ಬುಧವಾರ, ಜೂನ್ 29, 2022
24 °C

ಓಲಾದಿಂದ ‘ಮೂವ್ ಒಎಸ್‌2’ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಚಂಪಳ್ಳಿ (ತಮಿಳುನಾಡು): ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ವಿದ್ಯುತ್ ಚಾಲಿತ ಸ್ಕೂಟರ್ ‘ಎಸ್‌1 ಪ್ರೊ’ ಗ್ರಾಹಕರಿಗಾಗಿ ‘ಮೂವ್ ಒಎಸ್‌2‘ ಕಾರ್ಯಾಚರಣೆ ವ್ಯವಸ್ಥೆಯನ್ನು ಭಾನುವಾರ ಬಿಡುಗಡೆ ಮಾಡಿದೆ. ಇದು ಜೂನ್‌ 30ರೊಳಗೆ ಹಾಲಿ ಗ್ರಾಹಕರಿಗೆ ಅಪ್ಡೇಟ್ ಮೂಲಕ ಲಭ್ಯವಾಗಲಿದೆ.

ತನ್ನ ಸ್ಕೂಟರ್‌ ಗ್ರಾಹಕರನ್ನು ಇಲ್ಲಿನ ತಯಾರಿಕಾ ಘಟಕಕ್ಕೆ ಆಹ್ವಾನಿಸಿದ್ದ ಓಲಾ, ಅವರ ಸಮ್ಮುಖದಲ್ಲಿ ಹೊಸ ಕಾರ್ಯಾಚರಣೆ ವ್ಯವಸ್ಥೆಯನ್ನು ಬಿಡುಗಡೆ ಮಾಡಿದೆ. ಅಂದಾಜು 50 ಸಾವಿರಕ್ಕೂ ಹೆಚ್ಚಿನ ಗ್ರಾಹಕರಿಗೆ ಈ ಅಪ್ಡೇಟ್ ಲಭ್ಯವಾಗಲಿದೆ ಎಂದು ಕಂಪನಿಯು ತಿಳಿಸಿದೆ. ಹಿಂದಿನ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಇದ್ದ ಕೆಲವು ಲೋಪಗಳನ್ನು ಇದು ಸರಿಪಡಿಸಲಿದೆ ಎಂದು ಕಂಪನಿ ಹೇಳಿದೆ.

ಹೊಸ ಕಾರ್ಯಾಚರಣೆ ವ್ಯವಸ್ಥೆ ಲಭ್ಯವಾದ ನಂತರದಲ್ಲಿ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಅನ್ನು ಸ್ಕೂಟರ್ ಜೊತೆ ಬ್ಲೂಟೂತ್ ಮೂಲಕ ಜೋಡಿಸಿಕೊಂಡು, ತಮ್ಮ ಇಷ್ಟದ ಹಾಡು ಆಲಿಸಬಹುದು. ದೂರದಿಂದಲೇ ಸ್ಕೂಟರ್‌ಅನ್ನು ಲಾಕ್, ಅನ್‌ಲಾಕ್ ಮಾಡಬಹುದು. ಆ್ಯಪ್ ಮೂಲಕವೇ ತಮ್ಮ ಸ್ಕೂಟರ್‌ನ ಚಾರ್ಜ್ ಸ್ಥಿತಿ, ಇನ್ನು ಎಷ್ಟು ದೂರ ಕ್ರಮಿಸುವಷ್ಟು ಬ್ಯಾಟರಿ ಇದೆ ಎಂಬ ವಿವರ ಪರಿಶೀಲಿಸಬಹುದು.

ಪ್ರೀಮಿಯಂ ವಿಭಾಗದ ಕಾರುಗಳಲ್ಲಿ ಇರುವ ಕ್ರೂಸ್ ಕಂಟ್ರೋಲ್ ಸೌಲಭ್ಯ
ವನ್ನು ಈ ಕಾರ್ಯಾಚರಣೆ ವ್ಯವಸ್ಥೆಯು ಓಲಾ ಸ್ಕೂಟರ್‌ಗಳಲ್ಲಿಯೂ ನೀಡಲಿದೆ.

ಓಲಾ ಎಸ್‌1 ಪ್ರೊ ಸ್ಕೂಟರ್‌ನ 100ಕ್ಕೂ ಹೆಚ್ಚಿನ ಗ್ರಾಹಕರು ಎಕಾನಮಿ ಮೋಡ್‌ನಲ್ಲಿ ಒಂದು ಬಾರಿಯ ಚಾರ್ಜ್‌ನಲ್ಲಿ 200ಕ್ಕೂ ಹೆಚ್ಚು ಕಿ.ಮೀ. ಪ್ರಯಾಣ ಮಾಡಿದ್ದಾರೆ ಎಂದು ಕಂಪನಿ ತಿಳಿಸಿದೆ. ಭಾನುವಾರದ ಕಾರ್ಯಕ್ರಮದಲ್ಲಿ ಈ ಗ್ರಾಹಕರಿಗೆ ಹೊಸ ಎಸ್‌1 ಪ್ರೊ ಸ್ಕೂಟರ್‌ಗಳನ್ನು ಬಹುಮಾನವಾಗಿ ನೀಡಲಾಯಿತು.

ಓಲಾ ಎಲೆಕ್ಟ್ರಿಕ್ ಕಂಪನಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಭವೀಶ್ ಅಗರ್ವಾಲ್ ಅವರು, ಮುಂದೆ ಬರಲಿರುವ ಓಲಾ ವಿದ್ಯುತ್ ಚಾಲಿತ ಕಾರಿನ ಕೆಲವು ವಿಡಿಯೊ ತುಣುಕುಗಳನ್ನು ಹಂಚಿಕೊಂಡರು. ಹೊಸ ಕಾರ್ಯಾಚರಣೆ ವ್ಯವಸ್ಥೆಯ ಬಿಡುಗಡೆ ಕಾರ್ಯಕ್ರಮದ ಭಾಗವಾಗಿ ಕಂಪನಿಯು ಗ್ರಾಹಕರಿಗೆ ತನ್ನ ಸ್ಕೂಟರ್ ತಯಾರಿಕಾ ಘಟಕದ ಭೇಟಿಯ ಅವಕಾಶವನ್ನೂ ಒದಗಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು