ಶುಕ್ರವಾರ, ಡಿಸೆಂಬರ್ 6, 2019
19 °C

ಮಹೀಂದ್ರಾ ‘ವಿತ್ ಯು ಹಮೇಶಾ’: ಡಿಜಿಟಲ್ ವೇದಿಕೆಗೆ ದೊಡ್ಡಮಟ್ಟದ ಪ್ರತಿಸ್ಪಂದನೆ

Published:
Updated:
Prajavani

ಮಹೀಂದ್ರಾ ಅಂಡ್ ಮಹೀಂದ್ರಾ ಆಟೊಮೊಬೈಲ್ ಸಂಸ್ಥೆಯು ಗ್ರಾಹಕಸ್ನೇಹಿ ಕ್ರಮವಾಗಿ ಆರಂಭಿಸಿದ್ದ ‘ವಿತ್ ಯು ಹಮೇಶಾ’ ಎಂಬ ಡಿಜಿಟಲ್ ವೇದಿಕೆಗೆ ದೊಡ್ಡಮಟ್ಟದ ಪ್ರತಿಸ್ಪಂದನೆ ಸಿಕ್ಕಿದೆ. ಕೇವಲ 6 ವರ್ಷಗಳ ಅವಧಿಯಲ್ಲಿ 8 ಲಕ್ಷ ಗ್ರಾಹಕರು ಇದರ ಬಳಕೆದಾರರು ಎಂಬುದೇ ಇದಕ್ಕೆ ಸಾಕ್ಷಿ. ಡಿಜಿಟಲ್ ವೇದಿಕೆಯ ಆರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಇನ್ನಷ್ಟು ಹೊಸ ಫೀಚರ್‌ಗಳನ್ನು ಸಂಸ್ಥೆ ಬಿಡುಗಡೆ ಮಾಡಿದ್ದು, ಇವು ಮಾರುಕಟ್ಟೆಯಲ್ಲೇ ಹೊಸತು ಎಂದು ಸಂಸ್ಥೆ ಹೇಳಿಕೊಂಡಿದೆ. 

ಮೊಬೈಲ್ ಆ್ಯಪ್ ಹಾಗೂ ವೆಬ್‌ ಶ್ರೇಣಿಗಳಲ್ಲಿ ಲಭ್ಯವಿರುವ ‘ವಿತ್ ಯು ಹಮೇಶಾ’ ವಿಶಿಷ್ಟ ಹೊಸ ಸೌಲಭ್ಯವಾಗಿದೆ ಎಂದೇ ಹೇಳಬಹುದು. ಆಟೊಮೊಬೈಲ್ ಕ್ಷೇತ್ರದಲ್ಲಿ ವಾಹನ ಮಾರಾಟದ ಬಳಿಕ ಸಂಸ್ಥೆ ಒದಗಿಸುವ ತಂತ್ರಜ್ಞಾನಾಧಾರಿತ ಸೇವೆಯಲ್ಲಿ ಮೇಳೈಸಿರುವ ಹೊಸತನವನ್ನು ಗ್ರಾಹಕರು ಮೆಚ್ಚಿದ್ದಾರೆ. 3 ಲಕ್ಷ ಜನರು ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಗೂಗಲ್ ಪ್ಲೇಸ್ಟೋರ್‌ನಲ್ಲಿ ಇದಕ್ಕೆ 4.3 ರೇಟಿಂಗ್ ಇರುವುದು ಜನಪ್ರಿಯತೆಯ ದ್ಯೋತಕ ಎನ್ನುತ್ತದೆ ಸಂಸ್ಥೆ. ವಾರ್ಷಿಕೋತ್ಸವಕ್ಕಾಗಿ ಇನ್ನೆರಡು ಹೊಸ ಫೀಚರ್‌ಗಳನ್ನು ಪರಿಚಯಿಸಿದೆ. 

ಟಾಟ್‌ಬಾಟ್

ನಿಮ್ಮ ಸ್ನೇಹಿತನ ಜೊತೆ ಚಾಟ್ ಮಾಡಿದಷ್ಟೇ ಸುಲಭವಾಗಿ ಇಲ್ಲಿಯೂ (TOTBOT) ಚಾಟ್ ಮಾಡಿ, ಮಾಹಿತಿಗಳನ್ನು ಪಡೆಯಬಹುದು. ವಾಹನದ ಮಾಹಿತಿ, ಸರ್ವಿಸ್‌ ಬುಕಿಂಗ್, ಫೀಡ್‌ಬ್ಯಾಕ್, ಡೀಲರ್‌ ಮಾಹಿತಿ, ಎಸ್‌ಒಎಸ್‌ ಕೋರಿಕೆ, ವಾರಂಟಿ ಮುಂದುವರಿಕೆ, ರೋಡ್‌ಸೈಡ್ ಅಸಿಸ್ಟನ್ಸ್‌ ಕುರಿತ ಮಾಹಿತಿ ಬೆರಳ ತುದಿಯಲ್ಲೇ ಸಿಕ್ಕಿಬಿಡುತ್ತದೆ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನದ ಹೊಸ ಸೌಲಭ್ಯವನ್ನು ಗ್ರಾಹಕರಿಗೆ ವಿಸ್ತರಿಸುವುದು ಮಹೀಂದ್ರಾ ಉದ್ದೇಶ. 

ಡಿಜಿ ಲಾಕರ್

ವಾಹನ ಚಲಾಯಿಸುವವರಿಗೆ ಅಗತ್ಯವಾಗಿ ಬೇಕಿರುವ ವಾಹನ ಚಾಲನಾ ಪರವಾನಗಿ, ಆರ್‌ಸಿ, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್‌ಗಳನ್ನು ಡಿಜಿ ಲಾಕರ್ ಮೂಲಕ ಪಡೆದುಕೊಳ್ಳಬಹುದು. ಆ್ಯಪ್‌ನಲ್ಲಿ ಸೇರ್ಪಡೆ ಮಾಡಿರುವ ಹೊಸ ಫೀಚರ್‌ಗಳಲ್ಲಿ ಒಂದಾಗಿರುವ ಡಿಜಿ ಲಾಕರ್‌ಗೆ ಸಾರಿಗೆ ಇಲಾಖೆಯಿಂದ ಮಾನ್ಯತೆಯೂ ಇದೆ. ಸರ್ಕಾರದ ಪೋರ್ಟಲ್‌ ಜೊತೆ ಇದನ್ನು  ಸಂಯೋಜಿಸಲಾಗಿದ್ದು, ಆ್ಯಪ್‌ನಲ್ಲಿ ಮಾತ್ರ ಲಭ್ಯವಿದೆ. 

ಉತ್ಪನ್ನದಲ್ಲಾಗಲೀ, ಸೇವೆಯ ವಿಚಾರದಲ್ಲಾಗಲೀ ಮುಂದಿನ ತಲೆಮಾರಿನ ತಂತ್ರಜ್ಞಾನವನ್ನು ಪ್ರತಿಯೊಬ್ಬ ಗ್ರಾಹಕರಿಗೂ ಒದಗಿಸಬೇಕು ಎಂಬುದೇ ಸಂಸ್ಥೆಯ ಆಶಯ ಎನ್ನುತ್ತಾರೆ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ವಿಜಯ್ ನಕ್ರಾ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಪಾರದರ್ಶಕ ಡಿಜಿಟಲ್ ಸೇವಾ ಸೌಲಭ್ಯ ಕಲ್ಪಿಸಿದ್ದಕ್ಕೆ ಪ್ರಶಸ್ತಿಗಳೂ ಅರಸಿಬಂದಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು