ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮಶ್ರೀ ಹೊತ್ತ ಕಿತ್ತಳೆ ಬುಟ್ಟಿ: ಹರೇಕಳ ಹಾಜಬ್ಬ ಕುರಿತು ವಿಶೇಷ ಲೇಖನ

Last Updated 20 ನವೆಂಬರ್ 2021, 21:45 IST
ಅಕ್ಷರ ಗಾತ್ರ

ಧಾವಂತದ ಜೀವನದಲ್ಲಿ, ನಿಸ್ವಾರ್ಥ ಮನಸ್ಸುಗಳು ಕಳೆದೇ ಹೋದವೇನೋ ಎಂಬ ಪರಿಸ್ಥಿತಿಯಲ್ಲಿ ಹಾಜಬ್ಬರಂತಹ ವ್ಯಕ್ತಿ ಸಮಾಜದ ಆಶಾಕಿರಣವಾಗಿ ಸಿಕ್ಕಿದ್ದಾರೆ. ಈ ಕಿತ್ತಳೆ ವ್ಯಾಪಾರಿಯ ಸಾಧನೆಯ ಹೆಜ್ಜೆಗಳು ರಾಷ್ಟ್ರಪತಿ ಭವನದಲ್ಲಿ ‘ಪದ್ಮಶ್ರೀ’ ಪಡೆಯುವವರೆಗೆ ತಲುಪಿವೆ.

**

ಧಾವಂತದ ಜೀವನದಲ್ಲಿ, ನಿಸ್ವಾರ್ಥ ಮನಸ್ಸುಗಳು ಕಳೆದೇ ಹೋದವೇನೋ ಎಂಬ ಪರಿಸ್ಥಿತಿಯಲ್ಲಿ ಹಾಜಬ್ಬರಂತಹ ವ್ಯಕ್ತಿ ಸಮಾಜದ ಆಶಾಕಿರಣವಾಗಿ ಸಿಕ್ಕಿದ್ದಾರೆ. ಈ ಕಿತ್ತಳೆ ವ್ಯಾಪಾರಿಯ ಸಾಧನೆಯ ಹೆಜ್ಜೆಗಳು ರಾಷ್ಟ್ರಪತಿ ಭವನದಲ್ಲಿ ‘ಪದ್ಮಶ್ರೀ’ ಪಡೆಯುವವರೆಗೆತಲುಪಿವೆ.

ಬುಟ್ಟಿ ತುಂಬಾ ಹಣ್ಣುಗಳನ್ನು ತುಂಬಿಕೊಂಡು ಬಂದು ಮಂಗಳೂರಿನ ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದಲ್ಲಿ ಹೊತ್ತು ಮಾರುವ ವ್ಯಾಪಾರಿ ಹಾಜಬ್ಬ. ಕಿತ್ತಳೆ... ಕಿತ್ಲೆ.... ಎನ್ನುವ ಧ್ವನಿ ಬಸ್‌ ಪ್ರಯಾಣಿಕರಿಗೋ, ದಾರಿಹೋಕರಿಗೋ ಕೇಳಿಸಿ ಖರೀದಿಗೆ ಮನಸ್ಸು ಮಾಡಿದರೋ ಹಾಜಬ್ಬರ ಹಣೆಯಲ್ಲಿ ಸಣ್ಣ ಆಶಾಭಾವದ ಗೆರೆಯೊಂದು ಮೂಡಿ ಮರೆಯಾಗುತ್ತದೆ. ಇಂಥ ಅಲೆಮಾರಿಗೆ ಅಕ್ಷರದ ಕನಸು ಹತ್ತಿತು. ಅದೂ ತನಗಲ್ಲ, ತನ್ನೂರಿನ ಮಕ್ಕಳಿಗಾಗಿ!

ಹಾಜಬ್ಬರ ಆ ನಿರ್ಧಾರ....

ಅದೊಂದು ದಿನ ಮಂಗಳೂರಿನಲ್ಲಿ ಹಣ್ಣು ಮಾರುತ್ತಿದ್ದಾಗ ವಿದೇಶಿ ಜೋಡಿಯೊಂದು ಹಾಜಬ್ಬರೊಡನೆ ಇಂಗ್ಲಿಷ್‌ನಲ್ಲಿ ವ್ಯವಹರಿಸಿತು. ಕನ್ನಡದಲ್ಲಿ ಮಾತನಾಡಲೂ ಹಿಂಜರಿಯುತ್ತಿದ್ದ ಈ ಅಮಾಯಕ ಬ್ಯಾರಿ (ಬ್ಯಾರಿ ಭಾಷೆ ಮಾತನಾಡುವ ಮುಸ್ಲಿಮರು) ಆ ಇಂಗ್ಲಿಷ್‌ನಿಂದ ಕಕ್ಕಾಬಿಕ್ಕಿಯಾದರು. ಶಿಕ್ಷಣವಿಲ್ಲದ್ದರಿಂದ ಈ ಪರಿಸ್ಥಿತಿ ತನಗೆದುರಾಯಿತು. ಇದು ತನ್ನೂರಿನ ಮಕ್ಕಳಿಗೆ ಬರಬಾರದು ಎಂದುಕೊಂಡ ಹಾಜಬ್ಬ, ಅಂದು ತಮ್ಮ ಜೀವನದ ಅತಿದೊಡ್ಡ ನಿರ್ಧಾರ ತೆಗೆದುಕೊಂಡರು. ಅದರ ಫಲವೇ ಇಂದು ತಲೆಯೆತ್ತಿ ನಿಂತಿರುವ ನ್ಯೂಪಡ್ಪು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಶಾಲೆ ಸ್ಥಾಪನೆಯ ಹುಚ್ಚು ಹತ್ತಿಸಿಕೊಂಡು ಅಲೆದ ಹಾಜಬ್ಬ ಎದುರಿಸಿದ ಅವಮಾನಗಳು ಒಂದೆರಡಲ್ಲ. ಅವರಿವರನ್ನು ಬೇಡುವ ಬದಲು ಕಿತ್ತಳೆ ವ್ಯಾಪಾರದ ಪುಡಿಗಾಸನ್ನೇ ಉಳಿಸಿದರು.2000ನೇ ಇಸವಿಯಲ್ಲಿ ನ್ಯೂಪಡ್ಪುವಿನ ಮಸೀದಿಯ ಮದರಸದಲ್ಲಿ ಹಾಜಬ್ಬರ ಶಾಲೆಯ ಕನಸು ನನಸಾಗಿತ್ತು.ತಾವು ಕಿತ್ತಳೆ ವ್ಯಾಪಾರದಿಂದ ಕೂಡಿಟ್ಟ ಹಣದಿಂದ ತರಗತಿಗಳು ನಡೆಯುತ್ತಿದ್ದ ಮಸೀದಿಯ ಪಕ್ಕದಲ್ಲಿ ಹಾಜಬ್ಬ ಜಾಗ ಕೊಂಡರು. ಆ ಶಾಲೆಗಾಗಿ ಕಟ್ಟಡ ನಿರ್ಮಿಸಲು ಮುಂದಾದರು. ಹಣ ಸಾಕಾಗದಿದ್ದಾಗ ದಾನಿಗಳ‌ ಸಹಾಯ ಯಾಚಿಸಿದರು. ಬ್ಯಾಂಕ್, ಕಾರ್ಪೊರೇಟ್ ಕಂಪನಿಗಳ ಕದ ತಟ್ಟಿದರು. ಶಾಲೆಗಾಗಿ ಅನುಮತಿ ಪಡೆಯಲು ಪ್ರತಿದಿನ ಸರ್ಕಾರಿ ಕಚೇರಿಯ ಮೆಟ್ಟಿಲು ಹತ್ತಿದರು.‌

ಹಾಜಬ್ಬರ ದೊಡ್ಡ ಪ್ರಯತ್ನದ ಫಲವಾಗಿ ಆ ಜಾಗದಲ್ಲಿ ಪ್ರಾಥಮಿಕ ಶಾಲೆ, ಬಳಿಕ ಪ್ರೌಢಶಾಲೆಗಳ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿವೆ. ನ್ಯೂಪಡ್ಪು ಅಕ್ಕಪಕ್ಕದ ಹಳ್ಳಿಗಳ ಮಕ್ಕಳೂ ಈ ಜ್ಞಾನ ದೇಗುಲದೆದುರಿಗೆ ಕೈಮುಗಿದು ನಿಂತಿದ್ದಾರೆ. ಯಾವ್ಯಾವುದೋ ಕಾರಣಗಳಿಂದಾಗಿ ಕಲಿಕೆಯಿಂದ ವಂಚಿತರಾಗಿದ್ದ ಮಕ್ಕಳಿಗೆ ಈ ‘ಅಕ್ಷರ ಸಂತ’ ಮತ್ತೆ ಜ್ಞಾನದ ಹಾದಿ ತೋರಿದ್ದಾರೆ.

ಈ ಸುದೀರ್ಘ ಪ್ರಯತ್ನದಲ್ಲಿ ಹಾಜಬ್ಬ ತಮ್ಮ ಸ್ವಂತ ಸುಖವನ್ನು ತ್ಯಾಗ ಮಾಡಿದ್ದಾರೆ. ಅವರು ಮಧ್ಯಾಹ್ನದ ಊಟ ಮಾಡಿ ವರ್ಷಗಳೇ ಕಳೆದಿವೆ. ದಾನಿಗಳನ್ನು ಹುಡುಕಿ ಹೊರಟ ಅವರ ದೇಹ ಬಡಕಲಾಗಿದೆ. ಚಪ್ಪಲಿಗಳು ಸವೆದಿವೆ. ಆರೋಗ್ಯ ಸಮಸ್ಯೆಯಿಂದಾಗಿ ಅವರ ಪತ್ನಿ ಹಾಸಿಗೆ ಹಿಡಿದಿದ್ದಾರೆ. ಮದುವೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಮನೆಯಲ್ಲಿದ್ದಾರೆ. ಆದರೆ ಶಾಲೆಯ ಮುಂದೆ ಹಾಜಬ್ಬರಿಗೆ ಇದ್ಯಾವುದೂ ಮುಖ್ಯವಲ್ಲ. ತನ್ನ ಸುಖ-ದುಃಖಗಳನ್ನು ಮೀರಿ ಹಾಜಬ್ಬ ಶಾಲೆಗಾಗಿ, ಅದರ ಅಭಿವೃದ್ಧಿಗಾಗಿ ಟೊಂಕ ಕಟ್ಟಿ ನಿಂತಿದ್ದಾರೆ.

ಹೇಗಿದೆ ‘ಹಾಜಬ್ಬ ಶಾಲೆ’?

ಬೇರಾವುದೇ ಕನ್ನಡ ಮಾಧ್ಯಮ ಶಾಲೆಗಳಿಗಿಂತ ಹಾಜಬ್ಬ ಶಾಲೆ ವಿಭಿನ್ನ. ಒಂದು ಶಾಲೆಗೆ ಬೇಕಾದ ಎಲ್ಲ ಮೂಲ ಸೌಕರ್ಯಗಳ ಜೊತೆಗೆ ಸರ್ಕಾರದ ಬಿಸಿಯೂಟ, ಕ್ಷೀರಭಾಗ್ಯ, ಉಚಿತ ಪಠ್ಯಪುಸ್ತಕ ಸೌಲಭ್ಯಗಳೂ ಮಕ್ಕಳಿಗೆ ದೊರೆಯುತ್ತಿವೆ. ವಿಭಿನ್ನ ಪ್ರಾಯೋಗಿಕ ಕಲಿಕಾ ಮಾದರಿಗಳು ವಿದ್ಯಾರ್ಥಿಗಳು ಶಿಕ್ಷಣವನ್ನು ಪ್ರೀತಿಸುವಂತೆ ಮಾಡಿವೆ. ಮಕ್ಕಳು ಖುಷಿಯಿಂದ ಈ ಶಾಲೆಗೆ ಬರುತ್ತಾರೆ.

ಈಗ ಇಲ್ಲಿ ಪಿಯು ಕಾಲೇಜು ಆರಂಭಿಸಲು ಹಾಜಬ್ಬ ಪ್ರಯತ್ನ ಆರಂಭಿಸಿದ್ದಾರೆ.

ಒಬ್ಬ ವ್ಯಕ್ತಿ ಏಕಾಂಗಿ ಹೋರಾಟಗಾರ, ‘ರಿಯಲ್ ಹೀರೊ’ನ ಸಾಧನೆಗಳನ್ನು ಗುರುತಿಸಿ ಸಾಕಷ್ಟು ಪ್ರಶಸ್ತಿ, ಪುರಸ್ಕಾರ, ಬಿರುದುಗಳು ಅವರನ್ನು ಅರಸಿ ಬಂದಿವೆ. ಆದರೆ ಪ್ರಶಸ್ತಿ ರೂಪದಲ್ಲಿ ಬಂದ ಹಣವನ್ನೆಲ್ಲ ಹಾಜಬ್ಬ ಶಾಲೆಗೆ ಅರ್ಪಿಸಿ ಮತ್ತದೇ ಬಡ ಜೀವನವನ್ನು ನಡೆಸುತ್ತಿದ್ದಾರೆ. ‘ಪದ್ಮಶ್ರೀ’ ಬಂದ ಬಳಿಕವೂ ಹಾಜಬ್ಬರ ನಡೆ ನುಡಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ‘ಇದರಲ್ಲಿ ನನ್ನದೇನಿಲ್ಲ‌. ನಾನೊಬ್ಬ ಬಡವ. ನನ್ನನ್ನು ಗುರುತಿಸಿದ ಶ್ರೇಷ್ಠರು ನೀವು’ ಎಂದು ವಿನೀತರಾಗುತ್ತಾರೆ ಈ ‘ಅಕ್ಷರ ಯೋಗಿ’. ಕಿತ್ತಳೆ ಬುಟ್ಟಿಯಲ್ಲಿ ಅಕ್ಷರದ ಕನಸೂ ಅರಳಿಸಬಹುದು ಎಂಬುದನ್ನು ಸಾಧಿಸಿದ ಶ್ರೀಸಾಮಾನ್ಯ ಹಾಜಬ್ಬ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT