ಮಂಗಳವಾರ, ಮಾರ್ಚ್ 31, 2020
19 °C

ಸ್ಪೀಕರ್‌ ಇಲ್ಲದೇ ಹೊರಹೊಮ್ಮುವ ಸಂಗೀತ

ನೇಸರ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |

Prajavani

ಕಾರ್‌ ಖರೀದಿಸಿದ ಮೇಲೆ ಅದರಲ್ಲಿ ಒಳ್ಳೆಯ ಗುಣಮಟ್ಟದ ಮ್ಯೂಸಿಕ್‌ ಸಿಸ್ಟಂ ಹಾಕಿಸಿಕೊಳ್ಳಲೇಬೇಕು ಅಲ್ಲವೇ. ಏಕೆಂದರೆ, ಸಂಗೀತ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗ. ಕೆಲವೊಂದು ಐಷಾರಾಮಿ ಕಾರ್‌ಗಳಲ್ಲಿ ಮ್ಯೂಸಿಕ್‌ ಸಿಸ್ಟಂ ಕಾರ್ಖಾನೆಯಿಂದಲೇ ಜೋಡಣೆಗೊಂಡು ಬರುತ್ತದೆ. ಅಂತಹ ಸೌಲಭ್ಯಗಳಿಲ್ಲದ ಕಾರ್‌ಗಳಿಗೆ ವಾಹನ ಮಾಲೀಕರೇ ಮ್ಯೂಸಿಕ್‌ ಸಿಸ್ಟಂ ಹಾಕಿಸಿಕೊಳ್ಳಬೇಕು. ಕಾರ್ಖಾನೆಯಿಂದ ಮ್ಯೂಸಿಕ್‌ ಸಿಸ್ಟಂ ಬಂದರೂ ಗುಣಮಟ್ಟದ ಶ್ರೇಷ್ಠವಾಗಿರಬೇಕು ಎಂದು ಬ‌ದಲಿಸಿಕೊಳ್ಳುವವರೂ ಇರುತ್ತಾರೆ.

ಈ ಮ್ಯೂಸಿಕ್‌ ಸಿಸ್ಟಂಗಳ ವಿಧ ತರಾವರಿ. ಗುಣಮಟ್ಟ ಆಯ್ಕೆಯನ್ನು ಅವಲಂಬಿಸಿರುತ್ತದೆ. ಯಾವ ತರಹದ ‘ಸ್ಪೀಕರ್‌’ಗಳನ್ನು ಅಳವಡಿಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಸಂಗೀತದ ಗುಣಮಟ್ಟ ಅವಲಂಬಿಸಿರುತ್ತದೆ. ಸಂಗೀತ ಹೊರ ಹೊಮ್ಮಿಸುವ ಮ್ಯೂಸಿಕ್‌ ಸಿಸ್ಟಂಗೆ ಸ್ಪೀಕರ್‌ ಜೋಡಿತವಾಗಿರುತ್ತದೆ. ಕನಿಷ್ಠವೆಂದರೂ ಕಾರೊಂದಕ್ಕೆ ನಾಲ್ಕು ಸ್ಪೀಕರ್‌ ಹಾಗೂ ಒಂದು ಸಬ್‌ ಊಫರ್‌ ಇರಲೇಬೇಕು. ಸಬ್‌ ಊಫರ್‌ ಹೆಚ್ಚಿನ ಗುಣಮಟ್ಟಕ್ಕಾಗಿ. ಬಹುತೇಕ ಕಾರ್‌ಗಳಲ್ಲಿ ಇದು ಇರುವುದಿಲ್ಲ.

ಇಷ್ಟು ಹೊತ್ತು ಹೇಳಿದ್ದು ಈಗಿರುವ ಸಾಂಪ್ರದಾಯಿಕ ಮ್ಯೂಸಿಕ್‌ ಸಿಸ್ಟಂ ಬಗ್ಗೆ. ಆದರೆ, ಇಲ್ಲೊಂದು ಹೊಸ ಅನ್ವೇಷಣೆಯಾಗಿದೆ. ಸ್ಪೀಕರ್‌ಗಳೇ ಇಲ್ಲದೇ ಸಂಗೀತ ಹೊರ ಹೊಮ್ಮುವಂತಿದ್ದರೆ. ಈ ರೀತಿಯ ಕಲ್ಪನೆಯೊಂದನ್ನು ಕಾರ್ ದಿಗ್ಗಜ ಕಾಂಟಿನೆಂಟಲ್‌ ನಿಜ ರೂಪಕ್ಕೆ ಇಳಿಸಿದೆ. ತನ್ನ ತಂತ್ರಜ್ಞರು ಹಾಗೂ ವಿಜ್ಞಾನಿಗಳನ್ನು ಬಳಸಿಕೊಂಡು ವಿನೂತನ ತಂತ್ರಜ್ಞಾನ ಪರಿಚಯಿಸಿದೆ.

ಏನಿದು ತಂತ್ರಜ್ಞಾನ?‌

ನೀವು ಪಿಟೀಲು, ಗಿಟಾರ್, ವೀಣೆಯಂತಹ ತಂತಿ ವಾದ್ಯಗಳನ್ನು ಗಮನಿಸಿರಬಹುದು. ಅವುಗಳಲ್ಲಿ ಯಾವುದೇ ಬಗೆಯ ಸ್ಪೀಕರ್‌ ಇರುವುದಿಲ್ಲ. ಆದರೂ ಧ್ವನಿ ಹೊರ ಹೊಮ್ಮುತ್ತದೆ ಅಲ್ಲವೇ. ಈ ವಾದ್ಯಗಳಲ್ಲಿರುವ ತಂತಿಯನ್ನು ಮೀಟಿದಾಗ ವಾದ್ಯಗಳ ದೇಹದೊಳಗಿಂದ ಸಂಗೀತ ಬರುತ್ತದೆ. ಇದು ಧ್ವನಿಶಾಸ್ತ್ರ. ಶಬ್ದದ ಕಂಪನಗಳನ್ನು ಬಳಸಿಕೊಂಡು ಧ್ವನಿ ಉತ್ಪಾದಿಸುವ ಹಳೆಯ ಹಾಗೂ ಶುದ್ಧವಾದ ವಿಧಾನ. ಇದೇ ವಿಧಾನವನ್ನು ಕಾಂಟಿನೆಂಟಲ್‌ ಬಳಸಿಕೊಂಡಿದೆ. ಸ್ಪೀಕರ್‌ಗಳ ಅಗತ್ಯವೇ ಇಲ್ಲದ ಹಾಗೆ ಕಾರೊಳಗೆ ಸಂಗೀತ ಹೊರಹೊಮ್ಮುವ ಹಾಗೆ ಹೊಸ ಸಂಶೋಧನೆ ಪರಿಚಯಿಸಿದೆ. ಇದರಿಂದ ಸಂಗೀತ ಆಸ್ವಾದಿಸುವ ಅನುಭವವೇ ಬೇರೆ ಆಗಿರುತ್ತದೆ.

ಇದಕ್ಕೆ ಕಾಂಟಿನೆಂಟಲ್‌ನ ತಂತ್ರಜ್ಞರು Ac2ated ಎಂಬ ಸಂಜ್ಞಾ ಹೆಸರನ್ನು ಇರಿಸಿದ್ದಾರೆ. ಇವರ ಪ್ರಕಾರ, ಕಾರ್‌ನ ಇಡೀ ದೇಹವೇ ಸ್ಪೀಕರ್‌ ಇದ್ದಂತೆ. ಕಾರ್‌ನಲ್ಲಿ ಕೆಲವು ಆಯಕಟ್ಟಿನ ಜಾಗಗಳನ್ನು ಗುರುತಿಸಿ ಅಲ್ಲಿ ಕೆಲವು ಸೂಕ್ಷ್ಮ ಸಾಧನಗಳನ್ನು ಇರಿಸುತ್ತಾರೆ. ಮ್ಯೂಸಿಕ್‌ ಸಿಸ್ಟಂನಿಂದ ಧ್ವನಿ ಸಂಜ್ಞೆಗಳು ಹೊರಬರುತ್ತಿದ್ದಂತೆ ಕಾರ್‌ನ ಕಿಟಕಿ, ಡ್ಯಾಷ್‌ಬೋರ್ಡ್‌, ರೂಫ್‌ ಪೆನಲ್‌, ಫ್ಲೋರ್‌ಗಳಿಂದ ಸಂಗೀತ ಹೊರಹೊಮ್ಮಲು ಶುರುವಾಗುತ್ತದೆ. ಅಂದರೆ, ಇದರರ್ಥ ಕಾರಿಗೆ ಸ್ಪೀಕರ್‌ಗಳ ಅಗತ್ಯವೇ ಇರುವುದಿಲ್ಲ ಎಂದು. ಸಂಗೀತ ಸಲಕರಣೆ ಸಹಾಯಕ್ಕಾಗಿ ಸಂಗೀತ ದಿಗ್ಗಜ ಸ್ಯಾನ್‌ಹೀಸರ್‌ ಕಂಪನಿಯಿಂದ ಆ್ಯಂಬಿಯೊ  ತಂತ್ರಜ್ಞಾನವನ್ನು ಎರವಲು ಪಡೆದಿದ್ದಾರೆ.

ಹಲವು ಅನುಕೂಲ

ಇದರಲ್ಲಿ ಹಲವು ಅನುಕೂಲಗಳಿವೆ. ಸ್ಪೀಕರ್‌ಗಳೆಂದರೆ ಸಾಮಾನ್ಯವಾಗಿ ಕಾರ್‌ ಒಳಗಿನ ಕೊಂಚ ಜಾಗವನ್ನು ಬಳಸಿಕೊಳ್ಳುತ್ತವೆ. ಆಗ ಅದಕ್ಕಾಗಿ ಸ್ಥಳ ಮೀಸಲಿಡಬೇಕಾಗುವುದು. ಕಾಂಟಿನೆಂಟಲ್‌ನ ಈ ತಂತ್ರಜ್ಞಾನವನ್ನು ಬಳಸಿಕೊಂಡರೆ ಈ ಸ್ಪೀಕರ್‌ಗಳೇ ಬೇಡವಾದ ಕಾರಣ, ಅಷ್ಟೂ ಜಾಗವೂ ಉಳಿಯುತ್ತದೆ. ಅಂತೆಯೇ, ಸ್ಪೀಕರ್‌ಗಳ ಖರ್ಚೂ ಉಳಿಯುತ್ತದೆ. ಅಷ್ಟೇ ಅಲ್ಲ, ಸ್ಪೀಕರ್‌ಗಳು ಕಾರ್ಯನಿರ್ವಹಿಸಬೇಕಾದರೆ, ಕೊಂಚ ವಿದ್ಯುತ್‌ ಅನ್ನೂ ಬಳಸಿಕೊಳ್ಳುತ್ತವೆ. ಈ ತಂತ್ರಜ್ಞಾನ ಬಳಸಿಕೊಂಡರೆ ವಿದ್ಯುತ್‌ ಸಹ ಉಳಿತಾಯವಾಗುತ್ತದೆ.

ವಿದ್ಯುಚ್ಛಾಲಿತ ಕಾರ್‌ಗಳಿಗೆ ಇದು ಹೆಚ್ಚು ಅನುಕೂಲಕಾರಿ. ಏಕೆಂದರೆ. ಈ ಬಗೆಯ ಕಾರ್‌ಗಳಲ್ಲಿ ಜಾಗದ ಕೊರತೆ ಇರುತ್ತದೆ. ಸ್ಪೀಕರ್‌ಗಳನ್ನು ಬಳಸದೇ ಇದ್ದಲ್ಲಿ ಅಷ್ಟು ಜಾಗ ಉಳಿಯುತ್ತದೆ. ಇಲ್ಲಿ ಸಂಗೀತಕ್ಕಾಗಿ ವಿದ್ಯುತ್‌ ಬಳಕೆ ಇಲ್ಲದ ಕಾರಣ ಕಾರ್‌ನ ಮೈಲೇಜ್‌ ಹೆಚ್ಚುತ್ತದೆ. ಸಂಗೀತವನ್ನು ಉತ್ಪಾದಿಸುವ ಮ್ಯೂಸಿಕ್‌ ಸಿಸ್ಟಂ ಮಾತ್ರ ಕೊಂಚ ವಿದ್ಯುತ್‌ ಬಳಸಿಕೊಳ್ಳುತ್ತದೆ.

ಇವೆಲ್ಲದರ ಜತೆಗೆ, ಈ ತಂತ್ರಜ್ಞಾನದ ವಿಶೇಷವೆಂದರೆ, ಇದು 3ಡಿ ಸಂಗೀತವನ್ನು ಹೊಮ್ಮಿಸುತ್ತದೆ. ಈ ತಂತ್ರಜ್ಞಾನದಲ್ಲಿ ಇಡೀ ಕಾರ್‌ ಸಂಗೀತ ಹೊಮ್ಮಿಸುವ ಸಾಧನವಾಗಿ ಬಳಕೆಯಾಗುವ ಕಾರಣ, ಶಬ್ದ ಎಲ್ಲ ದಿಕ್ಕುಗಳಿಂದ ಬರುತ್ತದೆ. ಹೀಗಾಗಿ, ಸಂಗೀತದ ಗುಣಮಟ್ಟ ಅತಿ ಶ್ರೇಷ್ಠವಾಗಿರುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು