ಶನಿವಾರ, ನವೆಂಬರ್ 16, 2019
24 °C
ಬಂಡೀಪುರ ಹುಲಿಯೋಜನೆ ನಿರ್ದೇಶಕ ಬಾಲಚಂದ್ರ, ಸಿಬ್ಬಂದಿ, ಗ್ರಾಮಸ್ಥರು ಭಾಗಿ

ಹುಲಿ ಸೆರೆ ಯಶಸ್ವಿ: ಚೌಡಹಳ್ಳಿ: ಮಾಳಗಮ್ಮ ದೇವಿಗೆ ವಿಶೇಷ ಪೂಜೆ

Published:
Updated:
Prajavani

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಚೌಡಹಳ್ಳಿ, ಹುಂಡೀಪುರ ಹಾಗೂ ಕೆಬ್ಬೇಪುರ ಭಾಗದಲ್ಲಿ ಉಪಟಳ ನೀಡುತ್ತಿದ್ದ ಹುಲಿಯನ್ನು ಸೆರೆ ಹಿಡಿಯಲು ಯಶಸ್ವಿಯಾಗಿದ್ದರಿಂದ ಗ್ರಾಮಸ್ಥರು ಹಾಗೂ ಅರಣ್ಯ ಅಧಿಕಾರಿಗಳು ಮಂಗಳವಾರ ಗ್ರಾಮ ದೇವತೆ ಮಾಳಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. 

ಈ ಭಾಗದಲ್ಲಿ ಮಾಳಗಮ್ಮ ದೇವಿ ಅತ್ಯಂತ ಶಕ್ತಿಯುತ ದೇವತೆ ಎಂಬ ನಂಬಿಕೆ ಸ್ಥಳೀಯರಲ್ಲಿ ಇದೆ. ಹಲವು ವರ್ಷಗಳಿಂದಲೂ ಸುತ್ತಮುತ್ತಲಿನ ಗ್ರಾಮಗಳ ಜನರು ಒಟ್ಟು ಸೇರಿ ಪೂಜೆ ಸಲ್ಲಿಸಿ ಜಾತ್ರೆ ನಡೆಸುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಗ್ರಾಮಸ್ಥರಲ್ಲಿ ವೈಮನಸ್ಸು ಉಂಟಾಗಿ ದೇವಿಗೆ ಪೂಜೆ ಸಲ್ಲಿಸುವುದನ್ನು ನಿಲ್ಲಿಸಿದ್ದರು. ಅಂದಿನಿಂದ ಒಂದಲ್ಲ ಒಂದು ಸಮಸ್ಯೆ ಕಂಡು ಬರುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.  

ಒಂದೂವರೆ ತಿಂಗಳ ಅವಧಿಯಲ್ಲಿ ಚೌಡಹಳ್ಳಿ ಗ್ರಾಮದ ಇಬ್ಬರು ರೈತರನ್ನು ಹುಲಿ ಕೊಂದಿತ್ತು. ದೇವಿಯ ಕೋಪದಿಂದ ಗ್ರಾಮಕ್ಕೆ ಹೀಗೆ ಕೇಡಾಗುತ್ತಿದೆ ಎಂದು ನಂಬಿಕೆ ಹೊಂದಿರುವ ಗ್ರಾಮಸ್ಥರು, ಈ ವಿಚಾರವನ್ನು ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಶೀಘ್ರವಾಗಿ ಹುಲಿ ಸೆರೆ ಸಿಕ್ಕರೆ ದೇವಿಗೆ ಪೂಜೆ ಸಲ್ಲಿಸುವುದಾಗಿ ಅಧಿಕಾರಿಗಳು ಗ್ರಾಮಸ್ಥರ ಮುಂದೆ ಹೇಳಿದ್ದರು.

ಅದರಂತೆ ಮಂಗಳವಾರ ಗುಡಿಯಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ. ಬಾಲಚಂದ್ರ ಹಾಗೂ ಅರಣ್ಯಾಧಿಕಾರಿಗಳು ಗ್ರಾಮಸ್ಥರ ಜತೆಗೆ ಪೂಜೆಯಲ್ಲಿ ಭಾಗಿಯಾದರು. 

ನಂತರ ಮಾತನಾಡಿದ ಟಿ. ಬಾಲಚಂದ್ರ, ‘ಅಕ್ಟೋಬರ್‌ 10 ರಂದು ಈ ಭಾಗದಲ್ಲಿ ಹುಲಿ ಸೆರೆಗೆ ಕಾರ್ಯಚರಣೆ ಮಾಡುತ್ತಿದ್ದಾಗ, ದೇವತೆಯ ಶಾಪದಿಂದ ಗ್ರಾಮಕ್ಕೆ ಹೀಗೆ ಸಂಕಷ್ಟ ಎದುರಾಗುತ್ತಿದೆ. ದೇವಿಗೆ ಪೂಜೆ ಸಲ್ಲಿಸಿದರೆ ಒಳ್ಳೆಯದಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು. ಯಾರಿಗೂ ಯಾವ ತೊಂದರೆಯೂ ಆಗದೆ ಹುಲಿ ಶೀಘ್ರವಾಗಿ ಸೆರೆಯಾದರೆ ಗ್ರಾಮಸ್ಥರ ಜೊತೆ ಸೇರಿ ಪೂಜೆ ಸಲ್ಲಿಸುತ್ತೇನೆ ಎಂದು ಬೇಡಿಕೊಂಡಿದ್ದೆ. ನನಗೆ ವೈಯಕ್ತಿಕವಾಗಿ ದೇವರ ಮೇಲೆ ನಂಬಿಕೆ ಇದೆ. ಆದ್ದರಿಂದ ಗ್ರಾಮಸ್ಥನಾಗಿ ಪೂಜೆ ಸಲ್ಲಿಸುತ್ತಿದ್ದೇನೆ’ ಎಂದರು.

‘ದೇವಿಗೆ ಅಪಾರವಾದ ಶಕ್ತಿ ಇದೆ. ಅವಳ ಕೋಪಕ್ಕೆ ತುತ್ತಾಗಿ ಜೀವ ಕಳೆದುಕೊಂಡವರು ಇದ್ದಾರೆ. ಆಕೆಗೆ ಶರಣಾಗಿ ಜೀವ ಉಳಿಸಿಕೊಂಡವರು ಇದ್ದಾರೆ. ನಂಬಿದವರ ಕೈಯನ್ನು ದೇವಿ ಬಿಡುವುದಿಲ್ಲ’ ಎಂದು ಗ್ರಾಮದ ಮಹೇಂದ್ರ ಅವರು ತಿಳಿಸಿದರು.

ಇನ್ನು ಮುಂದೆ ಮಾಳಗಮ್ಮನಿಗೆ ಪ್ರತಿ ಮಂಗಳವಾರ ಪೂಜೆ ಹಾಗೂ ವರ್ಷಂಪ್ರತಿ ಜಾತ್ರೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. 

‘ರಾಣಾ’ ಸೇವೆ ಬಳಸಿಲ್ಲ: ಬಾಲಚಂದ್ರ 

ಹುಲಿ ಸೆರೆ ಕಾರ್ಯಚರಣೆಗೆ ಹುಲಿ ಸಂರಕ್ಷಣಾ ಪಡೆಯ ಶ್ವಾನ ‘ರಾಣಾ’ನನ್ನು ಬಳಕೆ ಮಾಡಿಲ್ಲ. ಅದು ಅನಾರೋಗ್ಯದಿಂದ ಬಳಲುತ್ತಿತ್ತು. ಅದರ ನುರಿತ ತರಬೇತುದಾರ ವರ್ಗಾವಣೆಯಾಗಿರುವುದರಿಂದ ಕಾರ್ಯಚರಣೆಗೆ ಬಳಸಿಲ್ಲ. ಸೋಲಿಗರು ಹೆಜ್ಜೆಯ ಜಾಡನ್ನು ಗುರುತಿಸಿದ್ದರು. ಅದರ ಮೂಲಕ ಸೆರೆ ಹಿಡಿಯಲಾಯಿತು. ಕಾರ್ಯಾಚರಣೆಯ ಯಶಸ್ಸು ದೇವಿಗೆ, ಸೋಲಿಗರಿಗೆ ಮತ್ತು ಸಿಬ್ಬಂದಿಗೆ ಅರ್ಪಿಸುತ್ತೇನೆ’ ಎಂದು ಬಾಲಚಂದ್ರ ಹೇಳಿದರು.

ಪ್ರತಿಕ್ರಿಯಿಸಿ (+)