ಮಧುಮೇಹಕ್ಕೆಎಚ್ಚರಿಕೆಯೇ ಮೊದಲ ಔಷಧ

7

ಮಧುಮೇಹಕ್ಕೆಎಚ್ಚರಿಕೆಯೇ ಮೊದಲ ಔಷಧ

Published:
Updated:

ಇಡೀ ಪ್ರಪಂಚ ಭಯೋತ್ಪಾದನೆಯ ನಿಗ್ರಹಕ್ಕೆ ಹರಸಾಹಸ ಪಡುತ್ತಿದೆ. ಆದರೆ ಸದ್ದಿಲ್ಲದೇ ಮನುಷ್ಯದೇಹದಲ್ಲಿ ಭಯೋತ್ಪಾದಕನಂತೆ ಮಧುಮೇಹ ಹುಟ್ಟಿ, ನಿಧಾನಗತಿಯಲ್ಲಿ ಮಾನವಕುಲವನ್ನೇ ಆವರಿಸುತ್ತಿದೆ. 

ರಕ್ತದಲ್ಲಿನ ಸಕ್ಕರೆಅಂಶವನ್ನು ನಿಯಂತ್ರಣದಲ್ಲಿಡಲು ದೇಹಕ್ಕೆ ಸಾಧ್ಯವಾಗದಿದ್ದಾಗ ಬರುವಂತಹ ಕಾಯಿಲೆಯೇ ಮಧುಮೇಹ. ಇದರಲ್ಲಿ ನಾಲ್ಕು ವಿಧ. ಒಂದು: ದೇಹವು ಅಗತ್ಯ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸುವ ಸಾಮರ್ಥ್ಯವನ್ನು ಕಳೆದುಕೊಂಡು ಬರುವಂತಹ ಮಧುಮೇಹ; ಇದು ಸಣ್ಣ ವಯಸ್ಸಿನಲ್ಲಿ ಕಂಡು ಬರುವುದು ಹೆಚ್ಚು. ಎರಡನೆಯ ವಿಧದಲ್ಲಿ ಇನ್ಸುಲಿನ್ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿರುತ್ತದೆ; ಉತ್ಪಾದಿಸಿದ ಇನ್ಸುಲಿನ್‌ಗೆ ದೇಹವು ಸಮರ್ಪಕವಾಗಿ ಪ್ರತಿಕ್ರಿಯಿಸುವುದಿಲ್ಲ. ಮೂರನೆಯದು ಜೆನೆಟಿಕ್ ತೊಂದರೆ; ಸೋಂಕು, ಮೇದೊಜೀರಕಗ್ರಂಥಿಯ ತೊಂದರೆ, ಥೈರಾಯಿಡ್ ಸಮಸ್ಯೆ ಅಥವಾ ಕೆಲವು ಔಷಧಗಳ ಅಡ್ಡಪರಿಣಾಮದಿಂದ ಉಂಟಾಗುತ್ತದೆ. ನಾಲ್ಕನೆಯದು ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವಂತಹ ಮಧುಮೇಹ. ಇದು ಮಗುವಿನ ಜನನದ ನಂತರ ಕೆಲವರಲ್ಲಿ ಕಡಿಮೆಯಾದರೂ ನಂತರದ ದಿನಗಳಲ್ಲಿ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ವಂಶಪಾರಂಪರ್ಯ, ಅಸಮರ್ಪಕ ಆಹಾರಸೇವನೆ, ಮಾನಸಿಕ ಒತ್ತಡ, ವ್ಯಾಯಾಮದ ಕೊರತೆ, ಧೂಮಪಾನ, ಮದ್ಯಪಾನ, ಅತಿಯಾದ ತೂಕ – ಇವೆಲ್ಲವೂ ಮಧುಮೇಹಕ್ಕೆ ಸಹಕಾರಿಯಾಗುವ ಅಂಶಗಳು.

ಸಕ್ಕರೆಕಾಯಿಲೆಯ ಲಕ್ಷಣಗಳು
* ಅತಿಯಾದ ಬಾಯಾರಿಕೆ.
* ಪದೇ ಪದೇ ಮೂತ್ರವನ್ನು ವಿಸರ್ಜಿಸುವುದು.
* ತೂಕ ಕಡಿಮೆಯಾಗುವುದು.
* ವಿಪರೀತ ಹಸಿವು, ದೃಷ್ಟಿ ಮಂಜಾಗುವುದು.
* ತಿಂಗಳುಗಟ್ಟಲೆ ವಾಸಿಯಾಗದ ಗಾಯಗಳು
* ಕೈ–ಕಾಲುಗಳಲ್ಲಿ ಉರಿ, ನೋವು ಸೆಳೆತ

‌ಕೆಲವೊಮ್ಮೆ ಯಾವುದೇ ಲಕ್ಷಣಗಳಿರದೆಯೂ ಕಾಯಿಲೆ ಇರಬಹುದು. ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ, ಹೃದಯ, ಮೂತ್ರಪಿಂಡ, ರಕ್ತನಾಳಗಳು, ಮೆದುಳು ಮತ್ತು ನರವ್ಯೂಹಗಳು, ಕಣ್ಣುಗಳು, ವಸಡು, ಹಲ್ಲು ಇತ್ಯಾದಿ ಅಂಗಾಂಗಗಳ ಮೇಲೂ ಅಡ್ಡ ಪರಿಣಾಮಗಳಾಗುತ್ತವೆ.

ಅತಿಯಾದ ರಕ್ತದೊತ್ತಡ, ಹೃದಯಾಘಾತ, ಮೂತ್ರಪಿಂಡವೈಫಲ್ಯ, ಚರ್ಮದ ಹುಣ್ಣುಗಳು, ಅಂಧತ್ವ – ಇವೆಲ್ಲವೂ ಮಧುಮೇಹದಿಂದಾಗುವ ಸಮಸ್ಯೆಗಳು. ಇದರಲ್ಲಿ ಕೆಲವು ಸಮಸ್ಯೆಗಳು ಜೀವಿಯನ್ನು ನಿಧಾನವಾಗಿ ಸಾಯುವಂತೆ ಮಾಡಿದರೆ, ಇನ್ನೂ ಕಲವು ಮನುಷ್ಯನನ್ನು ಸದ್ದಿಲ್ಲದೇ ಕೂತಲ್ಲಿಯೇ ಇಹಲೋಕ ತ್ಯಜಿಸುವಂತೆ ಮಾಡುತ್ತದೆ.

ತಡೆಗಟ್ಟುವಿಕೆ ಹಾಗೂ ನಂತರದ ಆರೈಕೆ
ಮಧುಮೇಹ ಬಾರದಂತೆ ಎಚ್ಚರಿಕೆಯ ಕ್ರಮಗಳನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು. ‘ಸಣ್ಣವರಿದ್ದಾಗ ತಿನ್ನದೇ ನಮ್ಮಂತೆ ದೊಡ್ಡವರಾದ ಮೇಲೆ ತಿನ್ನಲು ಸಾಧ್ಯವೆ?’ ಎಂದು ಸಿಕ್ಕಿದ್ದನ್ನೆಲ್ಲಾ ಮಕ್ಕಳಿಗೆ ತಿನ್ನಿಸುವ ಪರಿಪಾಠ ರೂಢಿಯಲ್ಲಿದೆ. ಇದು ಅತ್ಯಪಾಯಕಾರಿ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗುವುದಿಲ್ಲ ಎಂಬುದನ್ನು ಅರಿತು, ಮಕ್ಕಳಿಗೆ ಆರೋಗ್ಯಕರ ಆಹಾರವನ್ನು ನಿಯಮಿತವಾಗಿ ಸಮಯಕ್ಕೆ ತಕ್ಕಂತೆ ತಿನ್ನುವುದನ್ನು ಅಭ್ಯಾಸ ಮಾಡಿಸಬೇಕು.

ಕರಿದ ತಿಂಡಿಗಳು, ಫಿಜ್ಜಾ, ಬರ್ಗರ್, ಸಕ್ಕರೆ ಹಾಗೂ ಕೆಲವು ಕೃತಕ ಬಣ್ಣಗಳಿಂದ ತಯಾರಿಸಲ್ಟಟ್ಟ ತಂಪು ಪಾನೀಯಗಳು ಇಂಥವು ನೋಡಲು ಆಕರ್ಷಕವಾಗಿ ಕಂಡರೂ ದೇಹಕ್ಕೆ ವೈರಿಗಳಿದ್ದಂತೆ. ಅದನ್ನು ಮಕ್ಕಳಿಗೆ ಮನವರಿಕೆ ಮಾಡಿಸಿ. ಮೊಳಕೆಯೊಡೆದ ಕಾಳುಗಳು, ಹಣ್ಣು, ತರಕಾರಿ, ಬಾದಾಮಿ, ಹಾಲು, ಮೊಸಲು ಇಂತಹ ವಿಟಮಿನ್ ಪ್ರೋಟಿನ್‌ ಭರಿತ ಆಹಾರವನ್ನು ಹಸಿವಾದಾಗ, ಎರಡು ಊಟದ ಮಧ್ಯೆ ಸೇವಿಸುವ ರೂಢಿಯಾಗಬೇಕು.

ಮಕ್ಕಳಿಗೆ ಟಿ.ವಿ., ಮೊಬೈಲನ್ನು ಕೊಟ್ಟು ಕೂಡಿಸುವುದರ ಬದಲಾಗಿ ನೆರೆಹೊರೆಯ ಗೆಳೆಯರೊಂದಿಗೆ ಆಟವಾಡುವಂತೆ ಪ್ರೋತ್ಸಾಹಿಸಬೇಕು. ಸಮಯ ಸಿಕ್ಕಾಗಲೆಲ್ಲಾ ನಾವು ಅವರೊಡನೆ ಮಕ್ಕಳಾಗಿ ಆಡುವುದರಿಂದ ನಾವು ಫಿಟ್ ಅವರುಗಳೂ ಫಿಟ್‌!

ಅವರು ಪ್ರತಿದಿನ 30–45 ನಿಮಿಷ ನಡೆಯಬೇಕು. ಅದರೊಂದಿಗೆ ಸಮರ್ಪಕ ರೀತಿಯಲ್ಲಿ ವ್ಯಾಯಾಮಗಳನ್ನೂ ಮಾಡಬೇಕು. ತಿಂದ ಆಹಾರ ಜೀರ್ಣವಾದಾಗ ಮಧುಮೇಹ, ರಕ್ತದೊತ್ತಡ ಎಲ್ಲವನ್ನೂ ದೂರವಿಡಬಹುದು.

40 ವರ್ಷದ ಮೇಲ್ಪಟ್ಟವರು ಮಧುಮೇಹದ ಯಾವುದೇ ಲಕ್ಷಣಗಳಿಲ್ಲದಿದ್ದರೂ ವರ್ಷಕ್ಕೊಮ್ಮೆ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಪರೀಕ್ಷಿಸಿಕೊಳ್ಳಬೇಕು. ಇದರಿಂದ ಸಕ್ಕರೆಕಾಯಿಲೆಯನ್ನು ಶುರುವಿನ ಹಂತದಲ್ಲೇ ಕಂಡು ಹಿಡಿದು ನಿಯಂತ್ರಿಸಬಹುದು.

ಮಧುಮೇಹ ಪೀಡಿತರು, ದೇಹಕ್ಕೆ ತಕ್ಕಷ್ಟು ಮಿತಾಹಾರವನ್ನು ಸೇವಿಸಿ ಚಟುವಟಿಕೆಯಿಂದ ಜೀವಿಸತೊಡಗಿದರೆ ಯಾವುದೇ ಔಷಧಗಳ ಅಗತ್ಯವಿಲ್ಲದೇ ಬದುಕಬಹುದು.

ಔಷಧಗಳನ್ನು ಸೇವಿಸುವವರು ಪ್ರತಿದಿನ ತಪ್ಪದೇ ಮಾತ್ರೆ, ಇನ್ಸುಲಿನ್ ಸೇವಿಸಬೇಕು. 2–3 ತಿಂಗಳಿಗೊಮ್ಮೆ ವೈದ್ಯರನ್ನು ಸಂಪರ್ಕಸಿ, ತಾವು ತೆಗೆದುಕೊಳ್ಳುತ್ತಿರುವ ಔಷಧ ಸರಿಯಾಗಿದೆಯೇ ಅಥವಾ ಏನಾದರೂ ಬದಲಾವಣೆಗಳನ್ನು ಮಾಡಬೇಕೇ ಎಂದು ತಿಳಿದುಕೊಳ್ಳಬೇಕು.

ಧಾರಾಳವಾಗಿ ಸೇವಿಸಬೇಕಾದ ಆಹಾರ
ಸೌತೆಕಾಯಿ, ಕೋಸು, ಹೀರೇಕಾಯಿ, ಸೊಪ್ಪುಗಳು, ಬೆಂಡೆಕಾಯಿ, ತೊಂಡೆಕಾಯಿ, ಈರುಳ್ಳಿ, ಟೊಮೊಟೊ, ದಪ್ಪಮೆಣಸು, ಮೊಟ್ಟೆಯ ಬಿಳಿ ಭಾಗ, ಪಪ್ಪಾಯಿ, ಕಲ್ಲಂಗಡಿ.

ಮಿತವಾಗಿ ಸೇವಿಸಬೇಕಾದ ಆಹಾರ
ಬೀಟ್‌ರೂಟ್, ಆಲೂಗಡ್ಡೆ, ಗೆಣಸು, ಕ್ಯಾರೆಟ್, ಅನಾನಸು, ಬಾಳೆಹಣ್ಣು, ಮಾವಿನಹಣ್ಣು, ಸಪೋಟ, ಖರ್ಜೂರ, ಮಾಂಸದ ಪದಾರ್ಥಗಳು.

ಸರಿ ಹಾಗೂ ತಪ್ಪುಗಳು
1. ತಪ್ಪು: ಆಹಾರದಲ್ಲಿ ಅತಿಯಾದ ಸಿಹಿ/ ಸಕ್ಕರೆ ಮಧುಮೇಹಕ್ಕೆ ಕಾರಣ.
ಸರಿ: ವಂಶಪಾರಂಪರ್ಯತೆ, ವ್ಯಾಯಾಮದ ಕೊರತೆ, ಅತಿಯಾದ ತೂಕ, ಧೂಮಪಾನ, ಮದ್ಯಪಾನ.

2. ತಪ್ಪು: ಮಧುಮೇಹಕ್ಕೆ ಕಡಿಮೆ ಸಿಹಿ ತಿನ್ನುವುದೊಂದೇ ಪರಿಹಾರ.
ಸರಿ: ಜೊತೆಗೆ ನಿಯಮಿತ ವ್ಯಾಯಾಮ, ಸಮರ್ಪಕ ಆಹಾರ, ಮಾತ್ರೆ ಸೇವನೆ ಕಡ್ಡಾಯ.

3. ತಪ್ಪು: ಮಧುಮೇಹವನ್ನು ಪೂರ್ತಿಯಾಗಿ ವಾಸಿ ಮಾಡಬಹುದು.
ಸರಿ: ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದಷ್ಟೆ.

4. ತಪ್ಪು: ವಯಸ್ಸಾದವರಿಗೆ, ದಪ್ಪವಿರುವವರಿಗೆ ಮಾತ್ರ ಈ ಕಾಯಿಲೆ ಬರುತ್ತದೆ.
ಸರಿ: ಮಕ್ಕಳು, ಮುದುಕರು, ತೆಳ್ಳಗಿರುವವರಿಗೂ ಬರಬಹುದು.

ಇತರ ಆರೈಕೆಗಳು
1. ವಸಡಿನ ತೊಂದರೆ ಹಾಗೂ ಸೋಂಕಿನ ಸಾಧ್ಯತೆ ಹೆಚ್ಚು. ಆಗ ವಸಡಿನಿಂದ ರಕ್ತ ಬರುವುದು, ನೋವುಂಟಾಗುವುದು ಹಾಗೂ ಹಲ್ಲು ಸಡಿಲವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಪ್ರತಿದಿನ 2 ಬಾರಿ ಬ್ರಷ್‌ನಿಂದ ಹಲ್ಲು ಮತ್ತು ನಾಲಗೆಯನ್ನು ಉಜ್ಜಬೇಕು. ತೊಂದರೆ ಇದ್ದಲ್ಲಿ ದಂತ ವೈದ್ಯರನ್ನು ಶೀಘ್ರವೇ ಸಂಪರ್ಕಿಸಬೇಕು.

2. ಕಾಲಿನ ಆರೈಕೆ: ಮಧುಮೇಹ ಇದ್ದಲ್ಲಿ ಕೆಲವು ವರ್ಷಗಳ ನಂತರ ಕಾಲು ಹಾಗೂ ಪಾದದಲ್ಲಿ ರಕ್ತ ಸಂಚಲನೆ ಕಡಿಮೆಯಾಗುತ್ತದೆ. ಇದರಿಂದ ನರಗಳು ಹಾನಿಯಾಗಿ, ಸ್ಪರ್ಶಜ್ಞಾನ ಕಡಿಮೆಯಾಗುತ್ತದೆ. ಇದರ ಪರಿಣಾಮ ಸಣ್ಣಪುಟ್ಟ ಒತ್ತಡ, ನೋವು ಗೊತ್ತಾಗದೇ ಗಾಯವಾಗಿ, ವಾಸಿಯಾಗಲು ತುಂಬಾ ನಿಧಾನವಾಗುತ್ತದೆ. ಕಾಲಿನ ಆರೈಕೆ ದಿನನಿತ್ಯ ಮಾಡುವುದರಿಂದ ಪಾದಗಳು ಒಡೆಯದಂತೆ, ಗಾಯವಾಗದಂತೆ ನೋಡಿಕೊಳ್ಳಬಹುದು. ಗಾಯವಾದಾಗ ಅದನ್ನು ಸಣ್ಣದಾಗಿದ್ದಾಗಲೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಕಾಲು ಕೊಳೆಯುವುದನ್ನು ತಡೆಯಬಹುದು. ಇದರಿಂದ ಕಾಲು ಕತ್ತರಿಸಬೇಕಾದ ಸಂಭವವನ್ನು ಕಡಿಮೆ ಮಾಡಬಹುದು.

ಪ್ರತಿ ರಾತ್ರಿ ಮಲಗುವ ಮುನ್ನ ಕಾಲನ್ನು ಚೆನ್ನಾಗಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಬೇಕು. ಕಾಲಿಗೆ ಲೋಷನ್ ಅಥವಾ ಕೊಬ್ಬರಿ ಎಣ್ಣೆಯನ್ನು ಹಚ್ಚಬೇಕು. ಕಾಲಿನಲ್ಲಿ ಗುಳ್ಳೆಗಳು, ಹುಣ್ಣು, ತರಚು ಗಾಯ ಇತ್ಯಾದಿ ಇದೆಯೇ ಎಂದು ನೋಡಿಕೊಳ್ಳಬೇಕು.

ಉಗುರುಗಳನ್ನು ಜೋಪಾನವಾಗಿ ವಾರಕ್ಕೊಮ್ಮೆ ನೇಲ್‌ ಕಟ್ಟಿನಿಂದ ಕತ್ತರಿಸಬೇಕು. (ಬ್ಲೇಡ್ ಉಪಯೋಗಿಸಬಾರದು).

3. ಕಣ್ಣಿನ ಆರೋಗ್ಯ: ಮಧುಮೇಹದಿಂದ ಕಣ್ಣಿನ ರಕ್ತನಾಳಗಳಲ್ಲಿ ಬದಲಾವಣೆ ಉಂಟಾಗುತ್ತದೆ. ರಕ್ತದೊತ್ತಡ ಹಾಗೂ ರಕ್ತದಲ್ಲಿ ಸಕ್ಕರೆಯ ಅಂಶವನ್ನು ನಿಯಂತ್ರಿಸುವುದರಿಂದ ಈ ಬದಲಾವಣೆಗಳನ್ನು ತಡೆಗಟ್ಟಬಹುದು. ವೈದ್ಯರ ಬಳಿ ಕಣ್ಣಿನ ತಪಾಸಣೆ ವರ್ಷಕ್ಕೊಮ್ಮೆ ಮಾಡಿಸಬೇಕು.

4. ಹೃದಯ ಹಾಗೂ ಮೆದುಳಿನ ಆರೋಗ್ಯ ಕಾಪಾಡುವುದು.
* ಆಹಾರ ಹಾಗೂ ವ್ಯಾಯಾಮದ ಬಗ್ಗೆ ಗಮನ ಕೊಡಬೇಕು.

* ಸಿಹಿ ಪಾದಾರ್ಥ, ಉಪ್ಪಿನ ಪ್ರಮಾಣ ಹಾಗೂ ಜಿಡ್ಡಿನ ಪದಾರ್ಥಗಳನ್ನು ಕಡಿಮೆ ಮಾಡಬೇಕು.

* ತಿಂಗಳಿಗೊಮ್ಮೆ ರಕ್ತದೊತ್ತಡ ಪರೀಕ್ಷೆ ಮಾಡಿಸಬೇಕು.

* ವರ್ಷಕ್ಕೊಮ್ಮೆ ರಕ್ತದ ಕೊಬ್ಬಿನಾಂಶದ ಪರೀಕ್ಷೆ ಮಾಡಿಸಬೇಕು. 

5. ಮೂತ್ರ ಪಿಂಡದ ಆರೋಗ್ಯ
ವರ್ಷಕ್ಕೊಮ್ಮೆ ಮೂತ್ರ ಪರೀಕ್ಷೆ ಮಾಡಿಸಿ ಸೂಕ್ತ ಚಿಕಿತ್ಸೆ ಪಡೆಯಬೇಕು.

ಧಾರಾಳವಾಗಿ ಸೇವಿಸಬೇಕಾದ ಆಹಾರ: ಸೌತೆಕಾಯಿ, ಕೋಸು, ಹೀರೇಕಾಯಿ, ಸೊಪ್ಪುಗಳು, ಬೆಂಡೆಕಾಯಿ, ತೊಂಡೆಕಾಯಿ, ಈರುಳ್ಳಿ, ಟೊಮೊಟೊ, ದಪ್ಪಮೆಣಸು, ಮೊಟ್ಟೆಯ ಬಿಳಿ ಭಾಗ, ಪಪ್ಪಾಯಿ, ಕಲ್ಲಂಗಡಿ.

ಮಿತವಾಗಿ ಸೇವಿಸಬೇಕಾದ ಆಹಾರ: ಬೀಟ್‌ರೂಟ್, ಆಲೂಗಡ್ಡೆ, ಗೆಣಸು, ಕ್ಯಾರೆಟ್, ಅನಾನಸು, ಬಾಳೆಹಣ್ಣು, ಮಾವಿನಹಣ್ಣು, ಸಫೋಟ, ಖರ್ಜೂರ, ಮಾಂಸದ ಪದಾರ್ಥ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !