ಸಿದ್ದು ಸೀಟಿ ಊದದಿದ್ದರೆ ಬಸ್‌ ಓಡದು!

7

ಸಿದ್ದು ಸೀಟಿ ಊದದಿದ್ದರೆ ಬಸ್‌ ಓಡದು!

Published:
Updated:
ವಿಧಾನಪರಿಷತ್ತಿನಲ್ಲಿ ಮಾತನಾಡಿದ ಆಯನೂರು ಮಂಜುನಾಥ್

ಬೆಂಗಳೂರು: ‘ಈ ಸಮ್ಮಿಶ್ರ ಸರ್ಕಾರಕ್ಕೆ ಕುಮಾರಸ್ವಾಮಿ ಡ್ರೈವರ್‌, ಸಿದ್ದರಾಮಯ್ಯ ಕಂಡಕ್ಟರ್. ಸಿದ್ದರಾಮಯ್ಯ ಸೀಟಿ ಊದದಿದ್ದರೆ ಗಾಡಿ ಮುಂದಕ್ಕೆ ಹೋಗುವುದಿಲ್ಲ’.

ಸಮ್ಮಿಶ್ರ ಸರ್ಕಾರದ ಸ್ಥಿತಿಯನ್ನು ತಮ್ಮದೇ ಧಾಟಿಯಲ್ಲಿ ವಿಧಾನಪರಿಷತ್ತಿನಲ್ಲಿ ಬಣ್ಣಿಸಿದವರು ಬಿಜೆಪಿಯ ಆಯನೂರು ಮಂಜುನಾಥ್. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಹರಿತ ಮಾತುಗಳಿಂದ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.

‘ನಮ್ಮ ಕಡೆ ಬಸ್ಸುಗಳನ್ನು ಡ್ರೈವರ್‌ಗಳು ಸ್ಟಾರ್ಟ್‌ ಮಾಡಿಯೇ ನಿಲ್ಲಿಸಿರುತ್ತಾರೆ. ರೈಟ್‌ ದಯಣ್ಣ (ಚಾಲಕನ ಹೆಸರು) ಎಂದರೆ ಕ್ಲಚ್‌ ಬಿಟ್ಟು ಗಾಡಿ ಮುಂದಕ್ಕೆ ಓಡಿಸುತ್ತಾನೆ. ಇಲ್ಲದಿದ್ದರೆ ಹಾಗೇ ನಿಲ್ಲಿಸಿರುತ್ತಾನೆ. ಇದರಿಂದ ಡೀಸೆಲ್‌ ವ್ಯರ್ಥವಾಗುತ್ತದೆ. ಕುಮಾರಸ್ವಾಮಿ ಸರ್ಕಾರದ ಕಥೆಯೂ ಅದೇ ರೀತಿ ಆಗಿದೆ. ಇದರಿಂದ ಜನರಿಗೆ ನಷ್ಟವಾಗುತ್ತಿದೆ’ ಎಂದು ಅವರು ಛೇಡಿಸಿದರು.

‘ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಸನದ ಹಿಂದೆ ಸಿದ್ದರಾಮಯ್ಯ ಕುಳಿತುಕೊಳ್ಳುತ್ತಾರೆ. ಮುಖ್ಯಮಂತ್ರಿ ಎಲ್ಲದಕ್ಕೂ ಸಿದ್ದರಾಮಯ್ಯ ಅವರ ಗ್ರೀನ್‌ ಸಿಗ್ನಲ್‌ಗಾಗಿಯೇ ಕಾದು ಕುಳಿತಿರುತ್ತಾರೆ’ ಎಂದರು.

ಆಗ ಮಧ್ಯಪ್ರವೇಶಿಸಿದ ಜೆಡಿಎಸ್‌ನ ಟಿ.ಎ.ಶರವಣ, ‘ನಮ್ಮದು ಡಬಲ್‌ ಎಂಜಿನ್‌ ಗಾಡಿ. ತುಂಬಾ ಗಟ್ಟಿಮುಟ್ಟು’ ಎಂದು ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಆಯನೂರು, ‘ಸರ್ಕಾರಕ್ಕೆ ಬೇಕಾದರೆ ಡಬಲ್ ಎಂಜಿನ್‌ ಇರಲಿ,
ವ್ಯಕ್ತಿಗತವಾಗಿ ಡಬಲ್‌ ಎಂಜಿನ್‌ ಇಟ್ಟುಕೊಳ್ಳಬೇಡಿ’ ಎಂದು ಲೇವಡಿ ಮಾಡಿದರು.

‘ಈ ಹಿಂದೆ ಸಾಲ ಮನ್ನಾ ಮಾಡಿದಾಗ ಯಾರು ಕಮಿಷನ್‌ ಪಡೆದಿದ್ದಾರೆ ಎಂಬುದು ಗೊತ್ತು ಎಂದು ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಕಮಿಷನ್‌ ಪಡೆದವರು ಯಾರು ಎನ್ನುವುದನ್ನು ಬಹಿರಂಗಪಡಿಸಬೇಕು. ಸಾರ್ವಜನಿಕರ ಹಣ ಯಾರದ್ದೋ ಜೇಬಿಗೆ ಹೋಗಬಾರದು. ಯಾರು ಕಮಿಷನ್‌ ಪಡೆದಿದ್ದಾರೋ ಅವರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು, ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಶಿಕ್ಷಣ ಸಾಲ ಮನ್ನಾ ಮಾಡಿ: ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಸಾಲ ಮಾಡಿದ್ದಾರೆ. ಸಾಕಷ್ಟು ವಿದ್ಯಾರ್ಥಿಗಳು ಉದ್ಯೋಗವೂ ಸಿಗದೇ, ಸಾಲ ತೀರಿಸಲಾಗದ ಸ್ಥಿತಿಯಲ್ಲಿದ್ದಾರೆ. ಸರ್ಕಾರ ಇವರ ನೆರವಿಗೆ ಬರಬೇಕು ಎಂದು ಆಯನೂರು ಸಲಹೆ ನೀಡಿದರು.

‘ಶೈಕ್ಷಣಿಕ ಸಾಲದ ಮೊತ್ತ ದೊಡ್ಡದ್ದೇನಲ್ಲ. ಸಾಲ ಮನ್ನಾ ಮಾಡಬೇಕು ಎಂಬುದು ನನ್ನ ಒತ್ತಾಯ. ಒಂದು ವೇಳೆ ಆಗದಿದ್ದರೆ, ಬಡ್ಡಿಯನ್ನಾದರೂ ಮನ್ನಾ ಮಾಡಬೇಕು. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದರು.

ಬಡ ಕುಟುಂಬದ ವಿದ್ಯಾರ್ಥಿಯೊಬ್ಬ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ. ಆದರೆ, ಅದನ್ನು ಪ್ರೇಮ ಪ್ರಕರಣ ಎಂದು ತಿರುಚಲಾಗಿದೆ ಎಂದು ಹೇಳಿದರು. ಸಾಕಷ್ಟು ವಿದ್ಯಾವಂತ ಯುವಕ– ಯುವತಿಯರು ಸಾಲ ಸೋಲ ಮಾಡಿ ಸ್ನಾತಕೋತ್ತರ, ಪಿಎಚ್‌ಡಿ ಮಾಡುತ್ತಾರೆ. ಆದರೆ, ಅವರನ್ನು ಅತಿಥಿ ಅಧ್ಯಾಪಕರನ್ನಾಗಿ ನೇಮಿಸಲಾಗುತ್ತಿದೆ. ಇವರಿಗೆಲ್ಲ ಅತ್ಯಂತ ಕಡಿಮೆ ಸಂಬಳ ನೀಡಲಾಗುತ್ತದೆ. ಸರ್ಕಾರಗಳು ವಿದ್ಯಾವಂತರನ್ನು ಈ ರೀತಿ ನಡೆಸಿಕೊಳ್ಳಬಾರದು ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಹೆಗಲ ಮೇಲೆ ಜೆಡಿಎಸ್‌ ಬಂದೂಕು ಇಟ್ಟುಕೊಂಡು ಕುಳಿತಿದೆ. ಹೆಚ್ಚು ಕಮ್ಮಿ ಅದರೆ, ಸರ್ಕಾರಕ್ಕೆ ಗುಂಡು ಬೀಳುತ್ತದೆ

-ಆಯನೂರು ಮಂಜುನಾಥ್, ಬಿಜೆಪಿ ಮುಖಂಡ

 

ಬರಹ ಇಷ್ಟವಾಯಿತೆ?

 • 14

  Happy
 • 2

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !