ಶನಿವಾರ, ಮೇ 8, 2021
26 °C

ಚರಿತ್ರೆಯೊಳ್‌ ವನವಾಸಿ ದೇಶಮಂ

ಷ.ಶೆಟ್ಟರ್‌ Updated:

ಅಕ್ಷರ ಗಾತ್ರ : | |

ಮನುಷ್ಯ ಜನ್ಮದಲ್ಲಾಗದಿದ್ದರೆ ಕೋಗಿಲೆ ಅಥವಾ ದುಂಬಿ ಆಗಿಯಾದರೂ ಇಲ್ಲಿ ಪುನಃ ಜನಿಸಬೇಕೆಂಬ ಅಭಿಲಾಷೆಯನ್ನು ಮಹಾಕವಿ ಪಂಪನಲ್ಲಿ ಉಂಟು ಮಾಡಿದ ನಾಡು ಈಗ ಬನವಾಸಿ ಎಂದು ಹೆಸರಾದ ವನವಾಸಿಕಾ. ವರದಾ ನದಿ ತೀರದ ಈ ಊರಿಗೆ ಬೌದ್ಧಧರ್ಮ ಪ್ರವೇಶಿಸಿದ್ದು ಹೇಗೆ? ಸಮಗ್ರ ಕರ್ಣ್ನಾಟ ದೇಶದ ಭೂವರ್ಗ ತಿಲಕ ಎಂಬ ಹೆಸರು ಪಡೆದಿದ್ದ ಈ ಊರಿನ ಚರಿತ್ರೆಯಾದರೂ ಏನನ್ನು ಹೇಳುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಇಲ್ಲಿದೆ ಸಂಶೋಧನಾ ಬರಹ...

ಕುಪನದ ಮೂವರು ಬೌದ್ಧಾನುಯಾಯಿಗಳು ಕನಗನಹಳ್ಳಿಯ ಸ್ತೂಪಕ್ಕೆ ಮಾಡಿದ ದಾನದಂತೆ, ವನವಾಸಿಕಾದ ಬೌದ್ಧಾನುಯಾಯಿಯೊಬ್ಬನು ವೇದಿಕಾ ಫಲಕವನ್ನು ಈ ಸ್ತೂಪಕ್ಕೆ ಮಾಡಿದ ದಾನದ ಉಲ್ಲೇಖವು ಒಂದು ತೃಟಿತ ಶಾಸನದಲ್ಲಿ ದಾಖಲಾಗಿದೆ. ‘ವನವಾಸಿಕಾ...’ (ASI, ಸಂ, 192, ಪು, 473) ಎಂಬುದು ಈಗ ಉಳಿದುಕೊಂಡಿರುವ ಶಾಸನದ ಪಠ್ಯಭಾಗ. ಇಂದಿನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬನವಾಸಿ ನಗರವನ್ನು ಸುಮಾರು ಕ್ರಿ.ಪೂ. ಎರಡನೆಯ ಶತಮಾನದ ಈ ಪ್ರಾಕೃತ ಶಾಸನವು ಉಲ್ಲೇಖಿಸಿದೆ.

ಸರಿಸುಮಾರು ಕುಪನದಷ್ಟೇ ಪುರಾತನ ಇತಿಹಾಸವಿರುವ ಈ ಕೇಂದ್ರದೊಡನೆ ಅಶೋಕನ ನೇರ ಸಂಬಂಧವಿರಲಿಲ್ಲ; ಆದರೆ ಆತನ ಕಾಲದಲ್ಲಿಯೇ ಬೌದ್ಧಧರ್ಮವು ಇದನ್ನು ಪ್ರವೇಶಿಸಿತ್ತು ಎಂಬುದಕ್ಕೆ ದಾಖಲಿತ ಐತಿಹ್ಯಗಳಿವೆ. ಅವುಗಳಲ್ಲಿ ಶ್ರೀಲಂಕೆಯ ಅನುರಾಧಪುರ ವಿಹಾರದಲ್ಲಿರುವ ಕ್ರಿ.ಶ. ನಾಲ್ಕು- ಐದನೆಯ ಶತಮಾನದ ‘ದೀಪವಂಸ’ ಮತ್ತು ‘ಮಹಾವಂಸ’ ಗ್ರಂಥಗಳು ಮುಖ್ಯವಾಗಿವೆ.

ವನವಾಸದಲ್ಲಿ ಬೌದ್ಧಮತದ ಪ್ರಸಾರ

ಕುಪನವನ್ನು ಮೊದಲ್ಗೊಂಡು ಅಶೋಕನು ಕರ್ನಾಟಕದಲ್ಲಿ ಹಾಕಿಸಿದ ಯಾವ ಶಾಸನ ಕೇಂದ್ರವನ್ನೂ ದೀಪವಂಸ ಮತ್ತು ಮಹಾವಂಸಗಳಲ್ಲಿ ಹೆಸರಿಸಿಲ್ಲ. ಈ ದಾಖಲೆಗಳ ಪ್ರಕಾರ, ಅಶೋಕನ ಕಾಲದಲ್ಲಿ ಸಮಾವೇಶಗೊಂಡಿದ್ದ ಮೂರನೆಯ ಬೌದ್ಧ ಮಹಾಸಭೆಯು ವಿಸರ್ಜನೆಗೊಂಡ ನಂತರ, ಮೊಗ್ಗಲೀಪುತ್ತ ತಿಸ್ಸನು ಭಿಖ್ಖುಗಳ ಒಂಬತ್ತು ತಂಡಗಳನ್ನು ನಿರ್ಮಿಸಿ, ಮೌರ್ಯ ಸಾಮ್ರಾಜ್ಯದ ಗಡಿಗಳಾಚೆಗಿದ್ದ ಒಂಬತ್ತು ಪ್ರದೇಶಗಳಿಗೆ ಧರ್ಮ ಪ್ರಸಾರ ಮಾಡಲು ಕಳಿಸಿಕೊಟ್ಟಿದ್ದನು.

ಇವುಗಳಲ್ಲಿ ನಮಗೆ ಪ್ರಸ್ತುತವಾದವುಗಳೆಂದರೆ ಭಿಖ್ಖು ರಖ್ಖಿತನಡಿ ವನವಾಸವನ್ನು ತಲುಪಿದ ಐವರ ತಂಡ ಮತ್ತು ಭಿಖ್ಖು ಮಹೇಂದ್ರನಡಿ ಮಹಿಷಮಂಡಲವನ್ನು ತಲುಪಿದ ಐವರ ಇನ್ನೊಂದು ತಂಡ. ಇವುಗಳಲ್ಲಿ ವನವಾಸ ತಂಡವು ಅತ್ಯಂತ ಯಶಸ್ವಿಯಾಗಿತ್ತೆನ್ನಲಾಗಿದೆ. ರಖ್ಖಿತನು ಇಲ್ಲಿಯ 60,000 ನಿವಾಸಿಗಳನ್ನು ಬೌದ್ಧಮತಕ್ಕೆ ಪರಿವರ್ತಿಸಿದ್ದಲ್ಲದೆ, ಇನ್ನೂ 37,000 ನಿವಾಸಿಗಳನ್ನು ದೀಕ್ಷೆ (ಪಬ್ಬಜ)ಗೊಳಪಡಿಸುವಲ್ಲಿ ಯಶಸ್ವಿಯಾಗಿದ್ದು, ಇದಕ್ಕೆ ಕಾರಣ. ಈ ಕಾಲದಲ್ಲಿ ವನವಾಸವು ಒಂದು ಪುರವಾಗಿರಲಿಲ್ಲ, ಜನಪದವಾಗಿತ್ತು; ಇದು ಅಶೋಕ ಸಾಮ್ರಾಜ್ಯದ ಭಾಗವಾಗಿರಲಿಲ್ಲ, ಅದರ ಗಡಿಯಾಚೆಯ ಸ್ವತಂತ್ರ ಘಟಕವಾಗಿತ್ತು. ಅಂದರೆ ಅಶೋಕನು ತನ್ನ ಶಾಸನಗಳಲ್ಲಿ ಹೇಳಿರುವಂತೆ ದಕ್ಷಿಣ ಭಾರತದ ಚೋಳ, ಚೇರ, ಪಾಂಡ್ಯ, ಸಾತಿಯಪುತ್ರ ಮತ್ತು ತಾಮ್ರಪರ್ಣಿಗಳು ಮಾತ್ರ ದಕ್ಷಿಣದಲ್ಲಿ ಸ್ವತಂತ್ರ ರಾಜ್ಯಗಳಾಗಿರಲಿಲ್ಲ, ಆತನು ಹೆಸರಿಸದಿದ್ದ ಇನ್ನೂ ಕೆಲವು ಪ್ರದೇಶಗಳಿದ್ದವು ಎಂದಂತಾಯ್ತು. ಇವುಗಳಲ್ಲಿ ವನವಾಸಿಕಾ ಮತ್ತು ಮಹಿಷಮಂಡಲ ಇಂದಿನ ಕರ್ನಾಟಕದ ಗಡಿಗೆ ಹೊಂದಿಕೊಂಡವುಗಳಲ್ಲಿ ಪ್ರಮುಖವಾಗಿದ್ದವು. ಇವುಗಳ ಸ್ವತಂತ್ರ ಅಸ್ತಿತ್ವವನ್ನು ‘ಪಚ್ಚಂತೆ’, ‘ಪಚ್ಚಂತಮಿ’, ‘ಪಚ್ಚಂತೇಸು’ ಪದಗಳಿಂದ ಶ್ರೀಲಂಕೆಯ ದಾಖಲೆಗಳು ಒತ್ತಿ ಹೇಳಿವೆ.

ಅಲ್ಲದೆ ಇದೇ ವಿಹಾರದಲ್ಲಿದ್ದ ಭಿಖ್ಖು ಬುದ್ಧಘೋಷನೂ ‘ಪಚ್ಚಂತಿಮೇಸು ಜನಪದೇಸು’ ಎಂದೇ ಇವನ್ನು ಕರೆದಿದ್ದನು. ಈ ಪ್ರಾಕೃತಪದಗಳನ್ನು ‘ಹೊರಅಂಚು’, ‘ಗಡಿಯಾಚೆ’, ‘ಪರದೇಶ’ ಎಂದು ಅರ್ಥೈಸಲಾಗಿದೆ. ಈ ವಲಯದಲ್ಲಿದ್ದ ಅಂದಿನ ಅರಸು ಮನೆತನಗಳ ಬಗ್ಗೆಯಾಗಲೀ, ಬುಡಕಟ್ಟಿನ ಜನಾಂಗಗಳ ಬಗ್ಗೆಯಾಗಲೀ ಯಾವ ಮಾಹಿತಿ ಇಲ್ಲ. ಆದರೆ ತಮಿಳು ಶಂಗಂಸಾಹಿತ್ಯವನ್ನು ಆಧರಿಸಿ ಇದು ತಮಿಳಗಂ ವಲಯದ ಉತ್ತರ (ವಡುಗ)ದಲ್ಲಿತ್ತು, ಬಹುಶಃ ತುಳುವರ, ಕೊಂಕಣಿಗರ, ಪ್ರದೇಶವಾಗಿತ್ತೆಂದು ಊಹಿಸಬಹುದಾಗಿದೆ.

ಭಿಖ್ಖು ರಖ್ಖಿತನು ಈ ಪ್ರದೇಶದ 60,000 ನಿವಾಸಿಗಳನ್ನು ಬೌದ್ಧಮತಕ್ಕೆ ಪರಿವರ್ತಿಸಿದ್ದು, ಅಕ್ಷರಶಃ ನಿಜವಾಗಿರದಿದ್ದರೂ ಈ ಕಾಲದಲ್ಲಿ ಬೌದ್ಧಧರ್ಮವು ವನವಾಸ ಜನಪದವನ್ನು ಪ್ರವೇಶಿಸಿದ್ದನ್ನು ಸಂಶಯಿಸುವಂತಿಲ್ಲ.

ಮೌರ್ಯಾನಂತರ ಈ ಪ್ರದೇಶದ ಮೇಲೆ ಅಧಿಕಾರ ಸಾಧಿಸಿಕೊಂಡ ಶಾತವಾಹನರ ಐತಿಹಾಸಿಕ ಅವಶೇಷಗಳು, ವಿಶೇಷವಾಗಿ ಬೌದ್ಧಾವಶೇಷಗಳು, ಇದಕ್ಕೆ ಆಧಾರ ಒದಗಿಸುವವು, ಆದರೂ ಈ ಕಾಲದಲ್ಲಿ (ಕ್ರಿ.ಪೂ. ಮೂರರಿಂದ ಕ್ರಿ.ಶ. ಎರಡನೆಯ ಶತಮಾನದವರೆಗೂ) ವನವಾಸದ ಬೌದ್ಧರು ಕೆಳದಖ್ಖಣದ ಪ್ರಸಿದ್ಧ ಬೌದ್ಧಕೇಂದ್ರಗಳೊಡನೆ ಹೆಚ್ಚು ಸಂಪರ್ಕ ಹೊಂದಿರಲಿಲ್ಲ ಎನಿಸುವುದು. ಏಕೆಂದರೆ ಆಂಧ್ರಪ್ರದೇಶದಲ್ಲಿ ಈವರೆಗೂ ಶೋಧಿಸಿರುವ ಸುಮಾರು ನಲವತ್ತು ಬೌದ್ಧಕೇಂದ್ರಗಳಲ್ಲೆಲ್ಲೂ ಇವರ ಪ್ರಸ್ತಾಪ ಬರುವುದಿಲ್ಲ. ಇದು ಏನೇ ಇರಲಿ, ಕರ್ನಾಟಕದಲ್ಲಿ ಇತ್ತೀಚಿಗೆ ಬೆಳಕು ಕಂಡಿರುವ ಸಣ್ಣತಿ-ಕನಗನಹಳ್ಳಿ ಸಮುಚ್ಚಯದೊಡನೆ ವನವಾಸಿಕರ ಸಂಪರ್ಕವಿತ್ತೆನ್ನಲು ಮೇಲೆ ಉಲ್ಲೇಖಿಸಿರುವ ಶಾಸನವೇ ಸಾಕ್ಷಿ.

ಇದನ್ನೂ ಓದಿ: ಮೊದಲ ಕನ್ನಡ ಶಾಸನ ‘ತಾಳಗುಂದ ಶಾಸನ’

ಶಾಸನಗಳಲ್ಲಿ ಉಲ್ಲೇಖ

ವನವಾಸವು ಲಿಖಿತ ದಾಖಲೆಗಳಲ್ಲಿ ಸ್ಥಾನ ಪಡೆದುಕೊಳ್ಳುವುದು ಸುಮಾರು ಕ್ರಿ.ಶ ಎರಡನೆಯ ಶತಮಾನದಲ್ಲಿ. ಆಗ ಈ ಪ್ರದೇಶವು ಪ್ರಪ್ರಥಮವಾಗಿ ಒಂದು ರಾಜ್ಯಘಟಕವಾಗಿ ಪರಿವರ್ತನೆಗೊಂಡು, ಶಾತವಾಹನರ ತರುವಾಯ ಅಧಿಕಾರಕ್ಕೆ ಬಂದ ಚುಟುಸಾತಕರ್ಣಿಗಳ ಆಳ್ವಿಕೆಗೊಳಗಾಗಿತ್ತು. ಇದರ ಅಧಿಕಾರವಲಯ ಮತ್ತು ಅಧಿಕಾರಾವಧಿ ಸೀಮಿತವಾಗಿದ್ದರೂ ಬೌದ್ಧರ ಇತಿಹಾಸದಲ್ಲಿ ಚುಟುಸಾತಕರ್ಣಿಗಳ ಕಾಲಕ್ಕೆ ಮಹತ್ವದ ಸ್ಥಾನವಿದೆ. ಬೌದ್ಧ ಮತಾನುಯಾಯಿಗಳಾದ ವಿಜಯಪುರ (ನಾಗಾರ್ಜುನಕೊಂಡ)ದಿಂದ ಆಳುತ್ತಿದ್ದ ಪ್ರಸಿದ್ಧ ಇಕ್ಷ್ವಾಕರು ಮತ್ತು ಸ್ವಲ್ಪಕಾಲ ಇಲ್ಲಿ ನೆಲೆನಿಂತಿದ್ದ ಆಭೀರರು ಇವರೊಡನೆ ಹೊಂದಿದ್ದ ವಿವಾಹ ಸಂಬಂಧದಿಂದಲೋ ಅಥವಾ ಈ ರಾಜ್ಯದ ಪ್ರಭಾವೀ ಧನಿಕವರ್ಗದವರ ಧಾರಾಳ ಕೊಡುಗೆಗಳಿಂದಲೋ, ಬೌದ್ಧ ಇತಿಹಾಸದಲ್ಲಿ ಈ ಕಾಲದ ವನವಾಸಿಗಳಿಗೆ ಗೌರವಯುತ ಸ್ಥಾನ ದೊರಕಿತ್ತು.

ವೈಜಯಂತದ ದಾನಿಗಳು:

1. ವರ್ತಕನಾದ ಸೇಠಿಣಾ ಭೂತಪಾಲ: ಕ್ರಿ.ಶ. ಎರಡನೆಯ ಶತಮಾನದ ಹಾರಿತೀಪುತ್ರ ಸಾತಕರ್ಣಿಯ ಆಳ್ವಿಕೆಯ ಕಾಲದಲ್ಲಿ ಬರೆಸಿದ ಪ್ರಾಕೃತ ಕಲ್ಬರಹದಲ್ಲಿ ವನವಾಸ ಪಟ್ಟಣವನ್ನು ‘ಸಜಯತ’ ಎಂದು ಕರೆಯಲಾಗಿದೆ. ಆದರೆ ಈ ಪಟ್ಟಣದ ಧನಿಕ ವರ್ತಕನಾದ ಸೇಠಿಣಾ ಭೂತಪಾಲನು ಮಹಾರಾಷ್ಟ್ರದ ಕಾರ್ಲಾಗುಹಾಲಯ ನಿರ್ಮಾಣದ ಅಂತಿಮ ಘಟ್ಟದಲ್ಲಿ ಪಾಲ್ಗೊಂಡಿದ್ದಾಗ ತಾನು ‘ವೇಜ್ಯಯಂತ’ದವನೆಂದು ಹೇಳಿಕೊಂಡಿರುವನು. ಪ್ರಾಕೃತ ಭಾಷೆಯಲ್ಲಿರುವ ಈ ಶಾಸನವು ಜಂಬೂದ್ವೀಪದಲ್ಲಿಯೇ ಅಸದೃಶ್ಯವಾದ ಈ ಸಂಘಾರಾಮವನ್ನು ಪೂರ್ಣಗೊಳಿಸಿದ (‘ಪಠಿನಿಪಠಿತಂ’) ಮಾಹಿತಿಯನ್ನು ಕೊಡುವುದು. ಕನಿಷ್ಠ ಎರಡುನೂರು ವರ್ಷಗಳ ಇತಿಹಾಸವಿರುವ ಈ ಕಲ್ಮನೆಯು ಈತನೊಬ್ಬನಿಂದಲೇ ನಿರ್ಮಾಣಗೊಂಡಿರಲಿಲ್ಲ; ಅಂತಿಮ ಘಟ್ಟದಲ್ಲಿ ಇದರೊಡನೆ ಗುರುತಿಸಿಕೊಂಡ ಈತನು ಇದು ಪೂರ್ಣಗೊಂಡಿದ್ದಕ್ಕೆ ಸಾಕ್ಷಿಯಾಗಿದ್ದನು ಮಾತ್ರ. ಸುಮಾರು ಒಂದೂವರೆ ಡಜನ್ ದಾನಿಗಳು ಇದರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಮತ್ತು ಇವರಲ್ಲಿ ರಾಜವಂಶಸ್ಥರು, ಯವನರು, ಭಿಖ್ಖು-ಭಿಖ್ಖುಣಿಗಳು, ಗೃಹಿಣಿ-ಗೃಹಸ್ಥರು, ಮತ್ತು ಬುಡಕಟ್ಟಿನ ಜನಾಂಗಗಳು ಇದ್ದ ಬಗ್ಗೆ ದಾಖಲೆಗಳಿವೆ. ವೇಜ್ಯಯಂತದ ದಾನಿಯಂತೆ, ದೇನಕಟಕ, ಸುಪಾರ, ಮುಂತಾದ ನಗರಗಳ ದಾನಿಗಳೂ ಇವರಲ್ಲಿದ್ದರು.

2. ರಾಜಕುಮಾರಿ ನಾಗಮೂಲನಿಕಾ: ಈ ಶ್ರೇಣಿಕನಂತೆ ವೈಜಯಂತಿಯ ರಾಜಕುಮಾರಿಯೊಬ್ಬಳು ಕನ್ಹೇರಿ (ಮುಂಬೈ ಪಶ್ಚಿಮ ಭಾಗದಲ್ಲಿರುವ) ಗುಹಾಲಯ ನಿರ್ಮಾಣವೊಂದರಲ್ಲೂ ತೊಡಗಿಸಿಕೊಂಡಿದ್ದಳು. ವೈಜಯಂತಿಯಿಂದ ಆಳುತ್ತಿದ್ದ ಹಾರಿತೀಪುತ ವಿಷ್ಣುಕಚುಟುಸಾತಕರ್ಣಿಯ ಪುತ್ರಿಯೂ ಮಹಾರಥಿಯ ಅರಸಿಯೂ ಆದ ಇವಳ ಹೆಸರು ನಾಗಮೂಲನಿಕಾ ಎಂದಿತ್ತು.

3. ಅರಸಿ ಕಡಬಳಸಿರಿ: ವನವಾಸ ಅರಸನನ್ನು ವರಿಸಿ ಬಂದಿದ್ದ ಇಕ್ಷ್ವಾಕು ರಾಜವಂಶದ ಮಹಾದೇವಿ ಕಡಬಳಸಿರಿಯು ಮಹಿಸಾಸಕ ಶಾಖೆಯ ಬೌದ್ಧರಿಗೆ ಸ್ತೂಪಗಳನ್ನೂ ವಿಹಾರಗಳನ್ನೂ ನಿರ್ಮಿಸುವ ಯೋಜನೆಯೊಂದನ್ನು ಮಾಡಿಕೊಂಡಾಗ, ಇದಕ್ಕೆ ಅವಳು ಆಯ್ಕೆಮಾಡಿಕೊಂಡದ್ದು ತನ್ನ ರಾಜಧಾನಿಪಟ್ಟಣವನ್ನಲ್ಲ, ತನ್ನ ತವರೂರಾದ ವಿಜಯಪುರ(ನಾಗಾರ್ಜುನಕೊಂಡ)ವನ್ನು. ಬಹುಶಃ ಈ ಕಾರಣದಿಂದಾಗಿ ನಾಗಾರ್ಜುನಕೊಂಡದಂತೆ ವನವಾಸಿಕವು ಗಮನಾರ್ಹ ಬೌದ್ಧಕೇಂದ್ರವಾಗಿ ಬೆಳೆಯಲಿಲ್ಲವೆನಿಸುವುದು.

ಮೂರನೆಯ ಶತಮಾನದಲ್ಲಾದ ಬದಲಾವಣೆಗಳು: ವೈಜಯಂತದ ಈ ಪ್ರಭಾವೀ ದಾನಿಗಳೆಲ್ಲರೂ ವನವಾಸದ ಹೊರಗೆ ಮಾಡಿದ ಧರ್ಮಕಾರ್ಯಗಳಂತೆ ವೈಜಯಂತದಲ್ಲಿ ಮಾಡದಿರುವುದು ಕುತೂಹಲಕಾರಕ. ಬೌದ್ಧಾನುಯಾಯಿಗಳು ಇಲ್ಲಿಂದ ದೂರಸರಿಯುತ್ತಿದ್ದರೆಂಬ ಭಾವನೆಯನ್ನು ಇದು ಮೂಡಿಸುವುದು. ಇದಕ್ಕೆ ನಾಗಾರ್ಜುನಕೊಂಡದಲ್ಲಿ (ಕ್ರಿ.ಶ. 278ರಲ್ಲಿ) ಬರೆಸಿರುವ ಶಾಸನವೊಂದು ಬೆಂಬಲಕೊಡುವುದು.

ಶಿವಶೇಪನೆಂಬ ಯವನರಾಜನು (ಶಕಕ್ಷತ್ರಪ) ಅಥವಾ ಆಭೀರನು ಸಂಜೆಯಪುರದಿಂದ ಆಳುತ್ತಿದ್ದನೆಂದೂ ವಿಷ್ಣುರುದ್ರಶಿವಲಾನಂದ ಸಾತಕರ್ಣಿಯು ವನವಾಸದ ಉಳಿದ ಪ್ರದೇಶವನ್ನು ಆಳುತ್ತಿದ್ದನೆಂದು ಹೇಳಿರುವುದರಿಂದ, ಆಗ ವನವಾಸವು ಇಬ್ಭಾಗವಾಗಿ ಎರಡು ರಾಜವಂಶಸ್ಥರ ಅಧಿಕಾರಕ್ಕೊಳಗಾಗಿತ್ತೆಂಬ ಭಾವನೆ ಬರುವುದು. ಆದರೆ ಅವರು ಶತ್ರುಗಳಾಗದೆ ಮಿತ್ರರಾಗಿದ್ದರೆನಿಸುವುದು. ಈ ಅರಸರಿಬ್ಬರೂ ವಿಜಯಪುರದಲ್ಲಿ ಕೆಲಕಾಲ ತಂಗಿದ್ದಾಗ ಅವಂತಿ ರಾಜನೊಡಗೂಡಿ ‘ಅಷ್ಟಭಜಸ್ವಾಮಿ’ ಹೆಸರಿನ ವಿಷ್ಣುದೇವಾಲಯವನ್ನು ನಿರ್ಮಿಸಿ, ಪ್ರಥಮಬಾರಿಗೆ ಸಂಸ್ಕೃತ ಶಾಸನವನ್ನು ಇಲ್ಲಿ ಬರೆಸಿದ್ದರು. ಇದು ಬೌದ್ಧರ ಏಕಸ್ವಾಮ್ಯವು ನಾಗಾರ್ಜುನಕೊಂಡದಲ್ಲಿ ಮಾತ್ರವಲ್ಲ, ಕೆಳದಖ್ಖಣದಲ್ಲಿಯೂ ಮುಕ್ತಾಯವಾಗಿದ್ದನ್ನು ಸೂಚಿಸುವಂತಿದೆ. ಅಂದರೆ ಮೂರನೆಯ ಶತಮಾನದ ಕೊನೆಯಲ್ಲಿ ನಾಗಾರ್ಜುನಕೊಂಡದಲ್ಲೂ ವನವಾಸದಲ್ಲೂ ಸರಿಸುಮಾರು ಕ್ರಾಂತಿಕಾರರ ಬದಲಾವಣೆಯಾಗುತ್ತಿದ್ದವು ಎಂದಂತಾಯ್ತು. ಅರ್ಧಸಹಸ್ರಮಾನಕಾಲದ ತಮ್ಮ ಏಕಸ್ವಾಮ್ಯವನ್ನು ಕಳೆದುಕೊಂಡು ಬೌದ್ಧಧರ್ಮ ಮತ್ತು ಪ್ರಾಕೃತಭಾಷೆ ಹಿಂದೂಧರ್ಮಕ್ಕೆ ಮತ್ತು ಸಂಸ್ಕೃತಭಾಷೆಗೆ ಎಡೆಮಾಡಿಕೊಟ್ಟದ್ದನ್ನು ಇದು ಸಂಕೇತಿಸುವುದು.

ಸಂಜಯಂತಿ-ವೇಜಯಂತಿ: ಈ ಚಾರಿತ್ರಿಕ ಘಟನೆಗಳೇನೇ ಇರಲಿ, ಮೂರನೆಯ ಶತಮಾನದ ಕೊನೆಯಲ್ಲಿ ಈ ‘ಕೊಂಕಣ’ ಪ್ರದೇಶವನ್ನು ‘ವನವಾಸ’ವೆಂದು, ಇದರ ರಾಜಧಾನಿಯನ್ನು ಸಂಜಯಂತಿ, ಸಂಜಯಪುರ, ವೇಜಯಂತಿ, ಎಂದು ಕರೆಯುತ್ತಿದ್ದುದು ನಮಗಿಲ್ಲಿ ಪ್ರಸ್ತುತ. ಈ ಎರಡೂ ಹೆಸರುಗಳು ಮಹಾಭಾರತದ ಕರ್ತೃವಿಗೂ ತಿಳಿದಿದ್ದವು, ಏಕೆಂದರೆ ದಿಗ್ವಿಜಯ ಪರ್ವದಲ್ಲಿ ಸಂಜಯತಿಯನ್ನು, ಉಳಿದೆಡೆ ‘ವನವಾಸಿನ’ವನ್ನು ಅವನು ಹೆಸರಿಸಿರುವನು.

ಕದಂಬರ ಆಳ್ವಿಕೆ: ಈ ಕಾಲದಲ್ಲಿ ಕದಂಬರು ವನವಾಸದೊಡನೆ ಸಂಪರ್ಕ ಹೊಂದಿದ್ದರೋ ಇಲ್ಲವೋ ಎಂಬುದು ಸ್ಪಷ್ಟಗೊಳ್ಳುತ್ತಿಲ್ಲ. ಮೂಲತಃ ಬುಡಕಟ್ಟಿನ ಶೂದ್ರರಾದ ಇವರು ಕರಾವಳಿಯ ಅನಿಶ್ಚಿತ ನೆಲೆಗಳಲ್ಲಿದ್ದು, ನೆಲಪ್ರದೇಶಕ್ಕಿಂತ ಹೆಚ್ಚಾಗಿ ಜಲಪ್ರದೇಶದ ಮೇಲೆ ತಮ್ಮ ಅಧಿಕಾರ ಸಾಧಿಸಿಕೊಳ್ಳುವುದರಲ್ಲಿ ಉತ್ಸುಕರಾಗಿದ್ದ ಚಿತ್ರವನ್ನು ತಮಿಳಿನ ಶಂಗಂ ಕವಿಗಳು (ಕ್ರಿ.ಪೂ ಎರಡರಿಂದ ಕ್ರಿ.ಶ ಎರಡು) ಕೊಟ್ಟಿರುವರು. ‘ಕಟಂಬರು’ ಎಂದು ಇವರನ್ನು ಕರೆದು, ಸತತವಾಗಿ ಚೇರರಾಜರ ವಿರುದ್ಧ ಇವರು ಸಮುದ್ರಯುದ್ಧದಲ್ಲಿ ತೊಡಗಿದುದ್ದನ್ನು ಬಣ್ಣಿಸಿರುವರು. ಕಡಲ್ಗಳ್ಳರಾದ ಇವರನ್ನು ನಿಗ್ರಹಿಸಲು ಹೇಗೆ ನಡುಂಚೇರಲ್ ಅರಸನು ಸನ್ನದ್ಧನಾಗಿರುತ್ತಿದ್ದ ಎಂಬುದನ್ನು ಶಂಗಂಕವಿಗಳಾದ ಕುಮಟ್ಟೂರ್, ಕಣ್ಣಣಾರ್, ಮಾಮೂಲಣಾರ್, ಇಳಂಗೋ ಅಡಿಗಳ್ ಮುಂತಾದವರು ವಿವರಿಸಿರುವರು. ಈ ಕಾಲದ ಕಡಲ ಕಾದಾಟವನ್ನು ವಿದೇಶಿಯಾತ್ರಿಕರಾದ ಟಾಲಮಿ, ಪೆರಿಪ್ಲಸ್ ಮತ್ತು ಪ್ಲಿನಿ ಕೂಡ ಧ್ವನಿಸಿರುವರು. ಅಂದಿನ ಕದಂಬರು ಶ್ರೀಲಂಕೆಯವರೆಗೂ ತಮ್ಮ ವರ್ಚಸ್ಸನ್ನು ವಿಸ್ತರಿಸಿಕೊಂಡು ಸಮುದ್ರಾಧಿಪತಿಗಳಾಗಿ ಮೆರೆದಿದ್ದರೆನಿಸುವುದು. ಶ್ರೀಲಂಕೆಯ ಒಂದು ನದಿಯನ್ನು ಕದಂಬ ಹೆಸರಿನಿಂದ ಗುರುತಿಸಿರುವುದಲ್ಲದೆ, ಇವರು ಮಾಡಿಕೊಂಡಿದ್ದ ಕೆಲವು ನೆಲೆಗಳನ್ನೂ ಈ ದ್ವೀಪದಲ್ಲಿ ಗುರುತಿಸಲಾಗಿದೆ. ಆದರೆ, ಇವರು ವನವಾಸದಲ್ಲಿ ಭದ್ರವಾಗಿ ನೆಲೆನಿಂತಿದ್ದು ಚುಟುಸಾತಕರ್ಣಿಯವರ ಅವನತಿಯ ನಂತರ, ಅಂದರೆ ಸುಮಾರು ನಾಲ್ಕನೆಯ ಶತಮಾನದಾರಂಭದಲ್ಲಿ.

ವೈಜಯಂತಿ-ಸಮಗ್ರ ಕರ್ಣ್ನಾಟ ದೇಶದ ತಿಲಕ: ವನವಾಸದ ಮೇಲೆ ಅಧಿಕಾರವನ್ನು ಸಾಧಿಸಿಕೊಂಡ ನಂತರ, ತಮ್ಮ ಆಳ್ವಿಕೆಯ ಕಾಲದುದ್ದಕ್ಕೂ ಕದಂಬರು ತಮ್ಮ ರಾಜಧಾನಿ ಪಟ್ಟಣವನ್ನು ಕರೆದದ್ದು ‘ವೈಜಯಂತಿ’ ಎಂಬ ಹೆಸರಿನಿಂದ. ಶಿವಸ್ಕಂದವರ್ಮನ ಮಳವಳ್ಳಿ ಸಂಸ್ಕೃತ ಶಾಸನದಲ್ಲಿ (ಕ್ರಿ.ಶ ನಾಲ್ಕನೆಯ ಶತಮಾನದ ಆರಂಭ) ಇದನ್ನು ‘ವಿಜಯವೈಜಯನ್ತಾಮ್’ (ವಿಜಯವೈಜಯನ್ತಿ ನಿವಾಸೀ: ವಿಜಯಪಙ್ಕ್ತೆಪುರ) ಎಂದು ಕರೆದಿದ್ದರೆ, ವಿಷ್ಣುವರ್ಮನ (ಐದನೆಯ ಶತಮಾನದ ಕೊನೆ) ಬೀರೂರು ತಾಮ್ರಪಟದಲ್ಲಿ ಈ ‘ವೈಜಯಂತಿಯನ್ನು ಸಮಗ್ರ ಕರ್ಣ್ನಾಟ ದೇಶ ಭೂವರ್ಗ’ದ ತಿಲಕವೆಂದು ಕರೆಯಲಾಗಿದೆ. (EC VI, CK 162). ಆದರೆ ಈ ಕಾಲದಲ್ಲಿ ‘ವನವಾಸ’ ಅಥವಾ ‘ಬನವಾಸಿ’ ಪದದ ಬಳಕೆ ಇಲ್ಲದಿರುವುದು ಕುತೂಹಲಕಾರಕ ವಿಷಯ. ಇಷ್ಟೇ ಕುತೂಹಲಕರವಾದ ಇನ್ನೊಂದು ವಿಷಯವೆಂದರೆ, ಇದೇ ಕಾಲದ ಹೆರ್ಬಟ ಶಾಸನದಲ್ಲಿ ಕದಂಬರಿಗೂ ‘ಮಹಿಷವಿಷಯ’ಕ್ಕೂ ಇದ್ದ ಸಂಬಂಧದ ಪ್ರಸ್ತಾಪ.

ಕದಂಬರ ಕಾಲದಲ್ಲಿ ಬನವಾಸಿ ಅಥವಾ ವನವಾಸಿ ಹೆಸರು ಎಷ್ಟು ಅಪರೂಪವಾಗಿತ್ತೋ, ಇವರ ಕಾಲಾನಂತರ ವೈಜಯಂತಿ ಹೆಸರು ಇದಕ್ಕಿಂತಲೂ ಹೆಚ್ಚು ಅಪರೂಪವಾಯಿತು. ಇದರ ಆರಂಭದ ಹೆಸರಾದ ಸಂಜಯತಿಯನ್ನಂತೂ ಯಾವ ಶಾಸನ ಕವಿಯು ನೆನಪಿಸಿಕೊಳ್ಳುವುದಿಲ್ಲ. ಇದಕ್ಕೆ ಅಪವಾದವೆನ್ನಬಹುದಾದ ಏಕೈಕ ನಿದರ್ಶನವು, ಪೌರಾಣಿಕ ಹಿನ್ನೆಲೆಯಲ್ಲಿ ‘ಶಾಂತಿನಾಥ ಪುರಾಣತಿಲಕ’ದಲ್ಲಿ ಕವಿರತ್ನ ರನ್ನನು ಮಾಡಿರುವ (9 : 50ವ) ‘ಸುಜಯಂತಪುರ’ದ ಪ್ರಸ್ತಾಪ. ಆದರೆ ಕೊಪಣಾಚಳವನ್ನು ಉಲ್ಲೇಖಿಸುವ ರನ್ನನು ವನವಾಸವನ್ನು ಉಲ್ಲೇಖಿಸುವುದಿಲ್ಲ.

‘ವ’ ವರ್ಣ ‘ಬ’ ಆಗುವುದು, ‘ಬ’ ವರ್ಣ ‘ವ’ ಆಗುವುದು, ಭಾಷಾಶಾಸ್ತ್ರದ ಸಹಜ ಪ್ರಕ್ರಿಯೆ. (ವಾರಣಾಸಿ > ಬಾರನಾಸಿ ಇದಕ್ಕೆ ಇನ್ನೊಂದು ನಿದರ್ಶನ). ಆದರೆ ಆರಂಭದಿಂದಲೂ ವನವಾಸಿಯೆಂದು ಕರೆಸಿಕೊಂಡಿದ್ದ ಈ ಭೂವಲಯವು ಯಾವಾಗ ‘ಬನವಾಸಿ’ಯಾಗಿ ದಾಖಲೆಗಳನ್ನು ಪ್ರವೇಶಿಸಿತು, ಎಂಬುದೊಂದು ಕುತೂಹಲದ ಪ್ರಶ್ನೆ. ನಾನು ಇದನ್ನು ಮೊದಲು ಕಾಣಲು ಸಾಧ್ಯವಾಗಿರುವುದು ಸುಮಾರು ಏಳನೆಯ ಶತಮಾನದ ಕೊನೆಯಲ್ಲಿ ಬರೆಸಿದ ಶಾಸನವೊಂದರಲ್ಲಿ (ಮೊಸಕಶಾ, 38 (ಕ್ರಿ.ಶ. 692); ಈ ಹೆಸರಿನ ಬಳಕೆಯು ತುಂಬಾ ಸಾಮಾನ್ಯವಾಗಿದ್ದು 10ನೆಯ ಶತಮಾನದಲ್ಲಿ. ಏಳು-ಎಂಟನೆಯ ಶತಮಾನದಲ್ಲಿ ಅಪರೂಪವಾಗ ತೊಡಗುವ ‘ವನವಾಸ’ ಪದವು (ಮೊಸಕಸ 39 (694); 312 (797); 403, 404 (8 ನೆಯ ಶತ.) 9-10ನೆಯ ಶತಮಾನದಲ್ಲಿ ತನ್ನ ಸ್ಥಾನವನ್ನು ಸಂಪೂರ್ಣವಾಗಿ ‘ಬನವಾಸಿ’ಗೆ ಬಿಟ್ಟುಕೊಟ್ಟ ಚಿತ್ರವಿದೆ. ಈ ಕಾಲದಲ್ಲಿ ಬನವಾಸಿ, ವನವಸಿ, ಮತ್ತು ವನವಾಸಿ ಪದಗಳು ಅಪರೂಪವಾಗಿ ಬನವಸಿ, ಬನವಸೆ, ಬನವಾಸಿ ಪದಗಳು ಸಾರ್ವತ್ರಿಕವಾಗ ತೊಡಗುವವು. ‘ವನವಸಿ’ಯು ಒಂದು ಮಂಡಲವಾಗಿ (39), ‘ಪನ್ನಿಚ್ಚಸಿರ’ ಅಥವಾ ‘ಪನ್ನಿರ್ಛಾಸಿರ’ ಘಟಕವಾಗಿ (312, 403) ಉಲ್ಲೇಖಗೊಂಡರೆ, ಬನವಾಸಿಯು ಪನ್ನಿಚ್ಚಸಿರ (ಪನ್ನಿರ್ಚ್ಚೌಸಿರ, ಪಣ್ನಿಶ್ಚಾಸಿರ, ಪನಿಛ್ಛಿಸಿರ ಮುಂತಾದವು) ಘಟಕವಾಗಿ ಮಾತ್ರವಲ್ಲದೆ, ನಾಡು, ಬೀಡು, ಪುರ, ದೇಶ, ಮಂಡಲವಾಗಿ 10ನೆಯ ಶತಮಾನದಲ್ಲಿ ಬಳಕೆಯಾಗಿರುವುದನ್ನು ಕಾಣುವೆವು.

ಕವಿಗಳು ಕಂಡ ವನವಾಸಿಕಾ: ಕುಪನವನ್ನು ಕನ್ನಡ ನಾಡಿನ ಹೃದಯ ಭಾಗದಲ್ಲಿ ಕಂಡಿದ್ದ ಕವಿರಾಜಮಾರ್ಗಕಾರನ ಗಮನವನ್ನು ವೈಜಯಂತಿ ಪುರವಾಗಲೀ ವನವಾಸ ದೇಶವಾಗಲೀ ಆಕರ್ಷಿಸಲಿಲ್ಲ, ಆದರೆ ಈ ಕವಿಯ ಸಮಕಾಲೀನರೂ, ಈತನಂತೆ ರಾಷ್ಟ್ರಕೂಟ ಅರಸನ ಆಸ್ಥಾನದೊಡನೆ ಗುರುತಿಸಿಕೊಂಡವರೂ ಆದ ಜಿನಸೇನಾಚಾರ್ಯ ಮತ್ತು ಗುಣಭದ್ರಾಚಾರ್ಯ ಎಂಬ ಸವಣ ಕವಿಗಳ ಗಮನವನ್ನು ಇದು ಪೂರ್ಣವಂಚಿಸಿರಲಿಲ್ಲ. ಇವರು ರಚಿಸಿದ ಸಂಸ್ಕೃತ ಭಾಷೆಯ ‘ಮಹಾಪುರಾಣ’ವು ಕರ್ನಾಟಕ ನೆಲದಲ್ಲಿ ಸಿದ್ಧಗೊಂಡ ಪ್ರಪಥಮ ಜೈನಮಹಾಕಾವ್ಯವೂ ತ್ರಿಷಷ್ಠಿಶಲಾಕಾಪುರುಷರ ಚರಿತೆಯೂ ಆಗಿದೆ. ಇದರಲ್ಲಿ ವೈಜಯಂತಿ ಪದವನ್ನು ಪೌರಾಣಿಕ ಪ್ರಸಂಗದಲ್ಲಿ, ವನವಾಸ ಪದವನ್ನು ಚಾರಿತ್ರಿಕ ಪ್ರಸಂಗದಲ್ಲಿ ಇವರು ಉಲ್ಲೇಖಿಸುವರು.

ವೈಜಯಂತವನ್ನು ಒಬ್ಬ ಪೌರಾಣಿಕ ಅರಸಿಯ ಮತ್ತು ಒಬ್ಬ ಅರಸನ ನಾಮಪದವಾಗಿ ಇಲ್ಲಿ ಬಳಸಲಾಗಿದೆ. ಇವಲ್ಲದೆ ಒಂದು ವಿಮಾನವನ್ನು, ಶ್ರೇಣಿಪ್ರದೇಶವನ್ನು ಮತ್ತು ನಗರವನ್ನು ಇದೇ ಹೆಸರಿನಿಂದ ಕರೆಯಲಾಗಿದೆ. (ಮಹಾಪುರಾಣಂ 65-177; 59-110; 54-162; 19-30; 63-724). ಇದಕ್ಕೆ ಭಿನ್ನ ಬಗೆಯಲ್ಲಿ ಸಾಮಂತರಸನಾದ ಚಲ್ಲಕೇತನನ ಪುತ್ರ ಲೋಕಾದಿತ್ಯನು ವಂಕಾಪುರವನ್ನು (ಬಂಕಾಪುರ) ರಾಜಧಾನಿಪಟ್ಟಣವನ್ನಾಗಿ ಮಾಡಿಕೊಂಡು ವನವಾಸವನ್ನು ಆಳುತ್ತಿದ್ದ ಸಮಕಾಲೀನ ಚರಿತ್ರೆಯನ್ನು ಇಲ್ಲಿ ನಿರೂಪಿಸಲಾಗಿದೆ. 10ನೆಯ ಶತಮಾನದ ಪ್ರಸಿದ್ಧ ಕನ್ನಡ ಕವಿಯಾದ ಪಂಪನೂ ವೈಜಯಂತವನ್ನು ಮತ್ತು ಬನವಾಸಿ(ವನವಾಸಿ)ಯನ್ನು ತನ್ನ ಎರಡೂ ಕಾವ್ಯಗಳಲ್ಲಿ ಉಲ್ಲೇಖಿಸಿರುವನು. ‘ವೈಜಯಂತ’ವು (ವೈಜಯಂತಿ, ವೈಜಯಂತಿಕಾ, ವೈಜಯಂತಿ) ಭರತನ ದಿವ್ಯ ಪ್ರಾಸಾದ ಹೆಸರಾಗಿ ಮಾತ್ರವಲ್ಲ, ಒಂದು ಪತಾಕೆಯ, ಪ್ರದೇಶದ ಹಾಗೂ ನದಿಯ ಹೆಸರಾಗಿ (6-21ವ; 8-44ವ; 16-58ವ; 12-615, 8-41ವ; 13-1ವ; 14-53ವ) ‘ಆದಿಪುರಾಣ’ದಲ್ಲಿ ಬಂದಿದ್ದರೆ, ಒಂದು ವಿಜಯಪತಾಕೆಯ ಹೆಸರಾಗಿ (2-39ವ) ‘ವಿಕ್ರಮಾರ್ಜುನವಿಜಯ’ದಲ್ಲಿ ಬಂದಿದೆ.

ವನವಾಸ’ವನ್ನು ತನ್ನ ಎರಡೂ ಕೃತಿಗಳಲ್ಲಿ, ‘ಬನವಾಸಿ’ಯನ್ನು ವಿಕ್ರಮಾರ್ಜುನವಿಜಯದಲ್ಲಿ ಮಾತ್ರ ದೇಶದ ಹೆಸರನ್ನಾಗಿ ಈ ಕವಿ ಬಳಸಿರುವನು. (ಆಪು. 8-63ವ; ವಿವಿ. 4: 28-30). ಕುತೂಹಲಕರ ವಿಷಯವೆಂದರೆ, ಆದಿಪುರಾಣದಲ್ಲಿ ‘ಕರ್ಣ್ನಾಟ’ ಮತ್ತು ‘ವನವಾಸ’ವನ್ನು ಎರಡು ಸ್ವತಂತ್ರರಾಜ್ಯ ಅಥವಾ ಜನಪದಗಳನ್ನಾಗಿ ಪಂಪನು ಗುರುತಿಸಿರುವುದು (ಇದರಂತೆ ಕೇರಳ ಮತ್ತು ಚೇರ ರಾಜ್ಯಗಳನ್ನೂ ಎರಡು ಪ್ರತ್ಯೇಕ ಘಟಕಗಳನ್ನಾಗಿ ಗುರುತಿಸಿರುವನು). ಕ್ರಿ.ಪೂ. ಮೂರನೆಯ ಶತಮಾನದಲ್ಲಿ ವನವಾಸವು ಅಶೋಕಸಾಮ್ರಾಜ್ಯದ ಗಡಿಯಲ್ಲಿದ್ದಂತೆ, ಕ್ರಿ.ಶ. 10ನೆಯ ಶತಮಾನದಲ್ಲಿ ಇದು ಕರ್ಣ್ನಾಟ ರಾಜ್ಯದ ಗಡಿಯ ಹೊರಗಿತ್ತೆಂಬ ಭಾವನೆಯನ್ನು ಇದು ಮೂಡಿಸಬಹುದು, ಆದರೆ ವಾಸ್ತವವೆಂದರೆ ಐದನೆಯ ಶತಮಾನದ ಕದಂಬ ವಿಷ್ಣುವರ್ಧನದ ಶಾಸನವು ತಿಳಿಸಿದಂತೆ ಇದು ಸಮಗ್ರ ಕರ್ಣ್ನಾಟ ದೇಶ ಭೂವರ್ಗದ ತಿಲಕವಾಗಿತ್ತು.

ಇದು ಏನೇ ಇರಲಿ, ಬನವಾಸಿ ದೇಶದ ಪುಷ್ಪಭರಿತ ಮಾವಿನ ಹಾಗೂ ಜಾತಿ ಸಂಪಿಗೆಯ ಮರಗಳಿಗೆ, ಚಿಗುರೆಲೆಗಳ ಬಳ್ಳಿಗೆ, ಕೋಗಿಲೆ ಮತ್ತು ದುಂಬಿಗಳ ಹಾಡಿಗೆ, ಸುಸಂಸ್ಕೃತ ತ್ಯಾಗಿ-ಭೋಗಿಗಳ ಸಂಸರ್ಗಕ್ಕೆ, ಮಾರುಹೋದ ಪಂಪನು ಮನುಷ್ಯಜನ್ಮದಲ್ಲಾಗದಿದ್ದರೆ ಕೋಗಿಲೆ ಅಥವಾ ದುಂಬಿಯಾಗಿಯಾದರೂ ಇಲ್ಲಿ ಪುನಃ ಜನಿಸಬೇಕೆಂಬ ಅಭೀಷ್ಠೆಯನ್ನು ವ್ಯಕ್ತಪಡಿಸಿರುವುದು, ಇಲ್ಲಿ ಪ್ರಸ್ತುತ. ಇಲ್ಲಿ ಬೀಸುವ ತೆಂಕಣ ದಿಕ್ಕಿನ ತಂಗಾಳಿಯನ್ನು, ಧ್ವನಿಸುವ ಮಧುರ ನುಡಿಹಾಡುಗಳನ್ನು ಬಿರಿದಮಲ್ಲಿಗೆ ಮೊಗ್ಗುಗಳ ಕಂಪನ್ನು, ಪ್ರೇಮಿಗಳನ್ನು ಸುಖನಿದ್ರೆಗೆ ಜಾರಿಸುವ ವಸಂತದ ಸೊಗಸನ್ನು, ಮೆಚ್ಚಿ ಸ್ಮರಿಸುವ ತನ್ನ ಮನಸ್ಸನ್ನು ಯಾರು ಅಂಕುಶವಿಟ್ಟು ನಿಗ್ರಹಿಸಬಲ್ಲರು ಎಂದು ಈ ಕವಿ ಪ್ರಶ್ನಿಸಿರುವನು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು