ಮಂಗಳವಾರ, ಅಕ್ಟೋಬರ್ 15, 2019
28 °C
ಕೇರಳದ ಪ್ರತಿಭಟನೆಯ ಹಿಂದೆ ರಾಜಕೀಯ ಸಂಚು–ಅಧಿಕಾರಿಗಳ ಅನುಮಾನ

ಬಂಡೀಪುರ: ರಾತ್ರಿ ಸಂಚಾರ ನಿರ್ಬಂಧ: ಯಥಾಸ್ಥಿತಿಗೆ ಆಗ್ರಹ

Published:
Updated:
Prajavani

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿರ್ಬಂಧಿಸಿರುವ ವಿಚಾರದಲ್ಲಿ ಯಥಾಸ್ಥಿತಿ ಮುಂದುವ‌ರಿಯಬೇಕು ಎಂಬ ಅಭಿಪ್ರಾಯವನ್ನು ಸ್ಥಳೀಯ ಜನಪ್ರತಿನಿಧಿಗಳು, ವ್ಯಾಪಾರಿಗಳು ಹಾಗೂ ರೈತರು ವ್ಯಕ್ತಪಡಿಸಿದ್ದಾರೆ.

‘ಆದರೆ, ಹೆದ್ದಾರಿಗಳನ್ನು ಶಾಶ್ವತವಾಗಿ ಬಂದ್‌ ಮಾಡುವ ನಿರ್ಧಾರ ತೆಗೆದುಕೊಳ್ಳಬಾರದು. ಇದರಿಂದ ಗುಂಡ್ಲುಪೇಟೆ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.  

ರಾತ್ರಿ ಸಂಚಾರ ನಿಷೇಧ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕೇರಳದ ವಯನಾಡಿನಲ್ಲಿ ಕೆಲವು ದಿನಗಳಿಂದ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಸ್ಥಳೀಯರು ಈ ನಿಲುವಿಗೆ ಬಂದಿದ್ದಾರೆ. 

‘10 ವರ್ಷಗಳ ಹಿಂದೆಯೇ ರಾತ್ರಿ ಸಂಚಾರ ರದ್ದಾಗಿದೆ. ಇನ್ನು ಮುಂದೆಯೂ ಹಾಗೆಯೇ ಇರಲಿ. ಆದರೆ, ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ಹೆದ್ದಾರಿಗಳನ್ನು ಶಾಶ್ವತವಾಗಿ ಬಂದ್‌ ಮಾಡುವ ಬಗ್ಗೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದೆ. ಇದು ಜಾರಿಗೆ ಬಂದರೆ ರಾಜ್ಯದ ಜನರಿಗೂ ತೊಂದರೆಯಾಗಲಿದೆ’ ಎಂದು ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನ್‌ಕುಮಾರ್‌ ಅವರು ಹೇಳಿದರು. 

‘ದಿನನಿತ್ಯ ಕೇರಳಕ್ಕೆ ಹೋಗುವ ವ್ಯಾಪಾರಿಗಳಿದ್ದಾರೆ. ಅಲ್ಲಿಂದ ಇಲ್ಲಿಗೆ ಬರುವವರು ಇದ್ದಾರೆ. ತಾಲ್ಲೂಕಿನಿಂದ ಸಾವಿರಾರು ಮಂದಿ ಕೂಲಿ ಕೆಲಸಕ್ಕಾಗಿ ಕೇರಳಕ್ಕೆ ಹೋಗುತ್ತಾರೆ. ಹಗಲು ಹೊತ್ತಿನಲ್ಲೂ ರಸ್ತೆ ಬಂದ್‌ ಮಾಡಿದರೆ ಅವರಿಗೆಲ್ಲ ಕಷ್ಟವಾಗುತ್ತದೆ. ತಾಲ್ಲೂಕಿನ ಹಲವು ಸಂಘಟನೆಗಳು ಈ ಬಗ್ಗೆ ಮನವಿ ಸಲ್ಲಿಸಿವೆ. ಇದನ್ನು ರಾಜ್ಯ ಸರ್ಕಾರದ ಗಮನಕ್ಕೂ ತಂದಿದ್ದೇನೆ. ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ’ ಎಂದರು.  

‘ರಸ್ತೆ ಸಂಪೂರ್ಣ ಬಂದ್‌ ಮಾಡಿದರೆ ವ್ಯಾಪಾರ ವಹಿವಾಟಿಗೆ ಧಕ್ಕೆ ಆಗುತ್ತದೆ ಎಂದು ಹೇಳುತ್ತಿದ್ದಾರೆ. 10 ವರ್ಷದಿಂದ ರಾತ್ರಿ ಸಂಚಾರ ಇಲ್ಲದಿದ್ದರೂ ವ್ಯಾಪಾರ ನಡೆಯುತ್ತಿದೆ. ಮುಂದೆಯೂ ಹೀಗೆಯೇ ನಡೆಯಲಿ’ ಎಂದು ರೈತ ಮುಖಂಡ ಕೆ.ಆರ್‌.ಲೋಕೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಪರ್ಯಾಯ ಮಾರ್ಗದ ಸೌಲಭ್ಯ ಕಲ್ಪಿಸಿ, ಈಗಿನ ಹೆದ್ದಾರಿಯನ್ನು ಬಂದ್‌ ಮಾಡಿದರೆ ಸಮಸ್ಯೆಯಾಗದು’ ಎಂಬುದು ಸ್ಥಳೀಯ ವ್ಯಾಪಾರಿ ಜಯರಾಮ್‌ ಅಭಿಪ್ರಾಯ. 

ರಾಜಕೀಯ ಸಂಚು: ವಯನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹಿಂದೆ ರಾಜಕೀಯ ಸಂಚು ಇರುವ ಅನುಮಾನವನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

‘10 ವರ್ಷಗಳಿಂದ ಇಲ್ಲದ ಸಮಸ್ಯೆ ಈಗ ಹಠಾತ್‌ ಆಗಿ ಯಾಕೆ ಉದ್ಭವವಾಗಿದೆ. ರಾಹುಲ್‌ ಗಾಂಧಿ ಅವರ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಇದ್ದಾಗಲೇ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಈಗ ಅವರೇ ರಾತ್ರಿ ಸಂಚಾರ ನಿರ್ಬಂಧ ವಿಚಾರವನ್ನು ಪದೇ ಪದೇ ಪ್ರಸ್ತಾಪ ಮಾಡುತ್ತಿರುವುದು ಯಾಕೆ’ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಪ್ರಶ್ನಿಸಿದರು.  

ಕೇರಳದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿಯೋಜನೆ ನಿರ್ದೇಶಕ ಟಿ.ಬಾಲಚಂದ್ರ, ‘ಪ್ರತಿಭಟನೆಗಳು ನಡೆಯುತ್ತಿರುವ ವಿಚಾರ ಗೊತ್ತಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೂ ಅದರಲ್ಲಿ ಭಾಗವಹಿಸುತ್ತಿದ್ದಾರೆ. ಸಂಚಾರ ನಿರ್ಬಂಧಕ್ಕೂ ವಿದ್ಯಾರ್ಥಿಗಳಿಗೂ ಏನು ಸಂಬಂಧ? ಜನ ಬೆಂಬಲ ಪಡೆಯುವುದಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳಿವೆ’ ಎಂದರು. 

ಪರ್ಯಾಯ ಮಾರ್ಗಕ್ಕೆ ವಿರೋಧ
ಗುಂಡ್ಲುಪೇಟೆ–ಸುಲ್ತಾನ್‌ ಬತ್ತೇರಿ ಮಾರ್ಗಕ್ಕೆ ಪರ್ಯಾಯವಾಗಿ ಪರಿಸರವಾದಿಗಳು ಪ್ರಸ್ತಾಪಿಸಿರುವ ಮೂಲಂಕಾವು–ಬೇಗೂರು ‍ಮಾರ್ಗದ ಪ್ರದೇಶವು, ಹುಲಿ ಸಂರಕ್ಷಿತ ಪ್ರದೇಶದ ಓಂಕಾರ ವಲಯ ಹಾಗೂ ಯಡಿಯಾಲದ ವ್ಯಾಪ್ತಿಯಲ್ಲಿ ಬರುತ್ತದೆ. 

ಅರಣ್ಯ ಇಲಾಖೆಯ ಅಧಿಕಾರಿಗಳು ಈ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

‘ಮತ್ತೆ ಸಂರಕ್ಷಿತ ಪ್ರದೇಶದಲ್ಲೇ ಹೊಸ ರಸ್ತೆ ನಿರ್ಮಾಣ ಮಾಡಬೇಕು ಎಂದರೆ ಏನರ್ಥ? ಇಂತಹ ಸಲಹೆಗಳನ್ನು ಉದ್ದೇಶಪೂರ್ವಕವಾಗಿ ತೇಲಿ ಬಿಡಲಾಗುತ್ತಿದೆ’ ಎಂದು ಬಾಲಚಂದ್ರ ಹೇಳಿದರು. 

Post Comments (+)