ಮೈಮೇಲೆ ಗೇಟ್ ಬಿದ್ದು ಬಾಲಕಿ ಸಾವು

ಶನಿವಾರ, ಏಪ್ರಿಲ್ 20, 2019
28 °C

ಮೈಮೇಲೆ ಗೇಟ್ ಬಿದ್ದು ಬಾಲಕಿ ಸಾವು

Published:
Updated:

ಬೆಂಗಳೂರು: ಆಟವಾಡುತ್ತಿದ್ದ ವೇಳೆ ಕಬ್ಬಿಣದ ಗೇಟ್ ಮೈಮೇಲೆ ಬಿದ್ದು 4 ವರ್ಷದ ಕೃತಿ ಎಂಬ ಬಾಲಕಿ ಮೃತಪಟ್ಟಿದ್ದಾಳೆ.

ತ್ಯಾಗರಾಜನಗರ 2ನೇ ಅಡ್ಡರಸ್ತೆಯಲ್ಲಿ ಮಂಗಳವಾರ ರಾತ್ರಿ 7 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ.

ಕೃತಿ ತನ್ನ ಅಕ್ಕ ಧೃತಿ ಸೇರಿದಂತೆ ಐದಾರು ಸ್ಥಳೀಯ ಮಕ್ಕಳ ಜತೆ ನೆರೆಮನೆಯ ಕಾಂಪೌಂಡ್ ಬಳಿ ಆಟವಾಡುತ್ತಿದ್ದಳು. ಈ ವೇಳೆ ಗೇಟ್ ಏಕಾಏಕಿ ಮೈಮೇಲೆ ಬಿದ್ದಿತು. ತಲೆಗೆ ಪೆಟ್ಟಾಗಿ ಕುಸಿದು ಬಿದ್ದ ಆಕೆಯನ್ನು ತಕ್ಷಣ ಸಮೀಪದ ಭಾರತಿ ನರ್ಸಿಂಗ್‌ ಹೋಮ್‌ಗೆ ಕರೆದೊಯ್ಯಲಾಯಿತು. ಆದರೆ, ಮಾರ್ಗಮಧ್ಯೆಯೇ ಕೃತಿ ಕೊನೆಯುಸಿರೆಳೆದಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಅಜ್ಜಿ ಮನೆಗೆ ಬಂದಿದ್ದರು: ಕೃತಿ ಹಾಗೂ ಧೃತಿ, ಕತ್ರಿಗುಪ್ಪೆ ನಿವಾಸಿಗಳಾದ ಎ.ಮಂಜುನಾಥ್–ಶರ್ಮಿಳಾ ದಂಪತಿಯ ಮಕ್ಕಳು. ಖಾಸಗಿ ಕಂಪನಿಯೊಂದರಲ್ಲಿ ಮಾರಾಟ ಪ್ರತಿನಿಧಿ ಆಗಿರುವ ಮಂಜುನಾಥ್, ಮಂಗಳವಾರ ಬೆಳಿಗ್ಗೆ ಮಕ್ಕಳನ್ನು ತ್ಯಾಗರಾಜನಗರದಲ್ಲಿರುವ ತಮ್ಮ ತಾಯಿ ಸುಬ್ಬಲಕ್ಷ್ಮಿ ಅವರ ಮನೆಗೆ ಬಿಟ್ಟು ಕೆಲಸಕ್ಕೆ ತೆರಳಿದ್ದರು.

ಸಂಜೆ 6 ಗಂಟೆಗೆ ಕೆಲಸ ಮುಗಿಸಿಕೊಂಡು ಮನೆಗೆ ಮರಳಿದ್ದ ಅವರು, ಮಕ್ಕಳನ್ನು ಕರೆದುಕೊಂಡು ಬರಲು ಪತ್ನಿ ಜತೆ ಬೈಕ್‌ನಲ್ಲಿ ತಾಯಿ ಮನೆಯತ್ತ ಹೊರಟಿದ್ದರು. ಇದೇ ವೇಳೆ ತಂಗಿ ರಾಧಿಕಾ ಕರೆ ಮಾಡಿ, ‘ಕೃತಿ ಮೇಲೆ ಗೇಟ್ ಬಿತ್ತು. ಆಕೆ ಏನೂ ಮಾತನಾಡುತ್ತಿಲ್ಲ’ ಎಂದಿದ್ದರು.

‘ತಂಗಿಯ ಮಾತು ಕೇಳಿ ದಿಕ್ಕು ತೋಚದಂತಾಯಿತು. ಯಾವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂಬುದನ್ನೂ ಹೇಳದೆ ಆಕೆ ಕರೆ ಸ್ಥಗಿತಗೊಳಿಸಿದ್ದಳು. ವಾಪಸ್ ಕರೆ ಮಾಡಿದರೂ ಪ್ರತಿಕ್ರಿಯೆ ಇರಲಿಲ್ಲ. ಆ ನಂತರ ನಾನು–ಪತ್ನಿ ದಾರಿಯುದ್ದಕ್ಕೂ ಅಳುತ್ತಲೇ ತಾಯಿ ಮನೆ ತಲುಪಿದೆವು. ಸ್ಥಳೀಯರನ್ನು ವಿಚಾರಿಸಿ ನಂತರ ಭಾರತಿ ನರ್ಸಿಂಗ್ ಹೋಮ್‌ಗೆ ಹೋದೆವು. ಅಷ್ಟರಲ್ಲಾಗಲೇ ಮಗಳು ಮೃತಪಟ್ಟಿದ್ದಳು’ ಎನ್ನುತ್ತ ಮಂಜುನಾಥ್ ದುಃಖತಪ್ತರಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !