7

ಕಾರಿನಲ್ಲಿ ಲಂಡನ್‌ ಸುತ್ತುವಾಸೆ: ನಟ ಪ್ರಜ್ವಲ್‌ ದೇವರಾಜ್‌

Published:
Updated:

ನನಗೆ ಹದಿನೈದನೇ ವಯಸ್ಸಿನಲ್ಲೇ ಡ್ರೈವಿಂಗ್ ಕ್ರೇಜ್ ತುಂಬಾ ಇತ್ತು. ಆಗಲೇ ಮೊದಲ ಬಾರಿಗೆ ಸ್ಟೀರಿಂಗ್ ಹಿಡಿದಿದ್ದು. ಮೊದಲು  ನಾನು ಓಡಿಸಿದ ಕಾರು ಮಾರುತಿ ಎಸ್ಟೀಮ್.

ನನಗೆ ಡ್ರೈವಿಂಗ್ ಪಾಠ ಕಲಿಸಿದ್ದು ನನ್ನ ತಂದೆ. ಬೆಂಗಳೂರಿನ ಬನಶಂಕರಿಯ ಚನ್ನಮ್ಮನಕೆರೆ ಬಳಿ ಮೈದಾನವಿದೆ, ಅಲ್ಲಿಯೇ  ಡ್ರೈವಿಂಗ್‌ ಅಭ್ಯಾಸ ಮಾಡುತ್ತಿದ್ದುದು. ಅದೂ ರಾತ್ರಿ ಸಮಯ. ಅಪ್ಪ ಚಿತ್ರೀಕರಣದಲ್ಲಿ ಬ್ಯುಸಿ ಇರುತ್ತಿದ್ದ ಕಾರಣ, ಅವರಿಗೆ ಬಿಡುವು ಸಿಕ್ಕಾಗ ರಾತ್ರಿ ಕಾರು ತೆಗೆದುಕೊಂಡು ಮೈದಾನಕ್ಕೆ ಹೋಗುತ್ತಿದ್ದೆವು. ‌ವಿಶಾಲವಾದ ಜಾಗ, ವಾಹನಗಳ ಓಡಾಟವೂ ಇರುತ್ತಿರಲಿಲ್ಲ. ಹೀಗಾಗಿ ಧೈರ್ಯವಾಗಿ ಓಡಿಸುತ್ತಿದ್ದೆ. ಅಪ್ಪ ಹೇಳಿಕೊಡುತ್ತಿದ್ದ ಕಾರಣಕ್ಕೆ ಆತ್ಮವಿಶ್ವಾಸದಿಂದ ಒಂದು ತಿಂಗಳಲ್ಲೇ ಕಾರು ಓಡಿಸುವುದನ್ನು ಕಲಿತೆ. ಆದರೆ ಲೈಸೆನ್ಸ್‌ ಸಿಗುವವರೆಗೂ ಅಪ್ಪ ರಸ್ತೆಗೆ ಕಾರು ತರಲು ಅನುಮತಿ ನೀಡಿರಲಿಲ್ಲ.

ಮೊದಲ ಬಾರಿಗೆ ಕಾರನ್ನು ರಸ್ತೆಗೆ ಇಳಿಸಿದಾಗ ಪರದಾಡಿದ್ದು ಅಷ್ಟಿಷ್ಟಲ್ಲ. ಅದನ್ನು ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ. ಯಾವ ಗೇರ್‌ ಹಾಕಬೇಕು ಎಂಬುದೇ ಗೊತ್ತಾಗುತ್ತಿರಲಿಲ್ಲ. ಗೊಂದಲದಲ್ಲೇ ಓಡಿಸುತ್ತಿದ್ದೆ.

ಲೈಸೆನ್ಸ್‌ ಸಿಕ್ಕ ನಂತರ ಮೊದಲ ಬಾರಿಗೆ ಅಜ್ಜಿ ಮನೆಗೆ ಕಾರನ್ನು ಒಬ್ಬನೇ ತೆಗೆದುಕೊಂಡು ಹೋಗಿದ್ದೆ. ಸಾಕಷ್ಟು ಜನರು ಮೊದಲ ಬಾರಿ ರಸ್ತೆಗೆ ಕಾರು ತರುವಾಗ ಎದೆ ಢವಢವ ಆಯಿತು ಎನ್ನುತ್ತಾರೆ. ಆದರೆ ನನಗೆ ಅಂತಹ ಹೆದರಿಕೆಯೇನೂ ಆಗಲಿಲ್ಲ. ನಾನು ಯಾವುದೇ ಕೆಲಸವನ್ನು ಧೈರ್ಯದಿಂದ ಮಾಡುತ್ತೇನೆ. ಜೀವನದಲ್ಲಿ ಯಾವುದನ್ನೇ ಆಗಲಿ ತುಂಬಾ ಆಸಕ್ತಿಯಿಂದ ಕಲಿಯಬೇಕು ಎಂದುಕೊಂಡರೆ ಅದನ್ನು ಸುಲಭವಾಗಿ, ಅಷ್ಟೇ ಪಕ್ವವಾಗಿ ಕಲಿಯುವವನು ನಾನು. ಹೀಗಾಗಿ ಆರಾಮವಾಗಿಯೇ ಅಜ್ಜಿ ಮನೆ ತಲುಪಿದ್ದೆ. 

ಕಾರಿನೊಂದಿಗೆ ಬೈಕ್‌ಗಳೆಂದರೂ ನನಗೆ ತುಂಬಾ ಇಷ್ಟ. ಒಮ್ಮೆ ಸ್ನೇಹಿತನ ಬೈಕ್ ಓಡಿಸಿ ಬಿದ್ದು ಸಿಕ್ಕಾಪಟ್ಟೆ ಪೆಟ್ಟಾಗಿತ್ತು. ಅದಕ್ಕಾಗಿ ಮನೆಯಲ್ಲಿ ಬೈಕ್ ಕೊಡಿಸಲು ಹಿಂದೇಟು ಹಾಕಿದರು. ನಾನು ಒಂದು ತಿಂಗಳು ಸರಿಯಾಗಿ ಊಟ ಮಾಡದೆ ಏನೇನೆಲ್ಲಾ ಕಾಟ ಕೊಟ್ಟು ‌ಕೊನೆಗೂ ಬೈಕ್‌ ಕೊಡಿಸಿಕೊಂಡಿದ್ದೆ.

ಸಂಗೀತ ಕೇಳುತ್ತಾ  ಸುಂದರವಾದ ವಾತಾವರಣದಲ್ಲಿ ಡ್ರೈವ್‌ ಮಾಡುತ್ತಿದ್ದರೆ ಮನಸ್ಸಿಗೆ ಎಂಥಾ ಖುಷಿ. ಆದರೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಕಾರು ಓಡಿಸುವುದು ಅಷ್ಟು ಸುಲಭವಲ್ಲ ಬಿಡಿ‌.

ನನಗೆ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗುವುದು ಇಷ್ಟ. ಲಾಂಗ್ ಡ್ರೈವ್‌ಗೆ ಇದೇ ಜಾಗ ಎಂದೇನೂ ಲೆಕ್ಕಾಚಾರ ಹಾಕಿಕೊಳ್ಳುವುದಿಲ್ಲ. ವಾತಾವರಣ ಚೆನ್ನಾಗಿರಬೇಕು ಅಷ್ಟೇ. ಒಮ್ಮೆ ಎಲ್ಲೂ ಬ್ರೇಕ್‌ ಹಾಕದೇ ಎಂಟು ಗಂಟೆ ಕಾರು ಓಡಿಸಿದ್ದೇನೆ.

ನನಗೆ ಒಂದು ಆಸೆಯಿದೆ. ಕಾರಿನಲ್ಲಿ ಲಂಡನ್‌ಗೆ ಹೋಗಬೇಕೆನ್ನುವುದು. ನನ್ನ ಹೆಂಡತಿಗೂ, ‘ಕಾರಿನಲ್ಲಿ ಲಂಡನ್ ಸುತ್ತಿ ಬರೋಣ’ ಎಂದು ಹೇಳುತ್ತಲೇ ಇರುತ್ತೇನೆ. ಅವಳು ‘ನಾನಿಲ್ಲೇ ಇರುತ್ತೇನೆ, ನೀವು ಹೋಗಿ’ ಎಂದು ತಮಾಷೆ ಮಾಡುತ್ತಾಳೆ.

ಡ್ರೈವಿಂಗ್‌ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮುಖ್ಯ. ನಾನಂತೂ ಅದಕ್ಕೆ ತುಸು ಹೆಚ್ಚೇ ಪ್ರಾಮುಖ್ಯ ಕೊಡುತ್ತೇನೆ. ಕಾರಿನಲ್ಲಿ ಹೋಗುವಾಗ ನಮ್ಮ ಜೊತೆಗಾರರ ಬಗ್ಗೆಯೂ ಕಾಳಜಿ ಇರಬೇಕು. ನಾವು ಡ್ರೈವ್‌ ಮಾಡುವ ರೀತಿ ಅವರಿಗೆ ಒತ್ತಡ ಉಂಟುಮಾಡಬಾರದು. ಅವರನ್ನು ಸುರಕ್ಷಿತವಾಗಿ ಸ್ಥಳಕ್ಕೆ ತಲುಪಿಸುವುದು ಮುಖ್ಯ ಎಂಬ ಸಿದ್ಧಾಂತ ನನ್ನದು.

ನಾನು ಎಂಥದ್ದೇ ಪರಿಸ್ಥಿತಿಯಲ್ಲಿಯೂ ರಸ್ತೆ ನಿಯಮವನ್ನು ಮೀರುವುದಿಲ್ಲ. ರಾತ್ರಿ 11 ಗಂಟೆಗೂ ನನ್ನ ಡ್ರೈವರ್‌ಗೆ ಸಿಗ್ನಲ್‌ ದಾಟುವುದಕ್ಕೆ ಬಿಡುವುದಿಲ್ಲ. ಅಷ್ಟರ ಮಟ್ಟಿಗೆ ನಿಯಮ ಪಾಲಿಸುತ್ತೇನೆ. ಒಂದು ನಿಮಿಷ ಕಾದರೆ ಏನೂ ನಷ್ಟವಾಗುವುದಿಲ್ಲ. ಅದೇ ಒಂದು ನಿಮಿಷ ದುಡುಕಿದರೆ ಸಾಕಷ್ಟು ಕಳೆದುಕೊಳ್ಳಬೇಕಾಗುತ್ತದೆ. ‘ಸಿಗ್ನಲ್‌ ಖಾಲಿ ಇದ್ದರೂ ಗಾಡಿ ನಿಲ್ಲಿಸಿಕೊಳ್ಳು‌ತ್ತೀಯಲ್ಲ’ ಎಂದು ಸ್ನೇಹಿತರು ರೇಗಿಸುತ್ತಾರೆ. ಆದರೆ ನಾನಂತೂ ಅವರ ಈ ಮಾತಿಗೆ ಕಿವಿ ಕೊಡುವುದಿಲ್ಲ.

ಆದರೆ ಸಿಗ್ನಲ್‌ನಲ್ಲಿ ಹಳದಿ ದೀಪ ಬಂದಾಕ್ಷಣ ನಾನು ಕಾರು ನಿಲ್ಲಿಸಿ, ಒಂದೆರಡು ಬಾರಿ ಬೇರೆ ಗಾಡಿ ನನ್ನ ಗಾಡಿಗೆ ಗುದ್ದಿದ ಸಂದರ್ಭವೂ ಬಂದಿದೆ.

ನನ್ನ ಬಳಿ ಸದ್ಯ ಬಿಎಂಡಬ್ಲ್ಯೂ 5 ಸೀರಿಸ್‌, ಫಾರ್ಚ್ಯೂನರ್‌ ಕಾರುಗಳಿವೆ. ನನಗೆ ಸ್ಪೋರ್ಟ್ಸ್‌ ಕಾರೆಂದರೆ ತುಂಬಾ ಇಷ್ಟ. ಮುಂದೆ ಪೋರ್ಷ್‌ ಖರೀದಿಸುವ ಯಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry