ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಲಯದ ಬೇಸ್ ಕ್ಯಾಂಪ್‌ ಏರಿಬಂದ ಹಳ್ಳಿ ಹುಡುಗ

Last Updated 2 ಫೆಬ್ರುವರಿ 2018, 7:08 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ‘ಭೂಮಿ ನಮಗೆ ಸೇರಿದ್ದಲ್ಲ; ನಾವು ಭೂಮಿಗೆ ಸೇರಬೇಕಾದವರು. ಹಾಗಾಗಿ, ಅದನ್ನು ಉಳಿಸಿ ಬೆಳೆಸಬೇಕಾದರೆ ಪ್ರಕೃತಿಯಲ್ಲಿ ಹಸಿರು ಗಿಡಗಳನ್ನು ಬೆಳೆಸಿ ಮತ್ತು ಉಳಿಸಿ’ ಎಂಬ ಧ್ಯೇಯ ವಾಕ್ಯವನ್ನು ಹಿಮಾಲಯ ಪರ್ವತದ ತಪ್ಪಲಿನಲ್ಲಿ ಜಿಲ್ಲೆಯ ಯುವಕನೊಬ್ಬ ಕೂಗಿ ಬಂದಿದ್ದಾನೆ.

ಹತ್ತಿರದ ಬಿದರಕೊಪ್ಪ ಎಂಬ ಪುಟ್ಟ ಗ್ರಾಮದ ಕೃಷಿಕರಾದ ಸಿವಿಬಾಯಿ ಹಾಗೂ ತೇಜಾನಾಯ್ಕ್ ಅವರ ಪುತ್ರ ಟಿ.ಪ್ರವೀಣ್ ಕುಮಾರ್ ಆ ಸಾಹಸಿ. ಕಾಲೇಜು ದಿನಗಳಲ್ಲಿ ಮೌಂಟ್ ಎವೆರೆಸ್ಟ್ ಶಿಖರವನ್ನು ಏರುವ ಕನಸನ್ನು ಅವರು ಕಂಡಿದ್ದರು. ಆ ನಿಟ್ಟಿನಲ್ಲಿ ತಯಾರಿ ನಡೆಸಿದ್ದ ಅವರು ಈಗ ಶಿಖರದ ಬೇಸ್ ಕ್ಯಾಂಪನ್ನು ಯಶಸ್ವಿಯಾಗಿ ತಲುಪಿ, ವಾಪಸ್ಸು ಬಂದಿದ್ದಾರೆ.

ಸಮುದ್ರ ಮಟ್ಟದಿಂದ 17,165 ಅಡಿ ಎತ್ತರದಲ್ಲಿರುವ ಬೇಸ್ ಕ್ಯಾಂಪ್ ಅನ್ನು ನೇಪಾಳದ ಲುಕ್ಲಾ ಮಾರ್ಗವಾಗಿ ಫಾಕಡಿಂಗ್, ನಾಂಮಚೆ ಬಜಾರ್, ಟೆಂಗ್ ಬೋಚೆ, ಡಿಂಗ್ ಬೋಚೆ, ಲೂ ಬೋಚೆ, ಗೋರಕಷೇಪ್ ಮೂಲಕ ಪರ್ವತ ಏರಿದ್ದಾರೆ. 124 ಕಿ.ಮೀ. ಎತ್ತರದ ಈ ಶಿಖರವನ್ನು ಹತ್ತಲು 10 ದಿನಗಳನ್ನು ತೆಗೆದುಕೊಂಡಿದ್ದಾರೆ. ಕರ್ನಾಟಕದಿಂದ ಏಕಾಂಗಿಯಾಗಿ ಶಿಖರ ಏರಲು ತೆರಳಿದ್ದರು. ಅಹಮದಾಬಾದ್ ಹಾಗೂ ಚೆನ್ನೈನ ಚಾರಣಿಗರು ನೇಪಾಳದಲ್ಲಿ ಸಿಕ್ಕಿದ್ದು, ನಂತರ ಮೂವರೂ ಸೇರಿ ತಂಡ ಕಟ್ಟಿಕೊಂಡಿದ್ದಾರೆ. ಸ್ಥಳೀಯ ಮಾರ್ಗದರ್ಶಕರ ಮೂಲಕ ದಿನಕ್ಕೆ 6ರಿಂದ 7 ತಾಸು ಪರ್ವತ ಏರಿದ್ದಾರೆ. ಎಂಬಿಎ ಪದವೀಧರರಾದ ಇವರು ಸದ್ಯ ಹೊಸಪೇಟೆಯ ಐಟಿಸಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.

‘ದೈಹಿಕವಾಗಿ ಎಷ್ಟೇ ಸದೃಢವಾಗಿದ್ದರೂ ಮಾನಸಿಕ ಸ್ಥೈರ್ಯ ಪರ್ವತಾರೋಹಣಕ್ಕೆ ಮುಖ್ಯವಾಗಿ ಬೇಕು. ಮಾರ್ಗದರ್ಶಕರು ಮಾನಸಿಕವಾಗಿಯೇ ನಮ್ಮನ್ನು ಸಿದ್ಧಪಡಿಸುತ್ತಾರೆ. ಎತ್ತರಕ್ಕೆ ಹೋದಂತೆಲ್ಲಾ ಪರ್ವತರೋಹಿಗಳು ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ವಾತಾವರಣದಲ್ಲಿ ಏರುಪೇರು ಆಗುವುದರಿಂದ ಆಹಾರ ಜೀರ್ಣವಾಗುವುದೂ ಕೆಲವರಿಗೆ ಕಷ್ಟವಾಗುತ್ತದೆ’ ಎಂದು 'ಪ್ರಜಾವಾಣಿ' ಜೊತೆಗೆ ಟಿ.ಪ್ರವೀಣ್ ಕುಮಾರ್ ಅನುಭವ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT