaf) ಪರಿಚಯಿಸಲಿದೆ. ಇದಕ್ಕೆ ಪೂರಕವಾಗಿ ‘ಇ–ಪವರ್‌’ ಮತ್ತು ಹೈಬ್ರಿಡ್‌ ವಾಹನಗಳನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಮುನ್ನಡೆಯನ್ನು ಭಾರತದಲ್ಲಿಯೂ ಮುಂದುವರೆಸುವುದು ಸಂಸ್ಥೆಯ ಉದ್ದೇಶವಾಗಿದೆ. ಈ ಕಾರಣಕ್ಕೆ ‘ಲೀಫ್‌’ ಜತೆಗೆ ಕ್ರಮೇಣ ಇತರ ವಿದ್ಯುತ್‌ ಚಾಲಿತ ವಾಹನಗಳನ್ನೂ ಪರಿಚಯಿಸುವುದು ಅದರ ಉದ್ದೇಶವಾಗಿದೆ. ಭಾರತದ ಮಾರುಕಟ್ಟೆಗೆ ಸಂಬಂಧಿಸಿದಂತೆ ‘ಲೀಫ್‌’ ಒಂದೇ ವಿದ್ಯುತ್‌ ಚಾಲಿತ ವಾಹನವಾಗಿರಲಾರದು. ಇನ್ನೂ ಅನೇಕ ವಾಹನಗಳು ಸರತಿ ಸಾಲಿನಲ್ಲಿ ಇವೆ ಎನ್ನುವುದು ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಪೇಮನ್‌ ಕರ್ಗರ್‌ ಅವರ ಅಭಿಮತವಾಗಿದೆ.

ಮಾರಾಟ ತಂತ್ರ: ಇಂತಹ ಕಾರುಗಳ ತಯಾರಿಕೆಗೆ ದುಬಾರಿ ವೆಚ್ಚ ತಗುಲಲಿದೆ. ಹೀಗಾಗಿ ಸದ್ಯಕ್ಕೆ ಜನಸಮುದಾಯದ  ವ್ಯಾಪಕ ಬಳಕೆಗೆ ಇವುಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಕೇವಲ ಮಹಾನಗರಗಳಲ್ಲಿ ಮಾತ್ರ ‘ಲೀಫ್‌’ ಮಾರಾಟ  ಕೇಂದ್ರೀಕರಿಸುವುದು ಸಂಸ್ಥೆಯ ಮಾರಾಟ ತಂತ್ರವಾಗಿದೆ.

ಪ್ರಭಾವಿ ವ್ಯಕ್ತಿಗಳಿಗೆ, ಸರ್ಕಾರಿ ಇಲಾಖೆಗಳಿಗೆ ಮತ್ತು ಕಾರ್ಪೊರೇಟ್‌ಗಳಿಗೆ ಮಾತ್ರ ವಿಶೇಷ ಬೆಲೆಗೆ ಇದನ್ನು ಮಾರಾಟ ಮಾಡಲಾಗುವುದು. ವಿದ್ಯುತ್‌ಚಾಲಿತ ಕಾರ್‌ಗಳ ಮತ್ತು ಬ್ಯಾಟರಿಗಳ ತಯಾರಿಕೆಗೆ ಬಳಸಲಾಗುವ ಅತ್ಯಾಧುನಿಕ ತಂತ್ರಜ್ಞಾನದ ಬಿಡಿಭಾಗಗಳ ಪೂರೈಕೆದಾರರು ಅಗತ್ಯ ಇರುವಷ್ಟು ಪ್ರಮಾಣದಲ್ಲಿ ಲಭ್ಯ ಇರುವುದಿಲ್ಲ. ಇದು ದರ ತಗ್ಗಿಸಲು ಇರುವ ಪ್ರಮುಖ ಅಡಚಣೆಯಾಗಿದೆ. ಭಾರತದಲ್ಲಿಯೇ ಬಂಡವಾಳ ತೊಡಗಿಸಿ ತಯಾರಿಕಾ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.

‘ಭಾರತದಲ್ಲಿ ‘ಇ–ಪವರ್‌ ತಂತ್ರಜ್ಞಾನ’ ಪರಿಚಯಿಸುವುದಕ್ಕೂ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಈ ತಂತ್ರಜ್ಞಾನವನ್ನು ಹೇಗೆ ಮತ್ತು ಯಾವಾಗ ಜಾರಿಗೆ ತರಬೇಕು ಎನ್ನುವುದರ ಬಗ್ಗೆ ಸಂಸ್ಥೆ ಚಿಂತನೆ ನಡೆಸುತ್ತಿದೆ. ಯಾವ ಮಾದರಿಯ ವಾಹನದಲ್ಲಿ ಇ–ಪವರ್‌ ತಂತ್ರಜ್ಞಾನ ಅಳವಡಿಸಬಹುದು ಎನ್ನುವುದರ ಬಗ್ಗೆ ನಿರ್ಧಾರಕ್ಕೆ ಬರುವ ಅಂತಿಮ ಹಂತದಲ್ಲಿ ಇದ್ದೇವೆ’ ಎಂದು ಕರ್ಗರ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !