ಬುಧವಾರ, ನವೆಂಬರ್ 20, 2019
20 °C
ಎಟಿಎಂಗೆ ಕನ್ನ ಹಾಕಿರುವ ಪ್ರಕರಣ * ಆ್ಯಕ್ಸಿಸ್ ಬ್ಯಾಂಕ್ ನಿರ್ಲಕ್ಷ್ಯ ಆರೋಪ

ಕ್ಯಾಮೆರಾ, ಸೆಕ್ಯುರಿಟಿ ಸಿಬ್ಬಂದಿ ಇಲ್ಲದ ಘಟಕ

Published:
Updated:

ಬೆಂಗಳೂರು: ‘ಆ್ಯಕ್ಸಿಸ್‌ ಬ್ಯಾಂಕ್‌’ ಎಟಿಎಂ ಘಟಕಕ್ಕೆ ಕನ್ನ ಹಾಕಿ ₹ 2.89 ಲಕ್ಷ ಕದ್ದೊಯ್ದಿರುವ ಪ್ರಕರಣ ಸಂಬಂಧ ಬನಶಂಕರಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎಟಿಎಂ ಘಟಕದ ಒಳಗೆ ಹಾಗೂ ಹೊರಗೆ ಬ್ಯಾಂಕ್‌ನವರು ಯಾವುದೇ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸದಿರುವುದು ತನಿಖೆಯಿಂದ ಗೊತ್ತಾಗಿದೆ.

‘ಗ್ರಾಹಕರ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಬ್ಯಾಂಕ್ ಆಡಳಿತ ಮಂಡಳಿಗಳಿಗೆ ಮೇಲಿಂದ ಮೇಲೆ ಹೇಳುತ್ತೇವೆ. ನೋಟಿಸ್‌ ಸಹ ಕೊಡುತ್ತೇವೆ. ಆದರೆ, ಆ್ಯಕ್ಸಿಸ್ ಬ್ಯಾಂಕ್‌ನವರು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲ. ಸೆಕ್ಯುರಿಟಿ ಸಿಬ್ಬಂದಿಯನ್ನೂ ನಿಯೋಜಿಸಿಲ್ಲ. ಸೈರನ್ ಸಹ ಅಳವಡಿಸಿಲ್ಲ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‌‘ಬ್ಯಾಂಕ್‌ ಆಡಳಿತ ಮಂಡಳಿಯ ನಿರ್ಲಕ್ಷ್ಯವು ಕಳ್ಳರಿಗೂ ಅನುಕೂಲ ಮಾಡಿಕೊಟ್ಟಿದೆ. ಸದ್ಯದ ಕಳ್ಳರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಎಟಿಎಂ ಘಟಕ ಸಮೀಪದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸುವ ಕೆಲಸ ನಡೆದಿದೆ’ ಎಂದರು.

‘ಎಟಿಎಂ ಘಟಕಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿದೆ. ಪರಿಣಿತ ಕಳ್ಳರೇ ವ್ಯವಸ್ಥಿತವಾಗಿ ಗ್ಯಾಸ್ ಕಟರ್‌ನಿಂದ ಎಟಿಎಂ ಯಂತ್ರವನ್ನು ಕತ್ತರಿಸಿ ಹಣ ಕದ್ದುಕೊಂಡು ಹೋಗಿರುವ ಅನುಮಾನವಿದೆ’ ಎಂದು ತಿಳಿಸಿದರು.

‘ಎಟಿಎಂ ಘಟಕದ ನಿರ್ವಹಣಾ ಸಿಬ್ಬಂದಿ ಶಾಂತವೀರಗೌಡ ಎಂಬುವರು ದೂರು ನೀಡಿದ್ದಾರೆ. ಅದರನ್ವಯವೇ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

‘ಗ್ರಾಹಕರ ಜೀವಕ್ಕೆ ಕುತ್ತು ಉಂಟಾದರೆ ಯಾರು ಹೊಣೆ’

‘ಆ್ಯಕ್ಸಿಸ್ ಬ್ಯಾಂಕ್ ಎಟಿಎಂ ಘಟಕದಲ್ಲಿ ಹಣ ತೆಗೆದುಕೊಳ್ಳಲು ನಿತ್ಯವೂ ಗ್ರಾಹಕರು ಹೋಗುತ್ತಾರೆ. ಇಂಥ ಘಟಕದಲ್ಲೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಆಕಸ್ಮಾತ್ ಗ್ರಾಹಕರ ಜೀವಕ್ಕೆ ಕುತ್ತು ಉಂಟಾದರೆ ಯಾರು ಹೊಣೆ’ ಎಂದು ಸ್ಥಳೀಯರು ಪ್ರಶ್ನಿಸಿದರು.

‘ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಜ್ಯೋತಿ ಎಂಬುವರ ಮೇಲೆ ನಡೆದಿದ್ದ ಹಲ್ಲೆ ಘಟನೆ ಇನ್ನು ನೆನಪಿದೆ. ಅಂಥ ಘಟನೆಗೆ ಆಸ್ಪದ ನೀಡುವಂತಿವೆ ಇಂದಿನ ಹಲವು ಬ್ಯಾಂಕ್‌ಗಳ ಎಟಿಎಂ ಘಟಕಗಳು. ಇಂಥ ಬ್ಯಾಂಕ್‌ನವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಪ್ರತಿಕ್ರಿಯಿಸಿ (+)