‘ಸಂಸತ್ತಿನಲ್ಲಿ ಬೆಂಗಳೂರಿನ ಗಟ್ಟಿ ಧ್ವನಿಯಾಗುವಾಸೆ’

ಗುರುವಾರ , ಏಪ್ರಿಲ್ 25, 2019
22 °C
ಬಿ–ಪ್ಯಾಕ್‌ : ಅಭ್ಯರ್ಥಿಗಳೊಂದಿಗೆ ಜನರ ಸಂವಾದ

‘ಸಂಸತ್ತಿನಲ್ಲಿ ಬೆಂಗಳೂರಿನ ಗಟ್ಟಿ ಧ್ವನಿಯಾಗುವಾಸೆ’

Published:
Updated:
Prajavani

ಬೆಂಗಳೂರು: ರೈತರ ಸಂಕಷ್ಟ, ಮಹಿಳಾ ಸುರಕ್ಷತೆ, ಮಹಿಳಾ ಮೀಸಲಾತಿ, ನಗರದ ಮೂಲಸೌಕರ್ಯ, ಪರಿಸರ ರಕ್ಷಣೆ ಕುರಿತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು ತಮ್ಮ ವಿಚಾರ, ದೃಷ್ಟಿಕೋನ ಮತ್ತು ಭವಿಷ್ಯದ ನಡೆಯನ್ನು ಮತದಾರರೊಂದಿಗೆ ಹಂಚಿಕೊಂಡರು.

ಬೆಂಗಳೂರು–ರಾಜಕೀಯ ಕ್ರಿಯಾ ಸಮಿತಿಯು (ಬಿ–ಪ್ಯಾಕ್‌) ‘ಪ್ರಜಾವಾಣಿ’ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳ ಸಹಯೋಗದಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಅಭ್ಯರ್ಥಿಗಳೊಂದಿಗೆ ಜನರ ಸಂವಾದ’ದಲ್ಲಿ ಅವರು ಮಾತನಾಡಿದರು.

ಐದು ಬಾರಿ ಶಾಸಕ ಸ್ಥಾನ ಮತ್ತು ಎರಡು ಬಾರಿ ಮಂತ್ರಿಗಿರಿ ನಿಭಾಯಿಸಿದ ಅನುಭವ ಪ್ರಸ್ತಾಪಿಸುತ್ತ, ‘ಬೆಂಗಳೂರಿನ ಗಟ್ಟಿ ಧ್ವನಿಯೊಂದು ಸಂಸತ್‌ನಲ್ಲಿ ಮೊಳಗಲು ನನ್ನನ್ನು ಬೆಂಬಲಿಸಿ’ ಎಂದು ಮಾತು ಆರಂಭಿಸಿದರು.

‘ರಾಜಕೀಯ ಜೀವನದಲ್ಲಿ ನನ್ನ ಅರ್ಹತೆಗಿಂತ ಹೆಚ್ಚಿನ ಅವಕಾಶಗಳು ಸಿಕ್ಕಿವೆ. ರಾಜ್ಯ ಸರ್ಕಾರ ಕೊಟ್ಟಿದ್ದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿಯಿದೆ. ರಾಷ್ಟ್ರಮಟ್ಟದಲ್ಲಿ ಸೇವೆ ಮಾಡುವುದು ಪ್ರತಿ ರಾಜಕಾರಣಿಯ ಶ್ರೇಷ್ಠ ಘಟ್ಟ. ಇದಕ್ಕೆ ಮತದಾರರು ಅವಕಾಶ ಮಾಡಿಕೊಡುತ್ತಾರೆಂದು ನಂಬಿದ್ದೇನೆ’ ಎಂದು ಭರವಸೆ ವ್ಯಕ್ತಪಡಿಸಿದರು.

ಕ್ಷೇತ್ರದ ಮತದಾರರು ಕೇಳಿದ ಪ್ರತಿ ಪ್ರಶ್ನೆಯನ್ನು ಬರೆದುಕೊಂಡು ಉತ್ತರ ನೀಡಿದರು.

ಯಾವ ಮೂರು ವಿಷಯಗಳಿಗೆ ಒತ್ತು ಕೊಡುತ್ತೀರಾ ಎಂಬ ಪ್ರಶ್ನೆ ಎದುರಾಯಿತು. ‘ಬೆಂಗಳೂರಿನಿಂದ ಸರಕುಗಳ ರಫ್ತು ಮತ್ತು ಸೇವೆಗಳಲ್ಲಿ ಪ್ರತಿವರ್ಷ ಅಂದಾಜು ₹ 80,000 ಕೋಟಿ ಅಂತರರಾಷ್ಟ್ರೀಯ ಮಟ್ಟದ ವ್ಯವಹಾರ ನಡೆಯುತ್ತದೆ. ಅದನ್ನು ಉತ್ತೇಜಿಸಲು ಕೇಂದ್ರದಿಂದ ಮತ್ತಷ್ಟು ಅನುದಾನಗಳನ್ನು ತರುತ್ತೇನೆ. ನಗರದ ಪರಿಸರ ರಕ್ಷಣೆಗೆ ಸುಧಾರಿತ ಉಪಕ್ರಮಗಳನ್ನು ಪರಿಚಯಿಸುತ್ತೇನೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡುತ್ತೇನೆ’ ಎಂದು ಅವರು ಉತ್ತರಿಸಿದರು.

ಎಲಿವೇಟೆಡ್‌ ಕಾರಿಡಾರ್‌ ಮತ್ತು ಪೆರಿಫೆರಲ್‌ ರಸ್ತೆ ನಿರ್ಮಾಣದಿಂದ ದಟ್ಟಣೆ ಕಡಿಮೆಯಾಗಲಿದೆ ಎಂದು ಸಮರ್ಥಿಸಿಕೊಂಡ ಅವರು, ಜತೆಗೆ ಮೆಟ್ರೊ, ಉಪ–ನಗರ ರೈಲು ಯೋಜನೆಗಳಿಗೂ ಅನುದಾನ ನೀಡುತ್ತಿದ್ದೇವೆ ಎಂದು ಹೇಳಿದರು.

ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಮೆಟ್ರೊ ಯಾವಾಗ ಬರುತ್ತೆ ಎಂದು ಸಾರ್ವಜನಿಕರೊಬ್ಬರು ಕೇಳಿದರು. ಗೊಟ್ಟಿಗೆರೆ–ನಾಗವಾರ ಮೆಟ್ರೊ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ನಾಗವಾರ–ಹೆಬ್ಬಾಳ–ಕೊಡಿಗೆಹಳ್ಳಿ–ಜಕ್ಕೂರು–ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ವಿಸ್ತೃತ ಯೋಜನಾ ವರದಿ ತಯಾರಿಸಲಾಗುತ್ತಿದೆ. ವರದಿಯ ಅನುಮೋದನೆಯ ಬಳಿಕ ಖಂಡಿತ ಮೆಟ್ರೊ ಕಾಮಗಾರಿ ಶುರುವಾಗಲಿದೆ’ ಎಂದು ಭರವಸೆ ನೀಡಿದರು.

‘ನನಗೆ ರಾಜಕೀಯವನ್ನು ಕಲಿಯುವ ವಯಸ್ಸಿದೆ. ಇನ್ನೂ 20–25 ವರ್ಷ ಸೇವೆ ಮಾಡುತ್ತ, ಕೊಡಗೆಗಳನ್ನು ನೀಡುವ ಅವಕಾಶವಿದೆ’ ಎಂಬ ಹೇಳಿಕೆಯೊಂದಿಗೆ ಮಾತು ಮುಗಿಸಿದರು.
*

ಜೇಟ್ಲಿ ಹೇಳಿಕೆ ನೆನೆದರು
‘ಬಿಜೆಪಿಯ ಹಿರಿಯ ಮುಖಂಡರಾದ ಅರುಣ್‌ ಜೇಟ್ಲಿ ಅವರಿಗೆ ಅನಾರೋಗ್ಯ ಕಾಡುತ್ತಿದ್ದಾಗ, ಭೇಟಿಯಾಗಲು ಹೋಗಿದ್ದೆ. ಆಗ ಅವರು ‘ನೀನು ಸಂಸತ್ತಿನಲ್ಲಿ ಇರಲೇಬೇಕು’ ಎಂಬ ಆಶಯ ವ್ಯಕ್ತಪಡಿಸಿದ್ದರು’ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಸಂಸದರಾಗಿ ಏನು ಮಾಡ್ತೀರಾ?
ನಾಗರಿಕರೊಬ್ಬರು ಸಂವಾದದ ವೇಳೆ ‘ನೀವು ಪ್ರತಿನಿಧಿಸುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಭದ್ರಪ್ಪ ಬಡಾವಣೆಯ ರಸ್ತೆಯನ್ನೆ ನೆಟ್ಟಗೆ ಸರಿಪಡಿಸಿಲ್ಲ. ಸಂಸದರಾಗಿ ಏನು ಮಾಡುತ್ತೀರಿ’ ಎಂದರು. ‘ಆ ಬಡಾವಣೆಯ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಎರಡು ಬದಿಯಿಂದಲೂ ಆರಂಭಿಸಿಲ್ಲ. ಒಂದು ತುದಿಯಿಂದ ಕಾಮಗಾರಿ ನಡೆಯುತ್ತಿದೆ. ಆದಷ್ಟು ಬೇಗ ರಸ್ತೆ ಸರಿಯಾಗಲಿದೆ’ ಎಂದು ಕೃಷ್ಣ ಬೈರೇಗೌಡ ಸಮಾಧಾನ ಪಡಿಸಿದರು.

ಸಂವಾದ ಮುಗಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ, ಮೋದಿ ಎಂಬ ಘೋಷಣೆ ಕೂಗಿದರು. ಕಾಂಗ್ರೆಸ್‌ ಅಭಿಮಾನಿಗಳು ಪ್ರತಿಯಾಗಿ, ‘ಚೌಕೀದಾರ್‌ ಚೋರ್‌ ಹೈ, ಚೌಕೀದಾರ್‌ ಚೋರ್‌ ಹೈ’ ಎಂದು ಕೂಗಿದರು.

ಸಂವಾದಕ್ಕೆ ಬಿಜೆಪಿ ಅಭ್ಯರ್ಥಿ ಗೈರು
ಸಂವಾದಕ್ಕೆ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ಗೈರು ಹಾಜರಾಗಿದ್ದರು.

‘ಬಿ–ಪ್ಯಾಕ್‌ ಪ್ರತಿನಿಧಿಗಳು ಸಂವಾದದ ಧ್ಯೆಯೋದ್ದೇಶಗಳನ್ನು ನಮಗೆ ಸರಿಯಾಗಿ ಅರ್ಥ ಮಾಡಿಸಿರಲಿಲ್ಲ. ಒಂದು ಇ–ಮೇಲ್‌ ಹಾಕಿದ್ದರು. ಒಮ್ಮೆ ಭೇಟಿ ಮಾಡಿ ಹೇಳಿ ಹೋಗಿದ್ದರು. ಸಂವಾದಕ್ಕೆ ಅಧಿಕೃತ ಆಹ್ವಾನ ಇಲ್ಲದ ಕಾರಣ ಸದಾನಂದಗೌಡ ಅವರು ಪೂರ್ವ ನಿರ್ಧಾರಿತ ಕಾರ್ಯಕ್ರಮದಲ್ಲಿದ್ದರು. ಹಾಗಾಗಿ ಸಂವಾದಕ್ಕೆ ಬರಲಾಗಲಿಲ್ಲ’ ಎಂದು ಸದಾನಂದಗೌಡ ಅವರ ಆಪ್ತ ಸಹಾಯಕರು ‘ಪ್ರಜಾವಾಣಿ’ಗೆ ತಿಳಿಸಿದರು.

ಇಂದು ಸಂವಾದ ಇಲ್ಲ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳು ಲಭ್ಯವಾಗದ ಕಾರಣ, ಗಾಯನ ಸಮಾಜದಲ್ಲಿ ಬುಧವಾರ ನಡೆಯಬೇಕಿದ್ದ ಸಂವಾದವನ್ನು ಬಿ–ಪ್ಯಾಕ್‌ ರದ್ದುಪಡಿಸಿದೆ.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !