ಬನಶಂಕರಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ

7

ಬನಶಂಕರಿ ಸನ್ನಿಧಿಯಲ್ಲಿ ಶರನ್ನವರಾತ್ರಿ ಉತ್ಸವ

Published:
Updated:
Deccan Herald

ಶ ರನ್ನವರಾತ್ರಿ ಪ್ರಯುಕ್ತ ಬನಶಂಕರಿ ಬಳಿಯ ಬನಶಂಕರಿ ದೇವಸ್ಥಾನದಲ್ಲೂ ವಿಶೇಷ ಕಾರ್ಯಕ್ರಮಗಳನ್ನು ಈಗಾಗಲೇ ನಡೆಯುತ್ತಿವೆ. ಅಕ್ಟೋಬರ್ 10ರಿಂದಲೇ ಶರನ್ನವರಾತ್ರಿ ಉತ್ಸವ ಪ್ರಾರಂಭವಾಗಿದ್ದು, ಇದೇ 18ರ ವರೆಗೆ ಅಮ್ಮನವರಿಗೆ ಒಂದೊಂದು ರೀತಿಯ ಪೂಜಾ ಅಲಂಕಾರಗಳು ನಿತ್ಯವೂ ನೆರವೇರಲಿವೆ.

ನಿತ್ಯ ಬೆಳಿಗ್ಗೆ 4ಕ್ಕೆ ದೇವಿಗೆ ಅಭಿಷೇಕ ಪ್ರಾರಂಭವಾಗುತ್ತದೆ. ಅದಾದ ಬಳಿಕ 7.30ರಿಂದ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರ ವರೆಗೆ ನವರಾತ್ರಿ ಪ್ರಯುಕ್ತ ವಿಶೇಷ ಹೋಮ ಹವನಗಳು ದೇಗುಲದ ಪ್ರಧಾನ ಅರ್ಚಕ ಆರ್.ಸತ್ಯನಾರಾಯಣ ಶಾಸ್ತ್ರಿ ಅವರ ನೇತೃತ್ವದಲ್ಲಿ ನಡೆಯಲಿವೆ. 

ಶರನ್ನವರಾತ್ರಿ ಉತ್ಸವ ಹೊರತಾಗಿ, ದೇಗುಲದಲ್ಲಿ ನಿತ್ಯ ಅಭಿಷೇಕ ಹಾಗೂ ಪೂಜಾ ಕಾರ್ಯಗಳು ನಡೆಯುತ್ತಲೇ ಇರುತ್ತವೆ. ಶುಕ್ರವಾರ, ಭಾನುವಾರ ಹಾಗೂ ಮಂಗಳವಾರ ರಾಹುಕಾಲ ಪೂಜೆ ನಡೆಯುತ್ತದೆ.

ದೇಗುಲದ ವಿಶೇಷತೆ

ರಾಹುಕಾಲದಲ್ಲಿ ದೇವಿಗೆ ನಿಂಬೆ ಹಣ್ಣಿನ ಆರತಿ ಮೂಲಕ ಪೂಜೆ ಸಲ್ಲಿಸುವುದು ಈ ದೇಗಲದ ವಿಶೇಷತೆ. ಈ ಪೂಜೆಯಿಂದ ಬೇಡಿಕೆಗಳನ್ನು ದೇವಿ ಈಡೇರಿಸುತ್ತಾರೆ ಎಂಬುದು ಭಕ್ತರ ನಂಬಿಕೆ. ಇದೇ ಕಾರಣಕ್ಕೆ ಇಲ್ಲಿಗೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ನಿಂಬೆ ಹಣ್ಣಿನ ಆರತಿ ಮೂಲಕ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುತ್ತಾರೆ.

ಬನಶಂಕರಿ ದೇಗುಲದ ಆವರಣದಲ್ಲಿ, ಶಾಕಾಂಬರಿ (ಉತ್ಸವ ಮೂರ್ತಿ), ಚೌಡೇಶ್ವರಿ, ಮಹಾ ಗಣಪತಿ, ಪಾರ್ವತಿ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಆಂಜನೇಯ ಸ್ವಾಮಿ ದೇಗುಲವಿದೆ. ನವಗ್ರಹಗಳು ಇಲ್ಲಿವೆ.

ನಿತ್ಯವೂ ಅನ್ನದಾಸೋಹ

ಅಮ್ಮನವರ ಸನ್ನಿಧಿಯಲ್ಲಿ ನಿತ್ಯವೂ ತಪ್ಪದೇ ಅನ್ನದಾಸೋಹ ನಡೆಯುತ್ತದೆ. ಮಧ್ಯಾಹ್ನ 12 ರಿಂದ 2.30ರ ವರೆಗೆ ಸಾವಿರಾರು ಭಕ್ತರಿಗೆ ದಾಸೋಹ ನಡೆಯಲಿದೆ. ಶುಕ್ರವಾರದಂದು ದೇಗುಲಕ್ಕೆ ಹೆಚ್ಚು ಭಕ್ತರು ಬರುತ್ತಾರೆ. ಆ ದಿನ ಅಂದಾಜು 7 ಸಾವಿರ ಮಂದಿಗೆ ಅನ್ನದಾಸೋಹ ಮಾಡಲಾಗುತ್ತದೆ. ಅದಕ್ಕಾಗಿ ಪ್ರತ್ಯೇಕ ಪಾಕಶಾಲೆ ಕಟ್ಟಡವನ್ನು ದೇಗುಲ ಹೊಂದಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದ್ದು, ಭಕ್ತರು ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶವು ದೇಗುಲದಲ್ಲಿದೆ

 

‘ಶುಚಿಗೆ ಮಹತ್ವ ನೀಡಿ’

‘ದೇಗುಲಕ್ಕೆ ನಿತ್ಯವೂ ಸಾವಿರಾರು ಭಕ್ತರು ಬರುತ್ತಾರೆ. ಅವರ ಪೈಕಿ ಬಹುತೇಕರು ಶುಚಿತ್ವದ ಕಡೆಗೆ ಹೆಚ್ಚಾಗಿ ಗಮನ ಕೊಡುವುದಿಲ್ಲ. ಅಲ್ಲದೇ, ಪ್ಲಾಸ್ಟಿಕ್ ಕವರ್‌ಗಳ ಮೂಲಕ ಪೂಜೆ ಸಾಮಗ್ರಿಗಳನ್ನು ತರುತ್ತಾರೆ. ಹಾಗೇ ತಂದ ಪ್ಲಾಸ್ಟಿಕ್ ಕವರ್‌ಗಳನ್ನು ದೇಗುಲದ ಆವರಣದಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ಅದರ ಬದಲಿಗೆ ಪೇಪರ್ ಅಥವಾ ಬಟ್ಟೆಯ ಚೀಲದ ಮೂಲಕ ಪೂಜಾ ಸಾಮಗ್ರಿಗಳನ್ನು ದೇಗುಲಕ್ಕೆ ತಂದರೆ ಉತ್ತಮ’ ಎನ್ನುತ್ತಾರೆ ರಾಜು.

ದೇಗುಲದ ಬಗ್ಗೆ ಒಂದಿಷ್ಟು...

ಈ ದೇಗುಲ ಸ್ಥಾಪಿಸಿದ್ದು ಬಸಪ್ಪ ಶೆಟ್ಟಿ. ಬಾದಾಮಿಯ ಬನಶಂಕರಿ ದೇವತೆ ಅವರ ಮನೆದೇವರು. ಹೀಗಾಗಿ, ಪ್ರತಿ ವರ್ಷ ಅವರು ಅಲ್ಲಿಗೆ ಹೋಗಿ ದೇವಿಯ ಆಶೀರ್ವಾದ ಪಡೆಯುತ್ತಿದ್ದರು. ಒಮ್ಮೆ ದೇವಿಯ ದರ್ಶನಕ್ಕೆ ಬಾದಾಮಿಗೆ ಹೋಗಲು ಅವರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ, ತಾನಿದ್ದ ಕಡೆಯಿಂದಲೇ ದೇವಿಯನ್ನು ಮನದಲ್ಲಿಯೇ ಪ್ರಾರ್ಥನೆ ಮಾಡಿಕೊಂಡಿದ್ದರು.

‘ಅದಾದ ಕೆಲ ದಿನಗಳ ಬಳಿಕ ಬಸಪ್ಪ ಶೆಟ್ಟಿ ಅವರಿಗೆ ಕನಸಿನಲ್ಲಿ ಬಂದ ಬನಶಂಕರಿ ದೇವಿ, ‘ಬಾದಾಮಿಯಿಂದ ನನ್ನ ಮೂರ್ತಿ ತಂದು ನೀನಿರುವ ಕ್ಷೇತ್ರದಲ್ಲಿ ಪ್ರತಿಷ್ಠಾಪಿಸು’ ಎಂದು ಹೇಳಿದ್ದರಂತೆ. ಅಮ್ಮನವರು ಕನಸಿನಲ್ಲಿ ಹೇಳಿದ್ದನ್ನು ಆಜ್ಞೆಯಾಗಿ ಸ್ವೀಕರಿಸಿದ ಬಸಪ್ಪ ಅವರು ಬಾದಾಮಿಯಿಂದ ಮೂರ್ತಿ ತಂದು 1915ರಲ್ಲಿ ಇಲ್ಲಿ ಪ್ರತಿಷ್ಠಾಪಿಸಿ ದೇಗುಲ ಸ್ಥಾಪಿಸಿದರು’ ಎಂದು ದೇಗುಲದ ಸಹಾಯಕ ಅರ್ಚಕ ರಾಜು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !