ಗುರುವಾರ , ನವೆಂಬರ್ 14, 2019
23 °C

ಆಯುಷ್ಮಾನ್‌ ಭಾರತ್‌ಗೆ ವರ್ಷ ಯೋಜನೆ ಬಗ್ಗೆ ಜಾಗೃತಿ ಜಾಥಾ

Published:
Updated:
Prajavani

ಬೆಂಗಳೂರು: ‘ಆಯುಷ್ಮಾನ್ ಭಾರತ್– ಆರೋಗ್ಯ ಕರ್ನಾಟಕ ಯೋಜನೆಯಡಿ ಬಡ–ಮಧ್ಯಮ ವರ್ಗಗಳ ಕುಟುಂಬದವರಿಗೆ ₹ 5 ಲಕ್ಷ ದವರೆಗೆ ಉಚಿತ ಆರೋಗ್ಯ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದ ಜನತೆ ಇದರ ಲಾಭ ಪಡೆದುಕೊಳ್ಳಬೇಕು’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮಲು ಮನವಿ ಮಾಡಿದರು. 

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಗೆ ವರ್ಷ ಸಂದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಬೌರಿಂಗ್ ಆಸ್ಪತ್ರೆ ಬಳಿ ಶನಿವಾರ ಚಾಲನೆ ನೀಡಿದರು. 

ಶಿವಾಜಿನಗರ ಮಾರ್ಗವಾಗಿ ಘೋಷ ಆಸ್ಪತ್ರೆವರೆಗೆ ಜಾಥಾ ನಡೆಯಿತು.

‘ದೇಶದ ಜನತೆಗೆ ಸಮಗ್ರ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಬೃಹತ್ ಆರೋಗ್ಯ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದಾರೆ. ಅರಿವಿನ ಕೊರತೆಯಿಂದ ಕೆಲವರು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಲು ವಿಫಲರಾಗುತ್ತಿದ್ದಾರೆ. ಯೋಜನೆಗೆ ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಾಕ್ಷಿಕ ಆಚರಿಸ ಲಾಗುತ್ತಿದೆ. ಎಲ್ಲ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಜಾಥಾ ನಡೆಯಲಿದೆ’ ಎಂದು ಸಚಿವರು ಹೇಳಿದರು. 

‘ರಾಜ್ಯದಲ್ಲಿ ಯೋಜನೆ ಅಡಿಯಲ್ಲಿ ಖಾಸಗಿಯೂ ಸೇರಿದಂತೆ ಒಟ್ಟು 2,943 ಆಸ್ಪತ್ರೆಗಳನ್ನು ನೋಂದಾಯಿಸಲಾಗಿದೆ. ಯೋಜನೆಯ ಫಲಾನುಭವಿಗಳು ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿಯನ್ನು ನೀಡಿ, ಬೆಂಗಳೂರು ಒನ್, ಕರ್ನಾಟಕ ಒನ್, ಸೇವಾ ಸಿಂಧು ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಡ್ ಪಡೆದುಕೊಳ್ಳಬಹುದು. ನಗರಗಳಲ್ಲಿ ಡೆಂಗಿ, ಮಲೇರಿಯಾ ದಂತಹ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಇವುಗಳನ್ನು ತಡೆಗಟ್ಟುವ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸುತ್ತಿದ್ದೇವೆ’ ಎಂದರು.

ಥಲಸ್ಸೇಮಿಯಾ ರೋಗಿಗೆ ಸಹಾಯಹಸ್ತ
ಥಲಸ್ಸೇಮಿಯಾದಿಂದ ಬಳಲುತ್ತಿರುವ ಮಗನಿಗೆ ಚಿಕಿತ್ಸೆಕೊಡಿಸಲು ನಗರಕ್ಕೆ ಬಂದಿದ್ದ ಕಲಬುರ್ಗಿಯ ದತ್ತಪ್ಪ ಅವರು ಸಚಿವರನ್ನು ಭೇಟಿ ಮಾಡಿ, ಅರ್ಥಿಕ ಸಹಾಯ ಯಾಚಿಸಿದರು. ‘ಮಗನ ಶಸ್ತ್ರಚಿಕಿತ್ಸೆಗೆ ₹ 23 ಲಕ್ಷ ಹಣ ಖರ್ಚಾಗಲಿದೆ ಎಂದು ನಾರಾಯಣ ಹೃದಯಾಲಯದ ವೈದ್ಯರು ತಿಳಿಸಿದ್ದಾರೆ. ತಮ್ಮ ಪರಿಹಾರ ನಿಧಿಯಿಂದ ನೆರವು ನೀಡಬೇಕು’ ಎಂದು ಕೇಳಿಕೊಂಡರು. ಜಯದೇವ ಆಸ್ಪತ್ರೆಗೆ ಕಳುಹಿಸಿ, ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಅಂಕಿ ಅಂಶ
2,509 -ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಸೇವೆ ಲಭ್ಯ
434 -ಖಾಸಗಿ ಆಸ್ಪತ್ರೆಗಳಲ್ಲೂ ಈ ಸೇವೆ ಸಿಗುತ್ತಿದೆ
1,650 -ಬಗೆಯ ಚಿಕಿತ್ಸೆಗಳನ್ನು ಈ ಯೋಜನೆ ಅಡಿ ಉಚಿತವಾಗಿ ನೀಡಲಾಗುತ್ತದೆ

ಪ್ರತಿಕ್ರಿಯಿಸಿ (+)