ಬಾಲ ಮಂದಿರದ ಅಧೀಕ್ಷಕ ಅಮಾನತು

ಭಾನುವಾರ, ಜೂನ್ 16, 2019
22 °C
ಹೊರಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಬದಲಾವಣೆಗೆ ಆದೇಶ

ಬಾಲ ಮಂದಿರದ ಅಧೀಕ್ಷಕ ಅಮಾನತು

Published:
Updated:
Prajavani

ಚಿಕ್ಕಬಳ್ಳಾಪುರ: ನಗರದ ಬಾಲಕಿಯರ ಸರ್ಕಾರಿ ಬಾಲ ಮಂದಿರದಲ್ಲಿದ್ದ ಸಂತ್ರಸ್ತ ಬಾಲಕಿಯರನ್ನು ಭದ್ರತಾ ಸಿಬ್ಬಂದಿಯೊಬ್ಬರು ವೇಶ್ಯಾವಾಟಿಕೆಗೆ ಹಚ್ಚಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಾಲಮಂದಿರದ ಅಧೀಕ್ಷಕ ಮತ್ತು ಹೊರಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯ ತಲೆದಂಡವಾಗಿದೆ.

ಬಾಲ ಮಂದಿರದಲ್ಲಿ ನಡೆದ ಅಕ್ರಮದ ಬಗ್ಗೆ ‘ಪ್ರಜಾವಾಣಿ’ ಶುಕ್ರವಾರ ‘ಸಂತ್ರಸ್ತ ಬಾಲಕಿಯರನ್ನು ವೇಶ್ಯಾವಾಟಿಕೆಗೆ ತಳ್ಳಿದರು!’ ಎಂಬ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೇ ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಯೋಜನಾ ನಿರ್ದೇಶಕರು ಬಾಲ ಮಂದಿರದ ಅಧೀಕ್ಷಕ ನಾಗಭೂಷಣಾಚಾರಿ ಅವರನ್ನು ಅಮಾನತುಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಶಿಫಾರಸು ಮಾಡಿದ್ದರು.

ಅದರಂತೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಅರುಂಧತಿ ಅವರು ನಾಗಭೂಷಣಾಚಾರಿ ಅಮಾನತುಗೊಳಿಸಿ, ತೆರವಾದ ಆ ಹುದ್ದೆಯನ್ನು ಮುಂದಿನ ಆದೇಶದ ವರೆಗೆ ಚಿಕ್ಕಬಳ್ಳಾಪುರ ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ತೇಜಸ್ವಿನಿ ಎಸ್‌.ಸಂಕಣ್ಣನವರ ಹಂಗಾಮಿಯಾಗಿ ನಿರ್ವಹಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.

‘ನಾಗಭೂಷಣಾಚಾರಿ ಸಂಸ್ಥೆಯ ಸಂಪೂರ್ಣ ಜವಾಬ್ದಾರಿ ಮತ್ತು ಸಂಸ್ಥೆಯ ನಿವಾಸಿಗಳ ಹಿತದೃಷ್ಟಿಯನ್ನು ಕಾಪಾಡಬೇಕಿತ್ತು. ಆದರೆ ಬಹಳ ದಿನಗಳಿಂದ ಅಕ್ರಮ ಕೆಲಸ ನಡೆಯುತ್ತಿದ್ದರೂ ಸರಿಯಾಗಿ ಗಮನ ಹರಿಸದೆ ಸಂಸ್ಥೆಯ ನಿವಾಸಿಗಳು ದುರುಪಯೋಗಕ್ಕೆ ಒಳಗಾಗುವುದನ್ನು ತಡೆಗಟ್ಟುವುದರಲ್ಲಿ ವಿಫಲರಾಗಿದ್ದಾರೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೊರಗುತ್ತಿಗೆ ಸಿಬ್ಬಂದಿ ಬದಲಾವಣೆ:

ಇನ್ನೊಂದೆಡೆ ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಯೋಜನಾ ನಿರ್ದೇಶಕರು ಬಾಲಮಂದಿರದಲ್ಲಿ ಹೊರಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆಗೊಳಿಸಿ ಹೊಸಬರನ್ನು ನೇಮಕ ಮಾಡಿಕೊಳ್ಳುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಅವರಿಗೆ ಆದೇಶಿಸಿದ್ದಾರೆ.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಹೆಚ್.ಎಸ್ ಕೊರಡ್ಡಿ ಅವರು ಶುಕ್ರವಾರ ಬೆಳಿಗ್ಗೆ ಬಾಲಮಂದಿರಕ್ಕೆ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆ ಆದೇಶಿಸಿದರು.

ಮಧ್ಯಾಹ್ನ ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಆ್ಯಂಟನಿ ಸೆಬಾಸ್ಟಿಯನ್ ಮತ್ತು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲೂಸಿ) ಅಧ್ಯಕ್ಷೆ ಮೇರಿ ಚೆಲ್ಲದುರೈ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜೇಂದ್ರ ಪ್ರಸಾದ್‌ ಅವರು ಬಾಲಮಂದಿರಕ್ಕೆ ಭೇಟಿ ನೀಡಿದರು. ಈ ವೇಳೆ ಆ್ಯಂಟನಿ ಅವರು ಬಾಲಕಿಯರ ಹೇಳಿಕೆ ಪಡೆದು, ಸಿಬ್ಬಂದಿ ವಿಚಾರಣೆ ನಡೆಸಿ, ಕಟ್ಟಡವನ್ನು ಪರಿಶೀಲಿಸಿದರು.

ತಪಾಸಣಾ ವರದಿ ನೀಡಲು ಸೂಚನೆ

ಘಟನೆಯ ಬೆನ್ನಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಚಕ್ರವರ್ತಿ ಮೋಹನ್ ಅವರು ಶುಕ್ರವಾರ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಜಿಲ್ಲಾ ತನಿಖಾ ಸಮಿತಿಗಳು ಪ್ರತಿ ಸಂಸ್ಥೆಯ ಕಾರ್ಯವೈಖರಿ ಕುರಿತು ತನಿಖೆ ನಡೆಸಿ ಏಪ್ರಿಲ್ 9ರ ಒಳಗಾಗಿ ವರದಿ ನೀಡಬೇಕು. ರಾಜ್ಯದಲ್ಲಿರುವ ಎಲ್ಲಾ ಮಕ್ಕಳ ಸಂಸ್ಥೆಗಳಲ್ಲಿ ಪ್ರತಿ ವಾರಕ್ಕೊಮ್ಮೆ ತಪಾಸಣೆ ನಡೆಸಬೇಕು. ಹೊರಗುತ್ತಿಗೆ ಸಿಬ್ಬಂದಿ ಪೂರ್ವಾಪರ ನಡವಳಿಕೆ ಬಗ್ಗೆ ಪೊಲೀಸ್ ಇಲಾಖೆ ವತಿಯಿಂದ ಕಡ್ಡಾಯವಾಗಿ ವರದಿ ಪಡೆಯಬೇಕು ಎಂದು ಸುತ್ತೋಲೆಯಲ್ಲಿ ಆದೇಶಿಸಲಾಗಿದೆ.

ಬಾಲ ಮಂದಿರದ ಅಧೀಕ್ಷಕರು ಮತ್ತು ಸಮಾಲೋಚಕರು ಮಕ್ಕಳಿಗೆ ಕಾಲಕಾಲಕ್ಕೆ ಆಪ್ತಸಮಾಲೋಚನೆ ನಡೆಸಿ ಪ್ರತಿ ತಿಂಗಳು 10 ತಾರೀಖಿನಂದು ವರದಿ ಸಲ್ಲಿಸಬೇಕು. ರಾತ್ರಿ ವೇಳೆ ಸರದಿ ಮೇಲೆ ಮಕ್ಕಳ ಯೋಗಕ್ಷೇಮ ನೋಡಿ
ಕೊಳ್ಳಬೇಕು. ಮಕ್ಕಳು ಓಡಿ ಹೋದ, ಕಾಣೆಯಾದ 24 ಗಂಟೆಗಳ ಒಳಗಾಗಿ ದೂರು ದಾಖಲಿಸಬೇಕು. ಜಿಲ್ಲಾ ನೋಡಲ್ ಅಧಿಕಾರಿಗಳು ಬಾಲ ಮಂದಿರದ ಮಕ್ಕಳೊಂದಿಗೆ ಸಮಾಲೋಚಿಸಿ ಅವರ ಸುರಕ್ಷತೆಯ ಬಗ್ಗೆ ಖಾತ್ರಿಪಡಿಸಿಕೊಂಡು ಏಪ್ರಿಲ್ 15ರ ಒಳಗೆ ವರದಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !