ರೈಲಿಗೆ ಕನ್ನಡಿಗರ ‘ತ್ರಿನೇತ್ರ’

7

ರೈಲಿಗೆ ಕನ್ನಡಿಗರ ‘ತ್ರಿನೇತ್ರ’

Published:
Updated:

15 ಲಕ್ಷ ಕಿಲೋ ಮೀಟರ್ ಉದ್ದದ ಹಳಿ, 16 ಸಾವಿರ ಎಂಜಿನ್ ನಿತ್ಯ ಸಂಚಾರ, 7 ಸಾವಿರಕ್ಕೂ ಅಧಿಕ ನಿಲ್ದಾಣಗಳು, ಕೋಟ್ಯಂತರ ಮಂದಿ ಪ್ರಯಾಣ, ಕೋಟ್ಯಂತರ ರೂಪಾಯಿ ಆದಾಯ...

ಇವಿಷ್ಟು, ದೇಶದ ಅತಿದೊಡ್ಡ ಸಾರಿಗೆ ಸಂಪರ್ಕ ಜಾಲ ಎನಿಸಿರುವ ರೈಲ್ವೆ ಇಲಾಖೆಯ ಚಿತ್ರಣ. ರೈಲ್ವೆ ಇಲಾಖೆಯು ಸುರಕ್ಷೆಯ ದೃಷ್ಟಿಯಲ್ಲಿ ಪದೇ ಪದೇ ಅಪಖ್ಯಾತಿಗೀಡಾಗುತ್ತಿದೆ. ಇದನ್ನು ತಪ್ಪಿಸಲೆಂದೇ ಕನ್ನಡಿಗರ ರಾಮಬಾಣ ‘ತ್ರಿನೇತ್ರ’ ಸಿದ್ಧವಾಗಿದೆ. ಬೆಂಗಳೂರಿನ ಸಿಎಸ್‌ಐಆರ್ ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟೊರೀಸ್‌ನ ಎಲೆಕ್ಟ್ರಿಕಲ್ ವಿಭಾಗದ ಪ್ರಧಾನ ತಾಂತ್ರಿಕ ಅಧಿಕಾರಿ ಕೆ.ಎಸ್. ಆನಂದಕುಮಾರ್ ನೇತೃತ್ವದ ತಂಡವು ‘ತ್ರಿನೇತ್ರ’ ಉಪಕರಣವನ್ನು ಅಭಿವೃದ್ಧಿ ಪಡಿಸಿದ್ದು, ಇದು ರೈಲು ದುರಂತ, ರೈಲು ವಿಳಂಬ ಮುಂತಾದ ಸಮಸ್ಯೆಗಳಿಗೆ ಪರಿಹಾರವಾಗಲಿದೆ.

ಉತ್ತರಭಾರತದಲ್ಲಿ ಹೊಂಜು (smog: ಹೊಗೆ ಮತ್ತು ಮಂಜು) ಸಮಸ್ಯೆ ಹೆಚ್ಚು. ಕೆಲವೊಮ್ಮೆ 10ರಿಂದ 15 ಮೀಟರ್ ದೂರದಲ್ಲಿ ಏನಿದೆ ಎಂಬುದೇ ಕಾಣುವುದಿಲ್ಲ. ಇದು ರೈಲು ಅಪಘಾತ, ರೈಲುಗಳ ಪ್ರಯಾಣದ ಸಮಯದಲ್ಲಿ ವ್ಯತ್ಯಯ ಹಾಗೂ ಪ್ರಯಾಣ ರದ್ದಾಗುವಿಕೆಗೂ ಕಾರಣವಾಗಿದೆ. ಇಲಾಖೆಗೂ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ.

‘ಲೊಕೊ ಪೈಲಟ್ ಹಾಗೂ ರೈಲ್ವೆ ಇಲಾಖೆಯ ತಜ್ಞರನ್ನು ಈ ಸಮಸ್ಯೆ ಬಗ್ಗೆ ವಿಚಾರಿಸಿದೆವು. ಹೊಂಜು ಹಾಗೂ ಇತರ ಕಾರಣಗಳಿಂದ ಹಳಿ ಸರಿಯಾಗಿ ಕಾಣದೆ ಗೊಂದಲ ಉಂಟಾಗಿ ಕೆಲವೊಮ್ಮೆ ರೈಲು ಅಪಘಾತ, ವಿಳಂಬ ಹಾಗೂ ರೈಲು ರದ್ದಾಗುವಿಕೆ ಸಮಸ್ಯೆ ಉಂಟಾಗುತ್ತಿದೆ ಎಂಬುದು ಅವರಿಂದ ಗೊತ್ತಾಯಿತು. ಆಗ ಹುಟ್ಟಿದ್ದೇ ‘ತ್ರಿನೇತ್ರ’ ಆಲೋಚನೆ’ ಎನ್ನುತ್ತಾರೆ ಕೆ.ಎಸ್.ಆನಂದಕುಮಾರ್.

‘ಈ ಹಿಂದೆ, 200 ಮೀಟರ್ ಉದ್ದದ ಹಳಿಯ ಮೇಲೆ ನಿಗಾ ಇಡುವ ಸಾಮರ್ಥ್ಯದ ‘ತ್ರಿನೇತ್ರ’ ರೂಪಿಸಿದ್ದೆವು. ಅದನ್ನು ಪ್ರಾಯೋಗಿಕವಾಗಿ ಜಾರಿ ಮಾಡಿ ಯಶಸ್ವಿಯಾಗಿದ್ದೆವು. ಈಗ ಅದೇ ‘ತ್ರಿನೇತ್ರ’ಕ್ಕೆ 600 ಮೀಟರ್‌ ಉದ್ದದ ವರೆಗಿನ ಹಳಿ ಮೇಲೆ ನಿಗಾ ಇಡುವ ಸಾಮರ್ಥ್ಯವನ್ನು ತುಂಬಲು ಮುಂದಾಗಿದ್ದೇವೆ. ಸದ್ಯದಲ್ಲೇ ಈ ಯೋಜನೆ ಯನ್ನು ಪ್ರಾಯೋಗಿಕವಾಗಿ ರೈಲ್ವೆ ಇಲಾಖೆಯಲ್ಲಿ ಅನುಷ್ಠಾನ ಮಾಡುತ್ತೇವೆ’ ಎನ್ನುತ್ತಾರೆ ಅವರು.

ಟಾಟಾ ಟ್ರಸ್ಟ್ ನೆರವು: ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹವಾದ ಬದಲಾವಣೆ ತರಬಲ್ಲ ಯೋಜನೆಗಳನ್ನು ಗುರುತಿಸಿ ಅವುಗಳಿಗೆ ಟೈಟನ್ ಸಂಸ್ಥೆಯೂ ಪ್ರತಿವರ್ಷ ‘ಡಿಸೈನ್ ಇಂಪ್ಯಾಕ್ಟ್‌ ಪ್ರಶಸ್ತಿ’ ನೀಡುತ್ತದೆ. ಇದು ₹ 60 ಲಕ್ಷ ಬಹುಮಾನವನ್ನು ಒಳಗೊಂಡಿರುತ್ತದೆ. ಅದಕ್ಕೆ ಸಂಸ್ಥೆಯೂ ವಿವಿಧ ಹಂತಗಳ ಸ್ಪರ್ಧೆ ನಡೆಸುತ್ತದೆ.

‌‘ಸಾಮಾಜಿಕ ಸೇವೆಯ (ಸಾರಿಗೆ) ವಿಭಾಗದಡಿ ಈ ಸ್ಪರ್ಧೆಯಲ್ಲಿ ನಾವು ಅಂತಿಮ ಹಂತಕ್ಕೆ ತಲುಪಿದ್ದೇವೆ. ನಮ್ಮ ಯೋಜನೆಗೆ ಆರ್ಥಿಕವಾಗಿ ನೆರವು ನೀಡುವ ವಿಶ್ವಾಸವನ್ನು ಈ ಸಂಸ್ಥೆ ವ್ಯಕ್ತಪಡಿಸಿದೆ. ಅವರ ಸಹಯೋಗದೊಂದಿಗೆ ಮುಂದಿನ ಎರಡು ವರ್ಷಗಳಲ್ಲಿ 2,000 ರೈಲುಗಳಿಗೆ ‘ತ್ರಿನೇತ್ರ’ ಅಳವಡಿಸಿ ಪ್ರಾಯೋಗಿಕವಾಗಿ ಜಾರಿಗೆ ತರಲಿದ್ದೇವೆ’ ಎನ್ನುತ್ತಾರೆ ಆನಂದಕುಮಾರ್.

‘ತ್ರಿನೇತ್ರ’ ಅಭಿವೃದ್ಧಿಗೆ ₹ 7.5 ಲಕ್ಷ ಆಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಇವುಗಳನ್ನು ಉತ್ಪಾದನೆ ಮಾಡಿದರೆ ತಲಾ ₹ 3.5 ಲಕ್ಷ ತಗಲುತ್ತದೆ ಅಂದರು ಅವರು.

ತ್ರಿನೇತ್ರ ಬಗ್ಗೆ ಒಂದಿಷ್ಟು
ತ್ರಿನೇತ್ರ ಎಂಬುದು ಡ್ಯುಯೆಲ್ ಸೆನ್ಸರ್‌ ತಂತ್ರಾಂಶವುಳ್ಳ ಉಪಕರಣ. ಥರ್ಮಲ್ ಹಾಗೂ ವಿಶುವಲ್ ಎಂಬ ಎರಡು ಸೆನ್ಸರ್‌ಗಳು ಇದರಲ್ಲಿವೆ. ಈ ಸೆನ್ಸರ್‌ಗಳು ಸಿ.ಸಿ.ಟಿ.ವಿ ಕ್ಯಾಮೆರಾ ಮಾದರಿಯವು. ಮನುಷ್ಯ, ಪ್ರಾಣಿ ಅಥವಾ ಯಾವುದಾದರೂ ವಸ್ತು ಇದೆಯೋ ಎಂಬುದನ್ನು ಗ್ರಹಿಸಿ ಲೊಕೊ ಪೈಲಟ್‌ಗೆ ಮಾಹಿತಿ ರವಾನಿಸುತ್ತವೆ.

ಥರ್ಮಲ್ ಸೆನ್ಸರ್‌: ರೈಲು ಇರುವ ಜಾಗದಿಂದ 600 ಮೀಟರ್ ದೂರದ ವರೆಗಿನ ಹಳಿ ಮೇಲೆ ಏನಿದೆ ಎಂಬುದನ್ನು ರೇಡಿಯೊ ಟೆಂಪರೇಚರ್ ಮೂಲಕ ಗ್ರಹಿಸಿ ಲೊಕೊ ಫೈಲೆಟ್‌ಗೆ ಅದರ ಚಿತ್ರ ಹಾಗೂ ಸಂದೇಶ ರವಾನಿಸುವ ಕಾರ್ಯವನ್ನು ಥರ್ಮಲ್ ಮಾಡುತ್ತದೆ. ಕತ್ತಲಿನಲ್ಲಿ ಹಾಗೂ ಮಂದಬೆಳಕಿನಲ್ಲಿ ಈ ಸೆನ್ಸರ್‌ನ ಕಾರ್ಯ ಉಪಯೋಗಕ್ಕೆ ಬರುತ್ತದೆ.

ವಿಶುವಲ್ ಸೆನ್ಸರ್‌: ಹಗಲಿನಲ್ಲಿ, 600 ಮೀಟರ್ ವರೆಗಿನ ಹಳಿ ಮೇಲೆ ಏನಿದೆ ಎಂಬುದನ್ನು ಸೆರೆ ಹಿಡಿದು ಲೊಕೊ ಪೈಲಟ್‌ಗೆ ಇಮೇಜ್ ಕಳುಹಿಸುವುದು ವಿಶ್ಯುವಲ್ ಸೆನ್ಸರ್‌ನ ಕೆಲಸ.

ಈ ಎರಡು ಸೆನ್ಸರ್‌ಗಳು ನೀಡುವ ಮಾಹಿತಿ ಆಧರಿಸಿ ಲೊಕೊ ಪೈಲಟ್, ರೈಲು ಸಂಚಾರ ಮುಂದುವರೆಸಬೇಕೆ ಅಥವಾ ಸ್ಥಗಿತಗೊಳಿಸಬೇಕೆ ಎಂಬುದನ್ನು ನಿರ್ಧರಿಸುತ್ತಾರೆ.

ಈ ಎರಡು ಸೆನ್ಸರ್‌ಗಳನ್ನು ನಿರ್ವಹಣೆ ಮಾಡುವ ಉಪಕರಣವು ಲೊಕೊ ಪೈಲೆಟ್‌ನ ಕ್ಯಾಬಿನ್ ಬಳಿ ಅಳವಡಿಸಲಾಗುತ್ತದೆ. ಕೆ.ಎಸ್.ಆನಂದಕುಮಾರ್, ಆರ್.ಕೆ.ಸಾಕೇತ್, ಆರ್.ರವೀಂದ್ರನ್, ಸೋಮನಾರಾಯಣ್ ಹಾಗೂ ಗುರುಪಾದಪ್ಪ ಅವರಿಗೆ ‘ತ್ರಿನೇತ್ರ’ ಅಭಿವೃದ್ಧಿ ಪಡಿಸಿದ ಖ್ಯಾತಿ ಸಲ್ಲುತ್ತದೆ.


ತ್ರಿನೇತ್ರ ಇನ್‌ಡೋರ್ ಯೂನಿಟ್

ತ್ರಿನೇತ್ರದ ಉಪಯೋಗ

* ಅಪಘಾತಗಳ ನಿಯಂತ್ರಣ

* ವಿಳಂಬ ತಡೆಗಟ್ಟಬಹುದು

* ಪ್ರಯಾಣ ರದ್ದುಗೊಳಿಸುವಿಕೆಯ ನಿಯಂತ್ರಣ

* ನಷ್ಟಕ್ಕೆ ಕಡಿವಾಣ

* ಸುಗಮ ಸಂಚಾರಕ್ಕೆ ಅನುಕೂಲ

* ಸುರಕ್ಷೆಗೆ ಹೆಚ್ಚು ಆದ್ಯತೆ

***
ಎರಡೂ ಕಣ್ಣುಗಳಿಗೆ ಕಾಣದ್ದು, ಮೂರನೇ ಕಣ್ಣಿಗೆ ಕಾಣುತ್ತದೆ ಎಂಬುದು ನಮ್ಮ ಪರಿಕಲ್ಪನೆ. ಹಳಿಗಳ ಮೇಲೆ ಸಾಗುವಾಗ ಲೊಕೊ ಪೈಲಟ್‌ಗೆ ಕಾಣದ್ದು ಈ ಉಪಕರಣಕ್ಕೆ ಕಾಣುವುದರಿಂದ ಇದಕ್ಕೆ ತ್ರಿನೇತ್ರ ಎಂದು ಹೆಸರಿಟ್ಟೆವು
–ಕೆ.ಎಸ್.ಆನಂದಕುಮಾರ್


ತ್ರಿನೇತ್ರದ ರೂವಾರಿಗಳಾದ ಕೆ.ಎಸ್.ಆನಂದಕುಮಾರ್, ಆರ್.ಕೆ.ಸಾಕೇತ್, ಆರ್.ರವೀಂದ್ರನ್, ಸೋಮನಾರಾಯಣ್ ಹಾಗೂ ಗುರುಪಾದಪ್ಪ

 

Tags: 

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !