ಪ್ರಜಾತಂತ್ರಕ್ಕೆ ಚುನಾವಣೆಯೊಂದೇ ಆಯ್ಕೆ?

ಬುಧವಾರ, ಮೇ 22, 2019
29 °C
ಮತದಾನಕ್ಕೆ ಪರ್ಯಾಯ ವ್ಯವಸ್ಥೆಯೊಂದರ ವಿಸ್ತೃತ ಅಧ್ಯಯನ ಅಗತ್ಯ

ಪ್ರಜಾತಂತ್ರಕ್ಕೆ ಚುನಾವಣೆಯೊಂದೇ ಆಯ್ಕೆ?

Published:
Updated:
Prajavani

ಈಗ ನಡೆದಿರುವ ಚುನಾವಣೆಯಲ್ಲಿ ದೇಶ ಉತ್ಸಾಹದಿಂದ ತೊಡಗಿಕೊಂಡಿದೆ. ರಸ್ತೆ ಬದಿಗಳಲ್ಲಿ ಅಥವಾ ಮನೆಯ ಜಗುಲಿಗಳಲ್ಲಿ ಇದರ ಕುರಿತ ಚರ್ಚೆಗಳು ಈಗ ಸಾಮಾನ್ಯ. ಈ ಎಲ್ಲ ಸದ್ದು-ಗದ್ದಲಗಳ ನಡುವೆಯೂ, ಪ್ರಜಾತಂತ್ರದ ಮೇಲಿನ ವಿಶ್ವಾಸವನ್ನು ಜನ ಕಳೆದುಕೊಂಡಿದ್ದಾರೆಯೇ ಅಥವಾ ಪ್ರಜಾತಂತ್ರವೇ ಜನರ ಮೇಲಿನ ವಿಶ್ವಾಸ ಕಳೆದುಕೊಂಡಿದೆಯೇ ಎಂಬ ಪ್ರಶ್ನೆ ಕೂಡ ಮೂಡಬಹುದು.

ಪ್ರಜಾತಂತ್ರದ ಇಂದಿನ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ನಾವು ನಮ್ಮನ್ನೂ ನಮ್ಮ ಸುತ್ತಲಿನ ಕೆಲವು ದೇಶಗಳನ್ನೂ ನೋಡಬೇಕು. ಅಮೆರಿಕದ ಚುನಾವಣೆಯ ಮೇಲೆ ಬಾಹ್ಯ ಶಕ್ತಿಗಳು ಪ್ರಭಾವ ಬೀರಿದ ಆರೋಪಗಳ ಕುರಿತು ಚರ್ಚೆಗಳು ನಡೆದಿವೆ. ಅಲ್ಜೀರಿಯಾದಲ್ಲಿ, ಟರ್ಕಿಯಲ್ಲಿ ಕೂಡ ಸಮಸ್ಯೆಗಳಿವೆ. ಇಸ್ರೇಲ್‌ನ ಪ್ರಜಾತಂತ್ರವು ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಜಾತಂತ್ರವು ಈಗಿನ ರೂಪದಲ್ಲಿ, ಅದರ ಈಗಿನ ಆಚರಣೆಯಲ್ಲಿ ಎಷ್ಟರಮಟ್ಟಿಗೆ ವಿಫಲವಾಗಿದೆ ಎಂಬುದನ್ನು ನಾವು ಕಂಡಿದ್ದೇವೆ.

ಪರಿಸ್ಥಿತಿ ಹೀಗಿರುವಾಗ, ವಿಶ್ವ ಹೆಚ್ಚೆಚ್ಚು ಧ್ರುವೀಕರಣದತ್ತ ಹೆಜ್ಜೆ ಹಾಕುತ್ತಿರುವಾಗ, ‘ಬಲಿಷ್ಠ ನಾಯಕ’ ಎಂಬ ಮಿಥ್ ಸೃಷ್ಟಿಯಾಗಿರುವಾಗ ಪ್ರಜಾತಂತ್ರ ವ್ಯವಸ್ಥೆ ನಿಜಕ್ಕೂ ಉಳಿದುಕೊಂಡು, ಕೆಲಸ ಮಾಡಬಲ್ಲದೇ? ಚುನಾವಣಾ ಪ್ರಜಾತಂತ್ರ ವ್ಯವಸ್ಥೆಗಳನ್ನು ಶಕ್ತಿವಂತರು, ಗಟ್ಟಿ ದನಿಯವರು ಹಿಡಿದಿಟ್ಟುಕೊಂಡಿರುವಾಗ, ‘ಜನಾಭಿಪ್ರಾಯ’ ಎನ್ನುವ ಪರಿಕಲ್ಪನೆ ಇಂದಿಗೂ ಸಂಗತವಾಗಿ ಉಳಿದುಕೊಂಡಿದೆಯೇ?

ನಮ್ಮದೇ ಅನುಭವದ ಆಧಾರದಲ್ಲಿ ಹೇಳು ವುದಾದರೆ, ಭಾರತದ ಚುನಾವಣಾ ಕಣದಲ್ಲಿ ಉಳಿದುಕೊಳ್ಳಲು ಅಪಾರ ಪ್ರಮಾಣದ ಹಣ, ತೋಳ್ಬಲ ಮತ್ತು ವಂಶಪಾರಂಪರ್ಯ ರಾಜಕಾರಣದ ಜೊತೆ ನಂಟು ಬೇಕಾಗುತ್ತದೆ. ಹೀಗಿರುವಾಗ, ಸಂಗತವಾದ ಹಾಗೂ ಪರಿಗಣಿಸಲು ಯುಕ್ತವಾದ ಇತರ ಯಾವುದಾದರೂ ಮಾದರಿಗಳು ಇವೆಯೇ? ಕೇಂಬ್ರಿಜ್‌ ಅನಾಲಿಟಿಕಾ ಮತ್ತು ಅದರಂತಹ ಇತರ ಕೆಲವು ಸಂಸ್ಥೆಗಳು ಮತ ಚಲಾಯಿಸುವವರ ವರ್ತನೆಯನ್ನು ಅಂದಾಜಿಸುವ ಕೆಲಸ ಮಾತ್ರವಲ್ಲದೆ, ಮತ ಚಲಾವಣೆಯ ಮೇಲೆಯೇ ಪ್ರಭಾವ ಬೀರಲು ಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ನಾವು ಈ ಬಗೆಯ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಮತದಾನದ ವ್ಯವಸ್ಥೆಯ ಬದಲು ‘ಲಾಟರಿ ಮೂಲಕ ಆಯ್ಕೆ’ (Sortition based elections) ಮಾಡುವ ಪರ್ಯಾಯ ವ್ಯವಸ್ಥೆಯ ಬಗ್ಗೆ ಆಲೋಚನೆ ಮಾಡುವ ಕಾಲ ಬಂದಿದೆಯೇ?

‘ಸಾರ್ವಜನಿಕ ಹುದ್ದೆಗಳನ್ನು ಲಾಟರಿ ಮೂಲಕ ಹಂಚಿಕೆ ಮಾಡಿದಾಗ ಅದನ್ನು ಪ್ರಜಾತಾಂತ್ರಿಕ ಹಂಚಿಕೆ ಎಂದು ಒಪ್ಪಿಕೊಳ್ಳಬಹುದು; ಆ ಹುದ್ದೆಗಳನ್ನು ಚುನಾವಣೆ ಮೂಲಕ ಭರ್ತಿ ಮಾಡಿದಾಗ ಅದನ್ನು ಕೆಲವರ ಜನತಂತ್ರ ಎನ್ನಬೇಕಾಗುತ್ತದೆ’ ಎನ್ನುವ ಮಾತನ್ನು ಹಲವು ಶತಮಾನಗಳ ಹಿಂದೆ ಅರಿಸ್ಟಾಟಲ್ ಹೇಳಿದ್ದ. ಲಾಟರಿ ಮೂಲಕ ಆಯ್ಕೆ ಮಾಡುವ ಪರಿಕಲ್ಪನೆಯೇ, ‘ಲಾಟರಿ ಆಯ್ಕೆ ಆಧಾರಿತ ಚುನಾವಣೆ’ಯ ಆಲೋಚನೆಗೆ ನಾಂದಿಯಾಯಿತು. ಇದನ್ನು ಬೇರೆ ಬೇರೆ ದೇಶಗಳಲ್ಲಿ, ಬೇರೆ ಬೇರೆ ಸನ್ನಿವೇಶಗಳಲ್ಲಿ ಬಳಸಲಾಗುತ್ತಿದೆ.

ಈ ವ್ಯವಸ್ಥೆಯಲ್ಲಿ ಶಾಸನಸಭೆಗಳ ಸದಸ್ಯರನ್ನು ನಿಯಂತ್ರಿತ ಲಾಟರಿ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಉತ್ತರ ಇಟಲಿ, ವೆನಿಸ್, ಸ್ವಿಟ್ಜರ್ಲೆಂಡ್‌ನಲ್ಲಿ ಈ ಮಾದರಿಯನ್ನು ಅನುಸರಿಸಲಾಗಿದೆ. ಪ್ರಜಾತಂತ್ರವೆಂಬ ಆಧುನಿಕ ವ್ಯವಸ್ಥೆಯ ಮೂಲವೆಂದು ನಂಬಲಾದ ಅಥೆನ್ಸ್‌ ಕೂಡ ಚುನಾವಣೆಗಿಂತಲೂ ನಿಯಂತ್ರಿತ ಲಾಟರಿ ಮೂಲಕ ಆಯ್ಕೆ ಮಾಡುವುದು ಹೆಚ್ಚು ಪ್ರಜಾತಾಂತ್ರಿಕ ಎಂದು ಪರಿಗಣಿಸಿತ್ತು. ‘ಸಮಾನ ಕಾನೂನು ಮತ್ತು ರಾಜಕೀಯ ಹಕ್ಕುಗಳು’ ಎನ್ನುವ ತಾತ್ವಿಕತೆಯ ನೆಲೆಯಲ್ಲಿ ಅಥೆನ್ಸ್‌ನ ಪ್ರಜಾತಂತ್ರ ಕ್ರಿ.ಪೂ. 6ನೆಯ ಶತಮಾನದಲ್ಲಿ ಹುಟ್ಟಿತು. ಆಗ ಈ ತಾತ್ವಿಕತೆಯನ್ನು ಆಚರಣೆಯ ರೂಪಕ್ಕೆ ತರಲು ನಿಯಂತ್ರಿತ ಲಾಟರಿ ವ್ಯವಸ್ಥೆಯನ್ನು ಪ್ರಧಾನವಾಗಿ ಬಳಸಿಕೊಳ್ಳಲಾಗಿತ್ತು. ಅಲ್ಲಿನ ಬಹುಪಾಲು ಆಡಳಿತ ಸಮಿತಿಗಳಿಗೆ ಮ್ಯಾಜಿಸ್ಟ್ರೇಟರನ್ನು ಆಯ್ಕೆ ಮಾಡಲು, ತೀರ್ಪುಗಾರರನ್ನು ಆಯ್ಕೆ ಮಾಡಲು ಈ ವ್ಯವಸ್ಥೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಆಯ್ಕೆ ಪ್ರಕ್ರಿಯೆಯಲ್ಲಿ ಭ್ರಷ್ಟ ಕ್ರಿಯೆಗಳು ನಡೆಯದಂತೆ ಮಾಡಲು ಅವರು ಸಂಕೀರ್ಣ ಪ್ರಕ್ರಿಯೆ ಅಳವಡಿಸಿಕೊಂಡಿದ್ದರು.

ಲಾಟರಿ ಮೂಲಕ ನೀಡಿದ ಮ್ಯಾಜಿಸ್ಟ್ರೇಟ್‌ ಅಧಿಕಾರಕ್ಕೆ ಒಂದು ವರ್ಷದ ಅವಧಿ ಇರುತ್ತಿತ್ತು. ಒಬ್ಬ ವ್ಯಕ್ತಿ ಜೀವನದಲ್ಲಿ ಒಂದು ಬಾರಿ ಮಾತ್ರ ಒಂದು ಮ್ಯಾಜಿಸ್ಟ್ರೇಟ್‌ ಹುದ್ದೆ ಹೊಂದಬಹುದಿತ್ತು. ಆದರೆ, ಆತ ಬೇರೆ ಮ್ಯಾಜಿಸ್ಟ್ರೇಟ್‌ ಹುದ್ದೆ ಹೊಂದಲು ಅಡ್ಡಿಯಿರಲಿಲ್ಲ. ಪೌರತ್ವ ಹೊಂದಿದ್ದ, ಮೂವತ್ತು ವರ್ಷಕ್ಕಿಂತ ಹೆಚ್ಚು ವಯಸ್ಸಾದ ಪ್ರತಿ ಪುರುಷನೂ ಈ ಹುದ್ದೆಗೆ ಅರ್ಹನಾಗಿದ್ದ. ಹುದ್ದೆಗಳಿಗೆ ಅಸಮರ್ಥರು ಬರಬಾರದು ಎಂಬ ಕಾರಣದಿಂದಾಗಿ, ಆಯ್ಕೆಯಾದ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಹಕ್ಕುಗಳ ಚಲಾವಣೆ ಹಾಗೂ ಕರ್ತವ್ಯಗಳ ಪಾಲನೆ ವಿಚಾರದಲ್ಲಿ ಅವರ ಸಾಮರ್ಥ್ಯವನ್ನು ನಿಕಷಕ್ಕೆ ಒಡ್ಡಲಾಗುತ್ತಿತ್ತು. ಒಮ್ಮೆ ಅಧಿಕಾರ ಸ್ವೀಕರಿಸಿದ ಮ್ಯಾಜಿಸ್ಟ್ರೇಟರು ಅಲ್ಲಿನ ಅಸೆಂಬ್ಲಿಯ ಕಣ್ಗಾವಲಿನಲ್ಲಿ ಇರುತ್ತಿದ್ದರು. ಆ ಹುದ್ದೆಯಿಂದ ಕೆಳಗಿಳಿಯುವಾಗ ತಮ್ಮ ಅಧಿಕಾರಾವಧಿಯ ಕೆಲಸಗಳ ವಿವರ ನೀಡಬೇಕಿತ್ತು.

ಉಮೇದುವಾರರ ದೊಡ್ಡ ಸಮೂಹದಿಂದ ರಾಜಕೀಯ ಅಧಿಕಾರಿಗಳನ್ನು ಆಯ್ಕೆ ಮಾಡಲು ನಿಯಂತ್ರಿತ ಲಾಟರಿ ಪದ್ಧತಿಯನ್ನು ಅನುಸರಿಸಿದಾಗ ಸಮರ್ಥರಾದ ಹಾಗೂ ಆಸಕ್ತಿ ಇರುವ ಎಲ್ಲರಿಗೂ ಆ ಸಾರ್ವಜನಿಕ ಹುದ್ದೆಯನ್ನು ಹೊಂದಲು ಸಮಾನ ಅವಕಾಶ ಲಭ್ಯವಾಗುತ್ತದೆ. ಆದರೆ, ಇಂದಿನ ವ್ಯವಸ್ಥೆಯಲ್ಲಿ ಇರುವ ಅಡೆತಡೆಗಳು ಸಮರ್ಥ ವ್ಯಕ್ತಿಗಳು ಸ್ಪರ್ಧೆಗೇ ಇಳಿಯದಂತೆ ಮಾಡಿಬಿಡುತ್ತವೆ. ನಿಯಂತ್ರಿತ ಲಾಟರಿ ವ್ಯವಸ್ಥೆಯು ಗುಂಪುಗಾರಿಕೆಯನ್ನು ಕಡಿಮೆ ಮಾಡುತ್ತದೆ. ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ‍ಏನಿಲ್ಲವೆಂದರೂ ₹ 20 ಕೋಟಿಯಿಂದ ₹ 100 ಕೋಟಿ ಖರ್ಚು ಮಾಡಬೇಕಾಗುತ್ತದೆ ಎಂಬ ಮಾತಿದೆ. ಅದರಲ್ಲಿ ಬಹುಪಾಲು ಮೊತ್ತ ಮತದಾರರ ಮೇಲೆ ಪ್ರಭಾವ ಬೀರಲು ವಿನಿಯೋಗ ಆಗುತ್ತದೆ. ಇಷ್ಟಲ್ಲದೆ, ಪ್ರಮುಖ ರಾಜಕೀಯ ಪಕ್ಷಗಳು ಈಡೇರಿಸಲು ಸಾಧ್ಯವಿಲ್ಲದ ಭರವಸೆಗಳನ್ನು ಪ್ರಣಾಳಿಕೆಗಳಲ್ಲಿ ನೀಡುತ್ತಿವೆ.

ನಿಯಂತ್ರಿತ ಲಾಟರಿ ವ್ಯವಸ್ಥೆಯು ತನ್ನದೇ ಆದ ಪ್ರಯೋಜನಗಳನ್ನು ಹೊಂದಿದ್ದರೂ, ಸಮರ್ಥರು ಮತ್ತು ಪ್ರಾಮಾಣಿಕರನ್ನು ಆಯ್ಕೆ ಮಾಡುವ ಅವಕಾಶ ಇದ್ದರೂ, ಸಾರ್ವಜನಿಕ ಹುದ್ದೆಗಳಲ್ಲಿ ಭ್ರಷ್ಟಾಚಾರ ಕಡಿಮೆ ಮಾಡಲು ಸಾಧ್ಯವಿದ್ದರೂ, ಈ ಪದ್ಧತಿಯನ್ನು ಜಾರಿಗೆ ತರುವುದು ಕಷ್ಟವೆಂಬಂತೆ ಕಾಣುತ್ತಿದೆ. ಈ ವ್ಯವಸ್ಥೆಯನ್ನು ಐರ್ಲೆಂಡ್‌ನಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಇದನ್ನು ವಿಸ್ತೃತವಾಗಿ ಅಧ್ಯಯನ ಮಾಡಬೇಕಿದೆ. ನಮ್ಮ ದೇಶದಲ್ಲಿ, ಇದೇ ಮಾದರಿಯ ಪ್ರಯೋಗವೊಂದನ್ನು ತಮಿಳುನಾಡಿನ ಉತ್ತಿರಮೆರೂರು ಪಂಚಾಯಿತಿಯಲ್ಲಿ ಮಾಡಲಾಗಿದೆ. ಅಲ್ಲಿನ ಜನ ‘ಕೊಡ–ಒಲಾಯ್’ (ಕುಡಿಕೆಯಲ್ಲಿ ಎಲೆಗಳು) ಎನ್ನುವ ಪ್ರಯೋಗ ಕೈಗೊಂಡಿದ್ದಾರೆ. ಈ ವ್ಯವಸ್ಥೆಯಲ್ಲಿ ಪ್ರತಿ ಗ್ರಾಮ ಸಮಿತಿಯ ಅಭ್ಯರ್ಥಿಗಳ ಹೆಸರನ್ನು ತಾಳೆ ಎಲೆ ಮೇಲೆ ಬರೆದು, ಅವುಗಳನ್ನು ಒಂದು ಕೊಡದಲ್ಲಿ ಹಾಕಲಾಗುತ್ತದೆ. ಮಗುವೊಂದು ಅದರಿಂದ ತಾಳೆ ಎಲೆ ಎತ್ತಿಕೊಡುತ್ತದೆ.

ಪ್ರಬಲರು ಅಧಿಕಾರವನ್ನು ಹಿಡಿದಿಟ್ಟುಕೊಳ್ಳುವುದು ವಾಸ್ತವ ಆಗುತ್ತಿರುವಾಗ, ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಬಂಡವಾಳಶಾಹಿ ಸ್ವಾರ್ಥಕೂಟದ ಪ್ರಭಾವ ಇರುವಾಗ, ಇಲ್ಲಿ ಪ್ರಜಾತಂತ್ರ ಹಾಗೂ ಆಡಳಿತದ ಸಲಕರಣೆಯಾಗಿ ನಿಯಂತ್ರಿತ ಲಾಟರಿ ವ್ಯವಸ್ಥೆಯನ್ನು ಗಂಭೀರವಾಗಿ ‍ಪರಿಗಣಿಸಬೇಕಾಗುವ ದಿನ ದೂರವಿಲ್ಲ.

– ಲೇಖಕ: ಅಭಿವೃದ್ಧಿ ಕಾರ್ಯಕರ್ತ, ಮೈಸೂರಿನ ‘ಗ್ರಾಮ್‌’ ಸಂಸ್ಥೆಯ ಸಂಸ್ಥಾಪಕ, ಅಧ್ಯಕ್ಷ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !