ಬದುಕು ಹಸನಾಗಿಸಿದ ವ್ಯಾಪಾರ

7

ಬದುಕು ಹಸನಾಗಿಸಿದ ವ್ಯಾಪಾರ

Published:
Updated:

ಎಂ.ಜಿ.ರಸ್ತೆ ಕಡೆಯಿಂದ ಕಬ್ಬನ್‌ ಪಾರ್ಕ್‌ಗೇನಾದರೂ ನೀವು ಪ್ರವೇಶಿಸಿದಲ್ಲಿ... ಹಸಿವು ಹೆಚ್ಚಿಸುವಂಥ, ಹಸಿವನ್ನು ಹುಟ್ಟಿಸುವಂಥ ವ್ಯಾಪಾರಿಗಳು ಕಾಣಸಿಗುತ್ತಾರೆ. ಮಕ್ಕಳಿಗಾಗಿ ತಿಳಿಗುಲಾಬಿ ಬಣ್ಣದ, ಅಜ್ಜಿಕೂದಲನ್ನು ನೆನಪಿಸುವ ಬೊಂಬಾಯಿ ಮಿಠಾಯಿ, ಚಳಿಗಾಲದಲ್ಲಿ ಗಂಟಲಿಗೆ ಹಿತವೆನಿಸುವ, ನಾಲಗೆ ಚುರಕ್ಕೆನ್ನಿಸುವ ಮಸಾಲಾ, ಪಾನಿ ಹಾಗೂ ಭೇಲ್‌ ಪುರಿ ಮಾರುವ ಬಂಡಿ, ಗರಿಗರಿ, ಕುರುಕುರು ಎನ್ನುವ ಚುರುಮುರಿ, ತಣ್ಣನೆಯ ತಂಗಾಳಿ ಬೀಸುತ್ತಿರಲಿ, ಬಿರುಬಿಸಿಲೇ ಇರಲಿ... ಐಸ್‌ಕ್ರೀಮ್‌ ಅಂತೂ ಇದ್ದೇ ಇರುತ್ತದೆ.

ಕಬ್ಬನ್‌ ಉದ್ಯಾನಕ್ಕೆ ಹೋಗುವ ಮುನ್ನ, ಅಥವಾ ಉದ್ಯಾನದಲ್ಲಿ ಸುತ್ತಾಡಿ ಬರುವುಷ್ಟರಲ್ಲಿ ಹಸಿದ ಹೊಟ್ಟೆಗೆ ತುತ್ತನ್ನ ನೀಡುವವರು ಎಲ್ಲ ಪ್ರವೇಶ ದ್ವಾರಗಳಲ್ಲೂ ಇದ್ದಾರೆ.

ಎಂ.ಜಿ. ರಸ್ತೆ ಪ್ರವೇಶದಲ್ಲಿರುವ ಐಸ್‌ಕ್ರೀಮ್‌ ವ್ಯಾಪಾರಿ ಕೆ.ವಿ. ಶಂಕರ್‌ ಅವರನ್ನು ಮಾತಾಡಿಸಿದಾಗ, ಕ್ಯಾಂಡಿ ಕರಗುವಷ್ಟೇ ವೇಗದಲ್ಲಿ ತಮ್ಮ ದುಡಿಮೆಯ ಕತೆಯನ್ನು ಹೇಳಿಮುಗಿಸಿದರು. 

‘ದಿನಕ್ಕೆ  ನಾಲ್ಕು ನೂರು ದುಡಿಯುತ್ತೇನೆ, ಮನೆಬಾಡಿಗೆ, ಊಟ  ಎಲ್ಲಾ  ಖರ್ಚುಹೋಗಿ ತಿಂಗಳಿಗೆ ಎಂಟರಿಂದ ಒಂಬತ್ತು ಸಾವಿರ ಉಳಿಸುತ್ತೇನೆ. ನನ್ನ ಹೆಂಡತಿ, ಮಕ್ಕಳು ಕೋಲಾರದಲ್ಲಿ ಇದ್ದಾರೆ, ನಾನು ವಾರಕ್ಕೆ ಎರಡು ಬಾರಿ ಅಲ್ಲಿಗೆ ಹೋಗಿಬರುತ್ತೇನೆ’ ಎಂದರು.

ಕಷ್ಟವೇನಿದ್ದರೂ ನನಗೆ ಇರಲಿ. ನನ್ನಂತೆ ಮನೆಯವರು ಕಷ್ಟ ಪಡುವುದು ಬೇಡ. ಮಕ್ಕಳನ್ನು ಚೆನ್ನಾಗಿ ಓದಿಸುವ ಆಸೆ ಇದೆ. ಅದಕ್ಕಾಗಿ, ದೂರದೂರಿನಿಂದ ಬಂದು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಇರೋದರಲ್ಲಿ ನೆಮ್ಮದಿಯಿಂದ ಸಂಸಾರ ಸಾಗಿಸುತ್ತಿದ್ದೇನೆ’ ಎಂದರು.

ಹಣ್ಣುಗಳನ್ನು ಕತ್ತರಿಸುತ್ತಲೇ ಮಾತು ಶುರು ಮಾಡಿದ ವ್ಯಾಪಾರಿ ಗೌರಮ್ಮ, ‘ನಾವು ವಿಜಯನಗರದವರು. ತಂದೆ–ತಾಯಿ ಹಿಂದಿನಿಂದಲೂ ಹಣ್ಣುಗಳ ವ್ಯಾ‍ಪಾರ ಮಾಡಿಕೊಂಡೆ ಜೀವನ ಸಾಗಿಸಿದ್ದರು. ಈಗ ನಾನು ಹಾಗೂ ಪತಿ ಇದೇ ಕೆಲಸ ಮಾಡುತ್ತಿದ್ದೇನೆ’ ಎಂದರು.

‘ಹಣ್ಣಿನ ವ್ಯಾಪಾರ ತಕ್ಕಮಟ್ಟಿಗೆ ನನ್ನ ಬದುಕನ್ನು ಹಸನಾಗಿಸಿದೆ. ಕಷ್ಟಪಟ್ಟು ದುಡಿದರೆ ಖಂಡಿತ ಸಂತೋಷದಿಂದ ಜೀವನ ಸಾಗಿಸಬಹುದು. ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಿ ಚೆನ್ನಾಗಿ ದುಡಿದು ನಗರದಲ್ಲಿ ಸ್ವಂತ ಮನೆ ಕಟ್ಟಿಕೊಳ್ಳುವ ಆಸೆ. ಅದಕ್ಕಾಗಿ, ದುಡಿಮೆಯನ್ನು ನೆಚ್ಚಿಕೊಂಡಿದ್ದೇವೆ. ಕಬ್ಬನ್ ಉದ್ಯಾನದಲ್ಲಿ ಫ್ರೂಟ್ ಸಲಾಡ್ ವ್ಯಾಪಾರಕ್ಕೆ ತುಂಬಾನೇ ಪೈಪೋಟಿ ಇದೆ. ನಮ್ಮ ಅಂಗಡಿಯಲ್ಲಿ ಗುಣಮಟ್ಟದ ಹಣ್ಣುಗಳನ್ನು ಗ್ರಾಹಕರಿಗೆ ನೀಡುತ್ತೇವೆ. ಅದಕ್ಕಾಗಿಯೇ, ಈ ಭಾಗದಲ್ಲಿ ಕೆಲಸ ಮಾಡುವ ಹಾಗೂ ಉದ್ಯಾನಕ್ಕೆ ಬರುವ ಬಹುತೇಕರು ನಮ್ಮ ಅಂಗಡಿಗೆ ಬರುತ್ತಾರೆ’ ಎಂದು ಖುಷಿಯಿಂದಲೇ ಅವರು ಹೇಳುತ್ತಾರೆ.

‘ಹ‌ಣ್ಣುಗಳನ್ನು ಕೆ. ಆರ್. ಮಾರುಕಟ್ಟೆಯಿಂದ ದಿನಾ ಬೆಳಿಗ್ಗೆ ಹೋಗಿ ತರುತ್ತೇವೆ. ಆಟೊ ಬಾಡಿಗೆ ಮತ್ತು ನಮ್ಮಿಬ್ಬರ ದಿನಗೂಲಿ ಸೇರಿ ನಾವು ನೆಮ್ಮದಿಯಿಂದ ಜೀವನ ಸಾಗಿಸುತ್ತೇವೆ’ ಎಂದರು ಅವರು.


ಐಸ್‌ಕ್ರೀಮ್ ಮಾರಾಟ ಮಾಡುವ ವ್ಯಾಪಾರಿ ಕೆ.ವಿ.ಶಂಕರ್

***


ಚುರುಮುರಿ ವ್ಯಾಪಾರಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !