ಭ್ರಷ್ಟಾಚಾರ, ಭಯೋತ್ಪಾದನೆ ಮುಕ್ತ ಆಡಳಿತ ಮೋದಿ ಹೆಗ್ಗಳಿಕೆ

ಮಂಗಳವಾರ, ಏಪ್ರಿಲ್ 23, 2019
31 °C
ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಹೇಳಿಕೆ, ಶ್ರೀನಿವಾಸ್‌ ಪ್ರಸಾದ್‌ ಬೆಂಬಲಿಸಲು ಮನವಿ

ಭ್ರಷ್ಟಾಚಾರ, ಭಯೋತ್ಪಾದನೆ ಮುಕ್ತ ಆಡಳಿತ ಮೋದಿ ಹೆಗ್ಗಳಿಕೆ

Published:
Updated:
Prajavani

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಭ್ರಷ್ಟಾಚಾರ ಮುಕ್ತ, ಭಯೋತ್ಪಾದನೆ ಮತ್ತು ಬೆಲೆ ಏರಿಕೆ ಮುಕ್ತ ಆಡಳಿತ ನೀಡಿದೆ ಎಂದು ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಬುಧವಾರ ಹೇಳಿದರು.

ನಗರದ ನಿಜಗುಣ ರೆಸಾರ್ಟ್‌ ಸಭಾಂಗಣದಲ್ಲಿ ನಡೆದ ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಭದ್ರತೆ, ಸುರಕ್ಷತೆಗೆ ಮೋದಿ ಅವರು ಒತ್ತು ನೀಡಿದ್ದಾರೆ. ಭಯೋತ್ಪಾದನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಧೈರ್ಯವನ್ನು ಅವರು ಪ್ರದರ್ಶಿಸಿದ್ದಾರೆ’ ಎಂದರು.

‘ಈ ಹಿಂದೆ ಪಾಕಿಸ್ತಾನದ ಒಳಗೆ ನುಗ್ಗಿದರೆ ಅಣ್ವಸ್ತ್ರ ದಾಳಿ ಆಗುತ್ತದೆ ಎಂದು ಹೇಳಲಾಗುತ್ತಿತ್ತು. ಅಂತಹದ್ದರಲ್ಲಿ ಅವರ ಜಾಗಕ್ಕೆ ಹೋಗಿ, ಉಗ್ರರ ಮೇಲೆ ದಾಳಿ ಮಾಡಿ ಬಂದಿದ್ದೇವೆ. ಈ ದಾಳಿಯನ್ನು ಮೋದಿ ಅವರು ಮಾಡಿಲ್ಲ ನಿಜ. ಆದರೆ, ಸೈನ್ಯ ಹೊಂದಿರುವ ಸಾಮರ್ಥ್ಯಕ್ಕೆ ತಕ್ಕಂತೆ ಸ್ವಾತಂತ್ರ್ಯ ನೀಡಲು ಅವರು ಧೈರ್ಯ ತೋರಿದ್ದಾರೆ’ ಎಂದು ಹೇಳಿದರು. 

‘ಉಪಗ್ರಹ ನಿಗ್ರಹ ಕ್ಷಿಪಣಿಯನ್ನು ಯಶಸ್ವಿ ಪ್ರಯೋಗ ಮಾಡುವ ಮೂಲಕ ಭಾರತ ಮತ್ತೊಂದು ಮೈಲಿಗಲ್ಲು ಇಟ್ಟಿದೆ. ಡಿಆರ್‌ಡಿಇಒ 2012ರಲ್ಲಿ ಈ ಪರೀಕ್ಷೆಗೆ ಅನುಮತಿ ಕೇಳಿದಾಗ ಮನಮೋಹನ್‌ ಸಿಂಗ್‌ ಕೊಟ್ಟಿರಲಿಲ್ಲ. ಆದರೆ, 2014ರಲ್ಲಿ ಮೋದಿ ಅವರು ಅನುಮತಿ ಕೊಟ್ಟರು’ ಎಂದರು.

ನಿಯಂತ್ರಣದಲ್ಲಿ ಹಣದುಬ್ಬರ: ‘ಹಳಿ ತಪ್ಪಿದ ಆರ್ಥಿಕ ಸ್ಥಿತಿಯನ್ನು ಸಹಜ ಸ್ಥಿತಿಗೆ ತಂದಿದ್ದು ಮೋದಿ ಸರ್ಕಾರದ ಮತ್ತೊಂದು ಸಾಧನೆ. ಈ ಐದು ವರ್ಷಗಳಲ್ಲಿ ಬೆಲೆ ಏರಿಕೆ ಬಗ್ಗೆ ಯಾರೂ ಮಾತಾಡಿಲ್ಲ. ಈ ಚುನಾವಣೆಯಲ್ಲಿ ಅದೊಂದು ಚರ್ಚೆಯ ವಿಚಾರವೇ ಆಗಿಲ್ಲ. ಯುಪಿಯ ಅವಧಿಯಲ್ಲಿ ಶೇ 10ರಷ್ಟಿದ್ದ ಹಣದುಬ್ಬರ ಈ ಸರ್ಕಾರದ ಅವಧಿಯಲ್ಲಿ ಶೇ 4.9ಕ್ಕಿಂತ ಹೆಚ್ಚಾಗಿಲ್ಲ. ಮೂರು ತಿಂಗಳು ಡೀಸೆಲ್‌, ಪೆಟ್ರೋಲ್‌ ಬೆಲೆ ನಿಯಂತ್ರಣ ತಪ್ಪಿತ್ತು. ಅದಕ್ಕೆ ಅಂತರಾಷ್ಟ್ರೀಯಮಟ್ಟದ ಕಾರಣಗಳಿದ್ದವು. ಈಗ ಅವು 2014ರಲ್ಲಿದ್ದ ದರದಲ್ಲಿವೆ’ ಎಂದರು.

‘ಹಿಂದೆ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರು ದೇಶಕ್ಕೆ ಕರೆ ನೀಡಿದರೆ ಜನರು ಅದನ್ನು ಪಾಲಿಸುತ್ತಿದ್ದರು. ಅದೇ ರೀತಿ ಈಗ ಮೋದಿ ಅವರು ಕರೆ ನೀಡಿದ್ದನ್ನು ಪಾಲಿಸಲು ಜನರು ಸಿದ್ಧರಾಗಿದ್ದಾರೆ. ಆರ್ಥಿಕವಾಗಿ ಸಬಲರಾಗಿರುವವರು ಅನಿಲ ಸಬ್ಸಿಡಿ ಬಿಟ್ಟುಬಿಡಿ ಎಂದು ಕರೆ ನೀಡಿದ್ದಕ್ಕೆ 1.02 ಕೋಟಿ ಮಂದಿ ಸಬ್ಸಿಡಿ ತ್ಯಜಿಸಿದ್ದರು. ಅದರಲ್ಲಿ ಬಂದ ಹಣದಲ್ಲಿ ಉಜ್ವಲ ಯೋಜನೆ ಮೂಲಕ 7 ಕೋಟಿ ಬಡ ಕುಟುಂಬಗಳಿಗೆ ಉಚಿತ ಎಲ್‌ಪಿಜಿ ಅನಿಲ ಸಂಪರ್ಕ ನೀಡಲಾಗಿದೆ. ಮೋದಿ ಅವರು ಕುಟುಂಬಕ್ಕಾಗಿ, ಜಾತಿಗಾಗಿ ಕೆಲಸ ಮಾಡುತ್ತಿಲ್ಲ ಎಂದು ಎಲ್ಲರಿಗೂ ಗೊತ್ತು. ಹಾಗಾಗಿ ಜನರು ಅವರನ್ನು ನಂಬುತ್ತಾರೆ’ ಎಂದು ವಿವರಿಸಿದರು.

‘2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗುವಾಗ ದೇಶ ಪ್ರಗತಿ ಹೊಂದಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಎಲ್ಲ ಬಡವರಿಗೆ ಮನೆ, ವಿದ್ಯುತ್‌ ಶೌಚಾಲಯ, ಅನಿಲ ಸಂಪರ್ಕ ಸೇರಿದಂತೆ ಎಲ್ಲ ಸೌಕರ್ಯಗಳನ್ನು ನೀಡಲು ಹೆಜ್ಜೆ ಇಟ್ಟಿದೆ. ಇದನ್ನೆಲ್ಲ ಮುಂದುವರಿಸಲು ಮೋದಿ ಅವರಿಗೆ ಮತ್ತೊಂದು ಅವಕಾಶ ಬೇಕಾಗಿದೆ. ಅದಕ್ಕಾಗಿ ನಾವು ಇಲ್ಲಿ ಶ್ರೀನಿವಾಸ ಪ್ರಸಾದ್‌ ಅವರನ್ನು ಗೆಲ್ಲಿಸಬೇಕಾಗಿದೆ’ ಎಂದರು.

ಚಾಮರಾಜನಗರ ಲೋಕಸಭಾ ಉಸ್ತುವಾರಿ ರಾಜೇಂದ್ರ, ಉದ್ಯಮಿಗಳಾದ ಆರ್‌.ಎಸ್‌.ವರ್ಧಮಾನಯ್ಯ, ಜಿ.ಎಸ್‌.ಅಶ್ವತ್ಥನಾರಾಯಣ ಇದ್ದರು.

‘ರೈತರ ಹಿತರಕ್ಷಣೆಗೆ ಕ್ರಮ’
ಸಂವಾದದಲ್ಲಿ ರೈತ ಮುಖಂಡರೊಬ್ಬರು ರೈತರ ಸಂಕಷ್ಟಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂತೋಷ್‌ ಅವರು, ‘ರೈತರ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಒಂದು ವರ್ಷಕ್ಕೆ ₹ 6,000 ನೀಡುವುದು. ಇದು ಚುನಾವಣಾ ಗಿಮಿಕ್‌ ಅಲ್ಲ. ಶಾಶ್ವತವಾಗಿ ರೈತರ ಖಾತೆಗೆ ಈ ಹಣವನ್ನು ಸರ್ಕಾರ ಹಾಕಲಿದೆ. ಬೆಂಬಲ ಬೆಲೆಗಿಂತಲೂ ರೈತರಿಗೆ ಮೊತ್ತಮೊದಲು ಮಾರುಕಟ್ಟೆ ವ್ಯವಸ್ಥೆ ಆಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ. 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡಲು ಯೋಜನೆ ಹಾಕಿಕೊಂಡಿದೆ. ದೇಶದಲ್ಲಿ ಶೇ 63ರಷ್ಟು ರೈತರಿರುವುದರಿಂದ ಅವರ ಸಮಸ್ಯೆಗಳನ್ನು ಬಗೆಹರಿಸಲು ಸಮಯ ಬೇಕಾಗುತ್ತದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !