ಮಂಗಳವಾರ, ಆಗಸ್ಟ್ 20, 2019
25 °C
ಮಸೀದಿ, ಈದ್ಗಾ ಮೈದಾನಗಳಲ್ಲಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ, ಶುಭಾಶಯ ವಿನಿಮಯ

ಶ್ರದ್ಧಾ, ಭಕ್ತಿಯಿಂದ ಬಕ್ರೀದ್‌ ಆಚರಣೆ

Published:
Updated:
Prajavani

ಚಾಮರಾಜನಗರ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್‌ (ಈದ್‌ ಉಲ್‌ ಅದ್‌ಹಾ) ಹಬ್ಬವನ್ನು ಜಿಲ್ಲೆಯಾದ್ಯಂತ ಮುಸ್ಲಿಮರು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು. 

ಮುಸ್ಲಿಂ ಸಮುದಾಯದಲ್ಲಿ ಸೋಮವಾರ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಬೆಳಿಗ್ಗೆಯಿಂದಲೇ ಎಲ್ಲರ ಮನೆಗಳಲ್ಲಿ ಹಬ್ಬದ ಚಟುವಟಿಕೆಗಳು ಆರಂಭವಾಗಿದ್ದವು. ಪುರುಷರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಹೊಸ ದಿರಿಸು ಧರಿಸಿ ಸಂಭ್ರಮಿಸಿದರು. 

ಹಬ್ಬದ ಅಂಗವಾಗಿ ಮಸೀದಿಗಳಲ್ಲಿ, ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮಸೀದಿಗಳಲ್ಲಿ ವಿಶೇಷ ಪ್ರವಚನಗಳೂ ನಡೆದವು. ಸಾಮೂಹಿಕ ಪ್ರಾರ್ಥನೆಯ ಬಳಿಕ ನಂತರ ಮುಸ್ಲಿಂ ಸಮುದಾಯದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಅಂಗವಾಗಿ ಬಡವರಿಗೆ ದಾನ ಮಾಡಲಾಯಿತು. 

ಸ್ನೇಹಿತರನ್ನು, ನೆಂಟರಿಷ್ಟರನ್ನು ಮನೆಗೆ ಆಹ್ವಾನಿಸಿ ಹಬ್ಬದ ಅಡುಗೆ ಸಿದ್ಧಪಡಿಸಿ ಬಡಿಸಿದರು. 

ಚಾಮರಾಜನಗರದ ಸೋಮವಾರಪೇಟೆ ಬಳಿಯ ಅಹಲೆ ಹದೀಶ್‌ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ವೇಳೆ ಮಾತನಾಡಿದ ಧರ್ಮಗುರು ಶಾಯಿದ್ ಸೆಲ್ಪೀ ಅವರು, ‘ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರು ತಮ್ಮ ಅಮೂಲ್ಯ ವಸ್ತುಗಳನ್ನು ದೇವರ ಹೆಸರಿನಲ್ಲಿ ದಾನ ಮಾಡಬೇಕು. ಈ ಹಬ್ಬವು ಮುಸ್ಲಿಮರಿಗೆ ಸೀಮಿತವಾಗಿರದೆ ಸರ್ವ ಮಾನವ ಕುಲಕ್ಕೆ ಸೇರಿದೆ’ ಎಂದರು.

ಪ್ರವಾಹ ಸಂತ್ರಸ್ತರ ಪರ ಪ್ರಾರ್ಥನೆ: ರಾಜ್ಯದ ವಿವಿಧ ಕಡೆಗಳಲ್ಲಿ ಪ್ರವಾಹದಿಂದಾಗಿ ಸಂತ್ರಸ್ತರ ಸಂಕಷ್ಟ ದೂರವಾಗಲಿ ಎಂದು ಧರ್ಮಗುರುಗಳು ಪ್ರಾರ್ಥನೆ ಸಲ್ಲಿಸಿದರು. 

‘ಪ್ರವಾಹದಿಂದಾಗಿ ಲಕ್ಷಾಂತರ ಜನರು ತೊಂದರೆಗೆ ಒಳಗಾಗಿದ್ದಾರೆ. ಅವರ ಕಷ್ಟ ಆದಷ್ಟು ಬೇಗ ಪರಿಹಾರವಾಗಲಿ. ಅವರ ಜೀವನ ಸಹಜ ಸ್ಥಿತಿಗೆ ಮರಳಲಿ’ ಎಂದು ಅವರು ಹಾರೈಸಿದರು.

ಬಿಗಿ ಭದ್ರತೆ: ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಭಾಗಿ

ನಗರದ ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ  ಭಾಗವಹಿಸಿ, ಹಬ್ಬದ ಶುಭಾಶಯ ಕೋರಿದರು. 

ನಂತರ ಮಾತನಾಡಿದ ಅವರು, ‘ಅಲ್ಲಾನು ಎಲ್ಲರಿಗೂ ಆರೋಗ್ಯ, ಆಯಸ್ಸು ಕರುಣಿಸಲಿ. ರಾಜ್ಯ ಮತ್ತು ದೇಶದಲ್ಲಿ ಉತ್ತಮ ಮಳೆ-ಬೆಳೆಯಾಗಿ ಎಲ್ಲರೂ ಶಾಂತಿ ನೆಮ್ಮದಿಯಿಂದ ಬದುಕಲಿ’ ಎಂದು ಅವರು ಹಾರೈಸಿದರು.

ಕೆಪಿಸಿಸಿ ಸದಸ್ಯ ಸಯ್ಯಧ್ ರಫಿ, ಮುಖಂಡರಾದ ಮಹಮದ್ ಅಸ್ಗರ್ ಮುನ್ನಾ, ಬಿ.ಕೆ.ರವಿಕುಮಾರ್‌ ಸೇರಿದಂತೆ ಹಲವರು ಇದ್ದರು.

Post Comments (+)