ಬುಧವಾರ, ಮಾರ್ಚ್ 22, 2023
19 °C

ಏಳಿ ಏರಿರಿ: ಇಲ್ಲಿವೆ ಐದು ಉತ್ತಮ ಎಲೆಕ್ಟ್ರಿಕ್‌ ಸೈಕಲ್‌ಗಳ ಮಾಹಿತಿ

ಪೃಥ್ವಿರಾಜ್‌ Updated:

ಅಕ್ಷರ ಗಾತ್ರ : | |

 Photo/ B H Shivakumar

ಇಂಧನ ಬೆಲೆ ಗಗನಕ್ಕೇರುತ್ತಿರುವುದರಿಂದ ಹಲವರಿಗೆ ಪ್ರಯಾಣದರದ್ದೇ ಸಮಸ್ಯೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಗ್ಗ ಎನಿಸುತ್ತಿರುವ ವಾಹನ ಸೈಕಲ್‌ ಒಂದೇ. ಆದರೆ ಸೈಕಲ್‌ ಪೆಡಲ್‌ ತುಳಿಯಬೇಕಾದ ಕಷ್ಟ ಸಹಜ. ಬ್ಯಾಟರಿ ಚಾಲಿತ ಎಲೆಕ್ಟ್ರಿಕ್‌ ಸೈಕಲ್‌ಗಳಲ್ಲಿ ಈ ಸಮಸ್ಯೆ ಇಲ್ಲ. ಪರಿಸರಮಾಲಿನ್ಯವೂ ಇರದು, ಜತೆಗೆ ಆರೋಗ್ಯವೃದ್ಧಿಗೂ ನೆರವಾಗುತ್ತವೆ. ಹೆಚ್ಚು ದೂರ ಕ್ರಮಿಸಬೇಕೆಂದಾಗ ಬ್ಯಾಟರಿ ಚಾಲು ಮಾಡಿ ಚಲಾಯಿಸಬಹುದು. ಕಡಿಮೆ ದೂರದ ಪ್ರಯಾಣಕ್ಕೆ ಪೆಡಲ್‌ ತುಳಿದುಕೊಂಡು ಹೋಗಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿರುವ ನೂತನ ತಂತ್ರಜ್ಞಾನ ಅಳವಡಿಸಿರುವ ಕೆಲವು ಎಲೆಕ್ಟ್ರಿಕ್‌ ಸೈಕಲ್‌ಗಳ ಮಾಹಿತಿ ಇಲ್ಲಿದೆ.

ಸೂಚನೆ: ಬೆಲೆಗಳಲ್ಲಿ ವ್ಯತ್ಯಾಸಗಳಿರಬಹುದು.

ಹೀರೊ ಲೆಕ್ಟ್ರೊ ಕಿಂಜಾ 27.5ಟಿ

ವಾಹನ ತಯಾರಿಕಾ ಕಂಪನಿ ಹೀರೊ, ಮಾರುಕಟ್ಟೆಗೆ ಪರಿಚಯಿಸಿರುವ ಈ ಸೈಕಲ್‌ ಸಂಸ್ಥೆಯ ಬೇಸಿಕ್‌ ಮಾಡಲ್‌ಗಳಲ್ಲಿ ಒಂದು. 250 ವಾಟ್‌ ಶಕ್ತಿಯ ಲೀಥಿಯಂ ಐಯಾನ್‌ ಬ್ಯಾಟರಿಯನ್ನು ಇದರಲ್ಲಿ ಅಳವಡಿಸಲಾಗಿದೆ. ಒಮ್ಮೆ ಚಾರ್ಜ್‌ ಮಾಡಿದರೆ ಸುಮಾರು 25 ಕಿ.ಮೀ. ವರೆಗೆ ಕ್ರಮಿಸುತ್ತದೆ. ಪೆಡಲಿಕ್‌ ಮೋಡ್‌ನಲ್ಲಿ ಗರಿಷ್ಠ 40 ಕಿ.ಮೀ. ವರೆಗೆ ಹೋಗಬಹುದು. ಇದರ ಗರಿಷ್ಠ ವೇಗ ಪ್ರತಿ ಗಂಟೆಗೆ 25 ಕಿ.ಮೀ. ಇದರ ತೂಕ 25 ಕೆ.ಜಿ. ಅಮೇಜಾನ್‌ ಸೇರಿದಂತೆ ವಿವಿಧ ಆನ್‌ಲೈನ್‌ ಮಾರುಕಟ್ಟೆ ತಾಣಗಳಲ್ಲಿ ಖರೀದಿಗೆ ಲಭ್ಯವಿದೆ.

ಗರಿಷ್ಠ ವೇಗ: 25 ಕಿ.ಮೀ./ಗಂಟೆಗೆ,

ಬೆಲೆ: ₹ 24.999


ಪ್ಯೂರ್‌ ಇವಿ ಎಟ್ರಾನ್‌ ಪ್ಲಸ್‌

7ಸ್ಪೀಡ್‌ ಗೇರ್‌ಗಳ ಸೌಲಭ್ಯವಿರುವ ಈ ಎಲೆಕ್ಟ್ರಿಕ್‌ ಸೈಕಲ್‌ನಲ್ಲಿ 14ಎಚ್‌ ಲೀಥಿಯಂ ಐಯಾನ್‌ ಬ್ಯಾಟರಿ ಅಳವಡಿಸಲಾಗಿದ್ದು, ಒಮ್ಮೆ ಚಾರ್ಜ್‌ ಮಾಡಿದರೆ ಸುಮಾರು 60 ಕಿ.ಮೀ. ವರೆಗೆ ಕ್ರಮಿಸುತ್ತದೆ. ಪೆಡಲ್‌ ಅಸಿಸ್ಟ್‌, ಡಿಜಿಟಲ್‌ ಡಿಸ್‌ಪ್ಲೇ, ಟೆಲಿಸ್ಕೋಪಿಕ್‌ ಸಸ್ಪೆನ್‌ಷನ್‌ ಸೇರಿದಂತೆ ಇನ್ನೂ ಕೆಲವು ಸೌಲಭ್ಯಗಳಿವೆ. ಇದರ ತೂಕ 24 ಕೆ.ಜಿ. ಹೆಚ್ಚಿನ ಮಾಹಿತಿಗೆ: https://pureev.in/etron

ಗರಿಷ್ಠ ವೇಗ: 20 ಕಿ.ಮೀ./ಗಂಟೆಗೆ

ಬೆಲೆ: ₹ 39,999


ಟೊರಾಯಿಡ್‌ ರುದ್ರ

ಇದು ಸಿಂಗಲ್‌ ಸ್ಪೀಡ್‌ ಎಲೆಕ್ಟ್ರಿಕ್‌ ಸೈಕಲ್‌. ಇದರಲ್ಲಿ 36v 250W ಬಿಎಲ್‌ಡಿಸಿ ಹಬ್‌ ಮೋಟಾರ್‌ ಇದ್ದು, ಲೀಥಿಯಂ ಅಯಾನ್‌ ಬ್ಯಾಟರಿ ಅಳವಡಿಸಲಾಗಿದೆ. ಚಾರ್ಜ್‌ ಮಾಡಬೇಕೆಂದಾಗ ಸುಲಭವಾಗಿ ಬ್ಯಾಟರಿ ಬೇರ್ಪಡಿಸಿ ಚಾರ್ಜ್‌ ಮಾಡಬಹುದು. ಒಮ್ಮೆ ಚಾರ್ಜ್‌ ಮಾಡಿದರೆ ಬ್ಯಾಟರಿ ಶಕ್ತಿಗೆ ಅನುಗುಣವಾಗಿ 40ರಿಂದ 90 ಕಿ.ಮೀ. ವರೆಗೆ ಕ್ರಮಿಸಬಹುದು. ಪೆಡಲ್‌ ಅಸಿಸ್ಟ್‌, ಎಲ್‌ಡಿ ಡಿಸ್‌ಪ್ಲೇ, ಫ್ರಂಟ್‌ ಸಸ್‌ಪೆನ್ಷನ್‌ನಂತಹ ಸೌಲಭ್ಯಗಳೂ ಇದರಲ್ಲಿವೆ. ಇದರ ತೂಕ 25 ಕೆ.ಜಿ. ಹೆಚ್ಚಿನ ಮಾಹಿತಿಗೆ: https://toroid.in

ಗರಿಷ್ಠ ವೇಗ: 25 ಕಿ.ಮೀ./ ಗಂಟೆಗೆ,

ಬೆಲೆ: ₹ 36,000ದಿಂದ ಆರಂಭ


ಎಲೆಕ್ಟ್ರಾನ್ ಎಂ5ಎಕ್ಸ್‌

ಚಾರಣಪ್ರಿಯರಿಗೆ ಹೇಳಿ ಮಾಡಿಸಿದಂತಿದೆ ಈ ಸೈಕಲ್‌. ಇದಕ್ಕಾಗಿಯೇ ದಡೂತಿ ಗಾಲಿಗಳನ್ನು ಅಳವಡಿಸಲಾಗಿದೆ. ಇದರಲ್ಲಿ 7ಸ್ಪೀಡ್‌ ಗೇರ್‌ ಸೌಲಭ್ಯವಿದೆ. 250 ವಾಟ್‌ ಸಾಮರ್ಥ್ಯದ ಬಿಎಲ್‌ಡಿಸಿ ಹಬ್‌ ಮೋಟರ್‌ ಅಳವಡಿಸಲಾಗಿದೆ. 36ವಿ 15ಎಚ್‌ ಲೀಥಿಯಂ ಐಯಾನ್‌ ಬ್ಯಾಟರಿ ಇದೆ. ಬ್ಯಾಟರಿಯನ್ನು ಬೇರ್ಪಡಿಸಿ ಚಾರ್ಜ್‌ ಮಾಡಿಕೊಳ್ಳಬಹುದು. ಒಮ್ಮೆ ಚಾರ್ಜ್‌ ಮಾಡಿದರೆ 70 ಕಿ.ಮೀ. ವರೆಗೆ ಕ್ರಮಿಸುತ್ತದೆ. ಸುರಕ್ಷತಾ ದೃಷ್ಟಿಯಿಂದ ಟಾರ್ಕ್‌ ಸೆನ್ಸರ್‌, ಕ್ರೂಯಿಸ್‌ ಕಂಟ್ರೋಲ್‌, ಆನ್‌-ಆಫ್‌ ಕೀ ಸ್ವಿಚ್‌, ಪೆಡಲ್‌ ಅಸಿಸ್ಟ್‌ನಂತಹ ಹಲವು ಸೌಲಭ್ಯಗಳನ್ನು ಅಳವಡಿಸಲಾಗಿದೆ. ಇದರ ತೂಕ 28 ಕೆ.ಜಿ. ಹೆಚ್ಚಿನ ಮಾಹಿತಿಗೆ: https://elektroncycles.in/ products/m5x

ಗರಿಷ್ಠ ವೇಗ: 25 ಕಿ.ಮೀ./ಗಂಟೆಗೆ

ಬೆಲೆ: ₹ 64,999 ‌


ಅರಿಟಾ ಬೈಕ್ಸ್‌ ಇನ್‌ಫಿನಿಟಿ

ಈ ಸೈಕಲ್‌ ಕೇವಲ ಸಂಚಾರಕ್ಕಷ್ಟೇ ಅಲ್ಲದೆ ಗರಿಷ್ಠ 130 ಕೆ.ಜಿ. ಸಾಮರ್ಥ್ಯದ ವಸ್ತು, ಉಪಕರಣಗಳನ್ನು ಸಾಗಿಸುವುದಕ್ಕೂ ನೆರವಾಗುತ್ತದೆ. ಇಬ್ಬರು ಕುಳಿತು ಪ್ರಯಾಣಿಸುವುದಕ್ಕೂ ಅನುಕೂಲ. ಇದು ಸಿಂಗಿಲ್‌ ಸ್ಪೀಡ್‌ ಗೇರ್‌ ಸೈಕಲ್‌ ಆಗಿದ್ದರೂ 7 ಸ್ಪೀಡ್‌ ಗೇರ್‌ ವರೆಗೆ ಅಪ್‌ಗ್ರೇಡ್‌ ಮಾಡಿಕೊಳ್ಳಬಹುದು. 48v 250w ಸಾಮರ್ಥ್ಯದ ಬಿಎಲ್‌ಡಿಸಿ ಹಬ್‌ ಮೋಟರ್‌ ಅಳವಡಿಸಲಾಗಿದ್ದು, ಬೇರ್ಪಡಿಸಿ ಚಾರ್ಜ್‌ ಮಾಡಬಹುದಾದಂತಹ ಲೀಥಿಯಂ ಐಯಾನ್ ಬ್ಯಾಟರ್‌ ಇದೆ. ಒಮ್ಮೆ ಚಾರ್ಜ್‌ ಮಾಡಿದರೆ 45 ಕಿ.ಮೀ. ವರೆಗೆ ಕ್ರಮಿಸುತ್ತದೆ. ವಿವಿಧ ಸಾಮರ್ಥ್ಯದ ಬ್ಯಾಟರಿಗಳಲ್ಲಿ ಇದು ಲಭ್ಯವಿದೆ. ಬ್ಯಾಟರಿ ಶಕ್ತಿಗೆ ತಕ್ಕಂತೆ ಕ್ರಮಿಸುವ ವೇಗವೂ ಹೆಚ್ಚಾಗಿರುತ್ತದೆ. ಪೆಡಲ್‌ ಅಸಿಸ್ಟ್‌, ಟೆಲಿಸ್ಕೋಪಿಕ್‌ ಸಸ್ಪೆನ್ಷನ್‌, ಎಲ್‌ಇಡಿ ಡಿಸ್‌ಪ್ಲೇ ಸೌಲಭ್ಯಗಳಿವೆ. ಇದರ ತೂಕ 25 ಕೆ.ಜಿ. ಹೆಚ್ಚಿನ ಮಾಹಿತಿಗೆ: https://www.auritabikes.com

ಗರಿಷ್ಠ ವೇಗ: 25 ಕಿ.ಮೀ./ಗಂಟೆಗೆ

ಆರಂಭಿಕ ಬೆಲೆ: ₹ 39,999

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.