ಬುಧವಾರ, ಸೆಪ್ಟೆಂಬರ್ 23, 2020
23 °C

ವಾಹನ ವಿಮೆ ಪರಿಹಾರ ಸಿಗದಿರಲು ಕಾರಣಗಳು

ತರುಣ್ ಮಾಥುರ್‌ Updated:

ಅಕ್ಷರ ಗಾತ್ರ : | |

Prajavani

ನಮ್ಮಲ್ಲಿ ವಾಹನಗಳಿಗೆ ವಿಮೆ ಮಾಡಿಸುವುದು ಕಡ್ಡಾಯ. ಆರ್ಥಿಕ ಹೊರೆಯಿಂದ ತಪ್ಪಿಸಿಕೊಳ್ಳಲು ವಾಹನ ಮಾಲೀಕರಿಗೆ ವಿಮೆ ಮಾಡಿಸಿಕೊಳ್ಳುವುದು ಮುಖ್ಯ. ಅಪಘಾತಗಳಿಂದ ವಾಹನಗಳಿಗೆ ಹಾನಿಯಾದ ಸಂದರ್ಭಗಳಲ್ಲಿ ಅದರ ದುರಸ್ತಿ, ನವೀಕರಣಕ್ಕೆ ವಿಮೆಯು ನೆರವಾಗುತ್ತದೆ.

ವಿಮೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಹಣ ಸಿಗದಿದ್ದರೆ ಅಥವಾ ಅರ್ಜಿ ತಿರಸ್ಕೃತಗೊಂಡರೆ ಹತಾಶೆಗೆ ಒಳಗಾಗುವುದು ಸಹಜ. ಇಂತಹ ಸಮಸ್ಯೆಗಳು, ಸಂದರ್ಭಗಳು ಎದುರಾಗಬಾರದು ಎಂದರೆ ವಿಮೆ ಪರಿಹಾರ ಪಡೆಯಲು ಬಯಸುವವರು ಹಲವು ವಿಷಯಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ವಿಮೆಯ ಪರಿಹಾರ ಹಣ ಪಡೆಯಲು ಆಗುವುದಿಲ್ಲ. ವಿಮೆ ಪರಿಹಾರ ಹಣ ಪಡೆಯಲು ಅರ್ಜಿ ಸಲ್ಲಿಸುವವರು ಸಾಮಾನ್ಯವಾಗಿ ಎದುರಿಸುವ ಕೆಲವು ಸಮಸ್ಯೆಗಳು ಇಲ್ಲಿವೆ.

ಚಾಲನೆಗೆ ಸಂಬಂಧಿಸಿದ ಸಮಸ್ಯೆ

ಸೂಕ್ತ ಚಾಲನಾ ಪರವಾನಗಿ ಇಲ್ಲದೆ ವಾಹನ ಚಲಾಯಿಸಿ ಅಥವಾ ಮದ್ಯ ಸೇವಿಸಿ ವಾಹನ ಚಲಾಯಿಸಿ ಅಪಘಾತಕ್ಕೆ ಗುರಿಯಾಗಿದ್ದಾರೆ  ಪರಿಹಾರ ಹಣ ಪಡೆಯುವುದು ಕಷ್ಟ. ಈ ಎರಡು ಪ್ರಕರಣಗಳಿಂದಾಗಿಯೇ ಹಲವರು ಪರಿಹಾರ ಹಣ ಪಡೆಯಲು ಸಾಧ್ಯವಾಗುವುದಿಲ್ಲ. ಈ ಎರಡೂ ಪ್ರಕರಣಗಳು ಕಾನೂನಿಗೆ ವಿರುದ್ಧವಾಗಿರುವುದರಿಂದ ವಿಮೆ ಕಂಪನಿಗಳು ಹಣ ನೀಡುವುದಕ್ಕೆ ಹಿಂದೇಟು ಹಾಕುತ್ತವೆ.

ನವೀಕರಣ ಮಾಡದಿರುವುದು

ವಿಮೆ ಪಾಲಸಿ ಅವಧಿ ಮುಗಿಯುವ ಮುನ್ನ ಪ್ರತಿ ವರ್ಷ ನವೀಕರಣ ಮಾಡಿಸಿಕೊಳ್ಳುವುದು ಕಡ್ಡಾಯ. ಅವಧಿ ಮುಗಿದ ಪಾಲಸಿಗೆ ಯಾವ ವಿಮಾ ಕಂಪನಿಯೂ ಹಣ ನೀಡುವುದಿಲ್ಲ. ಹಳೆಯ ಪಾಲಸಿ ಪತ್ರವನ್ನೇ ನೀಡಿದರೆ ವಿಮಾ ಅರ್ಜಿ ತಿರಸ್ಕೃತಗೊಳ್ಳುತ್ತದೆ ಎಂಬುದು ನೆನಪಿರಲಿ.

ಅಪಘಾತದ ಬಗ್ಗೆ ತಡವಾಗಿ ತಿಳಿಸುವುದು

ಅಪಘಾತವಾದ ಕೂಡಲೇ ವಿಷಯ ತಿಳಿಸುವಂತೆ ಮತ್ತು ಸರಿಯಾದ ಮಾಹಿತಿ ನೀಡುವಂತೆ ವಿಮಾ ಕಂಪನಿಗಳು ಅಪೇಕ್ಷಿಸುತ್ತವೆ. ನಿಗದಿತ ಸಮಯದೊಳಗೆ ಸೂಕ್ತ ದಾಖಲೆಗಳ ಮೂಲಕ ವಿಮಾ ಕಂಪನಿಗೆ ಮಾಹಿತಿ ಸಲ್ಲಿಸದೇ ಇದ್ದಲ್ಲಿ ವಿಮೆಗಾಗಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ. ಅಪಘಾತದಲ್ಲಿ ವಾಹನವು ಹಾನಿಗೆ ಒಳಗಾಗಿದ್ದರೆ ಕೂಡಲೇ ವಿಮಾ ಕಂಪನಿಗೆ ತಿಳಿಸಿ ನಂತರ ದುರಸ್ತಿ ಮಾಡಿಸಿಕೊಳ್ಳಬೇಕು.

ಹೆಚ್ಚುವರಿ ಸಾಧನ ಸೇರ್ಪಡೆ ಮಾಡಿದ್ದರೆ

ವಿಮೆ ಪಾಲಿಸಿ ಮಾಡಿಸಿದ ನಂತರ ವಾಹನಕ್ಕೆ ಹೆಚ್ಚುವರಿಯಾಗಿ ಪೂರಕ ಸಾಧನಗಳು ಅಥವಾ ಉಪಕರಣಗಳನ್ನು ಸೇರಿಸಿದ್ದರೆ ಅವುಗಳಿಗೆ ಆದ ಹಾನಿಗೆ ಪರಿಹಾರ ಪಡೆಯುವುದು ಕಷ್ಟವಾಗುತ್ತದೆ. ಹೀಗಾಗಿ ಈ ಬಗ್ಗೆಯೂ ವಿಮೆ ಕಂಪನಿಗೆ ಮಾಹಿತಿ ನೀಡುವುದು ಅಗತ್ಯ. ಅಂತಹ ಸಂದರ್ಭಗಳಲ್ಲಿ ವಿಮೆ ಕಂಪನಿಯು ವಾಹನ / ಕಾರ್‌ ಪರೀಕ್ಷಿಸಿ ಮತ್ತೊಮ್ಮೆ ವಿಮೆ ಪಾಲಿಸಿಯನ್ನು ನವೀಕರಣಗೊಳಿಸುತ್ತಾರೆ. ಇಂತಹ ಸಂಗತಿಗಳಗಳನ್ನು ಯಾವುದೇ ಕಾರಣಕ್ಕೂ ಯಾವತ್ತೂ ನಿರ್ಲಕ್ಷಿಸಬಾರದು.

ವ್ಯಾಪ್ತಿ ಮೀರಿ ಚಾಲನೆ

ವಿಮೆ ಅರ್ಜಿಯಲ್ಲಿ ನಮೂದಿಸಿದ ಪ್ರದೇಶದ ವ್ಯಾಪ್ತಿ ಮೀರಿ ಮತ್ತೊಂದು ಪ್ರದೇಶದಲ್ಲಿ ವಾಹನ ಅಪಘಾತಕ್ಕೆ ಈಡಾಗಿದ್ದರೂ ಪರಿಹಾರ ಹಣ ಸಿಗುವುದಿಲ್ಲ. ಮೋಟಾರು ವಾಹನ ಕಾಯ್ದೆ ಪ್ರಕಾರ ನಮ್ಮ ವಾಹನವನ್ನು ಭಾರತದಲ್ಲಿ ಮಾತ್ರ ಚಲಾಯಿಸಲು ಅವಕಾಶ ಇರುತ್ತದೆ. ದೇಶದ ಗಡಿ ದಾಟಿದ ಇತರೆ ಪ್ರದೇಶಗಳಲ್ಲಿ ಚಲಾಯಿಸಿ ಅಪಘಾತ ಸಂಭವಿಸಿದರೆ ಪರಿಹಾರ ಹಣ ಪಡೆಯಲು ಸಾಧ್ಯವಿಲ್ಲ.

ಬಣ್ಣ ಮತ್ತು ಟೈರ್‌ಗಳು

ಕಾರಿನ ಬಣ್ಣ ಹಾಳಾದರೆ ಮತ್ತು ಟೈರ್‌ಗಳು ಸವೆದರೆ ಪರಿಹಾರ ಹಣಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಕೇವಲ ಅಪಘಾತದಿಂದ ಸಂಭವಿಸಿದ ಕಾರುಗಳನ್ನು ದುರಸ್ತಿ ಮಾಡಿಕೊಳ್ಳುವುದಕ್ಕೆ ಮಾತ್ರ ಅವಕಾಶ ಇರುತ್ತದೆ.

ಅಸಮರ್ಪಕ ಬಳಕೆ

ವಿಮೆ ಪರಿಹಾರ ಹಣವು, ವಾಹನವನ್ನು ಸೂಕ್ತವಾಗಿ ಬಳಸಿಕೊಳ್ಳುವುದರ ಮೇಲೆ ನಿರ್ಧರಿತವಾಗುತ್ತದೆ. ಉದಾಹರಣಗೆ ಖಾಸಗಿ ಬಳಕೆಗೆ ಮೀಸಲಿರುವ ವಾಹನ ಮತ್ತು ವಾಣಿಜ್ಯ ಉದ್ದೇಶಗಳಿಗೆ ಮೀಸಲಿರುವ ವಾಹನಗಳಿಗೆ ವಿಮೆ ಪಾಲಸಿಯು ಭಿನ್ನವಾಗಿರುತ್ತದೆ. ಹೀಗಾಗಿ ವಾಹನವನ್ನು ಯಾವ ಉದ್ದೇಶಕ್ಕೆ ಬಳಸಿಕೊಂಡಿದ್ದೇವೆ ಎಂಬುದು ಕೂಡ ವಿಮೆಗಾಗಿ ಅರ್ಜಿ ಸಲ್ಲಿಸಿದಾಗ ಪರಿಗಣಿಸಲಾಗುತ್ತದೆ. ಈ ನಿಯಮಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದಕ್ಕೂ ಅವಕಾಶ ಇರುವುದಿಲ್ಲ.

ಈ ಸಂಗತಿಗಳನ್ನೆಲ್ಲಾ ನೆನಪಿಲ್ಲಿಟ್ಟುಕೊಂಡಿದ್ದರೆ, ಸೂಕ್ತ ಸಮಯಕ್ಕೆ ನಿಗದಿತ ವಿಮೆ ಪರಿಹಾರ ಹಣ ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಈ ವಿಷಯಗಳ ಬಗ್ಗೆ ಸದಾ ಎಚ್ಚರದಿಂದ ಇರಬೇಕು.

(ಲೇಖಕ; ಪಾಲಿಸಿಬಜಾರ್‌ಡಾಟ್‌ಕಾಂನ ವ್ಯಾಪಾರ ವಿಭಾಗದ ಮುಖ್ಯ ಅಧಿಕಾರಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು