ಸೋಮವಾರ, ಏಪ್ರಿಲ್ 19, 2021
31 °C
ಬಂಡೀಪುರ ಸುತ್ತಮುತ್ತಲಿನ ರೆಸಾರ್ಟ್‌, ಖಾಸಗಿ ಹೋಟೆಲ್‌ಗಳಿಗೆ ಕಟ್ಟು ನಿಟ್ಟಿನ ಸೂಚನೆ

ಬಂಡೀಪುರದಲ್ಲಿ ಈ ಬಾರಿ ಹೊಸ ವರ್ಷದ ಮೋಜು ಮಸ್ತಿಗಿಲ್ಲ ಅವಕಾಶ

ಮಲ್ಲೇಶ ಎಂ. Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಅಂಗವಾಗಿ ಪ್ರವಾಸಿಗರು ಹಾಗೂ ಸ್ಥಳೀಯರು ಮಾಡುವ ಮೋಜು–ಮಸ್ತಿ ಮತ್ತು ಪುಂಡಾಟಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ.

ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ರೆಸಾರ್ಟ್, ಹೋಟೆಲ್, ಫಾರಂ ಹೌಸ್‍ಗಳಲ್ಲಿ ಹೊಸ ವರ್ಷಾಚರಣೆಗೆ ಬರುವ ಮಂದಿ ಸಂಗೀತದ ಅಬ್ಬರ ಮತ್ತು ಸದ್ದುಗದ್ದಲ ಇಲ್ಲದಂತೆ ಆಚರಣೆ ಮಾಡಬೇಕು ಎಂದು ಅರಣ್ಯ ಇಲಾಖೆ ಖಾಸಗಿ ಹೋಟೆಲ್ ಮತ್ತು ರೆಸಾರ್ಟ್‍ಗಳಿಗೆ ಸೂಚನೆ ನೀಡಿದೆ.

ಬಂಡೀಪುರ ಅರಣ್ಯದೊಳಗಿರುವ ಡಾರ್ಮಟರಿ ಮತ್ತು ವಸತಿಗೃಹಗಳಲ್ಲಿ ಪ್ರವಾಸಿಗರಿಗೆ ತಂಗಲು ಡಿಸೆಂಬರ್ 31ರಂದು ಅನುಮತಿ ನಿರಾಕರಿಸಲಾಗಿದ್ದು, ಅರಣ್ಯ ಇಲಾಖೆ ಬುಕ್ಕಿಂಗ್‌ ಕೂಡ ಮಾಡಿಕೊಳ್ಳುತ್ತಿಲ್ಲ. 

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಅನೇಕ ಗ್ರಾಮಗಳು ಪರಿಸರ ಸೂಕ್ಷ್ಮ ವಲಯಕ್ಕೆ ಸೇರುತ್ತವೆ. ಇಲ್ಲಿ ಹಲವು ರೆಸಾರ್ಟ್‌ ಮತ್ತು ಹೋಂಸ್ಟೇಗಳಿದ್ದು, ಇಲ್ಲಿಗೆ ವರ್ಷಾಂತ್ಯ, ಹೊಸ ವರ್ಷದ ಮೋಜಿಗಾಗಿ ಪ್ರವಾಸಿಗರು ಭಾರಿ ಸಂಖ್ಯೆಯಲ್ಲಿ ಬಂದು ಸದ್ದುಗದ್ದಲದಿಂದ ಹೊಸ ವರ್ಷದ ಆಗಮನವನ್ನು ಸಂಭ್ರಮಿಸುತ್ತಿದ್ದರು. ಪಟಾಕಿ ಸಿಡಿಸುವುದು, ಧ್ವನಿವರ್ಧಕದ ಬಳಕೆ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಇದರಿಂದ ಕಾಡಿನಲ್ಲಿರುವ ಪ್ರಾಣಿಗಳಿಗೆ ತೊಂದರೆಯಾಗುತ್ತಿತ್ತು.

ಇದನ್ನು ಅರಿತಿರುವ ಅರಣ್ಯ ಇಲಾಖೆ, ಅಭಯಾರಣ್ಯದ ಸುತ್ತಮುತ್ತಲಿರುವ ರೆಸಾರ್ಟ್, ಪಾರ್ಟಿ ಹಾಲ್‍ಗಳು, ಫಾರಂ ಹೌಸ್ ಬಗ್ಗೆ ಮಾಹಿತಿ ಕಲೆ ಹಾಕಿ ನೋಟಿಸ್ ನೀಡುತ್ತಿದೆ. ಸದ್ದುಗದ್ದಲದ ಆಚರಣೆ ಬೇಡ ಎಂದು ಹೇಳುತ್ತಿದೆ.

ಎಚ್ಚರಿಕೆ: ‘ಹೆಚ್ಚು ಧ್ವನಿ ಬರುವ ಸೌಂಡ್‌ ಸಿಸ್ಟಂಗಳನ್ನು ಬಳಕೆ ಮಾಡದಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಇದಕ್ಕೂ ಮೀರಿ ಸಂಭ್ರಮಾಚರಣೆ ವೇಳೆ ಧ್ವನಿವರ್ಧಕ, ಡಿಜೆ ಬಳಕೆ ಮಾಡಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ತಯಾರಿ ಮಾಡಿಕೊಂಡಿದ್ದೇವೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಣಿಗಳಿಗೆ ತೊಂದರೆ: ‘ಗ್ರಾಮಗಳಿಗೆ ಹೊಂದಿಕೊಂಡಂತೆ ಇರುವ ಅರಣ್ಯ ಭಾಗದಲ್ಲಿ ಅನೇಕ ಪ್ರಾಣಿಗಳು ಓಡಾಟ ನಡೆಸುತ್ತಿರುತ್ತವೆ. ಬೇಟೆಯಾಡುವ ‍ಪ್ರಾಣಿಗಳಿಗೆ ಹೆದರಿ ಜಿಂಕೆ, ಕಾಡೆಮ್ಮೆಯಂತಹ ಪ್ರಾಣಿಗಳು ಅರಣ್ಯದ ಅಂಚಿನಲ್ಲಿ ಇರುತ್ತವೆ. ಗದ್ದಲದ ಸಂಭ್ರಮಾಚರಣೆಯಿಂದ ಅವುಗಳಿಗೆ ತೊಂದರೆಯೇ ಹೆಚ್ಚು’ ಎಂದು ಹವ್ಯಾಸಿ ಛಾಯಾಗ್ರಾಹಕ ವಿಷ್ಣು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಪ್ರಾಣಿಗಳಿಗೆ ತೊಂದರೆಯಾಗುವುದನ್ನು ಸಹಿಸುವುದಿಲ್ಲ’

‘ಸಂಭ್ರಮಾಚರಣೆ ಹೆಸರಿನಲ್ಲಿ ಪ್ರಾಣಿಗಳಿಗೆ ತೊಂದರೆ ಮಾಡುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಯಾರಿಗೂ ತೊಂದರೆಯಾಗದಂತೆ ಆಚರಣೆ ಮಾಡಲಿ. ಹೆಚ್ಚು ಶಬ್ದ, ಧ್ವನಿವರ್ಧಕ ಬಳಕೆ ಮಾಡುವುದರಿಂದ ಪ್ರಾಣಿ, ಪಕ್ಷಿಗಳು ಗಾಬರಿಗೊಂಡು ಬೇರೆಡೆ ಹೋಗುವ ಸಾಧ್ಯತೆ ಇರುತ್ತದೆ’ ಎಂದು ಬಂಡೀಪುರ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ಅಂಬಾಡಿ ಮಾಧವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರೆಸಾರ್ಟ್‌, ಹೋಂ ಸ್ಟೇಗಳಿಗೆ ಬೀಗ ಜಡಿಯಲಿ’

‘ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕುಂದುಕರೆ ಮತ್ತು ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಬರುವ ಸೂಕ್ಷ್ಮ ಪರಿಸರ ವಲಯದಲ್ಲಿ ಅನೇಕರು ಜಮೀನುಗಳಲ್ಲಿ ವಾಸಕ್ಕೆಂದು ಮನೆಗಳನ್ನು ಕಟ್ಟಿಕೊಂಡು ವಾರಾಂತ್ಯದಲ್ಲಿ ಪ್ರವಾಸಿಗರಿಗೆ ಬಾಡಿಗೆಗೆ ನೀಡುತ್ತಿದ್ದಾರೆ. ಇಲ್ಲಿ ಯಾರೂ ಕೇಳುವುದಿಲ್ಲ ಎಂಬ ಧೈರ್ಯದಲ್ಲಿ ಔತಣಕೂಟ ಏರ್ಪಡಿಸಿ, ಧ್ವನಿವರ್ಧಕಗಳನ್ನು ಬಳಸಿ ಮೋಜು ಮಾಡುತ್ತಿದ್ದಾರೆ’ ಎಂದು ಮೇಲುಕಾಮನಹಳ್ಳಿಯ ಜಗದೀಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಊಟಿಯ ಮುದುಮಲೆ ರಾಷ್ಟ್ರೀಯ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುವ ಮಸಿನಗುಡಿ ಹೋಬಳಿಯ ಬೊಕ್ಕಪುರ, ಸಿರಿಯೂರು, ಮಾವನಹಳ್ಳ, ಕೋಯಿಲ್‍ಪಟ್ಟಿ, ಆನಗಟ್ಟಿ, ಚಾಮನಾಥ, ಕಲ್ಲಟ್ಟಿ ಭಾಗಗಳಲ್ಲಿ ನಡೆಯುತ್ತಿದ್ದ ರೆಸಾರ್ಟ್‍ಗಳಿಗೆ ಅಲ್ಲಿನ ಸರ್ಕಾರ ಬೀಗ ಜಡಿದ ಕಾರಣ ಅಲ್ಲಿಗೆ ಬರುವ ಪ್ರವಾಸಿಗರಲ್ಲಿ ಹೆಚ್ಚಿನವರು ಈಗ ಬಂಡೀಪುರ ಕಡೆಗೆ ಬರುತ್ತಾರೆ. ಇಲ್ಲಿನ ರೆಸಾರ್ಟ್‍ಗಳು ಖಾಲಿ ಇಲ್ಲದಿದ್ದರೆ ಅಲ್ಲಿನ ಮಾಲೀಕರು ಮತ್ತು ಸಂಬಂಧಪಟ್ಟವರು ಖಾಸಗಿ ಜಮೀನುಗಳಲ್ಲಿ ಇರುವ ಹೋಂ ಸ್ಟೇಗಳ ಬಗ್ಗೆ ಮಾಹಿತಿ ಕೊಡುತ್ತಾರೆ. ಇದರಿಂದ ಕಾಡು ಪ್ರಾಣಿಗಳಿಗೆ ಮತ್ತು ಸ್ಥಳೀಯರಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಹೋಂ ಸ್ಟೇಗಳ ಮೇಲೆ ದಾಳಿ ಮಾಡಿ ಎಚ್ಚರಿಕೆ ನೀಡಿದ್ದಾರೆ. ಅರಣ್ಯ ಇಲಾಖೆ ಹೊಸ ವರ್ಷಕ್ಕೆ ಈ ಕಾಡಂಚಿನಲ್ಲಿರುವ ಹೋಂ ಸ್ಟೇಗಳಿಗೆ ಬೀಗ ಜಡಿದು ಕಾಡು ಪ್ರಾಣಿಗಳಿಗೆ ಮತ್ತು ಸ್ಥಳೀಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು